Asianet Suvarna News Asianet Suvarna News

Chikkamagaluru; ವೃದ್ಧೆಯನ್ನ ಜೋಳಿಗೆಯಲ್ಲಿ ಆಸ್ಪತ್ರೆಗೆ ಹೊತ್ತೊಯ್ದ ಸಂಬಂಧಿಕರು!

ಕಳಸ ತಾಲೂಕಿನ ಗಂಟೆಮಕ್ಕಿ ಗ್ರಾಮದಲ್ಲಿ ಘಟನೆ. 85 ವರ್ಷದ ವೃದ್ಧೆ ವೆಂಕಮ್ಮರನ್ನ ಜೋಳಿಗೆಯಲ್ಲಿ ಆಸ್ಪತ್ರೆಗೆ ಸಾಗಾಟ ಮಾಡಿದ ಸಂಬಂಧಿಕರು. 2021ರಲ್ಲಿಯೇ ರಸ್ತೆ ಇಲ್ಲ ರಸ್ತೆ ಮಾಡಿಸಿಕೊಡಿ ಎಂದು ಸಚಿವ ಆರ್ ಆಶೋಕ್, ಜಿಲ್ಲಾಧಿಕಾರಿಗಳಿಗೆ  ಮನವಿ ಮಾಡಿದ್ದ ವೆಂಕಮ್ಮ .

carrying the old woman to the hospital through sack  in chikkamagaluru gow
Author
First Published Sep 19, 2022, 7:34 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್  

ಚಿಕ್ಕಮಗಳೂರು (ಸೆ.19): ಈ ಜನರ ಸ್ಥಿತಿ ನೋಡಿದ್ರೆ ನಾವಿನ್ನು ಯಾವ ಕಾಲಮಾನದಲ್ಲಿ ಇದ್ದೇವೆ ಅನ್ನೋ ಯಕ್ಷಪ್ರಶ್ನೆ ಮೂಡುತ್ತೆ. ಓಡಾಡಕ್ಕೆ ರಸ್ತೆನೂ ಇಲ್ಲ. ಸಕಾಲಕ್ಕೆ ಚಿಕಿತ್ಸೆಯೂ ಇಲ್ಲ. ಇದು ಕಾಫಿನಾಡ ಮಲೆನಾಡು ಭಾಗದ ಹಲವು ಗ್ರಾಮಗಳ ದುಸ್ಥಿತಿ. ಒಂದಲ್ಲ-ಎರಡಲ್ಲ ಹತ್ತಾರು ಬಾರಿ ಮನವಿ ಮಾಡಿದ್ರು ಕ್ಯಾರೆ ಅನ್ನೋರು ಇಲ್ಲ. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಗಂಟೆಮಕ್ಕಿ ಗ್ರಾಮದಲ್ಲಿ ರೋಗಿಯನ್ನ ಜೋಳಿಗೆಯಲ್ಲಿ ತುರ್ತಾಗಿ ಆಸ್ಪತ್ರೆಗೆ ಕೊಂಡೊಯ್ಯಲು ಸಂಬಂಧಿಕರ ಹರಸಾಹಸ ಪಟ್ಟಿದ್ದಾರೆ.  ರಸ್ತೆ ಇಲ್ಲದೆ ಕಡಿದಾದ ತೋಟದಲ್ಲೇ ಜೋಳಿಗೆ ಹೊತ್ತು ವೃದ್ಧೆಯನ್ನು ಆಸ್ಪತ್ರೆಗೆ  ಸಾಗಾಟ ನಡೆಸಿದ್ದಾರೆ. ಕಳೆದ ಮೂರು ವರ್ಷಗಳಿಂದಲೂ ಜಿಲ್ಲೆಯಲ್ಲಿ ಮಳೆ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಅದರಲ್ಲೂ ಸ್ವಾತಂತ್ರ್ಯ ಸಿಕ್ಕಿ ದಶಕಗಳೇ ಕಳೆದರು ಇನ್ನೂ ರಸ್ತೆಯನ್ನೇ ಕಾಣದ ಗ್ರಾಮಗಳ ಪರಿಸ್ಥಿತಿಯಂತು ಹೇಳುತ್ತಿರದಾಗಿದೆ. ಯಾವ ಮಟ್ಟಿಗೆ ಅಂದ್ರೆ ಬೇಗನೆ ಆಸ್ಪತ್ರೆಗೆ ಹೋಗಿ ಜೀವ ಉಳಿಸಿಕೊಳ್ಳಬೇಕು ಅಂದ್ರೆ ಹೀಗೆ ಜೋಳಿಗೆ ಹೊತ್ತು ಕುಟುಂಬಸ್ಥರೇ ಸಾಗಿಸುವ ಸ್ಥಿತಿ ಎದುರಾಗಿದೆ. ಇದರಿಂದ ರೋಸಿ ಹೋಗಿರುವ ಗ್ರಾಮಸ್ಥರು ಸರ್ಕಾರ ಹಾಗೂ ಸಂಬಂಧ ಪಟ್ಟ ಸಚಿವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. 2021 ರಲ್ಲಿ ಸ್ವಾಮಿ ರಸ್ತೆ ಮಾಡಿಸಿಕೊಡಿ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಸಚಿವ ಆರ್.ಅಶೋಕ್ ಗೆ ವೃದ್ಧೆ ವೆಂಕಮ್ಮ ಮನವಿ ಮಾಡಿದ್ರು. ತಾಲೂಕು-ಜಿಲ್ಲಾ ಮಟ್ಟದ ಅಧಿಕಾರಿಗಳಿಗೂ ಮನವಿ ಮಾಡಿದರು. ಆದರೆ, ಯಾವುದೇ ಪ್ರಯೋಜನ ಆಗಿಲ್ಲ ಅನ್ನೋದು ಇವರ ಆಕ್ರೋಶ.

ಯಾರಿಗೂ ಓಡಾಡಲು ಜಾಗವಿಲ್ಲ. ಜಮೀನಿಗೆ ಹೋಗಲು ದಾರಿ ಇಲ್ಲ: 
ಗಂಟೆಮಕ್ಕಿ ಗ್ರಾಮದ ವೃದ್ಧೆ ವೆಂಕಮ್ಮ ಕಳೆದ 65-70 ವರ್ಷಗಳಿಂದಲೂ ಗಂಟೆಮಕ್ಕಿ ಗ್ರಾಮದಲ್ಲೇ ವಾಸವಿದ್ದಾರೆ. ಇಲ್ಲಿ ಸುಮಾರು 8-10 ಮನೆಗಳಿದ್ದು, ಯಾರಿಗೂ ಓಡಾಡಲು ಜಾಗವಿಲ್ಲ. ಜಮೀನಿಗೆ ಹೋಗಲು ದಾರಿ ಇಲ್ಲ. ಹೊಲ-ಗದ್ದೆಗಳಿಗೆ ಗೊಬ್ಬರ, ಮನೆಗೆ ರೇಷನ್ ಎಲ್ಲವನ್ನು ತಲೆ ಮೇಲೆ ಹೊತ್ತುಕೊಂಡು ಹೋಗಬೇಕು. ಸ್ಥಳೀಯರು ಹತ್ತಾರು ವರ್ಷಗಳಿಂದ ರಸ್ತೆ ನಿರ್ಮಿಸಿ ಕೊಡುವಂತೆ ಅಧಿಕಾರಿಗಳಿಗೆ ನೂರಾರು ಮನವಿ ನೀಡಿದ್ದಾರೆ. ಆದರೆ ಈವರೆಗೂ ಯಾರೊಬ್ಬರೂ ಕೂಡ ಇವರ ನೋವಿಗೆ ಸ್ಪಂದಿಸಿಲ್ಲ.

ಅಷ್ಟಕ್ಕೂ ಇಲ್ಲಿ ಸೃಷ್ಟಿಯಾಗಿರುವ ಸಮಸ್ಯೆ ಏನು ಅಂದ್ರೆ, ಸುತ್ತಲೂ ನೂರಾರು ಎಕರೆ ಜಮೀನಿದೆ. 8-10 ಕುಟುಂಬಗಳ ಗಂಟೆಮಕ್ಕಿ ಎಂಬ ಗ್ರಾಮವೂ ಇದೆ. ಇವರೆಲ್ಲಾ ದಶಕಗಳಿಂದಲೂ ಇಲ್ಲೆ ಜೀವನ ಸಾಗಿಸುತ್ತಿದ್ದಾರೆ. ನಮ್ಮಜ್ಜಿ ಕಾಲದಿಂದಲೂ ಸರ್ಕಾರಕ್ಕೆ ಮನವಿ ಸಲ್ಲಿಸಿ ಸಲ್ಲಿಸಿ ಸಾಕಾಗಿ ಹೋಗಿದೆ. ಆದರೆ, ಅಧಿಕಾರಿಗಳು ಮಾತ್ರ ಕಣ್ಣು ತೆರೆಯುತ್ತಿಲ್ಲ. ಗದ್ದೆ-ಹೊಲದ ಕಾಲು ದಾರಿಯಲ್ಲಿ ನಮ್ಮ ಹೋರಾಟವೇ ಕಷ್ಟ ಆಗಿರುವಾಗ ವೃದ್ಧರ ಪಾಡೇನು ಎಂದು ಕುಟುಂಬಸ್ಥರು ನೋವು ಹೊರಹಾಕುತ್ತಿದ್ದಾರೆ. 60 ವರ್ಷಗಳಿಂದ ಇಲ್ಲಿ ಜೀವನ ಮಾಡಿದ್ರು ನಮ್ಮ ಗೋಳು ಕೇಳೋರು ಯಾರು ಇಲ್ಲ. ಆದಿವಾಸಿಗಳ ಭಾವನೆಗಳಿಗೆ ಸರ್ಕಾರ ಬೆಲೆ ಕೊಡುತ್ತಿಲ್ಲ ಅಂತ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಸ್ಥಳೀಯರು ನೋವು ತೋಡಿಕೊಳ್ಳುತ್ತಿದ್ದಾರೆ.

ಮಗಳ ಚಿಕಿತ್ಸೆಗೆ ಅಪ್ಪನ ಹೋರಾಟ, ಹೊತ್ತುಕೊಂಡೇ 8 ಕಿಮೀ ನಡೆದಾಟ

ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ರಸ್ತೆ ನಿರ್ಮಿಸಿ ಕೊಡುವಂತೆ ಮನವಿ ಮಾಡಿಕೊಂಡರೆ ಅಧಿಕಾರಿಗಳು ಅಕ್ಕಪಕ್ಕದ ಜಮೀನು, ಮಾಲೀಕರ ಬಳಿ ಜಾಗ ಬಿಡಿಸಿಕೊಟ್ಟರೆ ರಸ್ತೆ ನಿರ್ಮಿಸಿ ಕೊಡುತ್ತೇವೆ ಎಂದು ಹೇಳುತ್ತಾರಂತೆ. ಆದರೆ, ಅಕ್ಕಪಕ್ಕದ ಜಮೀನುಗಳ ಮಾಲೀಕರು ರಸ್ತೆ ನಿರ್ಮಿಸಲು ಜಾಗ ಬಿಟ್ಟುಕೊಡಲು ಮುಂದಾಗುತ್ತಿಲ್ಲ. ಹಾಗಾಗಿ, ಗಂಟೆಮಕ್ಕಿ ಗ್ರಾಮದ ಎಂಟತ್ತು ಕುಟುಂಬಗಳು ಕಳೆದ 65-70 ವರ್ಷಗಳಿಂದಲೂ ಇದೇ ರೀತಿಯಾಗಿ ಬದುಕುತ್ತಿದ್ದಾರೆ.

ಬಾಣಂತಿಯನ್ನು ಜೋಳಿಗೆ ಕಟ್ಟಿ ಹೊತ್ತೊಯ್ದ ಚಿಕ್ಕಮಗಳೂರಿನ ಆದಿವಾಸಿಗಳು!

ಒಟ್ಟಾರೆ, ಖಾಸಗಿ ವ್ಯಕ್ತಿಗಳು ತಮ್ಮ ಸ್ವಂತ ಜಾಗದಲ್ಲಿ ಕಾಲು ದಾರಿ ಬಿಟ್ಟಿದ್ದಾರೆ. ಅರ್ಧ ಕಿಲೋ ಮೀಟರ್ ರಸ್ತೆ ನಿರ್ಮಾಣವಾದ್ರೆ ಆದಿವಾಸಿ ಜನಾಂಗದ ಜನರ ಸಮಸ್ಯೆ ಬಗೆಹರಲಿದೆ.

Follow Us:
Download App:
  • android
  • ios