ನಾವು ಅದನ್ನೆಲ್ಲ ಪಕ್ಕಕ್ಕೆ ತಳ್ಳಿ ಸುಮ್ಮನೆ ಕೂರುತ್ತಿದ್ದೆವು. ಆದರೆ ಕೊರೋನಾ ಬಂದದ್ದೇ ತಡ ಇವೆಲ್ಲವೂ ಕಡ್ಡಾಯವಾಯಿತು. ಪುರುಸೊತ್ತಿದ್ದವರೆಲ್ಲ ಕೈ ತೊಳೆಯತೊಡಗಿದರು. ಮನೆಯೊಳಗಿದ್ದರೂ ಮಾಸ್ಕು ತೊಟ್ಟರು. ಸೀನುವುದು ನಿಂತೇ ಹೋಯಿತು. ಎಂಜಲು ನುಂಗಿ ಭಯಪಟ್ಟರು.

ಒಂದು ಕಾಯಿಲೆ ನಮ್ಮ ವರಸೆಗಳನ್ನೆಲ್ಲ ಬದಲಾಯಿಸಿದೆ. ಜಗತ್ತು ಇದನ್ನು ಹೊಸ ಆರ್ಡರ್‌ ಎಂದು ಕರೆಯುತ್ತದೆ. ಒಡಂಬಡಿಕೆಗಳು ಹೊಸದಾಗುತ್ತಾ ಹೋಗುತ್ತವೆ. ಹಾಗೆ ಬದಲಾದದ್ದು ಈ ಮುಖಗವುಸು ಎಂಬ ಮಾಸ್ಕ್‌. ಇದಿಲ್ಲದೇ ಹೊರಗೆ ಕಾಲಿಡುವಂತಿಲ್ಲ.

ಮಾಸ್ಕ್‌ ಹೇಗಿರಬೇಕು, ಯಾವ ಗುಣಮಟ್ಟದ್ದಿರಬೇಕು ಅನ್ನುವುದನ್ನು ಯಾರೂ ನಿಗದಿಪಡಿಸಿಲ್ಲ. ತಲೆಯನ್ನು ಕಾಯುವ ಹೆಲ್ಮೆಟ್ಟಿಗೆ ಐಎಸ್‌ಐ ಸಿಂಧುತ್ವ ಇರಲೇಬೇಕು. ಆದರೆ ಮಾಸ್ಕ್‌ಗೆ ಮಡಿವಂತಿಕೆ ಎಲ್ಲಿಂದ ಬರಬೇಕು. ಹೀಗಾಗಿ ಯಾವ ಮಾಸ್ಕ್‌ ತೊಟ್ಟರೂ ಕೊರೋನಾ ಬರುವುದಿಲ್ಲ ಅಂತ ಎಲ್ಲರೂ ಭಾವಿಸಿಕೊಂಡಿದ್ದಾರೆ. ಎರಡೂ ಕಿವಿಗೆ ಸಿಕ್ಕಿಸಿಕೊಂಡು ಗಲ್ಲಕ್ಕೆ ಹೋತದ ಗಡ್ಡದಂತೆ ಇಳಿಬಿಟ್ಟುಕೊಂಡು ಓಡಾಡುವುದೇ ಮಾಸ್ಕು ಅನ್ನುವುದು ಹೊಸ ವ್ಯಾಖ್ಯಾನ.

ಮಾಸ್ಕ್ ಡೇ: ಸಿಎಂ ಜೊತೆ ಸೆಲೆಬ್ರಿಟಿಗಳ ಸಾಥ್, ಇಲ್ಲಿವೆ ಫೋಟೋಸ್

ಅಂಥ ಮಾಸ್ಕುಗಳನ್ನು ಈಗ ಮಾರಾಟ ಮಾಡುವುದು ಕೂಡ ಹೊಸ ವ್ಯಾಪಾರದ ಸಾಧ್ಯತೆ. ಆದರೆ ಮಾಸ್ಕುಗಳನ್ನು ಕೊಳ್ಳುವ ಮುನ್ನ ಅದು ಹೇಗಿರಬೇಕು ಅಂತ ತಿಳಿದುಕೊಳ್ಳಿ. ನೀರಿನ ಹನಿಯನ್ನು ಒಳಗೆ ಬಿಟ್ಟುಕೊಳ್ಳದಂತೆ, ಸ್ವೇದ ಒಳಗೆ ಇಳಿಯದಂತೆ ಎಚ್ಚರ ವಹಿಸಬೇಕಾಗಿದ್ದು ಮುಖ್ಯ.

ಇಷ್ಟೆಲ್ಲ ಯಾಕೆಂದರೆ ಇವತ್ತು ಮಾಸ್ಕ್‌ ಡೇ.

ಇದು ಕೊರೋನಾ ಕರುಣಿಸಿದ ಆಚರಣೆ.