ಕೊಪ್ಪಳದಲ್ಲೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಅಭಿಯಾನ
- ಕೊಪ್ಪಳದಲ್ಲೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಅಭಿಯಾನ
- ಸೋಷಿಯಲ್ ಮೀಡಿಯಾದಲ್ಲೂ ಜೋರಾಗುತ್ತಿದೆ ಕೂಗು
- ಕಿಮ್ಸ್ ಆಸ್ಪತ್ರೆಯನ್ನೇ ಮೇಲ್ದರ್ಜೆಗೇರಿಸಲು ಆಗ್ರಹ
ವರದಿ: ಸೋಮರಡ್ಡಿ ಅಳವಂಡಿ
ಕೊಪ್ಪಳ (ಜು.29) : ಜಿಲ್ಲಾಸ್ಪತ್ರೆಯಲ್ಲಿ ಗಂಟೆಗೊಂದು ಹೆರಿಗೆಯಾಗುತ್ತಿವೆ. ಆಸ್ಪತ್ರೆಯಲ್ಲಿ ದಾಖಲಾಗಲು ಬೆಡ್ ಸಾಲುತ್ತಿಲ್ಲ. ರೋಗಿಗಳಿಗೆ ಉನ್ನತ ಚಿಕಿತ್ಸೆ ಸರ್ಕಾರಿ ಆಸ್ಪತ್ರೆಯಲ್ಲಿ ಸಿಗುತ್ತಿಲ್ಲ. ಹೀಗಾಗಿ ಹುಬ್ಬಳ್ಳಿ ಸೇರಿದಂತೆ ನಾನಾ ಆಸ್ಪತ್ರೆಗಳಿಗೆ ರವಾನೆ ಮಾಡಲಾಗುತ್ತಿದೆ. ಇದೆಲ್ಲದಕ್ಕೂ ಪರಿಹಾರ ಎಂದರೆ ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭಿಸುವುದು...
ಇಂತಹ ಜನಾಭಿಪ್ರಾಯ ಬಲಗೊಳ್ಳುತ್ತಿದೆ. ಸೋಷಿಯಲ್ ಮೀಡಿಯಾ(Social Media)ದಲ್ಲಿ ಅಭಿಯಾನ ಪ್ರಾರಂಭಿಸಲಾಗಿದೆ. ರಾಜೇಶ ಯಾವಗಲ್ ಅವರು ಪ್ರಾರಂಭಿಸಿರುವ ಸೋಷಿಯಲ್ ಮೀಡಿಯಾ ಅಭಿಯಾನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai) ಅವರು ಪ್ರತಿಕ್ರಿಯೆ ನೀಡುವ ವರೆಗೂ ಅಭಿಯಾನವನ್ನು ಮುಂದುವರಿಸಲು ನಿರ್ಧರಿಸಲಾಗಿದೆ.
ACB Raids ಕಾಲು ನೋವಿನ ಚಿಕಿತ್ಸೆಗೆ 12000 ರೂ ಲಂಚ ಕೇಳಿದ ಸರ್ಕಾರಿ ವೈದ್ಯ, ಸ್ವೀಕರಿಸುವಾಗ ಎಸಿಬಿ ಬಲೆಗೆ
ಏನು ಬರೆದುಕೊಳ್ಳಲಾಗಿದೆ?:
ಜಿಲ್ಲೆಯಲ್ಲಿ ಅನೇಕ ರಾಷ್ಟ್ರೀಯ ಹೆದ್ದಾರಿಗಳಿ(National Highway)ವೆ. ಇಲ್ಲಿ ಅಪಘಾತಗಳು ಆಗಾಗ ನಡೆಯುತ್ತಲೇ ಇರುತ್ತವೆ. ಇತ್ತೀಚೆಗಷ್ಟೇ ಎರಡು ಪ್ರಮುಖ ಅಪಘಾತಗಳು ನಡೆದಾಗ ಈಗಿರುವ ಜಿಲ್ಲಾಸ್ಪತ್ರೆಯಲ್ಲಿ ಉನ್ನತ ಮಟ್ಟದ ಚಿಕಿತ್ಸೆ ನೀಡಲು ಸಾಧ್ಯವಾಗಲಿಲ್ಲ. ಹಾಗೆಯೇ ಅನೇಕ ಕೈಗಾರಿಕೆಗಳು ಇಲ್ಲಿವೆ. ಪ್ರತಿದಿನ ಸಾವಿರಾರು ಕಾರ್ಮಿಕರು ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಈಗ ದೇಶದ ಮೊದಲ ಆಟಿಕೆ ಕ್ಲಸ್ಟರ್ ಪ್ರಾರಂಭವಾಗುತ್ತಿದೆ. ಅಲ್ಲಿಯೂ ಸಾವಿರಾರು ಕಾರ್ಮಿಕರು ಕಾರ್ಯ ನಿರ್ವಹಿಸಲಿದ್ದಾರೆ.
ಇವರೆಲ್ಲರಿಗೂ ಸ್ಥಳೀಯವಾಗಿಯೇ ಚಿಕಿತ್ಸೆ ದೊರೆಯುವಂತಾಗಬೇಕು. ಕಾರ್ಖಾನೆಯಲ್ಲಿ ಅವಘಡ ನಡೆದಾಗಲೆಲ್ಲಾ ದೂರದ ಹುಬ್ಬಳ್ಳಿ ಆಸ್ಪತ್ರೆಗೆ ಕಳುಹಿಸಿಕೊಡಲಾಗುತ್ತದೆ. ಅಂತಹ ಸಂದರ್ಭ ತಪ್ಪಬೇಕು ಎಂಬ ಆಗ್ರಹಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಕೂಡಲೇ ಕೊಪ್ಪಳದಲ್ಲೊಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭಿಸಿ ಎಂಬ ಅಭಿಯಾನ ಪ್ರಾರಂಭಿಸಲಾಗಿದೆ.
ಸಿಎಂ ಭೇಟಿ ಹಿನ್ನೆಲೆ:
ಜಿಲ್ಲೆಗೆ ಆ. 1ರಂದು ಮಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಿ. ಸುಧಾಕರ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ಅಭಿಯಾನಕ್ಕೆ ಮಹತ್ವ ಬಂದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಗಮಿಸುತ್ತಿರುವುದರಿಂದ ಅವರ ಮೇಲೆ ಒತ್ತಡ ಹೇರಲು ಪ್ರಜ್ಞಾವಂತರು ಈ ಅಭಿಯಾನ ಪ್ರಾರಂಭಿಸಿದ್ದಾರೆ.
ಕೊಪ್ಪಳ: ವೈದ್ಯರ ನಿರ್ಲಕ್ಷ್ಯದಿಂದ ಆಸ್ಪತ್ರೆ ಬಾಗಿಲಲ್ಲೇ ಮಹಿಳೆಯ ಹೆರಿಗೆ..!
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಯಾಕೆ ಬೇಕು?:
ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ಈಗಾಗಲೇ ಇರುವ ಜಿಲ್ಲಾಸ್ಪತ್ರೆ ಕಿಮ್ಸ್ ಆಸ್ಪತ್ರೆಯಾಗಿ ತಾತ್ಕಾಲಿಕವಾಗಿ ಪರಿವರ್ತನೆ ಮಾಡಲಾಗಿದೆ. ಕಿಮ್ಸ್ ಕಾಲೇಜು ವತಿಯಿಂದ 1 ಸಾವಿರ ಹಾಸಿಗೆ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈಗಿರುವ ಜಿಲ್ಲಾಸ್ಪತ್ರೆಗೆ ನಿತ್ಯವೂ 1500 ರೋಗಿಗಳು ಬಂದು ಹೋಗುತ್ತಾರೆ. ಇನ್ನು ಆಸ್ಪತ್ರೆಯಲ್ಲಿ ಸುಮಾರು 400 ಹಾಸಿಗೆ ಮಾಡಬಹುದಾದ ಸಾಮರ್ಥ್ಯ ಇದ್ದರೂ ಎಲ್ಲೆಂದರಲ್ಲಿ ಬೆಡ್ ಹಾಕಲಾಗಿದೆ. ಆದರೂ ಬೆಡ್ ಸಾಲದೆ ಅದೆಷ್ಟೋ ಜನರು ಚಿಕಿತ್ಸೆಯಿಂದ ವಂಚಿತರಾಗುತ್ತಿದ್ದಾರೆ.
ಬಹುತೇಕ ಸಂದರ್ಭದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಶಿಫಾರಸು ಮಾಡಿ ಕಳುಹಿಸುತ್ತಾರೆ. ಪ್ರತಿ ಗಂಟೆಗೊಂದು ಹೆರಿಗೆ ಇಲ್ಲಿ ಆಗುತ್ತದೆ. ಕೇವಲ ಕೊಪ್ಪಳ ಅಷ್ಟೇ ಅಲ್ಲ, ನೆರೆಯ ಜಿಲ್ಲೆಯ ಅನೇಕ ಗರ್ಭಿಣಿಯರು ಇಲ್ಲಿ ಬಂದು ದಾಖಲಾಗುತ್ತಾರೆ. ಕಾರ್ಖಾನೆಗಳು ಇರುವುದರಿಂದ ಕಾರ್ಮಿಕ ವರ್ಗ ದೊಡ್ಡ ಪ್ರಮಾಣದಲ್ಲಿ ಇದೆ. ಬಡವರೇ ಅಧಿಕ ಇರುವುದರಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆ ಅಧಿಕವಾಗಿದೆ. ಹೀಗಾಗಿ ಇಲ್ಲೊಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭಿಸುವ ಅಗತ್ಯವಿದೆ.
ಸಿಎಂ ಮನಸ್ಸು ಮಾಡಿದ್ದಾರೆ:
ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಅವರು ಮನಸ್ಸು ಮಾಡಿದ್ದಾರೆ. ಸಂಸದ ಸಂಗಣ್ಣ ಕರಡಿ ಅವರು ಕೋರಿಕೆಯ ಪತ್ರಕ್ಕೆ ಅಸ್ತು ಎಂದು, ಕೂಡಲೇ ಕ್ರಮವಹಿಸಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ. ಸುಧಾಕರ ಅವರಿಗೆ ಸೂಚಿಸಿದ್ದಾರೆ. ಆದರೆ, ವೈದ್ಯಕೀಯ ಶಿಕ್ಷಣ ಸಚಿವ ಡಿ. ಸುಧಾಕರ ಅವರು ಇದುವರೆಗೂ ಸಿಎಂ ಅವರ ಸೂಚನೆಯ ಫೈಲ್‌ಗೆ ಅಸ್ತು ಎಂದಿಲ್ಲ.
ಕೊಪ್ಪಳದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯವನ್ನು ಮನಗಂಡು ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಪ್ರಾರಂಭಿಸಿದ್ದೇವೆ. ಯಶಸ್ವಿಯಾಗುವ ವರೆಗೂ ಮುಂದುವರಿಸುತ್ತೇವೆ.
ರಾಜೇಶ ಯಾವಗಲ್ ಅಭಿಯಾನ ಪ್ರಾರಂಭಿಸಿರುವವರು