ಯಾರಾಯ್ತೋ ಅವರೆಲ್ಲಾ ಆಲ್ಕೋಹಾಲ್ ಕುಡಿಯೋ ಹಂಗಿಲ್ಲ, ಅನಾರೋಗ್ಯಕ್ಕೆ ಕುತ್ತು!
ಮೀಸೆ ಬರದ ಮಕ್ಕಳು ಆಲ್ಕೋಹಾಲ್ ಸೇವನೆ ಮಾಡುವಂತಾಗಿದೆ. ಚಿಕ್ಕ ವಯಸ್ಸಿನಲ್ಲೇ ಮದ್ಯಪಾನ ಮಾಡುವ ಜನರ ಸಂಖ್ಯೆ ಏರಿಕೆಯಾಗ್ತಿದೆ. ಹಿರಿಯರಿಗಿಂತ ವಯಸ್ಕರ ಆರೋಗ್ಯದ ಮೇಲೆ ಮದ್ಯಪಾನ ದೊಡ್ಡ ಪರಿಣಾಮ ಬೀರ್ತಿದೆ.
ಇತ್ತೀಚಿನ ದಿನಗಳಲ್ಲಿ ಮದ್ಯಪಾನ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಮದ್ಯಪಾನವನ್ನು ಫ್ಯಾಷನ್ ಎಂದು ಅನೇಕರು ಪರಿಗಣಿಸಿದ್ದಾರೆ. ಆಲ್ಕೋಹಾಲ್ ಸೇವನೆ ಮಾಡದ ಯುವಕರನ್ನು ಛೇಡಿಸುವ, ಗುಂಪಿಗೆ ಸೇರಿಸದ ಇರುವ ಜನರಿದ್ದಾರೆ. ಮದ್ಯಪಾನ ಮಾಡಿಲ್ಲವೆಂದ್ರೆ ಆತ ಯಾವುದಕ್ಕೂ ಪ್ರಯೋಜನವಿಲ್ಲ ಎಂಬ ರೀತಿಯಲ್ಲಿ ನೋಡ್ತಾರೆ. ಇದು ಯುವಜನರನ್ನು ದಾರಿ ತಪ್ಪಿಸುತ್ತಿದೆ. ಚಿಕ್ಕ ವಯಸ್ಸಿನಲ್ಲೇ ಮದ್ಯಪಾನ ಮಾಡುವವರ ಸಂಖ್ಯೆ ವಿಪರೀತ ಹೆಚ್ಚಾಗಿದೆ. ಈ ಮಧ್ಯೆ ಮದ್ಯಪಾನದ ಬಗ್ಗೆ ನಡೆದ ಸಂಶೋಧನೆ ವರದಿಯೊಂದು ಆತಂಕಕಾರಿ ಸಂಗತಿಯನ್ನು ಬಿಚ್ಚಿಟ್ಟಿದೆ. ಸಣ್ಣ ವಯಸ್ಸಿನಲ್ಲಿ ಮದ್ಯಪಾನ ಮಾಡುವ ಜನರಿಗೆ ಆರೋಗ್ಯ ಸಮಸ್ಯೆ ಹೆಚ್ಚು, ಹಾಗೆ ಆಲ್ಕೋಹಾಲ್ ಸೇವನೆಯಿಂದ ಕೆಲ ಮಾನಸಿಕ ತೊಂದರೆ ಎದುರಾಗ್ತಿದ್ದು, ಅವರ ಸಾವಿಗೆ ಇದೇ ಕಾರಣವಾಗ್ತಿದೆ ಎಂದು ವರದಿ ಹೇಳಿದೆ. ಆಲ್ಕೋಹಾಲ್ ಸೇವನೆಯಿಂದ ಉಂಟಾಗುವ ಅನಾರೋಗ್ಯ ಸಮಸ್ಯೆಗಳು ವಯಸ್ಸಾದವರಿಗಿಂತ ಯುವಜನರಲ್ಲಿ ಹೆಚ್ಚು ಎಂಬ ವಿಷ್ಯ ವರದಿಯಿಂದ ಹೊರ ಬಿದ್ದಿದೆ. ಲ್ಯಾನ್ಸೆಟ್ ಸಂಶೋಧನಾ ನಿಯತಕಾಲಿಕದಲ್ಲಿ ಪ್ರಕಟವಾದ ಜಾಗತಿಕ ಅಧ್ಯಯನದಲ್ಲಿ ಇದನ್ನು ಹೇಳಲಾಗಿದೆ. ಭೌಗೋಳಿಕ ಪ್ರದೇಶ, ವಯಸ್ಸು, ಲಿಂಗ ಮತ್ತು ವಯಸ್ಸನ್ನು ಗಮನದಲ್ಲಿಟ್ಟುಕೊಂಡು ಮದ್ಯದ ಅಪಾಯವನ್ನು ಇದೇ ಮೊದಲ ಬಾರಿಗೆ ಅಧ್ಯಯನ ಮಾಡಲಾಗಿತ್ತು. ಅಧ್ಯಯನದಲ್ಲಿ ಏನೆಲ್ಲ ವಿಷ್ಯಗಳನ್ನು ಹೇಳಲಾಗಿದೆ ಎಂಬುದನ್ನು ನಾವಿಂದು ಹೇಳ್ತೇವೆ.
ಅಧ್ಯಯನದ ವರದಿ ಏನು ಹೇಳುತ್ತದೆ? : ಮದ್ಯಪಾನ (Alcohol) ಸೇವನೆಯಿಂದ ಆರೋಗ್ಯ(Health)ಹದಗೆಡುತ್ತದೆ ಎಂಬ ಸಂಗತಿ ಎಲ್ಲರಿಗೂ ತಿಳಿದಿದೆ. ಆದ್ರೆ ಮದ್ಯಪಾನದಿಂದ ಅಪಾಯವಿದೆ ಎಂಬುದು ತಿಳಿದೂ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು ಆಲ್ಕೋಹಾಲ್ ಚಟಕ್ಕೆ ಒಳಗಾಗ್ತಿದ್ದಾರೆ. 204 ದೇಶಗಳಲ್ಲಿ ಆಲ್ಕೋಹಾಲ್ ಸೇವನೆಗೆ ಸಂಬಂಧಿಸಿದಂತೆ ಅಧ್ಯಯನ (Study) ವೊಂದು ನಡೆದಿದೆ. 2020ರಲ್ಲಿ 1.34 ಶತಕೋಟಿ ಜನರು ಹಾನಿಕಾರಕ ಪ್ರಮಾಣದಲ್ಲಿ ಆಲ್ಕೊಹಾಲ್ ಸೇವಿಸಿದ್ದಾರೆ ಎಂದು ಸಂಶೋಧಕರು ಲೆಕ್ಕ ಹಾಕಿದ್ದಾರೆ. 15 ರಿಂದ 39 ವರ್ಷ ವಯಸ್ಸಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಲ್ಕೋಹಾಲ್ ಸೇವನೆ ಮಾಡಿದ್ರೆ ಅಪಾಯ ಹೆಚ್ಚು ಎಂದು ಸಂಶೋಧನಾ ವರದಿಯಲ್ಲಿ ಹೇಳಲಾಗಿದೆ.
ಸ್ಪೆಷಲ್ ಜ್ಯೂಸ್ ಕುಡಿದ್ರೆ ಬಿಪಿ ಕಂಟ್ರೋಲ್‌ಗೆ ಬರೋದ್ರಲ್ಲಿ ಡೌಟೇ ಇಲ್ಲ
ಯಾರಿಗೆ ಆಲ್ಕೋಹಾಲ್ ಪ್ರಯೋಜನ ? : ಯಾವುದೇ ಖಾಯಿಲೆ ಇಲ್ಲದ ಜನರು, 40 ವರ್ಷ ಮೇಲ್ಪಟ್ಟವರು ಸ್ವಲ್ಪ ಪ್ರಮಾಣದಲ್ಲಿ ಆಲ್ಕೋಹಾಲ್ ಸೇವನೆ ಮಾಡಿದ್ರೆ ಸ್ವಲ್ಪ ಪ್ರಯೋಜನವಿದೆ. ಹೃದ್ರೋಗ, ಹೃದಯಾಘಾತ ಮತ್ತು ಮಧುಮೇಹದ ಅಪಾಯವನ್ನು ಇವರು ಕಡಿಮೆ ಹೊಂದಿರುತ್ತಾರೆಂದು ಹೇಳಲಾಗಿದೆ. ಆದ್ರೆ ಅತಿ ಹೆಚ್ಚು ಪ್ರಮಾಣದಲ್ಲಿ ಮದ್ಯಪಾನ ಮಾಡಿದ್ರೆ ಅವರಿಗೂ ಅಪಾಯ ನಿಶ್ಚಿತವೆಂದು ವರದಿಯಲ್ಲಿ ಹೇಳಲಾಗಿದೆ.
ಆಲ್ಕೋಹಾಲ್ ನಿಂದ ಪ್ರಯೋಜನವಿಲ್ಲ : ಪ್ರತಿ ಪ್ರದೇಶದಲ್ಲಿ, 15-39 ವರ್ಷ ವಯಸ್ಸಿನ ಪುರುಷರ ದೊಡ್ಡ ಭಾಗ ಅಸುರಕ್ಷಿತ ಪ್ರಮಾಣದಲ್ಲಿ ಆಲ್ಕೋಹಾಲ್ ಸೇವಿಸುತ್ತದೆ. ಇವರು ಆಲ್ಕೊಹಾಲ್ ಕುಡಿಯುವುದರಿಂದ ಯಾವುದೇ ಆರೋಗ್ಯ ಪ್ರಯೋಜನಗಳನ್ನು ಹೊಂದಿಲ್ಲ ಎಂದು ವರದಿ ಹೇಳಿದೆ. ಆದರೆ ಹಲವಾರು ಆರೋಗ್ಯ ಅಪಾಯಗಳನ್ನು ಇವರು ಎದುರಿಸಬೇಕಾಗುತ್ತದೆ. ಈ ವಯಸ್ಸಿನ ಸುಮಾರು ಶೇಕಡಾ 60ರಷ್ಟು ಜನರ ಅಪಘಾತ, ಆತ್ಮಹತ್ಯೆಗಳು ಮತ್ತು ಹತ್ಯೆಗೆ ಮುಖ್ಯವಾಗಿ ಆಲ್ಕೋಹಾಲ್ ಸೇವನೆಯೇ ಕಾರಣವೆಂದು ತಜ್ಞರು ಹೇಳಿದ್ದಾರೆ.
ತೆಂಗಿನಕಾಯಿ-ಬೆಲ್ಲ ಒಟ್ಟಿಗೆ ತಿಂದ್ರೆ ಬೇಗ ಸ್ಲಿಮ್ ಆಗ್ಬೋದು
ವರದಿ ಶಿಫಾರಸ್ಸು : ವಿಶ್ವದಾದ್ಯಂತ ಆಲ್ಕೋಹಾಲ್ ಸೇವನೆಗೆ ವಯಸ್ಸು ನಿಗದಿಪಡಿಸಬೇಕೆಂದು ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ. 15-39 ವರ್ಷ ವಯಸ್ಸಿನ ಪುರುಷರನ್ನು ಗಮನದಲ್ಲಿಟ್ಟುಕೊಂಟು ಕಟ್ಟುನಿಟ್ಟಾದ ಮಾರ್ಗಸೂಚಿ ಹೊರಡಿಸಬೇಕು ಎನ್ನಲಾಗಿದೆ. ಯುಎಸ್‌ನ ವಾಷಿಂಗ್ಟನ್ ವಿಶ್ವವಿದ್ಯಾಲಯದ ಇನ್‌ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಅಂಡ್ ಇವಾಲ್ಯುಯೇಶನ್‌ನ ಪ್ರೊಫೆಸರ್, ಅಧ್ಯಯನ ಲೇಖಕ ಇಮ್ಯಾನುಯೆಲಾ ಗಕಿಡೌ ಪ್ರಕಾರ, ನಮ್ಮ ಈ ವರದಿ ತುಂಬಾ ಸ್ಪಷ್ಟವಾಗಿದೆ. ಯುವಕರು ಮದ್ಯಪಾನ ಮಾಡಬಾರದು. ಆದರೆ ವಯಸ್ಸಾದವರು ಅದನ್ನು ಸ್ವಲ್ಪ ಪ್ರಮಾಣದಲ್ಲಿ ಸೇವನೆ ಮಾಡ್ಬಹುದು. ಯುವಕರು ಮದ್ಯಪಾನದಿಂದ ದೂರವಿರುತ್ತಾರೆ ಎಂದು ನಾವು ನಂಬೋದು ಕಷ್ಟ. ಆದರೆ ಇತ್ತೀಚಿನ ಪುರಾವೆಗಳನ್ನು ಗಮನಿಸಿ, ಯುವಕರು ಆರೋಗ್ಯದ ಬಗ್ಗೆ ಹೆಚ್ಚು ಒತ್ತು ನೀಡ್ಬೇಕೆಂದು ಅವರು ಹೇಳಿದ್ದಾರೆ.