ಗರ್ಭಿಣಿ ಹೊಟ್ಟೆ ಗಾತ್ರ ನೋಡಿ ಮಗು ಹೆಣ್ಣಾ, ಗಂಡಾ ಅಂತ ತಿಳೀಬಹುದಾ?
ಗರ್ಭಿಣಿಯ ಹೊಟ್ಟೆಯ ಶೇಪ್, ಅವಳ ವರ್ತನೆ, ಮುಖದ ಬಣ್ಣ ಬದಲಾಗೋ ರೀತಿ ಇದನ್ನೆಲ್ಲ ನೋಡಿ ಕೆಲವರು ಮಗು ಹೆಣ್ಣಾ, ಗಂಡಾ ಅಂತ ಗೆಸ್ ಮಾಡ್ತಾರೆ. ಜಗತ್ತಿನೆಲ್ಲೆಡೆ ಅಂತಾ ನಂಬಿಕೆಗಳಿವೆ. ಹಾಗಿದ್ದರೆ ಹೊಟ್ಟೆಯ ಗಾತ್ರಕ್ಕೂ, ಮಗುವಿನ ಲಿಂಗಕ್ಕೂ ಸೂಕ್ಷ್ಮ ಲಿಂಕ್ ಇದೆಯಾ..
ರಚಿತಾ ಮದುವೆಯಾಗಿ ಎರಡು ವರ್ಷದ ಬಳಿಕ ಗುಡ್ ನ್ಯೂಸ್ ಹೇಳಿದಳು. ಅವಳ ಫ್ಯಾಮಿಲಿಯಲ್ಲಿ ಹಾಗೂ ಅವಳ ಗಂಡನ ಫ್ಯಾಮಿಲಿಯಲ್ಲಿ ಎಷ್ಟೋ ವರ್ಷಗಳ ನಂತರ ಬರುತ್ತಿರುವ ಮಗುವಾದ ಕಾರಣ ಎರಡೂ ಕುಟುಂಬದಲ್ಲಿ ಸಂತೋಷವೇ. ರಚಿತಾಗೂ ಅವಳ ಗಂಡ ಸಾತ್ವಿಕ್ ಗೂ ಇದು ಥ್ರಿಲ್ಲಿಂಗ್ ವಿಷಯವೇ. ಆದರೆ ಅವರಿಬ್ಬರನ್ನೂ ಕಂಗೆಡಿಸಿದ್ದು ರಚಿತಾಳ ಮಾರ್ನಿಂಗ್ ಸಿಕ್ ನೆಸ್. ಪೀರೆಯಡ್ಸ್ ನಿಂತ ಕೆಲವು ದಿನಗಳ ಕಾಲ ಆರಾಮಾಗೇ ಇದ್ದಳು ರಚಿತಾ. ಅವಳು ಬೇರೆ ಗರ್ಭಿಣಿಯರನ್ನು ಹತ್ತಿರದಿಂದ ನೋಡದ ಕಾರಣ, ಅವಳ ಗೆಳತಿಯರ ವರ್ಗದಲ್ಲೂ ಅವಳೇ ಮೊದಲ ಬಾರಿ ಗರ್ಭ ಧರಿಸಿದ ಕಾರಣ ಅವಳಿಗೆ ಪ್ರತೀ ಅನುಭವವೂ ಹೊಸತೇ. ಆರಂಭದಲ್ಲಿ ವಾಂತಿ ಇಲ್ಲದ್ದು ಕಂಡು ತನಗೇನೂ ಆಗಲ್ಲ, ಅದು ಸಿನಿಮಾದಲ್ಲಿ ಮಾತ್ರ ಅಂದುಕೊಂಡು ಸುಮ್ಮನಾಗಿದ್ದಳು. ಆದರೆ ನಲವತ್ತ ಮೂರನೇ ದಿನಕ್ಕೆ ಶುರುವಾಗಿಯೇ ಬಿಟ್ಟಿತು. ಬೆಳಗ್ಗೆ ನಾಲಗೆಯಲ್ಲಿ ದಪ್ಪಕ್ಕೆ ಏನೋ ಮೆತ್ತಿಕೊಂಡ ಹಾಗೆ, ಬ್ರೆಶ್ ಬಾಯೊಳಗಿಟ್ಟದ್ದೇ ವಾಂತಿ. ಆಮೇಲಿನ ದಿನಗಳು ಕಷ್ಟದವು. ಅವಳಿಗೆ ತಿಂದದ್ದೆಲ್ಲ ವಾಂತಿಯಾಗಿ, ತಲೆ ಸುತ್ತಿ ಬೀಳೋದು ಮಾಮೂಲಾಯ್ತು. ಕೆಲಸಕ್ಕೆ ತಾತ್ಕಾಲಿಕ ಬ್ರೇಕ್ ತಗೊಂಡು ಮನೆಯಲ್ಲೇ ದಿನ ಕಳೆಯಲಾರಂಭಿಸಿದಳು. ಮಾನಸಿಕವಾಗಿ ಹಾಗೂ ದೈಹಿಕವಾಗಿ ಬಹಳ ಬಳಲಿಕೆ ಇತ್ತು. ಕೆಲವು ವಾರಗಳು ಅವಳನ್ನು ನೋಡಲೆಂದು ಬಂದ ಹಿರಿಯ ಮಹಿಳೆ ರಚಿತಾಳ ಗಲ್ಲ ಚಿವುಟಿ ಹೇಳಿದರು, 'ನಿಂಗೆ ಈ ಪರಿ ವಾಂತಿಯಾಗ್ತಿದೆ ಅಂದರೆ ಬಹುಶಃ ನಿನ್ನ ಹಾಗೇ ಇರುವ ಕ್ಯೂಟ್ ಗರ್ಲ್ ಬೇಬಿ ಅನಿಸುತ್ತೆ ' ಅಂದರು. ಆ ಬಗ್ಗೆ ಯೋಚಿಸದೇ ಇದ್ದ ರಚಿತಾ ಮನಸ್ಸಲ್ಲಿ ಮುದ್ದಾದ ಹೆಣ್ಣು ಮಗುವಿನ ಚಿತ್ರ ಬಂದು ಅವಳು ಥ್ರಿಲ್ ಆದಳು.
ಮಗಳು 13 ದಾಟುವ ಮುನ್ನ ಈ ಜೀವನಪಾಠಗಳನ್ನು ಕಲಿಸಿ
'ಹೆಣ್ಣು ಮಗುವಿನಲ್ಲಿ ಫೀಮೇಲ್ ಹಾರ್ಮೋನ್ ಗಳು ಹೆಚ್ಚಿರುವ ಕಾರಣ ಹೊಟ್ಟೆಯಲ್ಲಿ ಹೆಣ್ಣು ಮಗುವಿದ್ದರೆ ವಾಂತಿ, ತಲೆ ಸುತ್ತು ಎಲ್ಲ ಹೆಚ್ಚು ಅನ್ನೋ ಮಾತು ಫಾರಿನ್ ನಲ್ಲೆಲ್ಲ ಫೇಮಸ್. ನನ್ನ ಮಗಳಿಗೆ ಹೆರಿಗೆಯಾದಾಗ ಅಮೆರಿಕಾಕ್ಕೆ ಹೋಗಿದ್ನಲ್ಲಾ, ಅಲ್ಲಿಯವರು ಮಗಳಿಗೆ ಶುರುವಲ್ಲಿ ಹಾಗೇ ಹೇಳ್ತಿದ್ರಂತೆ. ನೋಡು ಅವಳಿಗೆ ಹೆಣ್ಣಾಯಿತು ' ಅಂದರು. ಬಸವಳಿದ ಮುಖದಲ್ಲಿ ನಗು ಮೂಡಿತು. ರಚಿತಾ ಗಂಡನಿಗೂ ಈ ವಿಷಯ ಹೇಳಿದಳು. ಇವಳಿಗಿಂತ ಸ್ವಲ್ಪ ಹೆಚ್ಚೇ ಪ್ರಾಕ್ಟಿಕಲ್ ಆಗಿದ್ದ ಅವನಿಗೆ ಇದನ್ನೆಲ್ಲ ನಂಬಲಾಗಲಿಲ್ಲ. ಮಗು ಯಾವುದೇ ಇದ್ದರೂ ಲಿಂಗಭೇದವಿಲ್ಲದೇ ಬೆಳೆಸಬೇಕು ಎಂಬ ಭಾವನೆ ಅವನದ್ದು. ಇಂಥ ವಿಚಾರಗಳನ್ನು ಅವನು ನಂಬುತ್ತಿರಲಿಲ್ಲ.
ಅವಳಿಗೆ ದಿನ ತುಂಬುತ್ತಿದ್ದಂತೆ ಈ ಬಗೆಯ ಮಾತುಗಳು ಹೆಚ್ಚೆಚ್ಚು ಬಂದವು. ಕೆಲವರು ಅವಳ ಹೊಟ್ಟೆಯ ಶೇಪ್ ನೋಡಿ ಮಗು ಗಂಡು, ಹೆಣ್ಣು ಅಂತ ತೀರ್ಮಾನ ಕೊಟ್ಟರೆ, ಮತ್ತೆ ಕೆಲವರು ಮಗುವಿನ ಮೂವ್ ಮೆಂಟ್, ಹೊಟ್ಟೆಯಲ್ಲಿ ಕಾಣೋ ಅದರ ಶೇಪ್ ಎಲ್ಲ ನೋಡಿ ಮತ್ತೊಂದು ಜಡ್ಜ್ ಮೆಂಟ್ ಗೆ ಬಂದರು. ಆರಂಭದಲ್ಲಿ ಖುಷಿ ಕೊಡುತ್ತಿದ್ದ ಇಂಥ ವಿಷಯಗಳು ಆಮೇಲೆ ಗೊಂದಲ ಹುಟ್ಟಿಸಿದವು. ಸಾತ್ವಿಕ್ ನ ಪರಿಚಯದ ಗೈನಕಾಲಜಿಸ್ಟ್ ಹತ್ರ ಈ ವಿಷಯ ಎಲ್ಲ ಹೇಳಿ ಸಂದೇಹ ತೋಡಿಕೊಂಡರು ದಂಪತಿ. ಆಗ ಆ ಗೈನಕಾಲಜಿಸ್ಟ್ ಹೇಳಿದ್ದಿಷ್ಟು.
- ಹೊಟ್ಟೆಯ ಗಾತ್ರಕ್ಕೂ ಮಗುವಿನ ಲಿಂಗಕ್ಕೂ ಸಂಬಂಧ ಇಲ್ಲ. ಸಾಮಾನ್ಯವಾಗಿ ಗಂಡು ಮಗುವಾಗಿದ್ದರೆ ತೂಕ ಹೆಚ್ಚಿರುತ್ತೆ ಅನ್ನೋ ಮಾತು ಹಿಂದಿತ್ತು, ಆದರೆ ಅದೇನೂ ಸತ್ಯ ಅಂತ ನನಗನಿಸಲ್ಲ. ಏಕೆಂದರೆ ನಮ್ಮ ಆಸ್ಪತ್ರೆಯಲ್ಲಿ ಹುಟ್ಟೋ ಮಕ್ಕಳನ್ನು ನೋಡಿದ್ರೆ ಹೆಚ್ಚು ತೂಕದ ಗಂಡು ಮಗುವಿದ್ದ ಹಾಗೆ ಹೆಚ್ಚು ತೂಕದ ಹೆಣ್ಣು ಮಗುವೂ ಹುಟ್ಟುತ್ತೆ. ತಾಯಿಗೆ ಮಧುಮೇಹ ಇರೋದು ಮಗುವಿನ ತೂಕದ ಮೇಲೆ ಪರಿಣಾಮ ಬೀರುತ್ತೆ.
- ಮಾರ್ನಿಂಗ್ ಸಿಕ್ ನೆಸ್ ಹೆಚ್ಚಿರುವ ಹೊತ್ತಿಗೆ ಭ್ರೂಣ ಬಹಳ ಚಿಕ್ಕದಾಗಿರುವ ಕಾರಣ ಅದರಲ್ಲಿ ಹಾರ್ಮೋನ್ ಗಳೆಲ್ಲ ಸರಿಯಾಗಿ ಬೆಳವಣಿಯಾಗಿರಲ್ಲ. ಹಾಗಾಗಿ ಅದಕ್ಕೂ ಮಾರ್ನಿಂಗ್ ಸಿಕ್ ನೆಸ್ ಗೂ ಸಂಬಂಧ ಇಲ್ಲ.
- ಹೊಟ್ಟೆಯೊಳಗಿರುವ ಮಗು ಗಂಡಾದರೆ ತಾಯಿಯ ಮುಖ ಕಪ್ಪಾಗುತ್ತೆ, ಹೆಣ್ಣಾದರೆ ಬೆಳಗುತ್ತಿರುತ್ತೆ ಅನ್ನೋದರ ಬಗೆಗೂ ಸಂಶೋಧನೆ ನಡೆದಿದೆ. ಲಿಂಗಕ್ಕೂ ಗರ್ಭಿಣಿಯ ಚರ್ಮದ ಬಣ್ಣದಲ್ಲಾಗುವ ಬದಲಾವಣೆಗೂ ಯಾವ ವ್ಯತ್ಯಾಸವೂ ಕಂಡು ಬಂದಿಲ್ಲ.
ತಾಯಿ ಪ್ರೀತಿ ಸಿಗದಿದ್ದರೆ ಮಗಳ ವ್ಯಕ್ತಿತ್ವಕ್ಕೆ ಕುತ್ತು
ಹಾಗಾಗಿ ಇವೆಲ್ಲ ಜನರ ಆಡು ಮಾತಲ್ಲಿ ಬಂದು ಹೋಗುವ ವಿಷಯಗಳು. ಆಧಾರ ರಹಿತ ಅಂದರು ಡಾಕ್ಟರ್.
ಆದರೆ ರಚಿತಾಗೆ ಸಿಸೇರಿಯನ್ ಡೆಲಿವರಿಯಾಗಿ ಹೆಣ್ಣು ಮಗು ಹುಟ್ಟಿದಾಗ ಅವಳಿಗೆ ಫಕ್ಕನೆ ನೆನಪಾದದ್ದು ಮಾತ್ರ ಅವಳ ಮನೆಗೆ ಬಂದ ಹಿರಿಯ ಹೆಂಗಸು ಆಡಿದ ಮಾತು!