ಲೈಫ್‍ನಲ್ಲಿ ರಿಸ್ಕ್ ತೆಗೆದುಕೊಂಡರೆ ಮಾತ್ರ ಯಶಸ್ಸು ಸಾಧಿಸಲು, ವಿಶಿಷ್ಟವಾದ ಸಾಧನೆ ಮಾಡಲು ಸಾಧ್ಯ ಎಂಬುದು ಕೆಲವರ ವಾದ. ಇನ್ನೂ ಕೆಲವರ ಪ್ರಕಾರ ಲೈಫ್‍ನಲ್ಲಿ ರಿಸ್ಕ್ ತೆಗೆದುಕೊಳ್ಳಲು ಹೋಗಬಾರದು. ಇದರಿಂದ ಹಾನಿಯುಂಟಾಗುವ ಇಲ್ಲವೆ ವೈಫಲ್ಯ ಅನುಭವಿಸುವ ಸಾಧ್ಯತೆಯಿದೆ. ಹಾಗಾದರೆ ರಿಸ್ಕ್ ತೆಗೆದುಕೊಳ್ಳುವುದು ಒಳ್ಳೆಯದೇ ಅಥವಾ ಕೆಟ್ಟದ್ದೇ? ಈ ಪ್ರಶ್ನೆಗೆ ಉತ್ತರ ಹೇಳುವುದು ಸ್ವಲ್ಪ ಕಷ್ಟವೇ. ರಿಸ್ಕ್ ಒಳ್ಳೆಯದ್ದೋ ಅಥವಾ ಕೆಟ್ಟದ್ದೋ ಎಂಬುದಕ್ಕಿಂತ ಅದು ಯಾವ ರೀತಿಯದು ಎಂಬುದು ಇಲ್ಲಿ ಮುಖ್ಯವಾಗುತ್ತದೆ.

ಗುರಿ ಸಾಧನೆ ಹಾದಿಯಲ್ಲಿ ನಿಮಗೆ ನೀವೇ ಪ್ರೇರಣೆಯಾಗಬೇಕೇ? ಈ ಟಿಪ್ಸ್ ಅನುಸರಿಸಿ!

ಯಂಗ್‍ಸ್ಟರ್ಸ್‍ಗೆ ರಿಸ್ಕ್ ಇಷ್ಟ: ಯೌವನದಲ್ಲಿ ರಿಸ್ಕ್ ತೆಗೆದುಕೊಳ್ಳುವ ಚಟ ಹೆಚ್ಚಿರುವುದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಇದಕ್ಕೆ ಕಾರಣ ಪರಿಸ್ಥಿತಿಯನ್ನು ಸಮರ್ಪಕವಾಗಿ ಅಂದಾಜಿಸುವಷ್ಟು ಪ್ರೌಢಿಮೆ ಬೆಳೆಯದಿರುವುದು ಎಂಬುದು ಮನೋವಿಜ್ಞಾನಿಗಳ ವಾದ. ಅದೇನೇ ಇರಲಿ, ಆದರೆ ಕೆಲವೊಮ್ಮೆ ಅಪಾಯದ ಅರಿವಿದ್ದರೂ ಅದನ್ನು ಮೈ ಮೇಲೆ ಎಳೆದುಕೊಳ್ಳುವುದರಿಂದ ನಾನಾ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಆದರೆ, ಕೆಲವೊಂದು ರಿಸ್ಕ್‍ಗಳು ಸಾಧನೆಗೆ ಅಗತ್ಯ. ಉದಾಹರಣೆಗೆ ಇಂಜಿನಿಯರಿಂಗ್ ಮುಗಿಸಿ ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿರುವ ಯುವಕನಿಗೆ ಐಎಎಸ್ ಅಧಿಕಾರಿಯಾಗಬೇಕೆಂಬ ಕನಸಿರುತ್ತದೆ.

ಆತ ತನ್ನ ಕನಸನ್ನು ನನಸು ಮಾಡಿಕೊಳ್ಳಲು ಹೆಚ್ಚಿನ ಅವಧಿಯನ್ನು ವಿವಿಧ ವಿಷಯಗಳ ಅಧ್ಯಯನಕ್ಕೆ ಮೀಸಲಿಡುವುದು ಅಗತ್ಯ. ಆದರೆ, ಉದ್ಯೋಗದ ಕಾರಣಕ್ಕೆ ಅಧ್ಯಯನದ ಕಡೆಗೆ ಹೆಚ್ಚಿನ ಗಮನ ನೀಡಲು ಸಾಧ್ಯವಾಗದಿರಬಹುದು. ಇಂಥ ಸಮಯದಲ್ಲಿ ಆತ ಉದ್ಯೋಗಕ್ಕೆ ರಾಜೀನಾಮೆ ನೀಡಿ ತನ್ನ ಪೂರ್ಣ ಸಮಯವನ್ನು ಅಧ್ಯಯನಕ್ಕೆ ಮೀಸಲಿಡುವ ನಿರ್ಧಾರ ಕೈಗೊಳ್ಳುವುದು ಅಗತ್ಯವಾಗಿರುತ್ತದೆ. ಆದಾಯದ ದೃಷ್ಟಿಕೋನದಿಂದ ಇದು ರಿಸ್ಕ್ ಎನಿಸಿದರೂ ಆತನ ಗುರಿ ಸಾಧನೆಗೆ ಅಗತ್ಯ. ಈ ರೀತಿ ಒಳ್ಳೆಯ ಉದ್ದೇಶಕ್ಕೆ ರಿಸ್ಕ್ ತೆಗೆದುಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಒಂದು ವೇಳೆ ನಾಗರಿಕ ಸೇವಾ ಪರೀಕ್ಷೆ ತೇರ್ಗಡೆಯಾಗಲು ಸಾಧ್ಯವಾಗದಿದ್ದರೆ ಮುಂದೆ ಬೇರೆ ಉದ್ಯೋಗವನ್ನು ಹುಡುಕಿಕೊಳ್ಳಲು ಅವಕಾಶವಿದೆ. 

ರಿಸ್ಕ್ ತೆಗೆದುಕೊಳ್ಳಲು ಭಯ ಬೇಡ: ಗುರಿ ಸಾಧನೆಗೆ ರಿಸ್ಕ್ ತೆಗೆದುಕೊಳ್ಳುವುದು ಅನಿವಾರ್ಯ ಎನಿಸಿದರೆ ಭಯ ಪಡದೆ ಮುಂದುವರಿಯಿರಿ. ಇದರಲ್ಲಿ ಯಾವುದೇ ತಪ್ಪಿಲ್ಲ. ಅನೇಕರು ನಿಮ್ಮ ನಿರ್ಧಾರದ ಬಗ್ಗೆ ನಕಾರಾತ್ಮಕವಾಗಿ ಮಾತನಾಡಬಹುದು, ಧೈರ್ಯಗೆಡಿಸಬಹುದು. ಆದರೆ, ಆ ಕುರಿತು ತಲೆಕೆಡಿಸಿಕೊಳ್ಳಬೇಡಿ. ನಿಮ್ಮ ಮೇಲೆ ನಿಮಗೆ ನಂಬಿಕೆಯಿದ್ದರೆ ಸಾಕು. 

ಬೆಳಗ್ಗಿನ ಗಡಿಬಿಡಿಗೆ ಬ್ರೇಕ್ ಹಾಕಲು ಹೀಗೆ ಮಾಡೋದು ಅನಿವಾರ್ಯ!

ಪರಿಣಾಮಗಳನ್ನು ಅರಿತಿರಿ: ಇನ್ನು ರಿಸ್ಕ್ ತೆಗೆದುಕೊಳ್ಳುವ ಸಂದರ್ಭದಲ್ಲಿ ಮುಂದೆ ಅದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಕೂಡ ತಿಳಿದಿರಬೇಕು. ಈ ರೀತಿ ಮೊದಲೇ ಪರಿಣಾಮಗಳನ್ನು ಊಹಿಸಿಕೊಳ್ಳುವುದರಿಂದ ವಾಸ್ತವದಲ್ಲಿ ಅವು ಎದುರಾದಾಗ ಹೇಗೆ ಎದುರಿಸಬೇಕು ಎಂಬುದು ತಿಳಿಯುತ್ತದೆ. 

ಸಕಾರಾತ್ಮಕವಾಗಿ ಯೋಚಿಸಿ: ರಿಸ್ಕ್ ತೆಗೆದುಕೊಳ್ಳುವುದು ಸೂಕ್ತ ಎಂದು ನೀವು ನಿರ್ಧರಿಸಿದ ಬಳಿಕ ಎಲ್ಲವೂ ಯೋಜನಾಬದ್ಧವಾಗಿ, ನೀವು ಅಂದುಕೊಂಡ ರೀತಿಯಲ್ಲಿಯೇ ಸಾಗುತ್ತಿರುವ ಚಿತ್ರಣವನ್ನು ಮನಸ್ಸಿನಲ್ಲಿ ಕಲ್ಪಿಸಿಕೊಳ್ಳಿ. ಈ ಚಿತ್ರಣವನ್ನು ಪದೇಪದೆ ಮನಸ್ಸಿನಲ್ಲಿ ತಂದುಕೊಳ್ಳಿ. ನಕಾರಾತ್ಮಕ ಯೋಚನೆಗಳು ಮನಸ್ಸಿನಲ್ಲಿ ಮೂಡದಂತೆ ಎಚ್ಚರ ವಹಿಸಿ. ರಿಸ್ಕ್ ತೆಗೆದುಕೊಳ್ಳುವುದರಿಂದ ಎಲ್ಲವೂ ಸುಗಮವಾಗಿ ಸಾಗುತ್ತದೆ ಎಂಬ ಸಕಾರಾತ್ಮಕ ಚಿಂತನೆ ನಿಮ್ಮಲ್ಲಿ ಆತ್ಮವಿಶ್ವಾಸವನ್ನು ಹುಟ್ಟು ಹಾಕುತ್ತದೆ.

ಸಣ್ಣ ರಿಸ್ಕ್‍ನಿಂದ ಪ್ರಾರಂಭಿಸಿ: ರಿಸ್ಕ್ ತೆಗೆದುಕೊಳ್ಳಬೇಕು ಎಂದ ತಕ್ಷಣ ನೇರವಾಗಿ ಸಮುದ್ರಕ್ಕೆ ಧುಮ್ಮುಕ್ಕುವ ಬದಲು ಪುಟ್ಟ ಹಳ್ಳಕ್ಕೆ ಹಾರುವುದು ಹೆಚ್ಚು ಸೂಕ್ತ. ಹಳ್ಳದಲ್ಲಿ ನೀವು ಸಮರ್ಥವಾಗಿ ಈಜಬಲ್ಲಿರಿ ಎಂದರೆ ಆ ಬಳಿಕ ನದಿಯಲ್ಲಿ ಈಜಿ. ನದಿಯಲ್ಲಿ ಈಜಿ ಸಫಲರಾದ ಬಳಿಕವಷ್ಟೇ ಸಮುದ್ರದಲ್ಲಿ ನಿಮ್ಮ ಸಾಮಥ್ರ್ಯವನ್ನು ಪರೀಕ್ಷಿಸಿಕೊಳ್ಳಿ. ಈ ರೀತಿ ಪ್ರಾರಂಭದಲ್ಲಿ ಸಣ್ಣ ಪ್ರಮಾಣದ ರಿಸ್ಕ್ ತೆಗೆದುಕೊಳ್ಳುವುದರಿಂದ ಸಹನೆ, ಸವಾಲುಗಳನ್ನು ಎದುರಿಸುವ ಸಾಮಥ್ರ್ಯ ಹೆಚ್ಚುತ್ತದೆ. ಇದು ದೊಡ್ಡ ರಿಸ್ಕ್ ತೆಗೆದುಕೊಳ್ಳಲು ನಿಮಗೆ ಪ್ರೇರಣೆ ಒದಗಿಸುತ್ತದೆ.

ಪುಟಾಣಿ ಕಂದಮ್ಮಗಳೇಕೆ ಕೂಕ್ ಆಟಕ್ಕೆ ಕೇಕೆ ಹಾಕುತ್ತವೆ?

ಸಿಕ್ಕ ಅವಕಾಶಗಳನ್ನು ಬಿಡಬೇಡಿ: ನೀವೇ ಒಂದು ಅವಕಾಶವನ್ನು ಸೃಷ್ಟಿಸಿಕೊಳ್ಳುತ್ತೇನೆ ಎನ್ನುವುದಕ್ಕಿಂತ ಸಿಕ್ಕ ಅವಕಾಶಗಳನ್ನು ಒಪ್ಪಿಕೊಳ್ಳುವುದು ಹೆಚ್ಚು ಸೂಕ್ತವೆನಿಸುತ್ತದೆ. ಅದು ಬೇಕಿದ್ದರೆ ನಿಮಗೆ ಅನುಭವವಿರದ ಕ್ಷೇತ್ರವೇ ಆಗಿರಲಿ. ಆ ಅವಕಾಶಕ್ಕೆ ‘ನೋ’ ಎನ್ನುವ ಬದಲಿ ‘ಎಸ್’ ಎನ್ನಿ. ಒಂದು ವೇಳೆ ಅದರಲ್ಲಿ ನಿಮಗೆ ಯಶಸ್ಸು ಸುಲಭವಾಗಿ ಸಿಗದೇ ಇರಬಹುದು. ಆದರೆ, ಹೊಸ ಅನುಭವ ಖಂಡಿತಾ ಸಿಗುತ್ತದೆ. ಈ ಅನುಭವ ಇನ್ನಷ್ಟು ದೊಡ್ಡ ರಿಸ್ಕ್ ತೆಗೆದುಕೊಳ್ಳಲು ನೆರವು ನೀಡುತ್ತದೆ. 

ಹೆದರಿಕೆಯನ್ನು ಧೈರ್ಯದಿಂದಲೇ ಕಟ್ಟಿಹಾಕಿ: ನಮ್ಮ ಸಾಧನೆಗಿರುವ ಮೊದಲ ಶತ್ರುವೇ ಹೆದರಿಕೆ. ಇದನ್ನು ನಾವು ಸಮರ್ಪಕವಾಗಿ ನಿರ್ವಹಿಸಿದ್ದೇ ಆದರೆ ಯಶಸ್ಸಿನ ಅರ್ಧ ಹಾದಿಯನ್ನು ಕ್ರಮಿಸಿದ್ದೇವೆ ಎಂದೇ ಭಾವಿಸಬಹುದು. ‘ನನ್ನಿಂದ ಇದು ಸಾಧ್ಯವೇ?’ ಎಂಬ ಅನುಮಾನವೇ ನಮ್ಮೆಲ್ಲ ಹಿನ್ನಡೆಗಳಿಗೆ ಕಾರಣ. ಈ ಹೆದರಿಕೆಯನ್ನು ಮೆಟ್ಟಿ ನಿಲ್ಲುವುದು ಅತ್ಯಗತ್ಯ. ಧೈರ್ಯ ಇಲ್ಲದೆ ಹೋದರೆ ರಿಸ್ಕ್ ತೆಗೆದುಕೊಳ್ಳುವುದು ಅಸಾಧ್ಯ. ಆದಕಾರಣ ಹೆದರಿಕೆಯನ್ನು ಹೊಡೆದೋಡಿಸಬೇಕೆಂದರೆ ನಿಮ್ಮನ್ನು ಹೆದರಿಸುವ ಕೆಲಸವನ್ನೇ ಪದೇಪದೆ ಮಾಡಬೇಕು. ಭಯಕ್ಕೆ ಎದುರು ನಿಂತಾಗ ಮಾತ್ರವೇ ಜಯಕ್ಕೆ ಜಾಗ.