ಮೈಕೈ ನೋವು ಹೋಗಲಾಡಿಸಲು ಬಿಕೆಎಸ್ ಅಯ್ಯಂಗಾರರ ಸರಳ ಯೋಗ
ದೇಶವಿದೇಶಗಳಲ್ಲಿ ಯೋಗದ ಕೀರ್ತಿಯನ್ನು ಹರಡಿದವರು ಭಾರತೀಯರಾದ, ಅದರಲ್ಲೂ ಕನ್ನಡಿಗರಾದ ಬಿಕೆಎಸ್ ಅಯ್ಯಂಗಾರ್ ಅವರು. ಜೀವನಶೈಲಿಯಿಂದ ಉಂಟಾಗುವ ಕೆಲವು ಮೈಕೈ ನೋವುಗಳನ್ನು ಹೋಗಲಾಡಿಸಲು ಅವರು ಹೇಳಿಕೊಟ್ಟಿರುವ ಸರಳ ಕೆಲವು ಸರಳ ಯೋಗಾಸನಗಳು ಇಲ್ಲಿವೆ.
ಈಗ ಕೊರೊನಾ ಲಾಕ್‌ಡೌನ್ ಕಾರಣದಿಂದ ಜಿಮ್‌ಗೆ ಆಗಲೀ, ಪಾರ್ಕ್‌ಗಳಿಗಾಗಲೀ ಅಥವಾ ಯೋಗಾಸನ ಕ್ಲಾಸುಗಳಿಗಾಗಲೀ ಹೋಗಲು ಸಾದ್ಯವಿಲ್ಲ. ಆದರೆ ದಿನವಿಡೀ ಮನೆಯಲ್ಲಿ ಕುಳಿತು ಕಚೇರಿ ಕೆಲಸ ಮಾಡಿ, ಅಥವಾ ಕಚೇರಿಯಲ್ಲಿ ಕುಳಿತು ಕೆಲಸ ಮಾಡಿ, ಕತ್ತು ನೋವು, ಬೆನ್ನು ನೋವು, ಸೊಂಟ ನೋವು ಇತ್ಯಾದಿಗಳು ಉಂಟಾಗುತ್ತವೆ. ಇವುಗಳನ್ನು ಹೋಗಲಾಡಿಸುವುದು ಹೇಗೆ? ಅದಕ್ಕೆಂದೇ ಯೋಗಗುರು ಬಿಕೆಎಸ್ ಅಯ್ಯಂಗಾರ್ ಅವರು ಹೇಳಿಕೊಟ್ಟಿರುವ ಕೆಲವು ಸರಳ ಯೋಗಾಸನಗಳು ಇಲ್ಲಿವೆ. ಇವುಗಳನ್ನು ಯಾರು ಬೇಕಿದ್ದರೂ ಮಾಡಬಹುದು. ಅಯ್ಯಂಗಾರ್ ಅವರು ಬರೆದಿರುವ "ಸರಳ ಪ್ರಾಣಾಯಾಮ ದೀಪಿಕಾ' ಕೃತಿಯಲ್ಲಿ ಈ ಯೋಗಾಸನಗಳನ್ನು ಹೇಳಲಾಗಿದೆ.
ಮನೆಯಲ್ಲೇ ಸುಲಭವಾಗಿ ದೊರೆಯುವ ಮೆಟ್ಟಿಲು. ಮೆಟ್ಟಿಲಿನ ಕಂಬಿಗಳು, ಕಿಟಕಿ ಕಂಬಿಗಳು, ಸೋಫಾ, ಕುರ್ಚಿ, ದಿಂಬು, ಶಾಲು, ಇವೇ ಮುಂತಾದ ಸಾಧನಗಳನ್ನು ಉಪಯೋಗಿಸಿಕೊಂಡೇ ಈ ವ್ಯಾಯಾಮಗಳನ್ನು ಮಾಡಬಹುದು ಎನ್ನುವುದು ವಿಶೇಷ.
ಬೆನ್ನು ನೋವು ನಿವಾರಣೆಗೆ
ಕುಳಿತಲ್ಲೇ ಹೆಚ್ಚು ಹೊತ್ತು ಕುಳಿತಿದ್ದರೆ ಬೆನ್ನು ನೋವು ಬರುತ್ತದೆ. ಬೆನ್ನು ಹುರಿಗೆ ಚಟುವಟಿಕೆ ನೀಡಲು ಡೈನಿಂಗ್ ಚೇರ್ ಬಳಸಬಹುದು. ಕುರ್ಚಿಯ ಒಂದು ಬದಿಗೆ ಕುಳಿತು, ಎರಡೂ ಕೈಗಳಿಂದ ಅದರ ಬೆನ್ನೊರಗು ಹಿಡಿದುಕೊಂಡು, ಬೆನ್ನೊರಗಿನ ವಿರುದ್ಧ ದಿಕ್ಕಿಗೆ ಕತ್ತು ತಿರುಗಿಸುವುದು. ಹೀಗೆ ಎಡಕ್ಕೂ, ಬಲಕ್ಕೂ ಮಾಡಬೇಕು. ಇದರಿಂದ ಬೆನ್ನು ಹುರಿಗೆ ವ್ಯಾಯಾಮವಾಗುತ್ತದೆ. ದೇಹದ ಬಹು ಮುಖ್ಯ ಅಂಗಗಳಾದ ಹೃದಯ, ಶ್ವಾಸಕೋಶ, ಕಿಡ್ನಿ ಹೀಗೆ ಎಲ್ಲವೂ ಬೆನ್ನು ಮೂಳೆಯ ಅಕ್ಕಪಕ್ಕದಲ್ಲಿ ಇವೆ. ಇವೆಲ್ಲವೂ ಈ ವ್ಯಾಯಾಮದಿಂದ ಚುರುಕಾಗುತ್ತವೆ.
ಥೈರಾಯಿಡ್ ಸಮಸ್ಯೆ ನಿವಾರಣೆ
ಕೈಯಿಲ್ಲದ ಕಬ್ಬಿಣದ ಕುರ್ಚಿಯನ್ನು ಉಪಯೋಗಿಸಿ ಸರ್ವಾಂಗಾಸನ ಮಾಡಬಹುದು. ಕಾಲುಗಳನ್ನು ಇಳಿಬಿಟ್ಟು ಬೆನ್ನೊರಗಿಗೆ ಮುಖ ಮಾಡಿ ಕುಳಿತು, ಬೆನ್ನೊರಗನ್ನು ಎರಡೂ ಕೈಗಳಲ್ಲಿ ಹಿಡಿದುಕೊಂಡು, ಹಿಂದಕ್ಕೆ ನೆಲಕ್ಕೆ ಸಂಪೂರ್ಣವಾಗಿ ಬಾಗಬೇಕು. ನಂತರ ಕಾಲುಗಳನ್ನು ಮೇಲೆತ್ತಿ ಹಿಡಿದುಕೊಳ್ಳಬೇಕು. ಇದೇ ಸರ್ವಾಂಗಾಸನ. ಇದರಿಂದ ಕತ್ತಿನಿಂದ ಹಿಡಿದು ಕಾಲಿನವರೆಗೂ ಎಲ್ಲ ಅಂಗಗಳಿಗೂ ವ್ಯಾಯಾಮ ಸಿಗುತ್ತದೆ. ಇದರಿಂದ ಥೈರಾಯಿಡ್ ಸಮಸ್ಯೆಗಳು ನಿವಾರಣೆಯಾಗುತ್ತವೆ.
#JackFruitDay ತ್ವಚೆಗೂ ಮದ್ದು, ಲೈಂಗಿಕ ಸಮಸ್ಯೆಗೂ ರಾಮಬಾಣ!
ಕೈ ಬೆರಳು ನೋವು ನಿವಾರಣೆ
ಇಡೀ ದಿನ ಮೊಬೈಲ್, ಟ್ಯಾಬ್ಲೆಟ್, ಕಂಪ್ಯೂಟರ್ ಕೀಬೋರ್ಡ್ ಉಪಯೋಗಿಸಿ ಕೈ ನೋವು ಬರಬಹುದು. ಇದರ ನಿವಾರಣೆಗೆ ಹೀಗೆ ಮಾಡಬೇಕು- ಎರಡೂ ಕೈಗಳನ್ನು ಮುಂಚಾಚಿ ಬೆಲ್ಟ್, ಹಗ್ಗ ಅಥವಾ ದುಪ್ಪಟ್ಟ ಹಿಡಿದುಕೊಂಡು ಅಂಗೈ ಮುಂದಕ್ಕೆ ಬಿಡಿಸಿಕೊಳ್ಳುವಂತೆ ಮಣಿಗಂಟನ್ನು ತಿರುಗಿಸಬೇಕು. ಇದರ ಮುಂದಿನ ಭಾಗವಾಗಿ, ಸಾಧನವನ್ನು ಕೈಬಿಟ್ಟು, ಎರಡೂ ಕೈಯ ಬೆರಳುಗಳನ್ನು ಒಂದಕ್ಕೊಂದು ಸಿಕ್ಕಿಸಿಕೊಂಡು, ಅಂಗೈಯನ್ನು ಮುಂಚಾಚಿ ಮಣಿಗಂಟನ್ನು ತಿರುಗಿಸಲು ಕಲಿಯಬಹುದು. ಇದರಿಂದ ಮಣಿಗಂಟು, ತೋಳು, ಬೆರಳುಗಳ ನೋವು ಮಾಯವಾಗುತ್ತದೆ.
ಕಧ: ರೋಗ ನಿರೋಧಕ ಶಕ್ತಿ ಹೆಚ್ಚಿಸೋ ಕಷಾಯ
ಸೊಂಟ ನೋವು ನಿವಾರಣೆ
ಮನೆಯಲ್ಲಿರುವ ಮೆಟ್ಟಿಲು ಬಳಸಿ ಕೆಲವು ಯೋಗಾಸನಗಳಿವೆ. ಕೆಳಗಿನ ಮೆಟ್ಟಿಲಲ್ಲಿ ನಿಂತು ಬಾಗಿ ಮೂರನೇ ಮೆಟ್ಟಿಲನ್ನು ತಳ್ಳುವುದು. ಎಡಗಡೆ ಎರಡೂ ಕೈಗಳಿಂದ ಮೆಟ್ಟಿಲಿನ ಕಂಬಿಯನ್ನು ಹಿಡಿದು ಬಲಕ್ಕೆ ತಿರುಗುವುದು, ಬಲಗಡೆ ಹಿಡಿದು ಎಡಕ್ಕೆ ತಿರುಗುವುದು- ಇದರಿಂದ ಸೊಂಟ, ಪಕ್ಕೆಲುಬುಗಳ ನೋವು ಮಾಯವಾಗುತ್ತದೆ. ಕಿಟಕಿಗೆ ಬೆನ್ನು ಮಾಡಿ ನಿಂತು, ಎರಡೂ ಕೈಗಳನ್ನು ಹಿಂಚಾಚಿ ಕಂಬಿಯನ್ನು ಹಿಡಿದುಕೊಂಡು ಮುಂದಕ್ಕೆ ಬಾಗುವುದು. ಇದರಿಂದ ಭುಜ ಹಾಗೂ ತೋಳುಗಳ ಸಮಸ್ಯೆ ಮಾಯವಾಗುತ್ತದೆ.
ಹ್ಯಾಪಿ ಹಾರ್ಮೋನ್ಸ್ ಹೆಚ್ಚಿಸಿಕೊಳ್ಳಿ, ಖುಷ್ ಖುಷಿಯಾಗಿರಿ...
ಸುಲಭ ಸಹಜ ಪ್ರಾಣಾಯಾಮ
ನೆಲದ ಮೇಲೆ ಒಂದು ಚಾಪೆ ಹಾಸಿ. ಅದರ ತುದಿಯಲ್ಲಿ ಒಂದು ದಿಂಬನ್ನು ಉದ್ದವಾಗಿಟ್ಟು, ಅದರ ತುದಿಯಲ್ಲಿ ಇನ್ನೊಂದು ದಿಂಬನ್ನು ಅಡ್ಡವಾಗಿಟ್ಟು ಅದರ ಮೇಲೆ ಮಲಗಿಕೊಳ್ಳಬೇಕು. ಒಂದು ದಿಂಬು ಬೆನ್ನಿನ ಕೆಳಗೂ, ಎರಡು ದಿಂಬುಗಳು ತಲೆಯ ಕೆಳಗೂ ಬರಬೇಕು. ಇದರಿಂದ ಎದೆಯ ಭಾಗ ಉಬ್ಬಿ ಉಸಿರಾಟ ದೀರ್ಘವಾಗುತ್ತದೆ. ರಕ್ತ ಪರಿಚಲನೆ ಸರಾಗವಾಗುತ್ತದೆ. ಇದು ಕುಳಿತು ಪ್ರಾಣಾಯಾಮ ಮಾಡಲು ಸಾಧ್ಯವಾಗದವರಿಗೆ ಸಹಜವಾದ ಸುಲಭವಾದ ಒಂದು ಬಗೆಯ ಪ್ರಾಣಾಯಾಮ.