ಕೇರಳದಲ್ಲಿ ಫುಡ್ ಪಾಯಿಸನಿಂಗ್ ಒಬ್ಬ ಯುವತಿಯ ಜೀವಕ್ಕೆ ಕುತ್ತು ತಂದಿದೆ. ವಿಷಾಹಾರದಲ್ಲಿದ್ದು ಜೀವ ತೆಗೆಯಬಲ್ಲ ಈ ಬ್ಯಾಕ್ಟೀರಿಯಾದ ಬಗ್ಗೆ ಪ್ರವಾಸ ಹೋಗೋರು ಎಚ್ಚರವಾಗಿರಿ!
ಕೆಲವು ದಿನಗಳ ಹಿಂದೆ ಕೇರಳದ ವಯನಾಡ್‌ನಲ್ಲಿ ವಿಷಾಹಾರ (Food Poison) ಸೇವಿಸಿ ಹಲವರು ಅಸ್ವಸ್ಥರಾಗಿದ್ದರು. ಒಬ್ಬಾಕೆ ಪ್ರಾಣ ಬಿಟ್ಟಿದ್ದಳು. ಇದು ಸದಾ ಪ್ರವಾಸ ಹೋಗುವವರನ್ನು ಬೆಚ್ಚಿ ಬೀಳಿಸಿದೆ. ಇವರು ಸೇವಿಸಿದ ಆಹಾರ ಶವರ್ಮಾ (shavarma) ಎಂಬ, ಕೇರಳದ ನಾನ್‌ವೆಜ್ ಪ್ರಿಯರು ಸೇವಿಸುವ ಸರ್ವೇಸಾಮಾನ್ಯ ಆಹಾರ. ಪ್ರವಾಸ ಹೋದವರು ಸ್ಥಳೀಯ ತಿಂಡಿಯಾದ ಇದರ ಸವಿ ನೋಡಲೆಂದು ಸೇವಿಸಿದ್ದಾರೆ. 16 ವರ್ಷದ ಯುವತಿ ಸಾವನ್ನಪ್ಪಿ 40 ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ವಿಷಕ್ಕೆ ಶಿಗೆಲ್ಲಾ ಎಂಬ ಬ್ಯಾಕ್ಟಿರಿಯಾ ಕಾರಣವೆಂದು ಆರೋಗ್ಯ ಇಲಾಖೆ ಗುರುತಿಸಿದೆ.
ಶವರ್ಮಾ ತಿಂದವರ ರಕ್ತ ಹಾಗೂ ಮಲ ಪರೀಕ್ಷೆ ಮಾಡಿದಾಗ ಈ ಬ್ಯಾಕ್ಟಿರಿಯಾ ಕಂಡು ಬಂದಿದೆ. ಈ ಶಿಗೆಲ್ಲಾ ಯಾವೆಲ್ಲಾ ಆಹಾರದಲ್ಲಿ ಇರುತ್ತದೆ, ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ...
ಏನಿದು ಶಿಗೆಲ್ಲಾ ಬ್ಯಾಕ್ಟಿರಿಯಾ? (Shigella Bacteria)
* ಶಿಗೆಲ್ಲಾ ಎಂಬುದು ಭೇದಿಗೆ ಕಾರಣವಾಗುವ ಅಪಾಯಕಾರಿ ಬ್ಯಾಕ್ಟಿರಿಯಾ. ಇದು ಎಂಟರ್‌ಬ್ಯಾಕ್ಟರ್ ಎಂಬ ವರ್ಗಕ್ಕೆ ಸೇರಿದ ಬ್ಯಾಕ್ಟಿರಿಯಾ. ಎಲ್ಲಾ ಎಂಟರ್‌ಬ್ಯಾಕ್ಟರ್ ಬ್ಯಾಕ್ಟಿರಿಯಾಗಳು ಅಪಾಯಕಾರಿಯಲ್ಲ, ಆದರೆ ಶಿಗೆಲ್ಲಾ ಅಪಾಯಕಾರಿ.
* ಶಿಗೆಲ್ಲಾ ಕರುಳಿನ ಮೇಲೆ ದಾಳಿ ಮಾಡುತ್ತದೆ. ಇದರಿಂದ ಭೇದಿ, ಹೊಟ್ಟೆನೋವು, ಜ್ವರ, ವಾಂತಿ ಉಂಟಾಗುತ್ತದೆ.
* ಇದು ಸಾಮಾನ್ಯವಾಗಿ ಕಲುಷಿತ ಆಹಾರ ಹಾಗೂ ಕಲುಷಿತ ನೀರಿನಲ್ಲಿ ಕಂಡುಬರುತ್ತದೆ. ಈ ಕಾಯಿಲೆ ತಗುಲಿರುವ ವ್ಯಕ್ತಿಯಿಂದ ಹರಡಬಹುದು, ಕಲುಷಿತ ನೀರಿನಲ್ಲಿ ಈಜಿದರೆ ಬರಬಹುದು.
Kids Health : ಮಕ್ಕಳಿಗೆ ಹೀಗೆ ನೀಡಿ ಏಲಕ್ಕಿ
ಕೊಲ್ಲುವಷ್ಟು ಅಪಾಯಕಾರಿ
* ಶಿಗೆಲ್ಲಾ ಗರ್ಭಿಣಿಯರಿಗೆ, ಮಕ್ಕಳಿಗೆ, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ತುಂಬಾ ಅಪಾಯಕಾರಿ.
* 4 ಬಗೆಯ ಶಿಗೆಲ್ಲಾ ಬ್ಯಾಕ್ಟಿರಿಯಾ ಮನುಷ್ಯನ ದೇಹದ ಮೇಲೆ ದಾಳಿ ಮಾಡುತ್ತದೆ. ಶಿಗೆಲ್ಲಾ ಸೊನ್ನೈ, ಶಿಗೆಲ್ಲಾ ಫ್ಲೆಕ್ಸೆನೆರಿ, ಶಿಗೆಲ್ಲಾ ಬಾಯ್ಡಿ, ಶಿಗೆಲ್ಲ ಡಿಸೆಂಟೆರಿಯಾ ಇದರಲ್ಲಿ ಕೊನೆಯದು ತುಂಬಾ ಅಪಾಯಕಾರಿ.
* ಶಿಗೆಲ್ಲಾ ಬ್ಯಾಕ್ಟಿರಿಯಾ ಸಾಮಾನ್ಯವಾಗಿ ಕಂಡು ಬರುವ ಬ್ಯಾಕ್ಟಿರಿಯಾವಲ್ಲ. 100 ಜನ ಭೇದಿ ಅಥವಾ ಫುಡ್ ಪಾಯಿಸನ್ ಅಂತ ಬಂದವರಲ್ಲಿ ಒಬ್ಬರಿಗೆ ಈ ಬ್ಯಾಕ್ಟಿರಿಯಾ ಕಾರಣವಾಗಿರಬಹುದು.
* ಶಿಗೆಲ್ಲಾ ಬ್ಯಾಕ್ಟಿರಿಯಾ ತಗುಲಿದ ತಕ್ಷಣ ಸಾವು ಸಂಭವಿಸುವುದಿಲ್ಲ. ತಕ್ಷಣ ಸಾವು ಸಂಭವಿಸುವುದು ರೋಗ ನಿರೋಧಕ ಶಕ್ತಿ ತುಂಬಾ ಕಡಿಮೆ ಇದ್ದರೆ ಮಾತ್ರ. ಜಾಸ್ತಿ ಭೇದಿ ಕಂಡುಬಂದ ಕೂಡಲೇ ಚಿಕಿತ್ಸೆ ಕೊಡಿಸಿದರೆ ಯಾವುದೇ ತೊಂದರೆ ಇಲ್ಲ.
ಯಾವಾಗ ವೈದ್ಯರನ್ನು ಕಾಣಬೇಕು?
* ಭೇದಿ ತುಂಬಾ ಉಂಟಾದಾಗ ಅಂದರೆ ದಿನದಲ್ಲಿ 20 ಬಾರಿಗಿಂತ ಅಧಿಕ ಬಾರಿ ಹೋದರೆ ತಕ್ಷಣವೇ ಒಳ್ಳೆಯ ಸೌಕರ್ಯ ಇರುವ ಆಸ್ಪತ್ರೆಗೆ ದಾಖಲಿಸಿ. ಆಸ್ಪತ್ರೆ ದೂರವಿದ್ದರೆ ಸಮೀಪದ ಆಸ್ಪತ್ರೆಯಿಂದ ಪ್ರಾಥಮಿಕ ಚಿಕಿತ್ಸೆ ಪಡೆಯಿರಿ.
* ಮಗುವಿನಲ್ಲಿ ಭೇದಿ, ಕೆಮ್ಮು, ರಕ್ತಬೇಧಿ ಕಂಡು ಬಂದರೆ ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಿರಿ.
* ಅತಿಸಾರ ಜೊತೆಗೆ ತುಂಬಾ ಜ್ವರವಿದ್ದರೆ ಕೂಡಲೇ ವೈದ್ಯರಿಗೆ ತೋರಿಸಿ.
Blood in Urine: ಮೂತ್ರದ ಬಣ್ಣ ಬದಲಾಗೋದ್ಯಾಕೆ? ಎಚ್ಚರಿಕೆ ವಹಿಸಿ
ವೆಜ್ ಆಹಾರಗಳಲ್ಲಿಯೂ ಇದೆ
ಹಣ್ಣು ಹಾಗೂ ತರಕಾರಿಗಳಲ್ಲಿ ಕೆಲವೊಮ್ಮೆ ಶಿಗೆಲ್ಲಾ ಇರಬಹುದು. ತೊಳೆಯದೇ ತಿಂದರೆ ಅದರಿಂದ ಬಾಧೆ ಆಗಬಹುದು.
ಪ್ರವಾಸ ಹೋದಾಗ ಹುಷಾರು
* ಸಾಮಾನ್ಯವಾಗಿ ಪ್ರವಾಸ ಹೋದಾಗ ಸ್ಥಳೀಯ ಆಹಾರದ ರುಚಿ ನೋಡುವ ಉತ್ಸಾಹ ಇರುತ್ತದೆ. ಇದು ತಪ್ಪಲ್ಲ. ಆದರೆ ಆಹಾರ ಶುದ್ಧ ವಾತಾವರಣದಲ್ಲಿ, ಯೋಗ್ಯ ಆಹಾರ ಪದಾರ್ಥಗಳಿಂದ ತಯಾರಾಗಿದೆಯೇ ಎಂಬುದರ ಮೇಲೆ ನಿಗಾ ವಹಿಸಿ.
* ಬೀದಿ ಬದಿಯ ಆಹಾರ ಪದಾರ್ಥ ಸೇವಿಸುವ ಮುನ್ನ ಹತ್ತು ಬಾರಿ ಯೋಚಿಸಿ.
* ಶಿಗೆಲ್ಲಾ ಕಲುಷಿತ ನೀರು ಹಾಗೂ ಕಲುಷಿತ ಆಹಾರದ ಮೂಲಕ ಹರಡುತ್ತದೆ. ಆದ್ದರಿಂದ ಮನೆಯಲ್ಲೂ ಸಹ ಕಲುಷಿತ ನೀರು ಬಳಸಬೇಡಿ, ತರಕಾರಿ, ಹಣ್ಣುಗಳನ್ನು ತೊಳೆಯಿರಿ. ಮಾಂಸವನ್ನು ಚೆನ್ನಾಗಿ ಬೇಯಿಸಿ ತಿನ್ನಿ.
* ಆಹಾರ ತಿನ್ನುವ ಮುನ್ನ, ತಿಂದ ನಂತರ ಕೈಗಳನ್ನು ಚೆನ್ನಾಗಿ ಸೋಪು ಹಾಕಿ ತೊಳೆಯಿರಿ.
* ಮಲವಿಸರ್ಜನೆಗೆ ಹೋದ ಬಳಿಕ ಕೈಗಳಿಗೆ ಸೋಪು ಹಚ್ಚಿ ತೊಳೆಯಿರಿ.
* ಹಾಲು, ಚಿಕನ್, ಮೀನು ಇವುಗಳನ್ನು ಸರಿಯಾದ ಉಷ್ಣತೆಯಲ್ಲಿ ಸಂರಕ್ಷಿಸಿ ಇಡದಿದ್ದರೆ ಬ್ಯಾಕ್ಟಿರಿಯಾ ಹರಡಬಹುದು. ಮಾಂಸಾಹಾರ ಚೆನ್ನಾಗಿ ಬೇಯಿಸಿ ಸೇವಿಸಿ.
