ದೆಹಲಿ(ಆ.20): ದೆಹಲಿಯಲ್ಲಿ ಆಗಸ್ಟ್ 1ರಿಂದ 7ರ ತನಕ ನಡೆದ ಎರಡನೇ ಸೆರೋ ಸರ್ವೆಯಲ್ಲಿ ಶೇ.29.1ರಷ್ಟು ಜನರ ದೇಹದಲ್ಲಿ ಕೊರೋನಾ ಪ್ರತಿಕಾಯ ಅಭಿವೃದ್ಧಿಯಾಗಿರುವುದು ತಿಳಿದುಬಂದಿದೆ ಎಂದು ರಾಜ್ಯ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ತಿಳಿಸಿದ್ದಾರೆ. ಪುರುಷರಲ್ಲಿ ಶೇ 28.3 ಪ್ರತಿಕಾಯ ಶಕ್ತಿ ಇದ್ದರೆ ಮಹಿಳೆಯರಲ್ಲಿ ಶೇ 32.2 ಇದೆ.

ಜೂನ್ 27 ಹಾಗೂ ಜುಲೈ 10ರ ನಡುವೆ ನಡೆದ ಸರ್ವೆಗೆ ಹೋಲಿಸಿದಲ್ಲಿ ಎರಡನೇ ಸರ್ವೆಯಲ್ಲಿ ಜನರಲ್ಲಿ ಶೇ 6ರಷ್ಟು ಪ್ರತಿಕಾಯ ಅಂಶ ಹೆಚ್ಚಾಗಿರುವುದು ಬೆಳಕಿಗೆ ಬಂದಿದೆ. ಮೊದಲಿನ ಸರ್ವೆಯಲ್ಲಿ ಶೇ 22.86 ಜನರಲ್ಲಿ ಪ್ರತಿಕಾಯ ಶಕ್ತಿ ಇರುವುದು ಕಂಡು ಬಂದಿತ್ತು. 21387 ಜನರಿಂದ ರಕ್ತದ ಮಾದರಿ ಸಂಗ್ರಹಿಸಲಾಗಿತ್ತು.

ಯುವಕರಲ್ಲಿ ಹೆಚ್ಚಾಗುತ್ತಿದೆ ಕೊರೋನಾ; ಆಘಾತಕಾರಿ ಅಂಕಿ ಅಂಶ ಬಿಚ್ಚಿಟ್ಟ WHO!

ಎರಡನೇ ಸುತ್ತಿನಲ್ಲಿ 15 ಸಾವಿರ ಜನರ ಮಾದರಿ ಸಂಗ್ರಹಿಸಲಾಗಿತ್ತು. ಮೂರನೇ ಸುತ್ತಿನ ಸರ್ವೆ ಸೆಪ್ಟೆಂಬರ್ 1ರಿಂದ ಆರಂಭವಾಗಲಿದೆ. ಎರಡನೇ ಸರ್ವೆಯ ಪ್ರಕಾರ 18 ವರ್ಷ ಕೆಳಗಿನವರಲ್ಲಿ ಪ್ರತಿಕಾಯ ಶಕ್ತಿ ಶೇ 34.7ರಷ್ಟಿದೆ. 18ರಿಂದ 50 ವರ್ಷ ವಯಸ್ಸಿನ ನಡುವಿನ ಜನರಲ್ಲಿ 28.5ರಷ್ಟಿದೆ. 50 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಶೇ. 31.2ರಷ್ಟಿದೆ.

ಸರ್ಕಾರ ಶಾಲೆ ತೆರೆಯಲು ನಿರ್ಧರಿಸಿದ ನಿಟ್ಟಿನಲ್ಲಿ 18 ವರ್ಷಕ್ಕಿಂತ ಚಿಕ್ಕವರಲ್ಲಿ ಪ್ರತಿಕಾಯ ಶಕ್ತಿ ಹೆಚ್ಚಿರುವುದು ಹೆಚ್ಚು ಮಹತ್ವಪೂರ್ಣವಾಗಿದೆ. ನಗರದ ಕೊರೋನಾ ಪರಿಸ್ಥಿತಿ ತಿಳಿಯಾಗುವ ತನಕ ಶಾಲೆ ಆರಂಭಿಸುವುದಿಲ್ಲ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದರು.