ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಬ್ಬರಲ್ಲಿ ಒಬ್ಬರಿಗೆ ಮಧುಮೇಹ: ಸಮೀಕ್ಷೆ
ರಾಜಧಾನಿ ಬೆಂಗಳೂರಿನಲ್ಲಿ ನಡೆದ ಆರೋಗ್ಯ ಸಮೀಕ್ಷೆಯಲ್ಲಿ ಇಬ್ಬರಲ್ಲಿ ಒಬ್ಬರಿಗೆ ಮಧುಮೇಹ ಪತ್ತೆಯಾಗಿದೆ! ಕೊರೋನಾ ಸೋಂಕು ನಿಯಂತ್ರಣ ಮತ್ತು ಲಸಿಕೆ ನಿರ್ವಹಣೆ ನಿಟ್ಟಿನಲ್ಲಿ ಕಳೆದ ವರ್ಷ ಅಂತ್ಯದಲ್ಲಿ ಬಿಬಿಎಂಪಿ ಆರೋಗ್ಯ ವಿಭಾಗದ ವತಿಯಿಂದ ಮನೆ ಮನೆ ಆರೋಗ್ಯ ಸಮೀಕ್ಷೆ ನಡೆಸಲಾಗಿತ್ತು.
ಬೆಂಗಳೂರು (ನ.14): ರಾಜಧಾನಿ ಬೆಂಗಳೂರಿನಲ್ಲಿ ನಡೆದ ಆರೋಗ್ಯ ಸಮೀಕ್ಷೆಯಲ್ಲಿ ಇಬ್ಬರಲ್ಲಿ ಒಬ್ಬರಿಗೆ ಮಧುಮೇಹ ಪತ್ತೆಯಾಗಿದೆ! ಕೊರೋನಾ ಸೋಂಕು ನಿಯಂತ್ರಣ ಮತ್ತು ಲಸಿಕೆ ನಿರ್ವಹಣೆ ನಿಟ್ಟಿನಲ್ಲಿ ಕಳೆದ ವರ್ಷ ಅಂತ್ಯದಲ್ಲಿ ಬಿಬಿಎಂಪಿ ಆರೋಗ್ಯ ವಿಭಾಗದ ವತಿಯಿಂದ ಮನೆ ಮನೆ ಆರೋಗ್ಯ ಸಮೀಕ್ಷೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಎರಡೂವರೆ ಲಕ್ಷಕ್ಕೂ ಅಧಿಕ ಮನೆಗಳಲ್ಲಿ 7.11 ಲಕ್ಷ ಮಂದಿ ವಯಸ್ಕರನ್ನು (18 ವರ್ಷ ಮೇಲ್ಪಟ್ಟವರು) ತಪಾಸಣೆಗೊಳಪಡಿಸಲಾಗಿದೆ. ಈ ಪೈಕಿ ಶೇ.50.86 ರಷ್ಟುಮಂದಿಯಲ್ಲಿ ಮಧುಮೇಹ ಪತ್ತೆಯಾಗಿದೆ.
ಸಮೀಕ್ಷೆಯ ಅಂಶಗಳನ್ನು ರಾಜ್ಯ ಆರೋಗ್ಯ ಇಲಾಖೆಯ ಅಸಾಂಕ್ರಾಮಿಕ ರೋಗಗಳ ವಿಭಾಗಕ್ಕೆ ಸಲ್ಲಿಸಲಾಗಿದೆ. ಸದ್ಯ ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಆರೋಗ್ಯ ಇಲಾಖೆಯು ಕುರಿತ ವರದಿಯನ್ನು ಪರಿಗಣಿಸಿದ್ದು, ಮಧುಮೇಹ ಕುರಿತು ಜಾಗೃತಿ, ತಪಾಸಣೆ, ನಿಖರ ಚಿಕಿತ್ಸೆಗೆ ನಿರ್ಧರಿಸಿದೆ. ಸದ್ಯ ಆರೋಗ್ಯ ಇಲಾಖೆಯಿಂದ ಆರಂಭವಾಗುತ್ತಿರುವ ನಮ್ಮ ಕ್ಲಿನಿಕ್‌ಗಳಲ್ಲಿ 30 ವರ್ಷ ಮೇಲ್ಪಟ್ಟವರಿಗೆ ಅಸಾಂಕ್ರಾಮಿಕ ರೋಗ ಅದರಲ್ಲೂ ಮಧುಮೇಹ ತಪಾಸಣೆಗೆ ಹೆಚ್ಚಿನ ನಿಗಾವಹಿಸಲು ಸೂಚಿಲಾಗಿದೆ ಎಂದು ಆರೋಗ್ಯ ಇಲಾಖೆ ಸಾಂಕ್ರಾಮಿಕ ರೋಗಗಳ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ದಿಢೀರ್ ಬ್ಲಡ್ ಶುಗರ್ ಲೆವೆಲ್ ಹೆಚ್ಚಾದಾಗ ಕಡಿಮೆ ಮಾಡಲು ಟಿಪ್ಸ್
ಮಧುಮೇಹ ನಿಯಂತ್ರಣಕ್ಕೆ ಕ್ರಮ: ರಾಜ್ಯದಲ್ಲಿ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.7.7 ರಷ್ಟುಜನರಲ್ಲಿ ಮಧುಮೇಹವಿದೆ. ಶೇ.11.7ರಷ್ಟು(70 ಲಕ್ಷಕ್ಕೂ ಅಧಿಕ ಮಂದಿ) ಪೂರ್ವ ಮಧುಮೇಹಿಗಳಿದ್ದಾರೆ. ಅಂದರೆ, ರಕ್ತದಲ್ಲಿ ಸಕ್ಕರೆ ಪ್ರಮಾಣವು ಮಧುಮೇಹದ ಆಸುಪಾಸಿನಲ್ಲಿರುವರು. ಇಂತಹವರನ್ನು ಪತ್ತೆ ಮಾಡಿ ಚಿಕಿತ್ಸೆ, ಜೀವನಶೈಲಿ ಬದಲಾವಣೆ ಮೂಲಕ ಐದರಿಂದ 10 ವರ್ಷ ಮಧುಮೇಹಕ್ಕೀಡಾಗದಂತೆ ಕ್ರಮವಹಿಸಲು ಆರೋಗ್ಯ ಇಲಾಖೆ ಮುಂದಾಗಿದೆ.
ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿಯೂ ಅಸಾಂಕ್ರಾಮಿಕ ರೋಗ ಕ್ಲಿನಿಕ್‌ಗಳಿದ್ದು, ಸ್ಥಳೀಯ ಮಟ್ಟದಲ್ಲಿ 30 ವರ್ಷ ಮೇಲ್ಪಟ್ಟವರಲ್ಲಿ ಮಧುಮೇಹ, ರಕ್ತದೊತ್ತಡ ಖಾಯಿಲೆಗಳ ಪರೀಕ್ಷೆ ನಡೆಸಲಾಗುತ್ತದೆ. ಜತೆಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಅದಕ್ಕಿಂತ ಕೆಳ ಹಂತದಲ್ಲಿಯೂ ಎಂಟು ಸಾವಿರ ಆರೋಗ್ಯ ಕ್ಷೇಮ ಕೇಂದ್ರಗಳಿವೆ. ಅವುಗಲ್ಲಿಯೂ ತಪಾಸಣೆ, ಯೋಗ, ಸಮಾಲೋಚನೆ ಮೂಲಕ ಮಧುಮೇಹ ತಗ್ಗಿಸಲು ಕ್ರಮವಹಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಅಸಾಂಕ್ರಾಮಿಕ ರೋಗಗಳ ವಿಭಾಗದ ಅಪರ ನಿರ್ದೇಶಕ ಡಾ.ಶ್ರೀನಿವಾಸ ಗೂಳೂರು ಮಾಹಿತಿ ನೀಡಿದ್ದಾರೆ.
10 ವರ್ಷ ಮುಂಚೆಯೇ ವಕ್ಕರಿಸುತ್ತಿರುವ ಸಕ್ಕರೆ: ಇತ್ತೀಚಿನ ವರ್ಷಗಳಲ್ಲಿ ವರ್ಕ್ಫ್ರಂ ಹೋಂ, ದೈಹಿತ ಚಟುವಟಿಕೆ ರಹಿತ ಜೀವಶೈಲಿ ಹೆಚ್ಚಾಗಿದ್ದು, ಇದರಿಂದ ಚಿಕ್ಕವಯಸ್ಸಿನವರಲ್ಲೂ ಮಧುಮೇಹ ಪತ್ತೆಯಾಗುತ್ತಿದೆ. ಈ ಹಿಂದೆ ಸಾಮಾನ್ಯವಾಗಿ 35 ರಿಂದ 40 ವರ್ಷವಿದ್ದವರಲ್ಲಿ ಮಧುಮೇಹ ಕಾಣಿಸಿಕೊಳ್ಳುತ್ತಿತ್ತು. ಸದ್ಯ 25 ರಿಂದ 30ಕ್ಕೆ ತಗ್ಗಿದೆ ಎಂದು ಎಂದು ನಗರದ ಮಧುಮೇಹ ತಜ್ಞರು ಮಾಹಿತಿ ನೀಡಿದ್ದಾರೆ. ‘30 ವಯೋಮಾನದ ಆಸುಪಾಸಿನ ಯುವಕರು ಕೂಡಾ ಮಧುಮೇಹ ಚಿಕಿತ್ಸೆಗೆ ಆಗಮಿಸುತ್ತಿದ್ದಾರೆ.
ಸಂದೇಹದಿಂದ ಬಂದ ಹಲವರಲ್ಲಿ ಪೂರ್ವ ಮಧುಮೇಹ (ಪ್ರೀ ಡಯಾಬಿಟಿಕ್) ಇರುವುದು ಪತ್ತೆಯಾಗಿದೆ. ಇದಕ್ಕೆ ಅವರ ಜೀವನಶೈಲಿಯು ಎಂಬುದು ಸಮಾಲೋಚನೆಯಲ್ಲಿ ತಿಳಿದುಬಂದಿದೆ. ವರ್ಕ್ಫ್ರಂ ಹೋಂ ಬಳಿಕ ಮನೆಯಲ್ಲಿ ಇದ್ದು, ಒತ್ತಡ, ದೈಹಿಕ ಚಟುವಟಿಕೆ ಇಲ್ಲದೆ ದಪ್ಪ ಆಗಿರುವುದಾಗಿ ಅನೇಕರು ಹೇಳಿಕೊಂಡಿದ್ದಾರೆ. ರಕ್ತದ ಕೊಬ್ಬಿನಾಂಶ ಹೆಚ್ಚಿಸಿಕೊಂಡಿರುವುದು ಪರೀಕ್ಷೆಯಿಂದ ತಿಳಿದುಬಂದಿದೆ’ ಎಂದು ರಿಸಚ್‌ರ್ ಸೊಸೈಟಿ ರ್ಫಾರ್ ದಿ ಸ್ಟಡಿ ಆಫ್ ಡಯಾಬಿಟಿಸ್ ಇನ್ ಇಂಡಿಯಾ ಕರ್ನಾಟಕ ವಲಯದ ಮಾಜಿ ಅಧ್ಯಕ್ಷ ಡಾ.ಜೆ.ಅರವಿಂದ್ ಮಾಹಿತಿ ನೀಡಿದರು.
ತಿಂದ ತಕ್ಷಣ ಮಲಗಿದರೆ ಗಂಭೀರ ಆರೋಗ್ಯ ತೊಂದರೆ ಕಾಡಬಹುದು ಎಚ್ಚರ
ಕೊರೋನಾ ಕಾರಣವೇ?: ದೇಹದ ಮೇದೊಜೀರಕ ಗ್ರಂಥಿ ಕಾರ್ಯ ತಗ್ಗಿಸಿದಾಗ ಆ ವ್ಯಕ್ತಿಗೆ ಮಧುಮೇಹ ಬರುತ್ತದೆ. ಕಳೆದ 2-3 ವರ್ಷದಿಂದ ಮಧುಮೇಹ ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೊರೋನಾ ವೈರಾಣು ಸೋಂಕು ತಗುಲಿದ್ದವರಿಗೆ ವೈರಸ್‌ನಿಂದ ಮೇದೊಜೀರಕ ಗ್ರಂಥಿಗೆ ಹೆಚ್ಚಿನ ಹಾನಿಯಾಗಿರಬಹುದಾ ಎಂಬ ಅನುಮಾನ ವೈದ್ಯ ವಲಯದಲ್ಲಿ ಮೂಡಿದೆ. ಹೊಸ ಮಧುಮೇಹಿಗಳಲ್ಲಿ ಕೊರೋನಾ ಸೋಂಕಿನ ಹಿನ್ನೆಲೆ ಇರುವುದು ಈ ಅನುಮಾನಕ್ಕೆ ಇಂಬು ನೀಡಿದೆ. ಇನ್ನೊಂದೆಡೆ ಕೊರೋನಾ ಚಿಕಿತ್ಸೆ ಸಂದರ್ಭದಲ್ಲಿ ನೀಡಿದ ಸ್ಟಿರಾಯ್ಡ್‌ನಿಂದಲೂ ಮೇದೊಜೀರಕ ಗ್ರಂಥಿಗೆ ಹಾನಿಯಾಗಿ ಮಧುಮೇಹ ತಗಲಿರುವ ಸಾಧ್ಯತೆಗಳಿವೆ. ಈ ಕುರಿತು ಅಧ್ಯಯನಗಳು ನಡೆಯಬೇಕು ಎಂದು ಮಧುಮೇಹ ತಜ್ಞರಿಂದ ಒತ್ತಾಯ ಕೇಳಿ ಬಂದಿದೆ.