ಹಾವೇರಿ(ಅ.18): ನಗರದಲ್ಲಿ ಜನಸಾಮಾನ್ಯರಿಗೆ ಸುಸಜ್ಜಿತ ಬಡಾವಣೆ ನಿರ್ಮಿಸಿ ವಾಸಕ್ಕೆ ಯೋಗ್ಯವಾದ ಪರಿಸರ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕರ್ನಾಟಕ ಗೃಹ ಮಂಡಳಿಯಿಂದ ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ಅಭಿವೃದ್ಧಿಪಡಿಸುತ್ತಿರುವ ಮೊದಲ ಬಡಾವಣೆ ಅಭಿವೃದ್ಧಿ ಕಾರ್ಯ ಭರದಿಂದ ಸಾಗಿದ್ದು, 2-3 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರಿಗೆ ನಿವೇಶನ ಹಂಚಿಕೆ ಮಾಡುವ ಸಾಧ್ಯತೆ ಇದೆ.

ನಗರದ ಜಿಲ್ಲಾಡಳಿತ ಭವನ ಎದುರಿಗಿನ 99.27 ಎಕರೆ ವಿಶಾಲ ಪ್ರದೇಶದಲ್ಲಿ ಕರ್ನಾಟಕ ಗೃಹ ಮಂಡಳಿ ಬಡಾವಣೆ ಅಭಿವೃದ್ಧಿಪಡಿಸುತ್ತಿದೆ. ಸುಸಜ್ಜಿತ ರಸ್ತೆಗಳು, ಒಳಚರಂಡಿ, ಕಾಲುವೆ, ಉದ್ಯಾನವನ, ಕುಡಿಯುವ ನೀರಿನ ಪೈಪ್‌ಲೈನ್‌ ಹೀಗೆ ಎಲ್ಲ ಮೂಲಭೂತ ಸೌಕರ್ಯಗಳೊಂದಿಗೆ ಬಡಾವಣೆಯನ್ನು ಸುಸಜ್ಜಿತಗೊಳಿಸುವ ಕಾರ್ಯ ವೇಗದಿಂದ ಸಾಗಿದೆ. ನೂರಾರು ಕಾರ್ಮಿಕರು, ಹತ್ತಾರು ಜೆಸಿಬಿಗಳು ನಿರಂತವಾಗಿ ಕೆಲಸ ಮುಂದುವರಿಸಿವೆ.

1500 ನಿವೇಶನ:

ಕರ್ನಾಟಕ ಗೃಹ ಮಂಡಳಿಯು ಆರ್ಥಿಕವಾಗಿ ಹಿಂದುಳಿದ ವರ್ಗ(ಇಡಬ್ಲ್ಯುಎಸ್‌), ಕಡಿಮೆ ಆದಾಯ ವರ್ಗ(ಎಲ್‌ಐಜಿ), ಮಧ್ಯಮ ಆದಾಯ ವರ್ಗ (ಎಂಐಜಿ), ಹೆಚ್ಚು ಆದಾಯ ವರ್ಗ (ಎಚ್‌ಐಜಿ) ಹಾಗೂ ಅತಿಹೆಚ್ಚು ಆದಾಯ ವರ್ಗ (ಎಲ್‌ಐಜಿ-2) ಹೀಗೆ ಐದು ಶ್ರೇಣಿಯಲ್ಲಿ ಕ್ರಮವಾಗಿ 20ಗಿ30, 30ಗಿ40, 30ಗಿ50, 40ಗಿ60 ಅಳತೆಯ ನಿವೇಶನ ನೀಡಲು ಯೋಜನೆ ರೂಪಿಸಿಕೊಂಡಿದೆ. ಬಡಾವಣೆ ನಿರ್ಮಿಸುತ್ತಿರುವ ಒಟ್ಟು 99.27 ಎಕರೆ ಪ್ರದೇಶದಲ್ಲಿ 1500 ನಿವೇಶನಗಳು ನಿರ್ಮಾಣ ಮಾಡಲಾಗುತ್ತಿದೆ.

ಚದರ ಅಡಿಗೆ 400:

ಸಾರ್ವಜನಿಕರಿಂದ ನಿವೇಶನ ಬಯಸಿ 1200 ಅರ್ಜಿಗಳು ಬಂದಿದ್ದು ಒಟ್ಟು 28 ಕೋಟಿಗಳಲ್ಲಿ ಬಡಾವಣೆ ಅಭಿವೃದ್ಧಿಪಡಿಸಲಾಗುತ್ತಿದೆ. ಬಡಾವಣೆ ನಿರ್ಮಾಣಕ್ಕಾಗಿ 2002ರಲ್ಲಿಯೇ ಸಾರ್ವಜನಿಕರಿಂದ ಅರ್ಜಿ ಕರೆದು ನೋಂದಣಿ ಶುಲ್ಕ ಸ್ವೀಕರಿಸಲಾಗಿತ್ತು. ಬಳಿಕ 2017ರಲ್ಲಿ ಪುನಃ ಹಳೆ ಹಾಗೂ ಹೊಸ ಬೇಡಿಕೆಯ ಅರ್ಜಿ ಕರೆದು ನೋಂದಣಿ ಹಾಗೂ ಆರಂಭಿಕ ಶುಲ್ಕ ಸ್ವೀಕರಿಸಲಾಗಿದ್ದು ಈಗ ಪ್ರಸಕ್ತ ವರ್ಷ ಏಪ್ರಿಲ್‌ನಲ್ಲಿ ಅಭಿವೃದ್ಧಿ ಕಾರ್ಯ ಆರಂಭಿಸಲಾಗಿದೆ. ಚದರ ಅಡಿಗೆ 400 ವರೆಗೂ ದರ ನಿಗದಿಪಡಿಸಲಾಗಿದ್ದು ಆರ್ಥಿಕವಾಗಿ ಹಿಂದುಳಿದವರಿಗೆ ಶೇ. 5ರಷ್ಟು ಮೀಸಲಿಡಲಾಗುತ್ತಿದೆ. ಮೊದಲು ಅರ್ಜಿ ಸಲ್ಲಿಸಿದವರಿಗೆ ನಿವೇಶನ ಹಂಚಿಕೆ ಮಾಡಿ ಉಳಿದ ನಿವೇಶನಗಳಿಗೆ ಪುನಃ ಅರ್ಜಿ ಕರೆಯಲು ಕರ್ನಾಟಕ ಗೃಹ ಮಂಡಳಿ ಯೋಜನೆ ಹಾಕಿಕೊಂಡಿದೆ.

ಕಾಮಗಾರಿಗೆ ವೇಗ:

ಸರ್ಕಾರದಿಂದ ಬಡಾವಣೆ ಅಭಿವೃದ್ಧಿಗೆ ಅನುಮೋದನೆ ದೊರೆತ 18 ತಿಂಗಳಲ್ಲಿ ಬಡಾವಣೆ ಅಭಿವೃದ್ಧಿ ಪಡಿಸಬೇಕಿದೆ. ಬಡಾವಣೆ ಅಭಿವೃದ್ಧಿಗೆ 10 ತಿಂಗಳ ಹಿಂದೆಯಷ್ಟೇ ಅನುಮೋದನೆ ದೊರಕಿದೆ. ಬಡಾವಣೆಯಲ್ಲಿ ಸುಸಜ್ಜಿತ ರಸ್ತೆಗಳು, ಒಳಚರಂಡಿ, ಕಾಲುವೆ ಕಾಮಗಾರಿಗಳು ನಡೆದಿದ್ದು, ಈಗ ನಡೆಯುತ್ತಿರುವ ಕಾಮಗಾರಿ ವೇಗ ಗಮನಿಸಿದರೆ ನಿಗದಿತ ಅವಧಿಯೊಳಗೇ ಬಡಾವಣೆ ಅಭಿವೃದ್ಧಿ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆ ಹೊಂದಲಾಗಿದೆ. ಕಳೆದ ಎರಡು ದಶಕದ ಜಿಲ್ಲೆಯ ಸಾರ್ವಜನಿಕರ ಬೇಡಿಕೆಯಾಗಿದ್ದ ನಿವೇಶನ ಹೊಂದುವ ಕನಸು ಶೀಘ್ರ ಸಾಕಾರಗೊಳ್ಳಲಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಬಗ್ಗೆ ಮಾತನಾಡಿದ ಕರ್ನಾಟಕ ಗೃಹ ಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಯರ್‌ ಸೈಯದ್‌ ಅವರು, ಕರ್ನಾಟಕ ಗೃಹ ಮಂಡಳಿಯಿಂದ ಜಿಲ್ಲಾ ಕೇಂದ್ರದಲ್ಲಿ ಅಭಿವೃದ್ಧಿ ಪಡಿಸುತ್ತಿರುವ ಬಡಾವಣೆ ಕಾಮಗಾರಿ ನಿಗದಿತ ಅವಧಿಗಿಂತ 3​4 ತಿಂಗಳುಗಳ ಮೊದಲೇ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಒಟ್ಟು 28 ಕೋಟಿಗಳಲ್ಲಿ ಬಡಾವಣೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಇನ್ನು 2-3 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದ್ದು, ಬಳಿಕ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಹೇಳಿದ್ದಾರೆ.