ಭವಾನಿ ಅಕ್ಕಂಗೆ ಸಿಗುತ್ತಾ ಟಿಕೆಟ್: ಗೌಡರ ಕುಟುಂಬಕ್ಕೆ ಪ್ರತಿಷ್ಠೆಯ ವಿಷಯವಾದ ಪ್ರೀತಂಗೌಡ ಸವಾಲ್
ಈ ಬಾರಿ ಹಾಸನದಿಂದ ಜೆಡಿಎಸ್ ಅಭ್ಯರ್ಥಿ ಯಾರು ಎನ್ನುವ ವಿಚಾರ ಇಡೀ ರಾಜ್ಯದಲ್ಲಿ ಸದ್ದು ಮಾಡುತ್ತಿದೆ. ಟಿಕೆಟ್‌ಗಾಗಿ ಜೆಡಿಎಸ್‌ನೊಳಗೇ ಫೈಟ್ ನಡೆಯುತ್ತಿದೆ.
ಹಾಸನ: ಈ ಬಾರಿ ಹಾಸನದಿಂದ ಜೆಡಿಎಸ್ ಅಭ್ಯರ್ಥಿ ಯಾರು ಎನ್ನುವ ವಿಚಾರ ಇಡೀ ರಾಜ್ಯದಲ್ಲಿ ಸದ್ದು ಮಾಡುತ್ತಿದೆ. ಟಿಕೆಟ್‌ಗಾಗಿ ಜೆಡಿಎಸ್‌ನೊಳಗೇ ಫೈಟ್ ನಡೆಯುತ್ತಿದೆ. ಅದರಲ್ಲೂ ವಿಶೇಷವಾಗಿ ಈ ಕ್ಷೇತ್ರದ ಜೆಡಿಎಸ್ ಟಿಕೆಟ್ ವಿಚಾರ, ಜೆಡಿಎಸ್ ವರಿಷ್ಠರಾದ ಹೆಚ್.ಡಿ.ಕುಮಾರಸ್ವಾಮಿ (HD KumaraSwami) ಹಾಗೂ ಹೆಚ್.ಡಿ.ರೇವಣ್ಣ ಕುಟುಂಬದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಇಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಇದೆ. ಬಿಜೆಪಿಯಿಂದ ಹಾಲಿ ಶಾಸಕ ಪ್ರೀತಂ ಗೌಡರು (Pritam Gowda) ಟಿಕೆಟ್ ಆಕಾಂಕ್ಷಿ. ಜೆಡಿಎಸ್‌ನೊಳಗೆ ಮಾಜಿ ಶಾಸಕ ದಿವಂಗತ ಎಚ್.ಎಸ್.ಪ್ರಕಾಶ್ (HS Prakash) ಅವರ ಪುತ್ರ ಸ್ವರೂಪ್ (Swarup) ಹಾಗೂ ಎಚ್.ಡಿ.ರೇವಣ್ಣ ಪತ್ನಿ ಭವಾನಿ (Bhavani Revanna)ನಡುವೆ ಟಿಕೆಟ್‌ಗಾಗಿ ಭಾರೀ ಪೈಪೋಟಿ ಇದೆ. ಜೊತೆಗೆ, ಹಾಸನದಲ್ಲಿ ರೇವಣ್ಣ ನಿಂತರೆ, 50 ಸಾವಿರ ಮತಗಳ ಅಂತರದಿಂದ ಗೆಲ್ಲುವೆ ಎಂಬ ಪ್ರೀತಂ ಗೌಡರ ಸವಾಲು ಸ್ವೀಕರಿಸಲು ಸಿದ್ಧ, ಪಕ್ಷ ಟಿಕೆಟ್ ನೀಡಿದರೆ, ಹಾಸನದಿಂದ ಸ್ಪರ್ಧಿಸುತ್ತೇನೆ ಎಂದು ಸ್ವತಃ ರೇವಣ್ಣ ಹೇಳಿದ್ದಾರೆ. ಎಚ್.ಡಿ. ಕುಮಾರಸ್ವಾಮಿಯವರ ಒಲವು ಸ್ವರೂಪ್ ಮೇಲಿದೆ. ಆದರೆ, ರೇವಣ್ಣ ಕುಟುಂಬ, ಟಿಕೆಟ್ ನಮಗೇ ಬೇಕು ಎಂದು ಪಟ್ಟು ಹಿಡಿದಿದೆ. ಈ ಪೈಪೋಟಿ ಮೇರೆ ಮೀರಿ ಭವಾನಿ ಹಾಗೂ ಮಕ್ಕಳು, ಕುಮಾರಸ್ವಾಮಿ ವಿರುದ್ಧವೇ ಹದ್ದು ಮೀರಿ ಮಾತನಾಡುವ ಹಂತಕ್ಕೆ ಹೋಗಿತ್ತು. ಆದರೆ, ವರಿಷ್ಠರ ಸೂಚನೆ ಮೇರೆಗೆ ಈ ವಿವಾದ ತಣ್ಣಗಾಗಿದೆ. ಈಗಲೂ ಈ ಕ್ಷೇತ್ರದ ಟಿಕೆಟ್ ಯಾರಿಗೆ ಎನ್ನುವುದು ನಿಗೂಢವಾಗಿಯೇ ಇದೆ.
Assembly election: ಹಾಸನ.. ಅರಸೀಕೆರೆ.. ಗೌಡರ ಕೋಟೆಯಲ್ಲಿ ಇದೆಂಥಾ ಯುದ್ಧ..?
ಇನ್ನು, ಪ್ರೀತಂ ಗೌಡರೇ ಈ ಬಾರಿಯೂ ಅಭ್ಯರ್ಥಿಯಾಗಬೇಕು ಎನ್ನುವ ಆಕಾಂಕ್ಷೆಯಲ್ಲಿದ್ದಾರೆ. ಆದರೆ, ಇತ್ತೀಚಿನ ವರದಿಗಳ ಪ್ರಕಾರ ಪ್ರೀತಂ ಗೌಡರಿಗೆ ಹಾಸನದಿಂದ ಟಿಕೆಟ್ ಸಿಗುವುದು ಕಷ್ಟ. ಇದಕ್ಕೆ ಪೂರಕ ಎನ್ನುವಂತೆ ಕೆಲವೊಮ್ಮೆ ಸ್ವತ: ಪ್ರೀತಂ ಗೌಡರು ಕೂಡ ಪಕ್ಷ ನನ್ನನ್ನು ಹೊಳೆನರಸೀಪುರದಿಂದ ನಿಲ್ಲು ಎಂದರೂ ನಿಲ್ಲುತ್ತೇನೆ ಎನ್ನುತ್ತಿದ್ದಾರೆ.
ಕಾಂಗ್ರೆಸ್‌ನಲ್ಲಿ ಬಾಗೂರು ಮಂಜೇಗೌಡ, ಬನವಾಸೆ ರಂಗಸ್ವಾಮಿ, ಬಿ.ಕೆ.ರಂಗಸ್ವಾಮಿ (BK Rangaswami), ವಿನಯ್ ಗಾಂಧಿ (Vinaya Gandhi) ಟಿಕೆಟ್ ಆಕಾಂಕ್ಷಿಗಳು. ಈ ಪೈಕಿ, ಬಾಗೂರು ಮಂಜೇಗೌಡ ಹಾಗೂ ಬನವಾಸೆ ರಂಗಸ್ವಾಮಿ ನಡುವೆ ಹಣಾಹಣಿ ನಡೆಯುತ್ತಿದೆ.
ಕ್ಷೇತ್ರ ಹಿನ್ನೆಲೆ:
ಜಿಲ್ಲಾ ಕೇಂದ್ರವಾಗಿರುವ ಈ ಕ್ಷೇತ್ರದಲ್ಲಿ ಹೆಚ್ಚಿನ ಮತದಾರರು ನಗರವಾಸಿಗಳು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡರು ಜಯಗಳಿಸುವ ಮೂಲಕ, ಮೊದಲ ಬಾರಿಗೆ ಕ್ಷೇತ್ರದಲ್ಲಿ ಬಿಜೆಪಿ, ಖಾತೆ ತೆರೆಯಿತು. ಇದಕ್ಕೂ ಮೊದಲು, 25 ವರ್ಷಗಳ ಕಾಲ ಜೆಡಿಎಸ್‌ನ ಎಚ್.ಎಸ್.ಪ್ರಕಾಶ್, ಸತತವಾಗಿ ಗೆದ್ದು ಶಾಸಕರಾಗಿದ್ದರು.
ಜಾತಿ ಲೆಕ್ಕಾಚಾರ:
ಒಟ್ಟು 2,35,262 ಮತದಾರರ ಪೈಕಿ, ಒಕ್ಕಲಿಗರು 1,25,000, ಲಿಂಗಾಯತರು 25,000, ಕುರುಬರು 3,000, ಮುಸ್ಲಿಮರು 30,000, ಎಸ್ಸಿ,ಎಸ್ಟಿ30,000, ವಿಶ್ವಕರ್ಮರು 3,000, ಬ್ರಾಹ್ಮಣರು 1,000 ಹಾಗೂ ಇತರರು 20,000 ಇದ್ದಾರೆ.
ಐಎಎಸ್ ಮಕ್ಕಳು ಐಎಎಸ್ ಆಗ್ತಾರೆ, ರಾಜಕಾರಣಿಗಳ ಮಕ್ಕಳು ರಾಜಕಾರಣಿ ಆಗ್ಬಾರ್ದೆ: ಎಚ್‌ಡಿಕೆ
ಒಕ್ಕಲಿಗರ ಪ್ರಾಬಲ್ಯದ ಈ ಕ್ಷೇತ್ರದಲ್ಲಿ ದಾಸ ಮತ್ತು ಮುಳ್ಳು ಒಕ್ಕಲಿಗ ಎನ್ನುವ ಎರಡು ಉಪ ಪಂಗಡಗಳಿವೆ. ಹಾಸನ ನಗರದ ಸುತ್ತಮುತ್ತ ಇರುವ ಹಳ್ಳಿಗಳಲ್ಲಿ ದಾಸ ಒಕ್ಕಲಿಗರಿದ್ದರೆ, ಉಳಿದಂತೆ ಮುಳ್ಳು ಒಕ್ಕಲಿಗರೇ ಹೆಚ್ಚಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಈ ಉಪ ಜಾತಿ ಪ್ರಮುಖ ನಿರ್ಣಾಯಕ ಪಾತ್ರ ವಹಿಸುತ್ತದೆ. ಇಲ್ಲಿ ಕಣಕ್ಕಿಳಿಯುವ ಅಭ್ಯರ್ಥಿಗಳು ಕೂಡ ಈ ಅಂಕಿ-ಅಂಶದ ಲೆಕ್ಕಾಚಾರ ಹಾಕಿಕೊಂಡೇ ಪ್ರಚಾರ ಮಾಡುತ್ತಾರೆ. ಈಗಿನ ಟಿಕೆಟ್ ಆಕಾಂಕ್ಷಿಗಳ ಪೈಕಿ, ಬಿಜೆಪಿಯ ಪ್ರೀತಂ ಗೌಡ, ಕಾಂಗ್ರೆಸ್‌ನ ಬಾಗೂರು ಮಂಜೇಗೌಡ ಹಾಗೂ ಜೆಡಿಎಸ್‌ನ ಸ್ವರೂಪ್, ದಾಸ ಒಕ್ಕಲಿಗರು. ಆದರೆ, ಭವಾನಿ ರೇವಣ್ಣ ಮುಳ್ಳು ಒಕ್ಕಲಿಗರು.