ಕೊರೋನಾಗೆ ಭಾರತದಲ್ಲಿ ಸತ್ತ ಡಾಕ್ಟರ್‌ಗಳೆಷ್ಟು ಗೊತ್ತಾ?
ಇಂಡಿಯನ್ ಮೆಡಿಕಲ್ ಅಸೋಸಿಯೇಶನ್, ಕೋವಿಡ್ನಿಂದ ತೀರಿಕೊಂಡ ಡಾಕ್ಟರ್‌ಗಳ ಬಗ್ಗೆ ದಿಗಿಲು ಬೀಳಿಸುವ ವರದಿಯೊಂದನ್ನು ಕೊಟ್ಟಿದೆ.
ಕೊರೋನಾದಿಂದ ಭಾರತದಲ್ಲಿ ಸುಮಾರು ಇನ್ನೂರು ಮಂದಿ ಡಾಕ್ಟರ್‌ಗಳು ತೀರಿಕೊಂಡಿದ್ದಾರೆ. ಅವರಲ್ಲಿ 170ಕ್ಕೂ ಹೆಚ್ಚು ಮಂದಿ 50ಕ್ಕೂ ಹೆಚ್ಚಿನ ವಯಸ್ಸಿನವರು. ಅನೇಕ ಮಂದಿಗೆ ಹೃದಯ ಸಮಸ್ಯೆ ಮತ್ತಿತರ ಆರೋಗ್ಯ ಸಮಸ್ಯೆಗಳೂ ಇತ್ತು. ಇವರಲ್ಲಿ ಹೆಚ್ಚಿನವರು ಕೋವಿಡ್ ವಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದವರು. ಇದು ಎಚ್ಚರಿಕೆ ಗಂಟೆ. ಈಗಲೂ ಎಚ್ಚೆತ್ತುಕೊಳ್ಳದೆ ಹೋದರೆ ಕಷ್ಟವಿದೆ.
- ಹಾಗಂತ ಇಂಡಿಯನ್ ಮೆಡಿಕಲ್ ಅಸೋಸಿಯಶನ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒಂದು ವರದಿ ಸಲ್ಲಿಸಿ ಮನವಿ ಮಾಡಿದೆ. ಇದು ಭಾರತದ ಸುಮಾರು ಮೂರುವರೆ ಲಕ್ಷ ವೈದ್ಯರನ್ನು ಪ್ರತಿನಿಧಿಸುವ ಒಂದು ಸಂಸ್ಥೆ. ಕೋವಿಡ್ ಅಂದ್ರೆ ಜನ ಮಾತ್ರವಲ್ಲ, ವೈದ್ಯರೂ ಬೆಚ್ಚಿ ಬೀಳುವುದಕ್ಕೆ ಕಾರಣ ಇಲ್ಲಿದೆ. ಕೊರೋನಾ ರೋಗಿಗಳನ್ನು ಪದೇ ಪದೆ ಮುಟ್ಟುವ, ಚಿಕಿತ್ಸೆ ನೀಡುವ ವೈದ್ಯರಿಗೆ ಈ ಸೋಂಕಿನ ಅಪಾಯ ಬಹಳ. ಸಂಸ್ಥೆಯ ವರದಿಯಿಂದ ಅದು ರುಜುವಾತಾಗಿದೆ.
ಕೊರೋನಾಗೆ ಪರಮೌಷಧ, ಗಂಭೀರ ರೋಗಿಗಳಿಗೂ ಬಳಸಲು ಸೂಚನೆ!
ವೈದ್ಯರಿಗೇ ಏಕೆ ಅಪಾಯ?
- ರೋಗಿ ಮುಟ್ಟಿ ಹೋದ ವಸ್ತುವನ್ನು ಮುಟ್ಟುವವರಿಗೆ ಸೋಂಕಿನ ಅಪಾಯ ಕಡಿಮೆ. ಯಾಕೆಂದರೆ ಅಲ್ಲಿ ವೈರಸ್‌ಗಳ ಸಂಖ್ಯೆ ಹೆಚ್ಚೇನೂ ಇರುವುದಿಲ್ಲ. ಆದರೆ ನೂರಾರು ಕೋವಿಡ್ ರೋಗಿಗಳ ನಡುವೆ ಕೆಲಸ ಮಾಡುವ ವೈದ್ಯರು ಪ್ರತಿಕ್ಷಣವೂ ಸಾವಿರಾರು ವೈರಸ್‌ಗಳನ್ನು ಮುಟ್ಟುವ, ದೇಹಕ್ಕೆ ಬಿಟ್ಟುಕೊಳ್ಳುವ ಸಾಧ್ಯತೆ ಬಹಳ. ವೈರಸ್‌ಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಷ್ಟೂ ಸೋಂಕು ಸಾಧ್ಯತೆ ಅಧಿಕ.
- ಸಾಕಷ್ಟು ಭದ್ರತೆ ಇರುವ ಪಿಪಿಇ ಕಿಟ್, ವೈದ್ಯಕೀಯ ಎನ್ 95 ಮಾಸ್ಕ್‌ಗಳು, ಸ್ಯಾನಿಟೈಸರ್ ಇತ್ಯಾದಿಗಳನ್ನು ಸರಕಾರ ವೈದ್ಯರಿಗೆ ಒದಗಿಸಬೇಕು. ಆದರೆ ಸರಕಾರಿ ಕೋವಿಡ್ ಕೇಂದ್ರಗಳಲ್ಲಿ ಇವುಗಳ ಕೊರತೆ ಇದೆ.
- ಪ್ರತಿದಿನವೂ ನೂರಾರು ರೋಗಿಗಳನ್ನು ನೋಡುವ ವೈದ್ಯರು ಪದೇ ಪದೇ ಕೈ ಮುಖ ತೊಳೆದುಕೊಳ್ಳುತ್ತಾರಾದರೂ, ಮಧ್ಯೆ ಎಲ್ಲೋ ಒಂದು ಕಡೆ ಮೈಮರೆವ ಸಾಧ್ಯತೆ ಇದ್ದೇ ಇದೆ.
- ಸಾಮಾನ್ಯವಾಗಿ ಒಂದು ವಾರ ಕೋವಿಡ್ ವಾರ್ಡ್‌ನಲ್ಲಿ ಸೇವೆ ಸಲ್ಲಿಸಿದ ಡಾಕ್ಟರ್‌ಗಳು ಎರಡು ವಾರ ಕ್ವಾರಂಟೈನ್ ಆಗಿ ಬ್ರೇಕ್ ತೆಗೆದುಕೊಳ್ಳಬೇಕು. ಆದರೆ ಇದನ್ನು ಮಾಡಲು ಅಗತ್ಯವಾದಷ್ಟು ವೈದ್ಯರ ಸಂಖ್ಯೆ ಇಲ್ಲ. ಹೀಗಾಗಿ ವೈದ್ಯರಿಗೆ ಕೊರೋನಾ ರೋಗಿಗಳ ಸೇವೆಯ ಕರ್ತವ್ಯದ ಜೊತೆಗೆ ಒತ್ತಡವೂ ಇದೆ.
ವಿಶ್ವದ ಕೊರೋನಾ ಹಾಟ್‌ಸ್ಪಾಟ್ ಪಟ್ಟದತ್ತ ಭಾರತ!
- ಕೊರೋನಾ ಸೋಂಕಿತರ ಚಿಕಿತ್ಸೆಯ ಜೊತೆಗೆ, ಟೆಸ್ಟ್‌ಗಳನ್ನು ಹೆಚ್ಚು ಹೆಚ್ಚಾಗಿ ಮಾಡಿ ಎಂಬ ಒತ್ತಡವನ್ನೂ ಸರಕಾರ ವೈದ್ಯರ ಮೇಲೆ ಹೇರಿದೆ. ಹೀಗಾಗಿ ಕೆಲಸದ ಒತ್ತಡ ವೈದ್ಯರ ಮೇಲೆ ಅಧಿಕವಾಗುತ್ತಿದೆ.
- ಈ ನಡುವೆ, ತುರ್ತು ವಿಷಮ ಆರೋಗ್ಯ ಸ್ಥಿತಿ ತಲೆದೋರಿದ ವೈದ್ಯರಿಗೂ ಐಸಿಯು, ವೆಂಟಿಲೇಟರ್ ಸಿಗದೆ ಪರದಾಡಿ ಪ್ರಾಣಬಿಟ್ಟ ಸನ್ನಿವೇಶಗಳಿವೆ. ರೋಗಿಗಳನ್ನು ರಕ್ಷಿಸಿ ಧನ್ವಂತರಿ ಪಾತ್ರ ವಹಿಸುವ ವೈದ್ಯರಿಗೇ ಹೀಗಾಗುತ್ತದೆ ಎಂದರೆ ಏನರ್ಥ?
ಏನು ಮಾಡಬೇಕು?
ಮುಖ್ಯವಾಗಿ, ಕೊರೊನಾ ಸೋಂಕಿತರ ಸಂಖ್ಯೆ ಈಗಾಗಲೇ ಮಿತಿ ಮೀರಿ ಹೋಗಿರುವುದರಿಂದ, ವೈದ್ಯರು ತಮ್ಮ ಸುರಕ್ಷತೆ ತಾವೇ ಕಾಪಾಡಿಕೊಳ್ಳಬೇಕಾದ ಸನ್ನಿವೇಶದಲ್ಲಿ ಇದ್ದಾರೆ. ಹೀಗಾಗಿ ಯಾವುದೇ ಕ್ಷಣದಲ್ಲೂ ಮೈ ಮರೆಯಬಾರದು. ವೈಯಕ್ತಿಕ ಸ್ವಚ್ಛತೆ, ಸುರಕ್ಷತೆ ಖಾತ್ರಿಪಡಿಸಿಕೊಳ್ಳಬೇಕು. ಕೋವಿಡ್‌ನ ಸಣ್ಣ ಲಕ್ಷಣ ಕಂಡುಬಂದರೂ ಹೆಚ್ಚಿನ ನಿಗಾ ತೆಗೆದುಕೊಳ್ಳಬೇಕು ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಸೂಚಿಸಿದೆ.
ಇದರ ಜೊತೆಗೆ ೫೦ ವರ್ಷಕ್ಕಿಂತ ಹೆಚ್ಚಿನ ಡಾಕ್ಟರ್‌ಗಳನ್ನು ಕೋವಿಡ್ ರೋಗಿಗಳ ಸೇವೆಗೆ ನಿಯೋಜನೆ ಮಾಡಬಾರದು, ಯುವ ವೈದ್ಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಬೇಕು ಎಂದೂ ಅಸೋಸಿಯೇಶನ್ ಸೂಚಿಸಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಕೋವಿಡ್ ಚಿಕಿತ್ಸೆಗೆ ವೈದ್ಯರೇ ಸಿಗಲಿಕ್ಕಿಲ್ಲ ಎಂದೂ ಎಚ್ಚರಿಸಿದೆ.