ಹಾನಗಲ್ಲ[ಅ.16]: ಚುನಾವಣಾ ಸಂದರ್ಭದಲ್ಲಿ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದರೆ ಸಮಗ್ರ ನೀರಾವರಿ ಕಲ್ಪಿಸಲಾಗುವುದು ಎಂದು ಘೋಷಿಸಿದಂತೆ ಇಂದು 504 ಕೋಟಿಗಳಲ್ಲಿ ತಾಲೂಕಿನ ಬಾಳಂಬೀಡ ಹಾಗೂ ಶಿರಗೋಡ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದ್ದಾರೆ. 

ತಾಲೂಕಿನ ನರೇಗಲ್‌ ಗ್ರಾಮದಲ್ಲಿ 12 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಅಂಗನವಾಡಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಅಭಿವೃದ್ಧಿಯಾಗಬೇಕಾದರೆ ಶಿಕ್ಷಣ, ನೀರಾವರಿ ಮತ್ತು ವಿದ್ಯುತ್‌ ಸೇರಿದಂತೆ ಮೂಲಭೂತ ಸೌಕರ್ಯ ಒಗಿಸುವುದು ಮುಖ್ಯ. ಯಡಿಯೂಪ್ಪ ಸರ್ಕಾರ ಪ್ರತಿಯೊಂದಕ್ಕೂ ಆದ್ಯತೆ ನೀಡಿ ಜನಪರ ಆಡಳಿತ ನೀಡುತ್ತದೆ ಎಂದು ತಿಳಿಸಿದ್ದಾರೆ.

ಶೀಘ್ರದಲ್ಲಿ ಕೆರೆ ತುಂಬಿಸುವ ಕಾರ್ಯ

ರೈತರ ಬಹುದಿನಗಳ ಬೇಡಿಕೆಯಾಗಿದ್ದ ಬಾಳಂಬೀಡ ಹಾಗೂ ಶಿರಗೋಡ ಏತ ನೀರಾವರಿ ಕಳೆದ ಒಂದು ತಿಂಗಳಿನಿಂದ ಶಾಸಕ ಉದಾಸಿಯವರ ಒತ್ತಾಸೆಯಿಂದ ಸಾಕಾರಗೊಂಡಿದೆ. 504 ಕೋಟಿ ವೆಚ್ಚದಲ್ಲಿ ಸುಮಾರು 320 ಕ್ಕೂ ಅಧಿಕ ಕೆರೆಗಳನ್ನು ತುಂಬಿಸುವ ಕೆಲಸ ಶೀಘ್ರದಲ್ಲಿ ಆರಂಭಗೊಳ್ಳಲಿದೆ. ಇದರೊಂದಿಗೆ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಆಣೂರು ಕೆರೆ ತುಂಬಿಸಲು 386 ಕೋಟಿ, ಹೆಗ್ಗೇರಿ ಕೆರೆಗೆ 80 ಕೋಟಿ, ಶಿರಹಟ್ಟಿಗೆ 17 ಕೋಟಿ ಸೇರಿದಂತೆ ವಿವಿಧ ಯೋಜನೆಗಳಿಗೆ 1000 ಕೋಟಿ ಮಂಜೂರಾಗಿದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇತ್ತೀಚೆಗೆ ರಾಜ್ಯಾದ್ಯಂತ ಸುರಿದ ಅತಿವೃಷ್ಠಿಯಿಂದಾಗಿ ತಾಲೂಕಿನ 2124 ಮನೆಗಳು ಹಾನಿಗೊಳಗಾಗಿದ್ದು, ಸಧ್ಯ 140 ಮನೆಗಳಿಗೆ ಹಣ ಬಿಡುಗಡೆಯಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಮನೆ ನಿರ್ಮಾಣಕ್ಕೆ ಹಣ ಬಿಡುಗಡೆಯಾಗಲಿದೆ. ಹಾಳಾದ ರಸ್ತೆಗಳ ಅಭಿವೃದ್ಧಿಗೆ 5 ಕೋಟಿ ಬಿಡುಗಡೆಯಾಗಿದ್ದು, ಕಾಮಗಾರಿ ಆರಂಭಗೊಂಡಿವೆ. ಅತಿ ಹೆಚ್ಚು ಹಾನಿಗೊಳಗಾದ ತಾಲೂಕಿನ 9 ಗ್ರಾಪಂಗಳಿಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಬಿವೃದ್ಧಿಗೊಳಿಸಲು ಅವಕಾಶವಿದೆ ಎಂದು ಹೇಳಿದ್ದಾರೆ. 

ನರೇಗಲ್‌ನಲ್ಲಿ ಮೂರು ಶಾಲಾ ಕೊಠಡಿಗಳನ್ನು ತೆರವುಗೊಳಿಸಲಾಗಿದ್ದು, ತಾಂತ್ರಿಕ ದೋಷದಿಂದ ಕೊಠಡಿಗಳ ನಿರ್ಮಾಣ ಆಗಿರಲಿಲ್ಲ. ಈಗ ಅವು ಕೂಡಾ ಮಂಜೂರಾಗಿದ್ದು, ಒಂದೇ ಸ್ಥಳದಲ್ಲಿ ಕೊಠಡಿಗಳ ನಿರ್ಮಾಣ ಕಾರ್ಯ ಆರಂಭಿಸಲಾಗುವುದು. ಇದರೊಂದಿಗೆ ಹೆಚ್ಚುವರಿಯಾಗಿ ಇನ್ನೂ 2 ಕೊಠಡಿಗಳನ್ನು ನಿರ್ಮಿಸಲು ಮಂಜೂರಾಗಿವೆ. ಇದರೊಂದಿಗೆ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದರು.

ಜಿಪಂ ಸದಸ್ಯ ಮಾಲತೇಶ ಸೊಪ್ಪಿನ ಮಾತನಾಡಿ, ಶಾಸಕ ಸಿ.ಎಂ. ಉದಾಸಿ ಹಾಗೂ ಸಂಸದ ಶಿವಕುಮಾರ ಉದಾಸಿಯವರ ನಿರಂತರ ಪ್ರಯತ್ನದಿಂದ ಹಾನಗಲ್ಲಿಗೆ ಬಾಳಂಬೀಡ ಏತನೀರಾವರಿ ಸೇರಿದಂತೆ ವಿವಿಧ ನೀರಾವರಿ ಯೋಜನೆಗಳಿಗೆ ಸಾವಿರಾರು ಕೋಟಿ ರುಪಾಯಿ ಹಣ ಹರಿದು ಬರಲಿದೆ. ಇತ್ತೀಚೆಗೆ ಸಂಭವಿಸಿದ ಅತವೃಷ್ಠಿಯಿಂದಾಗಿ ಮನೆ, ಬೆಳೆ ಹಾನಿಗೆ ಹಾನಗಲ್ಲ ತಾಲೂಕಿಗೆ ಅತಿ ಹೆಚ್ಚು ಅನುದಾನ ಬಂದಿದೆ. ರೈತ ಸಮುದಾಯ ಹಾಗೂ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ಎಂದರು.

ಗ್ರಾಪಂ ಅಧ್ಯಕ್ಷ ಹುಸೇನಮಿಯಾ ಸವಣೂರ, ಉಪಾಧ್ಯಕ್ಷ ಸುಲೇಮಾನ ಅವಲ್ಯಾನವರ, ತಾಪಂ ಸದಸ್ಯೆ ಚನ್ನಬಸವ್ವ ಶೀಲವಂತರ, ಬಿಜೆಪಿ ತಾಲೂಕು ಅಧ್ಯಕ್ಷ ನಿಂಗಪ್ಪ ಗೊಬ್ಬೇರ, ಕಾರ್ಯದರ್ಶಿ ಶಿವಲಿಂಗಪ್ಪ ತಲ್ಲೂರ, ಮುಖಂಡರಾದ ಕಲ್ಯಾಣಕುಮಾರ ಶೆಟ್ಟರ, ಪ್ರದೀಪ ಶೇಷಗಿರಿ, ಚಂದ್ರಪ್ಪ ಹರಿಜನ, ಮಾಲತೇಶ ಗಂಟೇರ ಮೊದಲಾದವರು ಇದ್ದರು. ಮಲ್ಲಿಕಾರ್ಜುನ ಅಗಡಿ ನಿರೂಪಿಸಿದರು.