ಮದರಂಗಿ ಅಥವಾ ಮೆಹಂದಿ ಇಲ್ಲದೆ ಭಾರತೀಯರಲ್ಲಿ ಮದುವೆಯೇ ನಡೆಯುವುದಿಲ್ಲ. ಉತ್ತರ ಭಾರತದ ಮದುವೆಗಳಲ್ಲಿ ಮೆಹಂದಿ ಶಾಸ್ತ್ರವೇ ಇದೆ. ಮೇಲ್ನೋಟಕ್ಕೆ ಇದು ಅಲಂಕಾರ ಹಾಗೂ ಮದುವೆಯ ಸಂಭ್ರಮಕ್ಕೆ ಸಂಬಂಧಿಸಿದ ಒಂದು ಶಾಸ್ತ್ರ. ಮದುವೆಯಲ್ಲಷ್ಟೇ ಅಲ್ಲ, ಯುವತಿಯರು ಬೇರೆ ಬೇರೆ ಹಬ್ಬ ಅಥವಾ ಹಿಶೇಷ ಸಂದರ್ಭಗಳಲ್ಲೂ ಆಗಾಗ ಇದನ್ನು ಹಚ್ಚಿಕೊಳ್ಳುವುದುಂಟು. 

-ಮಲೆನಾಡಿನ ಭಾಗದಲ್ಲಿ ನಾಗರ ಪಂಚಮಿಯ ದಿನ ಕಡ್ಡಾಯವಾಗಿ ಗಂಡಸರು, ಹೆಂಗಸರೆಲ್ಲರೂ ಮದರಂಗಿ ಹಚ್ಚಿಕೊಳ್ಳುತ್ತಾರೆ. ಇಂದು ಎಲ್ಲರೂ ಅಂಗಡಿಯಲ್ಲಿ ಟ್ಯೂಬ್ ರೂಪದಲ್ಲಿ ಸಿಗುವ ಮೆಹಂದಿ ಬಳಸುತ್ತಾರೆ. ಆದರೆ, ಹಳ್ಳಿಗಳಲ್ಲಿ ಈಗಲೂ ಮದರಂಗಿ ಗಿಡದ ಎಲೆಗಳನ್ನು ಜಜ್ಜಿ ನುಣ್ಣಗೆ ಮಾಡಿ ಬಳಸುತ್ತಾರೆ. ಅವರು ಬಳಸುವುದು ನೈಸರ್ಗಿಕ ಮೆಹಂದಿ. ಆ ಮೆಹಂದಿಯಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ಅವು ಚರ್ಮ ಹಾಗೂ ಉಗುರನ್ನು ಕೆಲವು ವಿಧದ ಸೋಂಕುಗಳಿಂದ ಕಾಪಾಡುತ್ತವೆ. 
-ಮೆಹಂದಿ ನಮ್ಮ ದೇಹದ ಒತ್ತಡ ಹಾಗೂ ಉಷ್ಣವನ್ನು ಕಳೆಯುವ ಶಕ್ತಿ ಹೊಂದಿದೆ. 
- ಮದರಂಗಿ ತಂಪೆನ್ನುವ ಕಾರಣ ಇದನ್ನು ಚರ್ಮಕ್ಕೆ ಹಚ್ಚಿಕೊಳ್ಳುವರು. ಇದು ಹುಳುಕಡ್ಡಿ ಮುಂತಾದ ಚರ್ಮರೋಗಗಳನ್ನು ನಿವಾರಿಸುತ್ತದೆ. 
- ತಲೆಹೊಟ್ಟನ್ನು ನಿವಾರಿಸುವ ಕಾರಣ ಕೂದಲಿಗೆ ಹಚ್ಚುವರು. 
- ರಕ್ತ ಸಕ್ಕರೆಯನ್ನು ಕಡಿಮೆ ಮಾಡುವ ಹಾಗೂ ಕೊಬ್ಬನ್ನು ನಿಗ್ರಹಿಸುವ ಗುಣ ಇರುವುದಾದರೂ ಪರಿಣತ ಆಯುರ್ವೇದ ತಜ್ಞರ ಮಾರ್ಗದರ್ಶನದಲ್ಲಿ ಮದರಂಗಿಯನ್ನು ಸೇವಿಸಬೇಕಾಗುತ್ತದೆ.
- ಇನ್ನು ಮದುವೆಯಲ್ಲಿ ಮದುಮಗಳು ಇದನ್ನು ಹಚ್ಚಿಕೊಳ್ಳುವುದಕ್ಕೊಂದು ಹಿಶೇಷ ಕಾರಣವಿದೆ. ಮದುವೆಯ ದಿನಗಳು ಯಾವುದೇ ಯುವತಿಗೆ ಒತ್ತಡದ ಹಾಗೂ ಟೆನ್ಷನ್ನಿನ ದಿನಗಳಾಗಿರುತ್ತವೆ. ಆ ಒತ್ತಡದಿಂದ ಕೆಲವರಿಗೆ ತಲೆನೋವು, ಜ್ವರ ಬರುವುದೂ ಉಂಟು. ಇನ್ನು ಮದುವೆಯ ದಿನ ಹಾಗೂ ಹಿಂದೆ-ಮುಂದಿನ ದಿನ ಆಕೆಗೆ ಸುಸ್ತೂ ಹೆಚ್ಚು. ಈ ಒತ್ತಡ ಹಾಗೂ ಸುಸ್ತನ್ನು ನಿವಾರಿಸುವ ಔಷಧೀಯ ಗುಣ ಮೆಹಂದಿಯಲ್ಲಿದೆ. ಹೀಗಾಗಿ, ಅಲಂಕಾರ ಶಾಸ್ತ್ರ ಹಾಗೂ ಔಷಧ ಮೂರೂ ಕಾರಣಗಳಿಗೆ ಮೆಹಂದಿ ಬಳಕೆಯಲ್ಲಿದೆ.

- ಮಹಾಬಲ ಸೀತಾಳಬಾವಿ
 

ಹಳೆ ಆಚಾರ, ಹೊಸ ವಿಚಾರಕ್ಕೆ ಸಂಬಂಧಿಸಿದ ಲೇಖನಗಳಿಗೆ ಇಲ್ಲಿ ಕ್ಲಿಕ್ ಮಾಡಿ..