ಪರಿಶಿಷ್ಟ ಪಂಗಡಕ್ಕೆ ಶೇ.7.5 ರಷ್ಟು ಮೀಸಲಾತಿಗೆ ಪ್ರಯತ್ನ: ಸಚಿವ ಬೊಮ್ಮಾಯಿ
ಪರಿಶಿಷ್ಟ ಪಂಗಡಕ್ಕೆ ಶೇ. 7.5 ರಷ್ಟು ಮಿಸಲಾತಿ ಕುರಿತು ರಾಜ್ಯದಲ್ಲಿ ಸಮಿತಿ ರಚಿಸಿ ಶೀಘ್ರವೇ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸಲಾಗುವುದು ಎಂದ ಸಚಿವ ಬಸವರಾಜ ಬೊಮ್ಮಾಯಿ| ನಗರದ ಕೆಇಬಿ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಉದ್ಘಾಟಿಸಿ, ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು| ವಾಲ್ಮೀಕಿ ಸಮಾಜವು ಹಿಂದುಳಿದ ಸಮಾಜವಾಗಿದ್ದು ಸಮಾಜದ ಏಳ್ಗೆಗಾಗಿ ಮೊದಲು ಶಿಕ್ಷಣ ಉದ್ಯೋಗ, ರಾಜಕೀಯ ಸ್ಥಾನ ಮಾನ ಸಿಗಬೇಕಾಗಿದೆ| ಇದಕ್ಕೆ ಸಂಘಟಿತ ಹೋರಾಟ ಅವಶ್ಯಕವಾಗಿದೆ| ನಗರದಲ್ಲಿ ನನೆಗುದಿಗೆ ಬಿದ್ದಿರುವ ವಾಲ್ಮೀಕಿ ಸಭಾಭವನ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲಾಗುವುದು|
ಹಾವೇರಿ(ಅ.14): ಪರಿಶಿಷ್ಟ ಪಂಗಡಕ್ಕೆ ಶೇ. 7.5 ರಷ್ಟು ಮಿಸಲಾತಿ ಕುರಿತು ರಾಜ್ಯದಲ್ಲಿ ಸಮಿತಿ ರಚಿಸಿ ಶೀಘ್ರವೇ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸಲಾಗುವುದು ಎಂದು ಗೃಹ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಕೆಇಬಿ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಉದ್ಘಾಟಿಸಿ, ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ವಾಲ್ಮೀಕಿ ಸಮಾಜವು ಹಿಂದುಳಿದ ಸಮಾಜವಾಗಿದ್ದು ಸಮಾಜದ ಏಳ್ಗೆಗಾಗಿ ಮೊದಲು ಶಿಕ್ಷಣ ಉದ್ಯೋಗ, ರಾಜಕೀಯ ಸ್ಥಾನ ಮಾನ ಸಿಗಬೇಕಾಗಿದೆ. ಇದಕ್ಕೆ ಸಂಘಟಿತ ಹೋರಾಟ ಅವಶ್ಯಕವಾಗಿದೆ. ನಗರದಲ್ಲಿ ನನೆಗುದಿಗೆ ಬಿದ್ದಿರುವ ವಾಲ್ಮೀಕಿ ಸಭಾಭವನ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲಾಗುವುದು. ಜಿಲ್ಲೆಗೆ ವೈದ್ಯಕೀಯ ಕಾಲೇಜು ಮಂಜೂರಾಗಿದ್ದು, ಶೀಘ್ರದಲ್ಲಿಯೇ ಕಟ್ಟಡ ಕಾಮಗಾರಿಗೆ ಶೀಘ್ರವೇ ಸಿಎಂ ಚಾಲನೆ ನೀಡಲಿದ್ದಾರೆ. ಸಮಾಜದ ಬದಲಾವಣೆಯ ಹರಿಕಾರ ಎಲ್.ಜಿ. ಹಾವನೂರು ಸ್ಮಾರಕ ನಿವೇಶನ ಖರೀದಿಗೆ ಅನುದಾನವನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರ್ಕಾರದಿಂದಲೇ ಆಚರಣೆ ಮಾಡಬೇಕೆಂದು ಸಂಪುಟದಲ್ಲಿ ಪ್ರಸ್ತಾವನೆ ಸಲ್ಲಿಸಿದ್ದು ನನ್ನ ಸೌಭಾಗ್ಯವಾಗಿದೆ. ವಾಲ್ಮೀಕಿ ಪರಿವರ್ತನೆಯ ಹರಿಕಾರನಾಗಿದ್ದು ಕಠೋರ ಮನುಷ್ಯ ಕೂಡಾ ಪರಿವರ್ತನೆ ಆಗಬಹುದೆಂದು ಇತರರಿಗೆ ತಿಳಿಸಿದ ದಾರ್ಶನಿಕ. ತುಳಸಿ ರಾಮಾಯಣ ಸೇರಿದಂತೆ ಇನ್ನಿತರ ರಾಮಾಯಣಗಳಿಗೆ. ಆದರೆ ಮೂಲ ಕೃತಿಯಾದ ವಾಲ್ಮೀಕಿ ರಾಮಾಯಣದ ಆಧಾರದಿಂದಲೇ ಹಲವಾರು ಪ್ರಕಾರದ ರಾಮಾಯಣಗಳು ಹುಟ್ಟಿಕೊಂಡಿವೆ. ವಿವಿಧ 10 ಧಾರ್ಮಿಕ ಗ್ರಂಥಗಳಲ್ಲಿ ವಾಲ್ಮೀಕಿ ರಾಮಾಯಣ ಉನ್ನತ ಸ್ಥಾನದಲ್ಲಿದೆ. ಇದು ನಮ್ಮೆಲ್ಲರ ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದ್ದಾರೆ.
ವಾಲ್ಮೀಕಿಯವರು ರಾಮಾಯಣದಲ್ಲಿ ಬದುಕಿನ ಸಂಬಂಧಗಳಾದ ತಂದೆ-ಮಗ, ಗುರು-ಶಿಷ್ಯ, ಗಂಡ-ಹೆಂಡತಿ, ಸಹೋದರತ್ವ ಮುಂತಾದ ಸಂಬಂಧಗಳ ಮಹತ್ವವನ್ನು ತಿಳಿಸಿದ್ದಾರೆ. ಜಗತ್ತಿನ ಕಲ್ಯಾಣಕ್ಕೆ ವಾಲ್ಮೀಕಿಯವರು ನಾಂದಿ ಹಾಡಿದ್ದಾರೆ. ವಾಲ್ಮೀಕಿ ಸಮುದಾಯಕ್ಕೆ ಸೇರಿದವರೆಲ್ಲರೂ ಶ್ರೇಷ್ಠರು. ವಿಜಯನಗರ ಸಾಮ್ರಾಜ್ಯವನ್ನು ಸಂರಕ್ಷಿಸಿದವರು ವಾಲ್ಮೀಕಿ ಜನಾಂಗದವರು. ಕೋಟೆ ನಾಡಿನ ಒನಕೆ ಓಬವ್ವ, ಈ ಸಮುದಾಯದಿಂದ ಬಂದ ದಿಟ್ಟಮಹಿಳೆಯಾಗಿದ್ದಾಳೆ. ಸ್ವಾತಂತ್ರ್ಯ ಹೋರಾಟದಲ್ಲಿ ಹೋರಾಡಿದ ಸಿಂಧೂರ ಲಕ್ಷ್ಮಣರನ್ನು ಸಹ ಮರೆಯಬಾರದು. ಏಕಲವ್ಯ ದ್ರೋಣಾಚಾರ್ಯರ ಮೂರ್ತಿಯನ್ನು ರೂಪಿಸಿ ವಿದ್ಯೆ ಕಲಿತು ಗುರುದಕ್ಷಿಣೆಯಾಗಿ ತನ್ನ ಹೆಬ್ಬರಳನ್ನೆ ನೀಡಿದ ಶ್ರೇಷ್ಠ ಶಿಷ್ಯ, ಇವೆಲ್ಲವೂ ವಾಲ್ಮೀಕಿಯ ಪರಂಪರೆಗಳಾಗಿವೆ. ಈ ಪರಂಪರೆಯನ್ನು ನಾವು ಉಳಿಸಿ-ಬೆಳೆಸಿಕೊಂಡು ಹೋಗಬೇಕು. ಅವರ ನೀತಿಯನ್ನು ಅನುಸರಿಸಬೇಕು ಎಂದರು.
ಇದು 21 ನೇ ಶತಮಾನ, ಖಡ್ಗ ಹಿಡಿದು ಯುದ್ಧ ಮಾಡುವುದಲ್ಲ. ಇದು ಜ್ಞಾನದ ಯುಗವಾಗಿದ್ದು ಜ್ಞಾನವಿದ್ದವರು ಜಗತ್ತನ್ನು ಆಳುತ್ತಿದ್ದಾರೆ. ಜ್ಞಾನ, ವಿದ್ಯೆಗೆ ಮಹತ್ವ ನೀಡಿ ಮಕ್ಕಳನ್ನು ಎಲ್ಲ ಕ್ಷೇತ್ರಗಳಲ್ಲಿಯೂ ಮುಂದೆ ತರುವುದು ಪಾಲಕರ ಹಾಗೂ ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಗ್ರಾಮೀಣ ಪ್ರದೇಶದಲ್ಲಿನ ಎಸ್.ಟಿ. ಸಮುದಾಯ ಮಕ್ಕಳನ್ನು ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ಸಿದ್ಧಪಡಿಸಬೇಕು. ಶಿಕ್ಷಣ, ಉದ್ಯೋಗ, ರಾಜಕೀಯ ಕ್ಷೇತ್ರ ಇವುಗಳನ್ನು ಪಡೆಯಲು ಸಮುದಾಯವು ಸಂಘಟಿತ ಪ್ರಯತ್ನವನ್ನು ಮಾಡಬೇಕು. ಕೈಗಾರಿಕೆ, ಉದ್ಯೋಗ ಸೃಷ್ಟಿ, ಶಿಕ್ಷಣ, ಎಲ್ಲ ಕ್ಷೇತ್ರಗಳಲ್ಲಿ ಎಸ್.ಟಿ. ಸಮುದಾಯ ಮುಂದಿರಬೇಕು. ಈ ನಿಟ್ಟಿನಲ್ಲಿ ಮಕ್ಕಳಿಗೆ ತರಬೇತಿಯನ್ನು ನೀಡಿದರೆ ಅವರು ಬೆಳೆಯುತ್ತಾರೆ. ವಾಲ್ಮೀಕಿಯವರೂ ಎಲ್ಲರಿಗೂ ಸ್ಫೂರ್ತಿಸೆಲೆಯಾಗಿದ್ದಾರೆ, ಅವರು ಸೂರ್ಯ-ಚಂದ್ರ ಇರುವವರೆಗೂ ಬೆಳಗಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ನೆಹರು ಓಲೇಕಾರ ಮಾತನಾಡಿ, ಈ ಹಿಂದೆ ವಾಲ್ಮೀಕಿ ಭವನ ಕಟ್ಟಡಕ್ಕೆ ನಿವೇಶನ ನೀಡಲಾಗಿತ್ತು. ಈಗ ಕಟ್ಟಡ ಕಾಮಗಾರಿಗೆ ಅಗತ್ಯವಾದ ಅನುದಾನ ಮಂಜೂರಾತಿಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳಲಾಗುವುದು. ಮುಂದಿನ ವರ್ಷದ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ವಾಲ್ಮೀಕಿ ಭವನದಲ್ಲಿ ಆಚರಿಸೋಣ ಎಂದು ಹೇಳಿದರು.