ಮಲಬದ್ಧತೆಗೆ ಮಾತ್ರವಲ್ಲ, ಭೇದಿಗೂ ಮದ್ದು ಈ ಬಾಳೆಹಣ್ಣು!
ಬಾಳೆಹಣ್ಣು ತಿಂದ್ರೆ ಮಲ ಬದ್ಧತೆ ಸಮಸ್ಯೆ ದೂರವಾಗುತ್ತೆ. ಆದ್ರೆ ಭೇದಿಯುಂಟಾದಾಗ ಬಹುತೇಕರು ಬಾಳೆಹಣ್ಣಿನಿಂದ ದೂರವಿರುತ್ತಾರೆ.ಆದ್ರೆ ಕೆಲವರ ಪ್ರಕಾರ ಭೇದಿಗೂ ಬಾಳೆಹಣ್ಣು ಮದ್ದಂತೆ. ಭೇದಿ ಬಳಿಕ ಕಾಣಿಸಿಕೊಳ್ಳೋ ಸುಸ್ತು, ನಿರ್ಜಲೀಕರಣ ಸಮಸ್ಯೆಗಳನ್ನುಬಾಳೆಹಣ್ಣಿನ ಸೇವನೆಯಿಂದ ದೂರ ಮಾಡಿಕೊಳ್ಳಬಹುದು ಎನ್ನುತ್ತಾರೆ ತಜ್ಞರು.
ಮಲಬದ್ಧತೆಗೆ ಬಾಳೆಹಣ್ಣುರಾಮಬಾಣ ಅನ್ನೋದು ಎಲ್ಲರಿಗೂ ಗೊತ್ತು.ಆದ್ರೆ ಭೇದಿ ಕಂಟ್ರೋಲ್ ಮಾಡೋ ಸಾಮರ್ಥ್ಯನೂ ಬಾಳೆಹಣ್ಣಿಗಿದೆಯಾ? ಇದೆ ಎನ್ನತ್ತಾರೆ ಕೆಲವು ವೈದ್ಯಕೀಯ ತಜ್ಞರು.ಹವಾಮಾನ ಬದಲಾವಣೆ,ಆಹಾರದಲ್ಲಿ ವ್ಯತ್ಯಯ,ಕಲುಷಿತ ನೀರಿನ ಸೇವನೆಯಿಂದ ಆಗಾಗ ಭೇದಿ ಅಥವಾ ಅತಿಸಾರ ಕಾಣಿಸಿಕೊಳ್ಳೋದು ಕಾಮನ್. ಬಹುತೇಕರು ಇದಕ್ಕೆ ಮನೆಮದ್ದನ್ನೇ ಟ್ರೈ ಮಾಡ್ತಾರೆ ಕೂಡ. ಈ ಮನೆಮದ್ದುಗಳಲ್ಲಿ ಬಾಳೆಹಣ್ಣು ಕೂಡ ಸೇರಿದೆಯಂತೆ. ಬಾಳೆಹಣ್ಣು ತಿನ್ನೋದ್ರಿಂದ ಭೇದಿಯಿಂದ ಆಯಾಸಗೊಂಡಿರೋ ಶರೀರಕ್ಕೆ ತಕ್ಷಣ ಅಗತ್ಯ ಶಕ್ತಿ ದೊರೆಯುತ್ತದೆ ಎನ್ನುತ್ತಾರೆ ನ್ಯುಟ್ರಿಷಿಯನಿಸ್ಟ್.
ಡಿಸೆಂಬರ್ ಆರಂಭದಲ್ಲಿ ಭಾರತದಲ್ಲಿ ಕೊರೋನಾ ಔಷಧಿ ಬಳಕೆಗೆ ಲಭ್ಯ..!
ಬಾಳೆಹಣ್ಣುಭೇದಿಗೆ ಹೇಗೆ ಮದ್ದು?
ಬಾಳೆಹಣ್ಣು ಸಾಮಾನ್ಯವಾಗಿ ಎಲ್ಲರೂ ಇಷ್ಟಪಡೋ ಹಣ್ಣು.ಮಕ್ಕಳಿಂದ ಹಿಡಿದು ವಯಸ್ಕರ ತನಕ ಎಲ್ಲರೂ ಇದರ ರುಚಿಗೆ ಮನಸೋಲುತ್ತಾರೆ.ಇನ್ನು ಮಲಬದ್ಧತೆ ಸಮಸ್ಯೆಯುಂಟಾದಾಗ ಮೊದಲು ನೆನಪಾಗೋ ಔಷಧಿಯೇ ಬಾಳೆಹಣ್ಣು.ಇದ್ರಲ್ಲಿ ನಾರಿನಂಶ ಸಮೃದ್ಧವಾಗಿರೋ ಕಾರಣ ದೇಹದ ಕಲ್ಮಶವನ್ನು ಸರಾಗವಾಗಿ ಹೊರಸಾಗಿಸುತ್ತದೆ.ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಂ ಹೇರಳವಾಗಿದ್ದು,ಜೀರ್ಣಕ್ರಿಯೆಯನ್ನು ಮರಳಿ ಹಾದಿಗೆ ತರಲು ನೆರವು ನೀಡುತ್ತದೆ. ಇನ್ನು ಇದು ಶರೀರಕ್ಕೆ ತಕ್ಷಣ ಚೈತನ್ಯ ಒದಗಿಸುತ್ತದೆ. ಭೇದಿ ಸಮಯದಲ್ಲಿ ದೇಹಕ್ಕೆ ಅಗತ್ಯವಾಗಿ ಪೂರೈಕೆಯಾಗಬೇಕಾದ ಸಕ್ಕರೆ ಹಾಗೂ ಸೋಡಿಯಂ ಸಮ್ಮಿಶ್ರಣವನ್ನು ಇದು ಹೊಂದಿದೆ. ಇವೆರಡೂ ಕರುಳಿನಲ್ಲಿ ಸಕ್ಕರೆ ಹಾಗೂ ನೀರನ್ನು ಹೀರಿಕೊಳ್ಳಲು ನೆರವು ನೀಡೋ ಮೂಲಕ ಭೇದಿಯನ್ನು ನಿಯಂತ್ರಿಸುತ್ತವೆ. ಅಷ್ಟೇ ಅಲ್ಲ,ಭೇದಿಯಿಂದ ದೇಹದಲ್ಲಿನ ನೀರಿನಂಶ ಕಡಿಮೆಯಾಗಿ ಕಾಣಿಸಿಕೊಳ್ಳೋ ನಿಶಕ್ತಿ ಹಾಗೂ ನಿರ್ಜಲೀಕರಣವನ್ನು ಶಮನ ಮಾಡೋವಲ್ಲಿ ಬಾಳೆಹಣ್ಣು ಮಹತ್ವದ ಪಾತ್ರ ವಹಿಸುತ್ತದೆ ಎನ್ನುತ್ತಾರೆ ಆಹಾರ ತಜ್ಞರು.
ಮತ್ತಿನಿಂದ ಮತ್ತು ಮಾತ್ರವಲ್ಲ... ಆರೋಗ್ಯಕ್ಕೂ ಬರುತ್ತೆ ತಾಕತ್ತು
ಎನರ್ಜಿ ಪ್ಯಾಕೆಟ್
ದೇಹಕ್ಕೆ ತುಂಬಾ ಆಯಾಸವಾದಾಗ ಎನರ್ಜಿ ಡ್ರಿಂಕ್‌ಗಳ ಮೊರೆ ಹೋಗುತ್ತೇವೆ. ಆದ್ರೆ ಬಹುತೇಕರಿಗೆ ತಿಳಿದಿಲ್ಲದ ಸಂಗತಿಯೆಂದ್ರೆ ಬಾಳೆಹಣ್ಣು ಕೂಡ ತಕ್ಷಣಕ್ಕೆ ದೇಹಕ್ಕೆ ಅಗತ್ಯವಾದ ಉತ್ತೇಜನ ಹಾಗೂ ಶಕ್ತಿಯನ್ನು ಪೂರೈಸಬಲ್ಲದು. 1೦೦ ಗ್ರಾಂ ಬಾಳೆಹಣ್ಣಿನಲ್ಲಿ 116 ಕಿಲೋಕ್ಯಾಲೊರಿ ಇದೆ. ಹೀಗಾಗಿ ಭೇದಿ ಕಾರಣಕ್ಕೆ ಶರೀರದಿಂದ ನಷ್ಟವಾದ ಶಕ್ತಿಯನ್ನು ಮರುತುಂಬಿಸಲು ಬಾಳೆಹಣ್ಣು ನೆರವು ನೀಡುತ್ತದೆ. ತುಂಬಾ ಹಸಿವಾಗಿರೋವಾಗ ಒಂದು ಬಾಳೆಹಣ್ಣು ತಿಂದ್ರೆ ಸಾಕು, ಹೊಟ್ಟೆ ತುಂಬಿದ ಅನುಭವವಾಗಿ ಹಸಿವು ಮಾಯವಾಗುತ್ತೆ.ಈ ರೀತಿ ಹೊಟ್ಟೆ ತುಂಬಿದ ಅನಭವಕ್ಕೆ ಅದರಲ್ಲಿರೋ ರೆಸಿಸ್ಟೆಂಟ್ ಸ್ಟಾರ್ಚ್ ಹಾಗೂ ಪೆಕ್ಟಿನ್ ಎಂಬ ನಾರಿನಂಶವೇ ಕಾರಣ. ಪೆಕ್ಟಿನ್ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳಿಂದ ರಕ್ಷಣೆ ನೀಡಬಲ್ಲದು ಕೂಡ.
ನಿಮಗೆ ಹೆಸರು ಬೇಳೆ ಮೊಟ್ಟೆ, ಸಸ್ಯಾಧರಿತ ಮಾಂಸ ಗೊತ್ತಾ?
ಹೇಗೆ ಸೇವಿಸಬೇಕು?
ಸಾಮಾನ್ಯವಾಗಿ ಬಾಳೆಹಣ್ಣನ್ನು ನಾವು ಹಾಗೆಯೇ ತಿನ್ನುತ್ತೇವೆ. ಕೆಲವರು ಬೇರೆ ಹಣ್ಣುಗಳೊಂದಿಗೆ ಸೇರಿಸಿಕೊಂಡು ತಿನ್ನುತ್ತಾರೆ ಕೂಡ. ಆದ್ರೆ ಭೇದಿಯುಂಟಾದಾಗ ಬಾಳೆಹಣ್ಣು ನಿಮ್ಮ ದೇಹಕ್ಕೆ ಔಷಧಿಯಾಗಿ ಪರಿಣಮಿಸಬೇಕೆಂದ್ರೆ ಅದನ್ನು ಇತರ ಕೆಲವು ಪದಾರ್ಥಗಳೊಂದಿಗೆ ಸೇವಿಸೋದು ಒಳ್ಳೆಯದು. ಬಾಳೆಹಣ್ಣನ್ನು ಸ್ವಲ್ಪ ಮೊಸರಿನೊಂದಿಗೆ ಸೇವಿಸೋದ್ರಿಂದ ಹೊಟ್ಟೆ ಆರೋಗ್ಯ ಸುಧಾರಿಸುತ್ತದೆ. ಜೀರ್ಣಕ್ರಿಯೆಯೂ ಸಾಮಾನ್ಯ ಸ್ಥಿತಿಗೆ ಮರಳುತ್ತದೆ ಎನ್ನುತ್ತಾರೆ ನ್ಯುಟ್ರಿಷಿಯನಿಸ್ಟ್. ಉಪ್ಪಿನ ಜೊತೆ ಬಾಳೆಹಣ್ಣು ಸೇವಿಸೋದ್ರಿಂದ ದೇಹಕ್ಕೆ ಸೋಡಿಯಂ,ಪೊಟ್ಯಾಷಿಯಂ ಹಾಗೂ ಎಲೆಕ್ಟ್ರೋಲೈಟ್ಸ್ ದೊರೆಯುತ್ತದೆ. ಭೇದಿ ಸಮಯದಲ್ಲಿ ಇವು ಶರೀರದಿಂದ ಸಾಕಷ್ಟು ಪ್ರಮಾಣದಲ್ಲಿ ನಷ್ಟವಾಗಿರುತ್ತವೆ. ಹೀಗಾಗಿ ಬಾಳೆಹಣ್ಣು ಮತ್ತು ಉಪ್ಪನ್ನು ಜೊತೆಯಾಗಿ ಸೇವಿಸೋದ್ರಿಂದ ಶರೀರಕ್ಕೆ ಇವು ಮರುಪೂರೈಕೆಯಾಗುತ್ತವೆ. ಭೇದಿಯ ತೀವ್ರತೆ ಆಧಾರದಲ್ಲಿ ದಿನಕ್ಕೆ 2 ಅಥವಾ3 ಬಾರಿ ಬಾಳೆಹಣ್ಣನ್ನು ಮೊಸರು, ಉಪ್ಪಿನೊಂದಿಗೆ ಬೆರೆಸಿ ತಿನ್ನಬಹುದು. ಆದ್ರೆ ನೆನಪಿಡಿ,ನೀವು ತಿನ್ನೋ ಬಾಳೆಹಣ್ಣು ಸರಿಯಾಗಿ ಹಣ್ಣಾಗಿರಬೇಕು. ಒಂದು ವೇಳೆ ಅರ್ಧ ಬಲಿತಿದ್ರೆ ಅಥವಾ ಕಾಯಿಯಾಗಿದ್ರೆ ಭೇದಿ ಶಮನವಾಗೋ ಬದಲು ಮತ್ತಷ್ಟು ಹೆಚ್ಚಾಗೋ ಸಾಧ್ಯತೆಯಿದೆ. ಎಲ್ಲಕ್ಕಿಂತ ಮುಖ್ಯವಾಗಿ ಭೇದಿ ಅಥವಾ ಅತಿಸಾರ ಉಂಟಾದಾಗ ಯಾವುದೇ ಮನೆಮದ್ದು ಟ್ರೈ ಮಾಡಿದ್ರು ಎಷ್ಟು ಸಾಧ್ಯವೋ ಅಷ್ಟು ನೀರು ಕುಡಿಯಲು ಮಾತ್ರ ಮರೆಯಬಾರದು.