ಒತ್ತಡವು ನಮ್ಮ ನಿರ್ಧರಿಸುವ ಕೌಶಲ್ಯವನ್ನು ಏರುಪೇರು ಮಾಡಬಲ್ಲದು. ಒತ್ತಡದಲ್ಲಿ ತೆಗೆದುಕೊಂಡ ನಿರ್ಧಾರ, ಆಮೇಲೆ ಪರಿತಪಿಸುವಂತೆ ಮಾಡೀತು. ತುಂಬಾ ಸುಸ್ತಾದಾಗ, ಸ್ಟ್ರೆಸ್‌ನಲ್ಲಿದ್ದಾಗ ನಾವು ಕೇವಲ ತಪ್ಪು ನಿರ್ಧಾರ ತೆಗೆದುಕೊಳ್ಳುವುದಷ್ಟೇ ಅಲ್ಲ, ಹಲವಾರು ಕ್ರೇಜಿ ವಿಷಯಗಳನ್ನು ಮಾಡಬಲ್ಲೆವು. ಅಲ್ಲದೆ ಒತ್ತಡ ತರುವ ವಿಷಯದ ಬಗ್ಗೆ ಮತ್ತೆ ಮತ್ತೆ ಮಾತನಾಡಿ, ಗೆಳೆಯರೆಲ್ಲ ನಾವು ಹತ್ತಿರ ಹೋದರೆ ದೂರ ಓಡುವಂತೆ ಮಾಡಿಕೊಳ್ಳುತ್ತೇವೆ.

ಜೊತೆಗೆ, ನಮ್ಮ ಮೈಂಡ್‌ನಲ್ಲಿಯೂ ಅದೇ ವಿಷಯವನ್ನು ಮುನ್ನೆಲೆಗೆ ತಂದುಕೊಳ್ಳುವುದರಿಂದ ಹೊಸ ಯೋಚನೆಗಳು, ಹೊಸ ಐಡಿಯಾಗಳು ತಲೆಗೆ ಹೊಳೆಯದೇ ಹೋಗುವಂತೆ ಮಾಡಿಕೊಳ್ಳುತ್ತೇವೆ.  ಹಾಗಾಗಿ, ಸ್ಟ್ರೆಸ್‌ನಲ್ಲಿದ್ದಾಗ ಮಾಡಬಾರದ ಕೆಲ ಕೆಲಸಗಳಿವೆ. ಅವೇನೆಂದು ತಿಳಿದುಕೊಂಡು ಮುನ್ನಡೆಯಿರಿ.

ಕೇಳುವವರು ಸಿಕ್ಕಾಗೆಲ್ಲ ಅದನ್ನೇ ಹೇಳಿಕೊಳ್ಳುವುದು

ನಿಮ್ಮ ಗೆಳೆಯರಿಗಾಗಿ ದಯವಿಟ್ಟು ಇದೊಂದು ಕೆಲಸ ಮಾಡಿ.  ನಿಮ್ಮ ಕಷ್ಟಕಾರ್ಪಣ್ಯಗಳು, ಒತ್ತಡ ನೀಡುವ ಸಂಗತಿಗಳನ್ನು ಪದೇ ಪದೆ ಹೇಳುವುದು ಬಿಟ್ಟುಬಿಡಿ. ನೀವು ಒಮ್ಮೆ ಹೇಳಿದಾಗಲೇ ಅವರಿಗೆ ಅರ್ಥವಾಗಿದೆ, ನಿಮಗೆ ಸಾಕಾಗಿದೆ ಎಂದು. ಒಂದೇ ವಿಷಯವನ್ನು ಅದದೇ ಜನರ ಬಳಿ ಎಷ್ಟು ಬಾರಿ ಹೇಳಿ ಏನು ಪ್ರಯೋಜನ? ಇದರಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಬದಲಿಗೆ ನೀವೇ ಕುಳಿತು ನಿಧಾನವಾಗಿ ಯೋಚಿಸಿ, ಹೇಗೆ ಈ ಒತ್ತಡದಿಂದ ಮುಕ್ತರಾಗುವುದೆಂದು. ಬರೀ ಸಮಸ್ಯೆಯ ಬಗ್ಗೆಯೇ ಯೋಚಿಸಿದರೆ ಪರಿಹಾರ ಸಿಗುವುದಿಲ್ಲ. ಬದಲಿಗೆ ಪರಿಹಾರದ ಬಗ್ಗೆ ಯೋಚಿಸಬೇಕು. 

ಆಲ್ಕೋಹಾಲ್‌ಗೆ ಕೂಡಾ ಆ ಶಕ್ತಿಯಿಲ್ಲ

ಮದ್ಯಕ್ಕೆ ಸಮಸ್ಯೆಗಳನ್ನೆಲ್ಲ ನಿವಾರಿಸುವ ಶಕ್ತಿ ಇದ್ದಿದ್ದರೆ, ದೇವರ ಮನೆಯಲ್ಲಿ ಮದ್ಯದ ಬಾಟಲುಗಳನ್ನಿಟ್ಟೇ ಪೂಜಿಸಬಹುದಿತ್ತು ಅಲ್ಲವೇ? ಒತ್ತಡಮುಕ್ತರಾಗಲು ಮದ್ಯ ಸೇವನೆ ಪಲಾಯನವಾದವೇ ಹೊರತು ಪರಿಹಾರವಲ್ಲ. ಮತ್ತೇರಿದ ರಾತ್ರಿಗೆ ವಿಷಯ ಮರೆಯಬಹುದು. ಬೆಳಗ್ಗೆ ಎದ್ದಾಗ ಸ್ಟ್ರೆಸ್ ಅಲ್ಲೇ ಇದೆ, ಜೊತೆಗೆ ತಲೆನೋವು, ಸಂಕಟ ಇತ್ಯಾದಿಯೂ ಸೇರಿದೆ. ಡ್ರಗ್ಸ್ ಹಾಗೂ ಅತಿಯಾಗಿ ತಿನ್ನುವುದು ಕೂಡಾ ಇದೇ ರೀತಿಯೇ ಆಗುತ್ತದೆ. ಹಾಗಾಗಿ,  ಸ್ಟ್ರೆಸ್ ಎಂದು  ಕುಡಿಯುವುದು ಮತ್ತಿತರೆ ಚಟಗಳ ದಾಸರಾಗುವುದು ಬಿಡಿ.

ರಾತ್ರಿಯಿಡೀ  ಕೊರಗುವುದು

ನಿದ್ರೆ ಎನ್ನುವುದು ಬಹಳ ಅಗತ್ಯವಾದುದು ಹಾಗೂ ಅತ್ಯಮೂಲ್ಯವಾದುದು. ಅದರಲ್ಲೂ ಸ್ಟ್ರೆಸ್‌ನಲ್ಲಿದ್ದಾಗ ಅದರ ಅಗತ್ಯ ಇನ್ನೂ ಹೆಚ್ಚು. ರಾತ್ರಿಯಿಡೀ ಹಾಸಿಗೆಯಲ್ಲಿ ಮಲಗಿ ಚಿಂತಿಸೋಣ ಎಂದು ಟೆಂಪ್ಟ್ ಆಗಬಹುದು. ಆದರೆ, ನಿದ್ರೆ ಬಿಟ್ಟು ಕೊರಗುವುದರಿಂದ ಮತ್ತಷ್ಟು ಸ್ಟ್ರೆಸ್ ಹೆಚ್ಚುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ಮೊದಲೇ ಒತ್ತಡದಲ್ಲಿದ್ದೀರಿ. ಇನ್ನು ನಿದ್ರೆಯೂ ಇಲ್ಲವೆಂದರೆ ಖಂಡಿತಾ ನಿಮ್ಮ ಯೋಚನೆಗಳಲ್ಲಿ ತಾಳ ಮೇಳ ಇರುವುದಿಲ್ಲ. ನಿಮ್ಮ ಒತ್ತಡಕ್ಕೊಂದು ಉತ್ತರ ಕಂಡುಕೊಳ್ಳಲು ನಿಮ್ಮ ಮೆದುಳು ಸರಿಯಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುತ್ತಿರುವುದು ಅಗತ್ಯ.

ನೋ ಹೇಳಲು ಹೆದರಬೇಡಿ

ನಿಮ್ಮ ಸಾಮರ್ಥ್ಯಕ್ಕಿಂತ ಹೆಚ್ಚನ್ನು ತಲೆ ಮೇಲೆ ಹಾಕಿಕೊಳ್ಳುವುದು ಯಾವಾಗಲೂ ಒಳ್ಳೆಯದಲ್ಲ. ಅದರಲ್ಲೂ ಸ್ಟ್ರೆಸ್‌ನಲ್ಲಿದ್ದಾಗ ಮತ್ತಷ್ಟು ಹೊಸ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಳ್ಳುವುದು, ಇನ್ನೊಬ್ಬರಿಗೆ ಸಹಾಯ ಮಾಡಲು ಓಕೆ ಎನ್ನುವುದು ಎಲ್ಲವೂ ತಲೆಯನ್ನು ಸ್ಫೋಟಗೊಳಿಸುತ್ತವಷ್ಟೆ. ಬದಲಿಗೆ ನಿಮಗೆ ಸ್ವಲ್ಪ ಸಮಯ ಕೊಟ್ಟುಕೊಂಡು ಹೊಸ ಐಡಿಯಾಗಳಿಗೆ ಜಾಗ ನೀಡಿ. ಆರಾಮೆನಿಸಿದ  ನಂತರ ಬೇಕಿದ್ದರೆ ನೀವೇ ಹೊಸ ಪ್ರಾಜೆಕ್ಟ್‌ಗಳನ್ನು ಕೇಳಿ ಪಡೆದು ಸೈ ಎನಿಸಿಕೊಳ್ಳಬಹುದು. 

ಇನ್ನೊಬ್ಬರ ಮೇಲೆ ಕೆರಳುವುದು

ನೀವು ಒತ್ತಡದಲ್ಲಿದ್ದೀರಿ ಎಂದು ಸ್ನೇಹಿತರ ಮೇಲೋ, ಕುಟುಂಬದವರ ಮೇಲೋ ಕೂಗಾಡುವುದರಿಂದ ಎಲ್ಲ ಸರಿಯಾಗಿ ಬಿಡುವುದಿಲ್ಲ. ಬದಲಿಗೆ ಇದು ಬದುಕನ್ನು ಇನ್ನಷ್ಟು ಡ್ಯಾಮೇಜ್ ಮಾಡುತ್ತದೆ. 

ಜೀವನದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದು

ಎಲ್ಲ ಕಡೆಯಿಂದ ಒತ್ತಡಗಳು ಒತ್ತಿಕೊಂಡು ಬರುತ್ತಿವೆ ಎಂದಾಗ ಬಟ್ಟೆಯನ್ನೆಲ್ಲ ಬ್ಯಾಗ್‌ಗೆ ತುಂಬಿ ದೂರದ ದೇಶವೊಂದಕ್ಕೆ ಓಡಿ ಹೋಗಿ ಅಪರಿಚಿತರಾಗಿ ಬದುಕಿಬಿಡೋಣ ಎನಿಸಬಹುದು. ಆದರೆ, ಇದಕ್ಕಾಗಿ ನಂತರದಲ್ಲಿ ಪಶ್ಚಾತ್ತಾಪ ಪಡುವಿರಿ. ಹೀಗೆ ಆಕಾಶವೊಂದು ತಲೆಯ ಮೇಲೆ ಬಿದ್ದಂತೆ ಇರುವಾಗ ಉದ್ಯೋಗಕ್ಕೆ ಚೀಟಿ ಹಾಕುವುದು, ಮದುವೆ, ಬ್ರೇಕಪ್, ಡಿವೋರ್ಸ್ ಮುಂತಾದ ಯಾವುದೇ ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೋಗಬೇಡಿ. ಬದಲಿಗೆ ಎಲ್ಲವೂ ಸರಿಯಾಗಲು ಸ್ವಲ್ಪ ಸಮಯ ತೆಗೆದುಕೊಳ್ಳಿ. ಒತ್ತಡ ನಿವಾರಣೆಯ ತಂತ್ರಗಳ ಮೊರೆ ಹೋಗಿ. ಎಲ್ಲ ಸೆಟಲ್ ಆದ ಬಳಿಕ ನಿರ್ಧಾರದ ಕುರಿತು ಯೋಚಿಸಿ.