ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿರೋದ್ಯಾಕೆ? ಉತ್ತರ ನೀಡಿದ ಚೀನಾ
ಪಹಲ್ಗಾಂ ನರಮೇಧದ ಬಳಿಕ ಭಾರತ-ಪಾಕ್ ಸಂಬಂಧ ಹದಗೆಟ್ಟಿರುವ ನಡುವೆಯೇ ಚೀನಾ ಪಾಕಿಸ್ತಾನಕ್ಕೆ ಬೆಂಬಲ ನೀಡುವುದಾಗಿ ಪುನರುಚ್ಚರಿಸಿದೆ. ಪಾಕಿಸ್ತಾನದ ಅಧ್ಯಕ್ಷರನ್ನು ಭೇಟಿಯಾದ ಚೀನಾ ರಾಯಭಾರಿ, ದಕ್ಷಿಣ ಏಷ್ಯಾ ಶಾಂತಿಗಾಗಿ ಪಾಕ್‌ಗೆ ಬೆಂಬಲವಿದೆ ಎಂದಿದ್ದಾರೆ. ಇತ್ತ ಪಹಲ್ಗಾಂ ಘಟನೆ ಬಳಿಕ ಭಾರತ ಪಾಕಿಸ್ತಾನಕ್ಕೆ ಎಡಿಬಿ ನೆರವು ನಿಲ್ಲಿಸುವಂತೆ ಮನವಿ ಮಾಡಿದೆ.

ಪಹಲ್ಗಾಂ ನರಮೇಧದ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಮತ್ತಷ್ಟು ಬಿಗಡಾಯಿಸಿರುವ ನಡುವೆಯೇ ನೆರೆಯ ರಾಷ್ಟ್ರ ಚೀನಾ ಮತ್ತೆ ಪಾಕಿಸ್ತಾನಕ್ಕೆ ಬೆಂಬಲ ನೀಡುವುದಾಗಿ ಪುನರುಚ್ಚರಿಸಿದೆ. ‘ದಕ್ಷಿಣ ಏಷ್ಯಾದಲ್ಲಿ ಶಾಂತಿ ಸ್ಥಾಪನೆಗಾಗಿ ನಾವು ಸದಾ ಪಾಕಿಸ್ತಾನ ಬೆಂಬಲಿಸುತ್ತೇವೆ’ ಎಂದು ಅದು ಹೇಳಿದೆ.
ಪಾಕಿಸ್ತಾನದ ಅಧ್ಯಕ್ಷ ಅಲಿ ಜರ್ದಾರಿ ಅವರನ್ನು ಸೋಮವಾರ ಭೇಟಿಯಾದ ಪಾಕಿಸ್ತಾನದಲ್ಲಿನ ಚೀನಾ ರಾಯಭಾರಿ ಜಿಯಾಂಗ್ ಜೈಡಾಂಗ್, ‘ಚೀನಾ ಮತ್ತು ಪಾಕಿಸ್ತಾನದ ಸ್ನೇಹ ಶಾಶ್ವತವಾಗಿದೆ. ಕಾಲ ಕಾಲಕಕೆ ಪರೀಕ್ಷೆಗೆ ಒಳಗಾಗಿದ್ದರೂ ಯಾವಾಗಲೂ ಸವಾಲಿನ ಸಮಯದಲ್ಲಿ ಪರಸ್ಪರ ಬೆಂಬಲಿಸಿದ ಸ್ನೇಹ ನಮ್ಮದಾಗಿದೆ. ದಕ್ಷಿಣ ಏಷ್ಯಾ ಶಾಂತಿಗಾಗಿ ಪಾಕ್‌ಗೆ ನಮ್ಮ ಬೆಂಬಲವಿದೆ’ ಎಂದರು.
ಈ ವೇಳೆ ಜರ್ದಾರಿ ಮಾತನಾಡಿ, ‘ಭಾರತವು ಬೇಜಾವಾಬ್ದಾರಿ ಮತ್ತು ಆಕ್ರಮಣಕಾರಿ ನಡೆಯನ್ನು ಅನುಸರಿಸುತ್ತಿದೆ. ಇಂತಹ ನಡೆ ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ಧಕ್ಕೆ ತರುತ್ತದೆ’ ಎಂದು ಚೀನಾ ರಾಯಭಾರಿಯ ಗಮನಕ್ಕೆ ತಂದರು.
ಮೋದಿ ಜತೆ ರಕ್ಷಣಾ ಕಾರ್ಯದರ್ಶಿ ಭೇಟಿ: ಪಹಲ್ಗಾಂ ಚರ್ಚೆ
ಪಹಲ್ಗಾಂ ನರಮೇಧದ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ಮಹತ್ವದ ಮಾತುಕತೆ ನಡೆಸಿದರು.
ಇತ್ತೀಚೆಗಷ್ಟೇ ನೌಕಾ ಪಡೆ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ ಪ್ರಧಾನಿ ಭೇಟಿಯಾಗಿ ಅರಬ್ಬಿ ಸಮುದ್ರದಲ್ಲಿನ ನಿರ್ಣಾಯಕ ಸಮುದ್ರ ಮಾರ್ಗಗಳಲ್ಲಿನ ಒಟ್ಟಾರೆ ಪರಿಸ್ಥಿತಿ ಬಗ್ಗೆ ಚರ್ಚಿಸಿದ್ದರು. ಭಾನುವಾರ ವಾಯು ಸೇನೆ ಮುಖ್ಯಸ್ಥ ಏರ್‌ಚೀಫ್ ಮಾರ್ಷಲ್ ಎಪಿ ಸಿಂಗ್ ಅವರು ಮೋದಿ ಭೇಟಿಯಾಗಿ ಭದ್ರತಾ ಪರಿಸ್ಥಿತಿ ಬಗ್ಗೆ ವಿವರಿಸಿದ್ದರು. ಈ ಬೆನ್ನಲ್ಲೇ ರಾಜೇಶ್ ಕುಮಾರ್ ಭೇಟಿಯಾಗಿದ್ದಾರೆ.
ಪಾಕ್‌ಗೆ ಆರ್ಥಿಕ ನೆರವು ನಿಲ್ಲಿಸಿ
ಪಹಲ್ಗಾಂ ನರಮೇಧದ ಬಳಿಕ ಪಾಕಿಸ್ತಾನದ ವಿರುದ್ಧ ಕಠಿಣ ರಾಜತಾಂತ್ರಿಕ ನಿಲುವು ಪ್ರದರ್ಶಿಸುತ್ತಿರುವ ಭಾರತ ಇದೀಗ ಮತ್ತೊಂದು ಆಘಾತ ನೀಡಲು ಮುಂದಾಗಿದ್ದು, ಆರ್ಥಿಕವಾಗಿ ಕಂಗೆಟ್ಟಿರುವ ಪಾಕಿಸ್ತಾನಕ್ಕೆ ಹಣಕಾಸು ನೆರವು ನಿಲ್ಲಿಸುವಂತೆ ಏಷ್ಯನ್ ಅಭಿವೃದ್ಧಿ ಬ್ಯಾಂಕ್‌ಗೆ (ಎಡಿಬಿ) ಮನವಿ ಮಾಡಿದೆ.
ಇತ್ತೀಚೆಗೆ ನಡೆದ ಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎಡಿಬಿ ಬ್ಯಾಂಕ್ ಮುಖ್ಯಸ್ಥ ಮಸಾಟೋ ಕಾಂಡಾ ಅವರೊಂದಿಗೆ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಮಾತ್ರವಲ್ಲದೆ ವಿತ್ತ ಸಚಿವೆ ಈಗಾಗಲೇ ಇಟಲಿ ಹಾಗೂ ಹಲವಾರು ಯುರೋಪಿಯನ್ ರಾಷ್ಟ್ರಗಳೊಂದಿಗೆ ಈ ವಿಚಾರದ ಬಗ್ಗೆ ಚರ್ಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.