ಸಂತಸದ ಸುದ್ದಿ: ರೈತರ ಖಾತೆಗೆ ಜಮೆ ಆಗಲಿದೆ ಹಣ!
ಕಳೆದ ಸಾಲಿನ ಹಿಂಗಾರು ಹಂಗಾಮಿನಲ್ಲಿ ಆದ ಬೆಳೆ ನಷ್ಟಕ್ಕೆ ಪರಿಹಾರ ಬಿಡುಗಡೆ| ಜಿಲ್ಲೆಯ 62,892 ರೈತರಿಗೆ 32.42 ಕೋಟಿ ಬಿಡುಗಡೆ| ಕೆಲವೇ ದಿನಗಳಲ್ಲಿ ರೈತರ ಖಾತೆಗೆ ಜಮಾ| ತೀವ್ರ ಮಳೆ ಅಭಾವದಿಂದ 2018ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಇಡಿ ಜಿಲ್ಲೆಯನ್ನೇ ಬರಪೀಡಿತ ಎಂದು ಸರ್ಕಾರ ಘೋಷಣೆ ಮಾಡಿತ್ತು| ಜಿಲ್ಲೆಯ 7 ತಾಲೂಕುಗಳಲ್ಲಿ 46,351 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾನಿಯಾಗಿತ್ತು|
ಹಾವೇರಿ[ಅ.16]: ಪ್ರವಾಹದಲ್ಲಿ ಕಂಗೆಟ್ಟಿರುವ ಜಿಲ್ಲೆಯ ರೈತರಿಗೆ ಕಳೆದ ಸಾಲಿನ ಹಿಂಗಾರು ಹಂಗಾಮಿನಲ್ಲಿ ಆದ ಬೆಳೆ ನಷ್ಟಕ್ಕೆ ಪರಿಹಾರ ಬಿಡುಗಡೆಯಾಗಿದೆ. ಜಿಲ್ಲೆಯ 62,892 ರೈತರಿಗೆ 32.42 ಕೋಟಿ ಬಿಡುಗಡೆಯಾಗಿದ್ದು, ಕೆಲವೇ ದಿನಗಳಲ್ಲಿ ರೈತರ ಖಾತೆಗೆ ಜಮಾ ಆಗಲಿದೆ.
ತೀವ್ರ ಮಳೆ ಅಭಾವದಿಂದ 2018ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಇಡಿ ಜಿಲ್ಲೆಯನ್ನೇ ಬರಪೀಡಿತ ಎಂದು ಸರ್ಕಾರ ಘೋಷಣೆ ಮಾಡಿತ್ತು. ಜಿಲ್ಲೆಯ 7 ತಾಲೂಕುಗಳಲ್ಲಿ 46,351 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾನಿಯಾಗಿತ್ತು. ಈ ಬಾರಿ 2 ತಿಂಗಳ ಹಿಂದೆ ನೆರೆ ಹಾವಳಿಯಿಂದ ರೈತರು ಮನೆ, ಮಠ ಕಳೆದುಕೊಂಡಿದ್ದು, 1.30 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಸಂಪೂರ್ಣ ಹಾಳಾಗಿದೆ. ಕಳೆದ ವರ್ಷದ ಇನ್ಪುಟ್ ಸಬ್ಸಿಡಿಯೇ ಇನ್ನೂ ಬಾರದ್ದರಿಂದ ಈ ಸಲದ ನೆರೆ ಹಾವಳಿಯಿಂದಾದ ಬೆಳೆ ನಷ್ಟಕ್ಕೆ ಯಾವಾಗ ಪರಿಹಾರ ಸಿಗುತ್ತೋ ಎಂದು ರೈತರು ಕಾಯುವಂತಾಗಿತ್ತು. ರೈತರ ಆಕ್ರೋಶಕ್ಕೂ ಕಾರಣವಾಗಿತ್ತು. ಅಂತೂ ಪ್ರತಿ ಹೆಕ್ಟೇರ್‌ಗೆ 6,800 ಗಳಂತೆ 32.74 ಕೋಟಿ ಬಿಡುಗಡೆಯಾದಂತಾಗಿದೆ.
ಬೆಳೆಹಾನಿ ಪರಿಹಾರಕ್ಕೆ ಒತ್ತಾಯಿಸಿ ರೈತರು ಅನೇಕ ಬಾರಿ ಹೋರಾಟವನ್ನು ನಡೆಸಿದ್ದರು. ಇತ್ತೀಚೆಗೆ ಕೇಂದ್ರ ಸರ್ಕಾರ ಹಿಂಗಾರು ಹಂಗಾಮಿನ ಬೆಳೆ ನಷ್ಟ ಪರಿಹಾರವನ್ನು ಬಿಡುಗಡೆಗೊಳಿಸಿದ್ದು, ಅದು ಈಗ ಜಿಲ್ಲೆಗೂ ಬಂದಿದೆ. ಕಳೆದ ವರ್ಷದ ಹಿಂಗಾರು ಹಂಗಾಮಿನಲ್ಲಿ ಬಿತ್ತನೆಯಾಗಿದ್ದ 60,819 ಹೆಕ್ಟೇರ್ ಪ್ರದೇಶದಲ್ಲಿ 46,351 ಹೆಕ್ಟೇರ್‌ನಲ್ಲಿ ಬೆಳೆದಿದ್ದ ಶೇ. 33 ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಬೆಳೆ ನಷ್ಟವಾಗಿತ್ತು. ಕೇಂದ್ರ ಸರ್ಕಾರದ ಎನ್‌ಡಿಆರ್‌ಎಫ್ ನಿಯಮದಂತೆ ಪರಿಹಾರ ಹಂಚಿಕೆಯಾಗಿದೆ.
ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಒಟ್ಟು 4,335 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಬಿತ್ತನೆಯಾಗಿತ್ತು. ಅದರಲ್ಲಿ ರಾಣಿಬೆನ್ನೂರು, ಶಿಗ್ಗಾಂವಿ, ಹಾನಗಲ್ಲ ತಾಲೂಕಿನಲ್ಲಿ ಒಟ್ಟು 700ಹೆಕ್ಟೇರ್ ಪ್ರದೇಶದಲ್ಲಿನ ಅಂದಾಜು . 92 ಕೋಟಿ ಮೌಲ್ಯದ ತೋಟಗಾರಿಕೆ ಬೆಳೆ ಹಾನಿಯಾಗಿತ್ತು. ರಾಣಿಬೆನ್ನೂರು ತಾಲೂಕಿನಲ್ಲಿ ಅತಿಹೆಚ್ಚು 633.50ಹೆಕ್ಟೇರ್, ಶಿಗ್ಗಾಂವಿಯಲ್ಲಿ 40.69ಹೆಕ್ಟೇರ್, ಹಾನಗಲ್ಲನಲ್ಲಿ 25.94ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿತ್ತು. ಇದಕ್ಕೂ ಪರಿಹಾರ ಬಿಡುಗಡೆಯಾಗಬೇಕಿದೆ.
ಈ ಬಗ್ಗೆ ಮಾಹಿತಿ ನೀಡಿದ ಜಂಟಿ ನಿರ್ದೇಶಕ ಬಿ. ಮಂಜುನಾಥ ಅವರು, 2018ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಸಂಪೂರ್ಣ ಜಿಲ್ಲೆಯನ್ನು ಬರಪೀಡಿತವೆಂದು ಸರ್ಕಾರ ಘೋಷಿಸಿತ್ತು. ಅದರಂತೆ ಬೆಳೆನಷ್ಟಕ್ಕೆ ಇದೀಗ ಜಿಲ್ಲೆಗೆ . 32.42ಕೋಟಿ ಪರಿಹಾರ ಬಿಡುಗಡೆಯಾಗಿದೆ. ಕೂಡಲೇ ರೈತರ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದು ಹೇಳಿದ್ದಾರೆ.
ತಾಲೂಕು ಬೆಳೆಹಾನಿ ಒಟ್ಟು ರೈತರು ಬಿಡುಗಡೆಯಾದ ಪರಿಹಾರ
* ಹಾವೇರಿ 7,464 15,252 . 5.07 ಕೋಟಿ
* ರಾಣಿಬೆನ್ನೂರು 11,679 12,564 . 8.50 ಕೋಟಿ
* ಹಿರೇಕೆರೂರ 6,895 11,637 . 4.68 ಕೋಟಿ
* ಬ್ಯಾಡಗಿ 4,436 8,724 . 3.01 ಕೋಟಿ
* ಸವಣೂರ 9,196 6,897 . 6.25 ಕೋಟಿ
* ಶಿಗ್ಗಾಂವಿ 3,124 3,583 . 2.47 ಕೋಟಿ
* ಹಾನಗಲ್ಲ 3,539 4,235 . 2.40 ಕೋಟಿ
ಒಟ್ಟು 46,351 62,892 . 32.42 ಕೋಟಿ