ಅರಕಲಗೂಡು [ಅ.25]: ಮಾಜಿ ಸಚಿವ ಎ.ಮಂಜು ತಮ್ಮ ವಿರುದ್ಧ ಮಾಡಿರುವ ಆರೋಪಗಳು ಆಧಾರರಹಿತವಾಗಿದ್ದು, ಇದು ಕೀಳು ಮಟ್ಟದ ರಾಜಕಾರಣಕ್ಕೆ ಸಾಕ್ಷಿ ಎಂದು ಶಾಸಕ ಎ.ಟಿ.ರಾಮಸ್ವಾಮಿ ಆರೋಪಿಸಿದ್ದಾರೆ.

ಪಟ್ಟಣದ ಸಾಲುಮರದ ತಿಮ್ಮಕ್ಕ ಪಾರ್ಕಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಣನೂರಿನಲ್ಲಿ ನಾಲ್ಕು ಗುರುತರ ಆರೋಪ ಮಾಡಿರುವ ಮಾಜಿ ಸಚಿವರು ಚಿಕ್ಕಬೊಮ್ಮನಹಳ್ಳಿಯ ಆದಿಚುಂಚನಗಿರಿ ಸಂಸ್ಥಾನಕ್ಕೆ ಸೇರಿದ 70 ಎಕರೆ ಭೂಮಿ ಒತ್ತುವರಿ ಮಾಡಿರುವುದಾಗಿ ಆರೋಪಿಸಿದ್ದಾರೆ. ಈ ಭೂಮಿಯಲ್ಲಿ ಒಂದೇ ಒಂದು ಎಕರೆ ಭೂಮಿಯೂ ಒತ್ತುವರಿಯಾಗಿಲ್ಲ. 18 ಎಕರೆ 36 ಗುಂಟೆ ಮಾತ್ರ ಮಠದ ಆಸ್ತಿಯಾಗಿದ್ದು, 70 ಎಕರೆ ಜಮೀನು ಒತ್ತುವರಿ ಹೇಗೆ ಸಾಧ್ಯವಾದೀತು ಎಂದು ಪ್ರಶ್ನಿಸಿದ ಅವರು, ಈ ಮಠದ ಭೂಮಿಯನ್ನು ನಾಲ್ಕು ಬಾರಿ ಸರ್ವೇ ಮಾಡಿಸಿ ಬೇಲಿ ಹಾಕಿಕೊಂಡಿದ್ದಾರೆ. ಪ್ರಸ್ತುತ ಈ ಜಮೀನು ಮಠದ ವಶದಲ್ಲಿದೆ ಎಂದರು.

ನನ್ನ ಜಮೀನಿನ ಬಳಿ ದಾರಿ ಒತ್ತುವರಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಆರೋಪವೂ ಸತ್ಯಕ್ಕೆ ದೂರವಾದ್ದದು. ಈ ರಸ್ತೆ ನನಗೆ ಸೇರಿದ ಜಮೀನಿನಲ್ಲೇ ಬಿಟ್ಟುಕೊಡಲಾಗಿದೆ. ಮೇಲಾಗಿ ಇನ್ನೂ ಇಪ್ಪತ್ತು ಅಡಿ ಜಾಗವನ್ನು ರಸ್ತೆಯ ಮತ್ತೊಂದು ಭಾಗದಲ್ಲಿ ಬಿಡಲಾಗಿದೆ. ಈ ಕುರಿತು ನಾನೇ ಪತ್ರ ಬರೆದು ನನ್ನಿಂದ ಒತ್ತುವರಿ ಆಗಿದ್ದರೆ ನನ್ನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಲ್ಲಿ ಕೋರಿದ್ದೇನೆ ಎಂದು ತಾವು ಬರೆದ ಪತ್ರವನ್ನು ಪ್ರದರ್ಶಿಸಿದರಲ್ಲದೇ, ಜಮೀನಿನಿಂದ ಕೆರೆಗೆ ಹೋಗುವ ಜಮೀನಿನ ಬಗೆಗೆ ದೂರುತ್ತಿರುವ ವ್ಯಕ್ತಿ ಮಹಮದ್‌ ಗನೀ ಎಂಬುವವರಿಂದಲೇ 26 ಗುಂಟೆ ಕೆರೆ ಒತ್ತುವರಿ ಆಗಿದೆ ಎಂದು ಪ್ರತ್ಯಾರೋಪ ಮಾಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರೂ, ಜೆಡಿಎಸ್‌ ಮುಖಂಡರೂ ಆದ ಎಂ.ಸಿ.ರಂಗಸ್ವಾಮಿ ಅವರ ವಿರುದ್ಧ ಭೂ ಒತ್ತುವರಿಗೆ ಸೇರಿದಂತೆ ಆರೋಪವಿದೆ. ಎ.ಮಂಜು ಕಳೆದ ಹತ್ತಾರು ಬಾರಿ ಅವರ ವಿರುದ್ಧ ಆರೋಪ ಮಾಡುತ್ತಲೇ ಇದ್ದಾರೆ. ಕಳೆದ ಬಾರಿ ಅವರೇ ಸಚಿವರಾಗಿದ್ದರು. ಕಾರಾರ‍ಯಂಗದ ಜವಾಬ್ದಾರಿಯೂ ಅವರ ಬಳಿಯೇ ಇತ್ತು. ಆಗೇಕೆ ಕ್ರಮ ಕೈಗೊಳ್ಳಲಿಲ್ಲ ಎಂದ ಅವರು, ಕೇವಲ ಪತ್ರಿಕೆಗಳಲ್ಲಿ ಸುಳ್ಳು ಆರೋಪ ಮಾಡುವುದನ್ನೇ ಅಭ್ಯಾಸ ಮಾಡಿಕೊಂಡಿಬಿಟ್ಟಿದ್ದಾರೆ ಟೀಕಿಸಿದರು.

ಅರಸೀಕಟ್ಟೆಯಮ್ಮ ದೇವಾಲಯದ ಅಭಿವೃದ್ಧಿ ಕುರಿತಂತೆ ತಮ್ಮ ವಿರುದ್ಧ ಆರೋಪ ಮಾಡಲಾಗುತ್ತಿದೆ. ದೇವಾಲಯದ ಸುತ್ತಲು ಪ್ರದೇಶದಲ್ಲಿ ಗಲೀಜು ತುಂಬಿ ಹೋಗಿತ್ತು. ಅಲ್ಲಿಗೆ ಬರುವ ನೂರಾರು ಮಂದಿಯ ಆರೋಗ್ಯ ಕಾಯುವ ಕೆಲಸ ನಮ್ಮದೇ ಆಗಿದೆ. ಆ ಕಾರಣಕ್ಕೆ ಸುತ್ತಲು ಪ್ರದೇಶವನ್ನು ಅಭಿವೃದ್ಧಿಗೊಳಿಸಿ ಸ್ವಚ್ಛತೆ ಕಾಯುವ ಸಲುವಾಗಿ ಕ್ರಮ ಕೈಗೊಂಡಿದ್ದೇನೆ.

ಮುದ್ದನಹಳ್ಳಿ ಸರ್ವೇ ನಂಬರಿನಲ್ಲಿರುವ ಕೃಷಿಕರನ್ನು ಒಕ್ಕಲೆಬ್ಬಿಸುತ್ತಿದ್ದಾರೆ ಎಂಬ ಆರೋಪ ಮಾಡಿದ್ದಾರೆ. ಸದರಿ 1 ಎಕರೆ 3 ಗುಂಟೆ ಸರ್ಕಾರಿ ಭೂಮಿಯಲ್ಲಿ ಮೂರು ರೆಸಾರ್ಟ್‌ಗಳನ್ನು ನಿರ್ಮಿಸಿ ಅಲ್ಲಿಗೆ ಬರುವ ಭಕ್ತರಿಂದ ಹಣ ಮಾಡುತ್ತಿದ್ದರು. ಅದನ್ನು ತಪ್ಪಿಸಿ ಸರ್ಕಾರಿ ಭೂಮಿಯನ್ನು ಅಭಿವೃದ್ಧಿಗೊಳಿಸಿ ಭಕ್ತರಿಗೆ ಅನುಕೂಲ ನಿರ್ಮಿಸುವ ಉದ್ದೇಶದಿಂದ ಕ್ರಮ ಕೈಗೊಂಡರೆ, ಅಲ್ಲಿದ್ದ ಮನೆಗಳನ್ನು ತೆರವುಗೊಳಿಸಿ ಅದನ್ನು ಕೃಷಿ ಭೂಮಿ ಎಂಬ ಹುನ್ನಾರದೊಂದಿಗೆ ನನ್ನ ವಿರುದ್ಧ ಆರೋಪ ಮಾಡಲಾಗುತ್ತಿದೆ. ಇದು ಮಾಜಿ ಸಚಿವರಿಗೆ ಶೋಭೆ ತರುವಂತಹುದಲ್ಲ ಎಂದು ಅವರು, ಈ ಕಾರ್ಯದಲ್ಲಿ ಯಾವ ಸ್ವ-ಹಿತಾಸಕ್ತಿಯೂ ಇಲ್ಲ ಎಂದರು.