ಕೊರೋನಾ ಎದುರಿಸಲು 10 ಹಾದಿ: ಡಾ. ಬಿಎಂ ಹೆಗ್ಡೆ ಕೊಟ್ಟ ಸಲಹೆಗಳಿವು
ಕೊರೋನಾ ಎರಡನೆಯ ಅಲೆಗೆ ನಾಡು ತತ್ತರಿಸಿದೆ. ಕೊರೋನಾ ಭಯದ ಜತೆಗೇ ಅಪಪ್ರಚಾರ ಕೂಡ ಜನರನ್ನು ಕಂಗೆಡಿಸುತ್ತಿದೆ. ಇಂಥ ಹೊತ್ತಲ್ಲಿ ಏನು ಮಾಡಬೇಕು ಎನ್ನುವುದನ್ನು ನೇರ ನುಡಿಯ ನಿರ್ಭೀತ ವೈದ್ಯ ಡಾ. ಬಿ. ಎಂ. ಹೆಗಡೆ ಹೇಳಿದ್ದಾರೆ. ಅವರು ನೀಡಿದ ಹತ್ತು ಸಲಹೆಗಳು ಇಲ್ಲಿವೆ.
1. ಜನದಟ್ಟಣೆ ಇರುವಲ್ಲಿ ಹೋಗಬೇಡಿ
ಜನದಟ್ಟಣೆಯ ಪ್ರದೇಶಕ್ಕೆ ಯಾವುದೇ ಕಾರಣಕ್ಕೂ ಹೋಗಲೇಬೇಡಿ. ಕೆಲವು ಸಂದರ್ಭಗಳಲ್ಲಿ ಹೋಗಲೇ ಬೇಕಾಗಿ ಬರುತ್ತದೆ. ಅಂತಹ ಅನಿವಾರ್ಯ ಸಂದರ್ಭ ಎದುರಾಗಿ ಹೋಗಲೇ ಬೇಕಾಗಿ ಬಂದಲ್ಲಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಮಾಸ್ಕ್ ಧರಿಸಿಕೊಳ್ಳಿ. ಆರು ಅಡಿ ಅಂತರವನ್ನು ಕಾಯ್ದುಕೊಂಡು ನಿಮ್ಮ ಸುರಕ್ಷತೆಯನ್ನು ನೀವೇ ಮಾಡಿಕೊಳ್ಳಿ.
2. ಕೈ ತೊಳೆಯುತ್ತಿರಿ
ಆಗಾಗ ನಿಮ್ಮ ಕೈಯನ್ನ ತೊಳೆದು ಸ್ವಚ್ಛವಾಗಿಟ್ಟುಕೊಳ್ಳಿ. ಕಣ್ಣು, ಮೂಗು, ಕಿವಿ, ಬಾಯಿಗಳನ್ನ ಮುಟ್ಟಲೇಬೇಡಿ. ಹೋರಗಡೆ ಹೋಗಿ ಬಂದಾಗ ಕೈಕಾಲುಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳುವುದು ಅಗತ್ಯ. ಸ್ವಚ್ಛತೆಯಿದ್ದಲ್ಲಿ ಕೋರೋನಾ ದೂರವಾಗುತ್ತದೆ.
3. ಒಳ್ಳೆಯ ಆಹಾರ ಸೇವಿಸಿ
ದಿನವೂ ಉತ್ತಮ ಸಾತ್ವಿಕ ಆಹಾರವನ್ನು ಸೇವಿಸಿ. ತರಕಾರಿ, ಹಣ್ಣು ಹಂಪಲುಗಳನ್ನ ಯಥೇಚ್ಛವಾಗಿ ಬಳಸಿ. ಹಣ್ಣುಗಳಲ್ಲಿ ಮುಖ್ಯವಾಗಿ ವಿಟಮಿನ್ ಸಿ ಯಥೇಚ್ಛವಾಗಿರುವ ದಾಳಿಂಬೆ, ಕಿತ್ತಳೆ, ಮೂಸುಂಬೆಯಂಥಹ ಹಣ್ಣುಗಳು ಇಮ್ಯುನಿಟಿ ಹೆಚ್ಚಿಸಲು ಸಹಕಾರಿ. ಹಾಗಾಗಿ ಅವುಗಳನ್ನೇ ಹೆಚ್ಚಾಗಿ ಸೇವಿಸಿ.
4. ಚೆನ್ನಾಗಿ ನಿದ್ರೆ ಮಾಡಿ
ಚಿಂತೆಯನ್ನೆಲ್ಲ ಬದಿಗಿಟ್ಟು ದಿನವೂ ಚೆನ್ನಾಗಿ ನಿದ್ರೆ ಮಾಡಿ. ದಿನಕ್ಕೆ ಕನಿಷ್ಠ ಆರು ಗಂಟೆ ನಿದ್ರೆ ಮಾಡಿದರೂ ಸಾಕು, ಅದು ಉತ್ತಮ ನಿದ್ರೆಯಾಗಿರಲಿ.
5. ಮನಸ್ಸು ಶುದ್ಧವಾಗಿರಲಿ
ಮನಸ್ಸಿನಲ್ಲಿ ಅಸೂಯೆ, ದ್ವೇಷ ತುಂಬಿಕೊಳ್ಳಬೇಡಿ. ಯಾವುದೇ ಭಯ, ಕಾತರಗಳಿಂದ ದೂರವಿರಿ. ಎಲ್ಲರನ್ನೂ ಪ್ರೀತಿಯಿಂದ ಕಾಣಿರಿ. ಮನಸ್ಸನ್ನು ಶುದ್ಧವಾಗಿರಿಸಿದರೆ ಇಮ್ಯುನಿಟಿ ತನ್ನಿಂದ ತಾನೇ ಬರುತ್ತದೆ.
6. ಕೆಲಸ, ವ್ಯಾಯಾಮ ಮಾಡಿ
ಕೆಲಸವಿಲ್ಲದೇ ಖಾಲಿ ಕುಳಿತರೆ ಮನಸ್ಸು ಬೇಡಾದ್ದನ್ನೇ ಚಿಂತಿಸುತ್ತಿರುತ್ತದೆ. ಹಾಗಾಗಿ ನಿಮ್ಮನ್ನು ನೀವು ಉತ್ತಮ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ. ಕೆಲಸ ಮಾಡುತ್ತಿದ್ದರೆ ಮನಸ್ಸು ಬೇರೆಡೆ ಹರಿಯುವುದಿಲ್ಲ, ಹಾಗಾಗಿ ಕೆಲಸ ಮಾಡುತ್ತಿರಿ. ಅದರಂತೆಯೇ ದೇಹಕ್ಕೆ ಉತ್ತಮ ವ್ಯಾಯಾಮವೂ ಮುಖ್ಯ. ದಿನಾಲೂ ತಪ್ಪದೇ ವ್ಯಾಯಾಮ ಮಾಡಿ.
7. ಉಪಕಾರ ಮಾಡಿ
ಸಮಾಜದಲ್ಲಿ ನಾಲ್ಕು ಜನರಿಗೆ ಉಪಕಾರವಾಗುವಂಥ ಕೆಲಸ ಮಾಡಿ. ಇದರಿಂದ ನಿಮ್ಮ ಮನಸ್ಸಿಗೊಂದಿಷ್ಟುಖುಷಿ, ನೆಮ್ಮದಿ, ಸಮಾಧಾನ ಸಿಗುತ್ತದೆ.
8. ಆಯುರ್ವೇದ- ಅಲೋಪತಿ ಯಾವುದೇ ಔಷಧ ಮಾಡಿ
ನಿಮಗೆ ಯಾವ ಪದ್ಧತಿಯ ಔಷಧಿಯಲ್ಲಿ ನಂಬಿಕೆಯಿದೆಯೋ ಅದನ್ನು ಮಾಡಿ. ಆಯುರ್ವೇದ ಮತ್ತು ಅಲೋಪತಿಗಳಲ್ಲಿ ಪರಿಣಾಮ ಎರಡೂ ಒಂದೇ. ನೀವು ಯಾವುದನ್ನು ನಂಬುತ್ತೀರಿ ಅದು ಮುಖ್ಯ. ಹಾಗಾಗಿ ಯಾವ ಔಷಧ ತೆಗೆದುಕೊಳ್ಳಬೇಕೆಂಬ ಗೊಂದಲ ಬೇಡ. ನೀವು ನಂಬುವ ಯಾವ ಪದ್ಧತಿಯ ಔಷಧವನ್ನಾದರೂ ಮಾಡಬಹುದು.
9. ಲಸಿಕೆ ಬೇಕು ಎನಿಸಿದರೆ ತಕೊಳ್ಳಿ
ಈಗ ಲಸಿಕೆ ಬಂದಿದ್ದು, ನಿಮಗೆ ಬೇಕು ಎಂದೆನಿಸಿದರೆ ತೆಗೆದುಕೊಳ್ಳಿ. ವ್ಯಾಕ್ಸಿನ್ ತೆಗೆದುಕೊಂಡಾಕ್ಷಣ ಕೊರೋನಾ ಬರುವುದಿಲ್ಲ ಎನ್ನಲು ಸಾಧ್ಯವಿಲ್ಲ. ಲಸಿಕೆ ತೆಗೆದುಕೊಂಡಾಗಲೂ ಬರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಹಾಗಾಗಿ ನಾನು ಲಸಿಕೆ ತೆಗೆದುಕೊಂಡಿಲ್ಲ, ನಿಮಗೆ ಲಸಿಕೆ ತೆಗೆದುಕೊಳ್ಳಬೇಕು ಎನಿಸಿದರೆ ತೆಗೆದುಕೊಳ್ಳಿ. ಬೇಡ ಎನಿಸಿದರೆ ನಷ್ಟವಿಲ್ಲ.
10. ಲಾಕ್ಡೌನ್ ಪ್ರಯೋಜನವಿಲ್ಲ
ಕೊರೋನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಜನರಲ್ಲಿ ಸಾಮಾಜಿಕ ಅಂತರ, ಮಾಸ್ಕ್, ಸ್ವಚ್ಛತೆಯ ಬಗ್ಗೆ ಎಚ್ಚರಿಕೆಯನ್ನು ಮೂಡಿಸಿದರೆ ಮಾತ್ರ ಕೋರೋನಾ ನಿಯಂತ್ರಿಸಬಹುದು. ಲಾಕ್ಡೌನ್ ಮಾಡಿದರೆ ಯಾವುದೇ ಪ್ರಯೋಜನವಿಲ್ಲ. ಒಂದಷ್ಟುಆರ್ಥಿಕ ಹೊಡೆತವಷ್ಟೇ ಹೊರತು ಅದರಿಂದ ಬೇರೆ ಏನೂ ಪ್ರಯೋಜನಗಳಿಲ್ಲ.