ಭಯ ಬಿಡಿ, ಕೈ ತೊಳೆಯಿರಿ, #SafeHands ಚಾಲೇಂಜ್‍ಗೆ ನೀವು ರೆಡಿನಾ?
ಕೊರೋನಾ ವೈರಸ್ ತಡೆಗೆ ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳೋದು ಅವಶ್ಯ. ಹಾಗಂತ ಕೈಗಳಿಗೆ ನೀರು ಮುಟ್ಟಿಸಿದ್ರೆ ಸಾಲದು, ಬದಲಿಗೆ ಕೈಗಳನ್ನು ಸರಿಯಾದ ವಿಧಾನದಲ್ಲಿ ತೊಳೆಯೋದು ಅಗತ್ಯ. ಇದನ್ನು ತಿಳಿಸಲೆಂದೇ ಸೋಷಿಯಲ್ ಮೀಡಿಯಾಗಳಲ್ಲಿ ಈಗ ಸದ್ದು ಮಾಡುತ್ತಿರುವ ಚಾಲೇಂಜ್ ಹೆಸರೇ #SafeHands.
ತಿಂಗಳ ಹಿಂದೆ ನೀವು ಹೇಗಿದ್ರೆ ಎಂಬುದನ್ನು ಸ್ವಲ್ಪ ರಿವೈಂಡ್ ಮಾಡ್ಕೊಂಡು ನೋಡಿ. ನೀವು ಅದೆಷ್ಟು ಬಾರಿ ಕೈಗಳನ್ನು ತೊಳೆಯದೆ ಊಟ ಮಾಡಿದ್ರಿ ಅಲ್ವಾ? ಆದ್ರೆ ಈಗಿನ ಪರಿಸ್ಥಿತಿ ನೋಡಿ. ಏನು ಮುಟ್ಟಿದ್ರೂ, ಮುಟ್ಟದಿದ್ರೂ ಆಗಾಗ ಕೈ ತೊಳೆಯಲು ಮಾತ್ರ ಮರೆಯೋದಿಲ್ಲ.ಇನ್ನು ಹೊರಗಡೆಯೆಲ್ಲಾದ್ರೂ ಹೋಗಿ ಬಂದರಂತೂ ಕೇಳೋದೆ ಬೇಡ, ಕೈಯನ್ನು ಅದೆಷ್ಟು ಹೊತ್ತು ತಿಕ್ಕಿ ತೊಳೆದರೂ ಏನೋ ಭಯ. ಹೀಗೆ ಕೈ ತೊಳೆಯುವ ಒಳ್ಳೆಯ ಗೀಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಾಡಿದ ಕ್ರೆಡಿಟ್ ಕರೋನಾ ವೈರಸ್‍ಗೆ ಸಲ್ಲುತ್ತೆ. ಈ ಮಹಾಮಾರಿ ವೈರಸ್‍ನಿಂದ ರಕ್ಷಿಸಿಕೊಳ್ಳಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳಲ್ಲಿ ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳೋದು ಕೂಡ ಒಂದು. ಹಾಗಂತ ಕೈಗಳಿಗೆ ನೀರು ತಾಗಿಸಿಕೊಂಡ್ರೆ ಸಾಲದು, ಬದಲಿಗೆ 20 ಸೆಕೆಂಡ್‍ಗಳ ಕಾಲ ಕೈಗಳನ್ನು ಚೆನ್ನಾಗಿ ತಿಕ್ಕಿ ತೊಳೆಯೋದು ಅಗತ್ಯ, ಹಾಗೆ ಮಾಡಿದ್ರೆ ಮಾತ್ರ ಕೈಗಳಿಗಂಟಿಕೊಂಡಿರುವ ವೈರಸ್ ಮಟಾಷ್ ಆಗುತ್ತಂತೆ. ಇದೇ ಕಾರಣಕ್ಕೆ ಕೈಗಳನ್ನು ಹೇಗೆ ತೊಳೆಯಬೇಕು ಎಂಬ ಪಾಠ ಮಾಡುವ ಸೆಲೆಬ್ರೆಟಿಗಳ ವಿಡಿಯೋಗಳು #SafeHands ಎಂಬ ಹ್ಯಾಶ್‍ಟ್ಯಾಗ್‍ನೊಂದಿಗೆ ಇತ್ತೀಚೆಗೆ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ.
ಕೊರೋನಾದಿಂದಾಗಿ ಭಾರತೀಯ ಮಡಿಯತ್ತ ಈಗ ಎಲ್ಲರ ಚಿತ್ತ!
ಏನಿದು ಸೇಫ್ ಹ್ಯಾಂಡ್ಸ್ ಚಾಲೇಂಜ್
ಕೊರೋನಾ ವೈರಸ್ ಬಾರದಂತೆ ತಡೆಯುವಲ್ಲಿ ಕೈಗಳನ್ನು ಆಗಾಗ ತೊಳೆಯೋದು ಎಷ್ಟು ಮುಖ್ಯ ಎಂಬ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆ #SafeHands ಚಾಲೇಂಜ್ ಸ್ವೀಕರಿಸುವಂತೆ ಜನರನ್ನು ಆಹ್ವಾನಿಸಿದೆ. ಡಬ್ಲ್ಯುಎಚ್‍ಒ ಡೈರೆಕ್ಟರ್ ಜನರಲ್ ಡಾ.ಟೆಡ್ರೋಸ್ ಅಡ್ಹನೊಮ್ ಘೆಬ್ರೆಯೇಸಸ್ ಸೋಪು ಹಾಗೂ ನೀರು ಬಳಸಿ ಹೇಗೆ ಕೈಗಳನ್ನು ತೊಳೆಯಬೇಕು ಹಾಗೂ ಕೊರೋನಾ ವೈರಸ್ ತಡೆಯುವಲ್ಲಿ ಅದೆಷ್ಟು ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ವಿಡಿಯೋದಲ್ಲಿ ವಿವರಿಸಿದ್ದಾರೆ. ಡಬ್ಲ್ಯುಎಚ್‍ಒ ಸೇಫ್ ಹ್ಯಾಂಡ್ಸ್ ಚಾಲೇಂಜ್ ಸ್ವೀಕರಿಸುವಂತೆ ಕರೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ಜಗತ್ತಿನಲ್ಲಿ ಖ್ಯಾತಿ ಗಳಿಸಿರುವ ವಿವಿಧ ಕ್ಷೇತ್ರದ ಪ್ರಮುಖರನ್ನು ಈ ಚಾಲೇಂಜ್‍ಗೆ ನಾಮಿನೇಟ್ ಮಾಡಿದ್ದಾರೆ. ಇವರಲ್ಲಿ ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ ಹಾಗೂ ಪ್ರಿಯಾಂಕ್ ಚೋಪ್ರಾ ಕೂಡ ಸೇರಿದ್ದಾರೆ. ಈ ಚಾಲೆಂಜ್ #SafeHandsChallenge and #HandHygiene ಎಂಬ ಹ್ಯಾಶ್‍ಟ್ಯಾಗ್‍ನೊಂದಿಗೂ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.
ಇಟೆಲಿಯಲ್ಲಿ ಹುಳಗಳಂತೆ ಜನ ಸತ್ತಿದ್ಯಾಕೆ? ಭಾರತದಲ್ಲೂ ಹಾಗಾಗುತ್ತಾ?
ಖುಷಿಯಿಂದ ಚಾಲೇಂಜ್ ಸ್ವೀಕರಿಸಿದ ಸೆಲೆಬ್ರೆಟಿಗಳು
ಡಾ.ಟೆಡ್ರೋಸ್ ಅಡ್ಹನೊಮ್ ಘೆಬ್ರೆಯೇಸಸ್ ಚಾಲೇಂಜ್ ಸ್ವೀಕರಿಸಿದ ದೀಪಿಕಾ ಪಡುಕೋಣೆ ಮಾಸ್ಕ್ ಧರಿಸಿ ಕೈಗಳನ್ನು ತೊಳೆಯುತ್ತಿರುವ ವಿಡಿಯೋವನ್ನು ತನ್ನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಕೈಗಳನ್ನು ಸಮರ್ಪಕವಾಗಿ ತೊಳೆಯೋದು ಹೇಗೆ ಎಂಬುದನ್ನು ಈ ವಿಡಿಯೋದಲ್ಲಿ ಅವರು ವಿವರಿಸಿದ್ದಾರೆ. ಅಷ್ಟೇ ಅಲ್ಲದೆ, ಟೆನ್ನಿಸ್ ಆಟಗಾರ ರೋಜರ್ ಫೆಡರರ್, ಫುಟ್‍ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಹಾಗೂ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರನ್ನು #SafeHands ಚಾಲೇಂಜ್‍ಗೆ ನಾಮಿನೇಟ್ ಮಾಡಿದ್ದಾರೆ. ಅನುಷ್ಕಾ ಶರ್ಮಾ, ಸಚಿನ್ ತೆಂಡೂಲ್ಕರ್ ಹಾಗೂ ಪಿ.ವಿ.ಸಿಂಧೂ ಕೂಡ ಈ ಚಾಲೆಂಜ್ ಸ್ವೀಕರಿಸಿ ಕೈಗಳನ್ನು ತೊಳೆಯುತ್ತಿರುವ ವಿಡಿಯೋಗಳನ್ನು ಇನ್‍ಸ್ಟ್ರಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಇನ್ನು ಕೇರಳ ಪೊಲೀಸರು ಒಂದು ಹೆಜ್ಜೆ ಮುಂದೆ ಹೋಗಿ, ಡ್ಯಾನ್ಸ್ ಮಾಡುತ್ತ ಕೈ ತೊಳೆಯುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುವ ಮೂಲಕ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಕೆಲವರು ಪುಟ್ಟ ಮಕ್ಕಳು ಕೈಗಳನ್ನು ತೊಳೆಯುತ್ತಿರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‍ಲೋಡ್ ಮಾಡುವ ಮೂಲಕ ಅರಿವು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ.
ಕೊರೋನಾ Fact Check; ಸುಳ್ಳು ಮಾಹಿತಿಗಳಿಗೆ ಕಿವಿಯಾಗಬೇಡಿ
ಅಬ್ಬಾ, 20 ಸೆಕೆಂಡ್ ಕೈ ತೊಳೆಯಬೇಕಾ?: ಕೊರೋನಾ ವೈರಸ್ ನಾಶವಾಗಬೇಕೆಂದ್ರೆ 20 ಸೆಕೆಂಡ್‍ಗಳ ಕಾಲ ಕೈ ತೊಳೆಯೋದು ಅಗತ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಹೇಳಿದೆ. ಆದ್ರೆ ಇಷ್ಟು ದಿನ ಗಡಿಬಿಡಿಯಲ್ಲಿ ಕೈಗಳಿಗೆ ನೀರು ತಾಗಿಸಿಕೊಂಡು ಕೈ ತೊಳೆದ ಶಾಸ್ತ್ರ ಮಾಡುತ್ತಿದ್ದವರಿಗೆ ಈ 20 ಸೆಕೆಂಡ್ ದೊಡ್ಡ ತಲೆನೋವಾಗಿ ಪರಿಣಾಮಿಸಿದೆ. ಅಮೆರಿಕ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಕೈ ತೊಳೆಯುವಾಗ 20 ಸೆಕೆಂಡ್ ಆಯ್ತಾ ಇಲ್ಲವೋ ಎಂಬುದನ್ನು ದೃಢಪಡಿಸಿಕೊಳ್ಳಲು ಕೆಲವರು 20 ಸೆಕೆಂಡ್‍ಗೆ ಸರಿಯಾಗಿ ಪೂರ್ಣಗೊಳ್ಳುವ ಹಾಡಿನ ಸಾಲನ್ನು ಗುನುಗುನಿಸುತ್ತಿದ್ದಾರೆ. ಹ್ಯಾಪಿ ಬರ್ತ್ ಡೇ ಟು ಯೂ ಎಂಬ ಸಾಲನ್ನು ಎರಡು ಬಾರಿ ಹೇಳಲು 20 ಸೆಕೆಂಡ್ ಬೇಕಂತೆ. ಇದೇ ಕಾರಣಕ್ಕೆ ಕೆಲವರು ಕೈ ತೊಳೆಯುವಾಗ ಹ್ಯಾಪಿ ಬರ್ತ್ ಡೇ ಟು ಯೂ ಎಂದು ಬಾಯ್ತುಂಬಾ ಹಾಡು ಹೇಳುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೋಡುಗರಲ್ಲಿ ನಗು ಉಕ್ಕಿಸುತ್ತಿವೆ.