ಕೆಸರಿನಲ್ಲಿಯೇ ಸೊರಗುತ್ತಿದ್ದ ಜಾನುವಾರುಗಳು| ರಾಯಸಮುದ್ರದಿಂದ ಅರಸೀಕೆರೆ ಬಿದರೆಕಾವಲು ತಳಿ ಸಂವರ್ಧನ ಕೇಂದ್ರಕ್ಕೆ ಶಿಫ್ಟ್‌| ಕೊಟ್ಟಿಗೆಯಲ್ಲಿ ರಾಸುಗಳ ಕಾಲಿನ ಮಂಡಿವರೆಗೂ ಕಸ, ಕೆಸರು ನೀರು ತುಂಬಿಕೊಂಡಿತ್ತು| ರಾಸುಗಳಿಗೆ ಕಳೆದ ಮೂರ್ನಾಲ್ಕು ದಿನಗಳಿಂದ ಮೇವು, ನೀರನ್ನೂ ನೀಡಿರಲಿಲ್ಲ| ಶೋಚನೀಯ ಸ್ಥಿತಿಯಲ್ಲಿದ್ದ 230 ರಾಸುಗಳ ಸ್ಥಳಾಂತರ|

ಚನ್ನರಾಯಪಟ್ಟಣ(ಅ.29): ನಿರಂತರ ಮಳೆಯಿಂದಾಗಿ ಕೊಟ್ಟಿಗೆಯಲ್ಲಿ ಕೆಸರು ತುಂಬಿ ಅವ್ಯವಸ್ಥೆಯುಂಟಾಗಿದ್ದರಿಂದ ಹಾಸನ ಜಿಲ್ಲೆಯ ರಾಯಸಮುದ್ರದ ಕಾವಲಿನಲ್ಲಿರುವ ಅಮೃತ ಮಹಲ್‌ ತಳಿ ಸಂವರ್ಧನಾ ಉಪಕೇಂದ್ರದಲ್ಲಿನ 230 ರಾಸುಗಳು ಶೋಚನೀಯ ಪರಿಸ್ಥಿತಿಯಲ್ಲಿದ್ದವು. 

ಕೊಟ್ಟಿಗೆಯಲ್ಲಿ ರಾಸುಗಳ ಕಾಲಿನ ಮಂಡಿವರೆಗೂ ಕಸ, ಕೆಸರು ನೀರು ತುಂಬಿಕೊಂಡಿದ್ದು, ಅವುಗಳಿಗೆ ಕಳೆದ ಮೂರ್ನಾಲ್ಕು ದಿನಗಳಿಂದ ಮೇವು, ನೀರನ್ನೂ ನೀಡಿರಲಿಲ್ಲ. ಈ ಬಗ್ಗೆ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಎಚ್ಚೆತ್ತ ಅಧಿಕಾರಿಗಳು ಸೋಮವಾರದಂದು ಅಲ್ಲಿದ್ದ ಅಷ್ಟೂ ರಾಸುಗಳನ್ನೂ ಅರಸೀಕೆರೆ ತಾಲೂಕಿನ ಬಿದಿರೆಕಾವಲು ತಳಿ ಸಂವರ್ಧನಾ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮೈಸೂರು ಮಹಾರಾಜರ ಕಾಲದಲ್ಲಿ ದೇಸಿ ಅಮೃತ್‌ಮಹಲ್‌ ತಳಿಯನ್ನು ಸಂರಕ್ಷಿಸಿ ಪೋಷಿಸುವ ಸಲುವಾಗಿ ಚಿಕ್ಕಮಗಳೂರು, ತುಮಕೂರು ಹಾಗೂ ಜಿಲ್ಲೆಯ ರಾಯಸಮುದ್ರ ಸೇರಿದಂತೆ ರಾಜ್ಯದ ಹಲವು ಕಡೆ ಸಾವಿರಾರು ಎಕರೆ ಪ್ರದೇಶವನ್ನು ಮೀಸಲಿಟ್ಟು ಅಮೃತ್‌ ಮಹಲ್‌ ತಳಿ ಸಂವರ್ಧನಾ ಕೇಂದ್ರಗಳನ್ನು ತೆರೆಯಲಾಗಿತ್ತು. 

ಸ್ವಾತಂತ್ರ್ಯದ ನಂತರ ಈ ಅಮೃತ್‌ ಮಹಲ್‌ ತಳಿ ಸಂವರ್ಧನಾ ಉಪ ಕೇಂದ್ರಗಳ ನಿರ್ವಹಣೆಯ ಜವಾಬ್ದಾರಿಯನ್ನು ರಾಜ್ಯ ಸರ್ಕಾರವು ಅಜ್ಜಂಪುರ ಪಶುಪಾಲನೆ ಇಲಾಖೆ ನಿರ್ದೇಶನಾಲಯಕ್ಕೂ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಗೆ ವಹಿಸಿದೆ. 1524 ಎಕರೆ ವಿಸ್ತಾರದಲ್ಲಿ ಹಬ್ಬಿರುವ ಈ ಕೇಂದ್ರದಲ್ಲಿನ ಸುಮಾರು 230 ಜಾನುವಾರುಗಳು ನಿರಂತರ ಮಳೆ ಸುರಿದ ಪರಿಣಾಮ ಕಳೆದ ಮೂರ್ನಾಲ್ಕು ದಿನಗಳಿಂದ ಅತಂತ್ರ ಪರಿಸ್ಥಿತಿಯಲ್ಲಿದ್ದವು.

ತಳಿಸಂವರ್ಧನ ಕೇಂದ್ರದ ಅವ್ಯವಸ್ಥೆ ವಿಷಯ ತಿಳಿದು ಸೋಮವಾರ ಜಿಲ್ಲಾಧಿಕಾರಿ ಆರ್‌.ಗಿರೀಶ್‌, ಶಾಸಕ ಸಿ.ಎನ್‌.ಬಾಲಕೃಷ್ಣ ಭಾನುವಾರ ಸಂಜೆ ದನದ ಕೊಟ್ಟಿಗೆ ಹಾಗೂ ಉಪ ಕೇಂದ್ರದ ವ್ಯವಸ್ಥೆಯನ್ನು ಪರಿಶೀಲಿಸಿದ್ದರು. ಅಲ್ಲಿನ ದೃಶ್ಯ ಕಂಡು ಅಸಮಾಧಾನಗೊಂಡಿದ್ದ ಜಿಲ್ಲಾಧಿಕಾರಿಗಳು ಉಪ ಕೇಂದ್ರದ ಅಧಿಕಾರಿಗಳ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದೀಗ ರಾಸುಗಳನ್ನು ಬಿದಿರೆಕಾವಲಿಗೆ ಸ್ಥಳಾಂತರಿಸಲಾಗಿದೆ.