ಕರಾಚಿ ಜೈಲಿನಿಂದ 200 ಕೈದಿಗಳು ಪರಾರಿ, ಹೇಗೆ ಗೊತ್ತಾ!
ಕರಾಚಿಯ ಮಾಲಿರ್ ಜಿಲ್ಲಾ ಕಾರಾಗೃಹದಲ್ಲಿ ಭೂಕಂಪದ ನಂತರ ಕೈದಿಗಳನ್ನು ಎಣಿಸಲು ಹೊರಗೆ ಕರೆತಂದಾಗ 200 ಕ್ಕೂ ಹೆಚ್ಚು ಕೈದಿಗಳು ಪರಾರಿಯಾಗಿದ್ದಾರೆ. 78 ಕೈದಿಗಳನ್ನು ಮರು ವಶಪಡಿಸಿಕೊಳ್ಳಲಾಗಿದ್ದು, ಒಬ್ಬ ಕೈದಿ ಮೃತಪಟ್ಟಿದ್ದಾನೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ.

ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಕರಾಚಿಯ ಮಾಲಿರ್ ಜಿಲ್ಲಾ ಕಾರಾಗೃಹದಲ್ಲಿ ಭೂಕಂಪದ ನಂತರ ಕೈದಿಗಳನ್ನು ಎಣಿಸಲು ಬ್ಯಾರಕ್‌ಗಳಿಂದ ಹೊರ ಕರೆತರುವ ಸಂದರ್ಭ 200 ಕ್ಕೂ ಹೆಚ್ಚು ಕೈದಿಗಳು ಪರಾರಿಯಾದ ಘಟನೆ ನಡೆದಿದೆ ಎಂದು ಅಂತರಾಷ್ಟ್ರೀಯ ಮಾದ್ಯಮಗಳು ವರದಿ ಮಾಡಿವೆ. ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು ಭೂಕಂಪನ ಆತಂಕದ ನಡುವೆ ಮಧ್ಯರಾತ್ರಿ 12:45ಕ್ಕೆ ಕೈದಿಗಳನ್ನು ಎಣಿಕೆಯ ಸಲುವಾಗಿ ಹೊರ ಕರೆತರಲಾಗಿತ್ತು. ಅದೇ ಸಮಯದಲ್ಲಿ ಅವರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ವೇಳೆ 78 ಕೈದಿಗಳನ್ನು ಮರು ವಶಪಡಿಸಿಕೊಳ್ಳಲಾಗಿದೆ. ಒಬ್ಬ ಕೈದಿ ಗುಂಡೇಟಿನಿಂದ ಮೃತಪಟ್ಟಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ ಎಂದು ಸಿಂಧ್ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ತಿಳಿಸಿದ್ದಾರೆ.
ಪೋಲೀಸ್ ಅಧಿಕಾರಿಗಳ ಪ್ರಕಾರ, ಅಂದಾಜು 2,000 ಕೈದಿಗಳನ್ನು ಜೈಲು ಬ್ಯಾರಕ್‌ಗಳಿಂದ ಹೊರತೆಗೆಯಲಾಗಿತ್ತು. ಹೆಚ್ಚಾಗಿ ಮಾದಕವಸ್ತು ಪ್ರಕರಣಗಳಲ್ಲಿ ಬಂಧಿತರಾಗಿದ್ದ ಕೈದಿಗಳು ತಪ್ಪಿಸಿಕೊಳ್ಳುವ ಯತ್ನದಲ್ಲಿ ಇದ್ದರು. ಹೆಚ್ಚಿನ ಕೈದಿಗಳು ಮಾದಕ ವ್ಯಸನಿಗಳಾಗಿದ್ದರು. ವ್ಯಸನಿಗಳ ಮನಸ್ಥಿತಿ ಹೇಗಿರುತ್ತದೆಯೆಂದರೆ ಅವರು ಗುಂಪು ಮಾಡಿಕೊಂಡು ಅಭ್ಯಾಸವನ್ನು ಬೆಳೆಸಿಕೊಳ್ಳುತ್ತಾರೆ. ಹೀಗಾಗಿ, ಜೈಲಿನೊಳಗೆ ಅಂತಹ ವಾತಾವರಣ ಸೃಷ್ಟಿಯಾದಾಗ, ಕೈದಿಗಳು ಜೈಲಿನ ಬಾಗಿಲು ಒಡೆದು ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೈಲಿನಲ್ಲಿ ನಿಯೋಜಿಸಲಾಗಿದ್ದ ಎಫ್‌ಸಿ (FC) ಸಿಬ್ಬಂದಿ, ಕೈದಿಗಳನ್ನು ತಡೆಯಲು ಅಂದಾಜು 700 ವೈಮಾನಿಕ ಗುಂಡುಗಳನ್ನು ಹಾರಿಸಿದ್ದಾಗಿ ವರದಿ ತಿಳಿಸಿದೆ. ಇನ್ನೂ 138 ಕೈದಿಗಳು ಪರಾರಿಯಲ್ಲಿದ್ದು, ಅವರನ್ನು ಹಿಡಿಯಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ಈ ನಡುವೆ, ಒಬ್ಬ ಕೈದಿಯನ್ನು ಅವನ ತಾಯಿ ತನ್ನಿಂದ ತಾನೇ ಜೈಲಿಗೆ ಮರಳಿ ಕರೆತಂದಿದ್ದು, ಮನವಿ ಮಾಡುವ ಈ ಘಟನೆಯು ಗಮನ ಸೆಳೆದಿದೆ. ಈ ಅವ್ಯವಸ್ಥೆಯ ಹಿಂದಿರುವ ಕಾರಣಗಳನ್ನು ಪತ್ತೆಹಚ್ಚಿ, ಮುಂದಿನ ದಿನನಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ತೆಗೆದುಕೊಳ್ಳಲು ಸಿಂಧ್ ಆಡಳಿತ ತನಿಖಾ ಸಮಿತಿಯನ್ನು ರಚಿಸಲು ನಿರ್ಧರಿಸಿದೆ ಎಂದು ವರದಿ ತಿಳಿಸಿದೆ.
ಭಾನುವಾರದಿಂದ ಪಾಕಿಸ್ತಾನದಲ್ಲಿ ಸಣ್ಣ ಮಟ್ಟಿನ ಭೂಕಂಪನ ಉಂಟಾಗುತ್ತಿದ್ದು, ಕರಾಚಿಯಲ್ಲಿ 16 ಬಾರಿ ಸಣ್ಣ ಭೂಕಂಪಗಳು ಸಂಭವಿಸಿರುವುದು ಮತ್ತು ಮಾಲಿರ್‌ನ ಈಶಾನ್ಯಕ್ಕೆ 40 ಕಿಲೋ ಮೀಟರ್ ಆಳದಲ್ಲಿ 2.6 ಹಾಗೂ 2.8 ತೀವ್ರತೆಯ ಭೂಕಂಪನದ ಕೇಂದ್ರಬಿಂದು ದಾಖಲಾಗಿವೆ. ಮುನ್ನೆಚ್ಚರಿಕಾ ಕ್ರಮವಾಗಿ ವೃತ್ತ 4 ಮತ್ತು 5ರಲ್ಲಿ ಇರಿಸಲಾಗಿದ್ದ ಕೈದಿಗಳನ್ನು ಬ್ಯಾರಕ್‌ಗಳಿಂದ ಹೊರತೆಗೆದು ಸ್ಥಳಾಂತರಿಸಲಾಗುತ್ತಿತ್ತು. ಈ ವೇಳೆ ಜೈಲಿನ ಮುಖ್ಯ ದ್ವಾರದ ಬಳಿ ಸುಮಾರು 700 ಕೈದಿಗಳು ಜಮಾಯಿಸಿದಾಗ ಗದ್ದಲ ಉಂಟಾಗಿ, ಕೆಲವು ಕೈದಿಗಳು ದ್ವಾರವನ್ನು ಒಡೆದು ಪರಾರಿಯಾದರು ಎಂದು ಸಿಂಧ್ ಗೃಹ ಸಚಿವ ಜಿಯಾ-ಉಲ್-ಹಸನ್ ತಿಳಿಸಿದ್ದಾರೆ.
ಪಾಕಿಸ್ತಾನ ಹವಾಮಾನ ಇಲಾಖೆ (ಪಿಎಂಡಿ) ಸೋಮವಾರ ಕರಾಚಿಯಲ್ಲಿ ಮೂರು ಕಡಿಮೆ ತೀವ್ರತೆಯ ಭೂಕಂಪನಗಳು ದಾಖಲಾಗಿವೆ. ಮೊದಲ ಭೂಕಂಪ 3.2 ತೀವ್ರತೆಯದ್ದಾಗಿದ್ದು, ಗಡಾಪ್ ಪಟ್ಟಣದ ಬಳಿ ಬೆಳಗಿನ ಜಾವ 1:05 ಕ್ಕೆ ನಡೆದಿದೆ ನಂತರ ಅದೇ ಸ್ಥಳದಲ್ಲಿ 3.6 ತೀವ್ರತೆಯ ಎರಡನೇ ಭೂಕಂಪ ಸಂಭವಿಸಿತು. ಖೈದಾಬಾದ್ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ 3.2 ತೀವ್ರತೆಯ ಮೂರನೇ ಭೂಕಂಪ ಸಂಭವಿಸಿದೆ ಎಂದು ವರದಿ ತಿಳಿಸಿದೆ. ಪಾಕಿಸ್ತಾನದಲ್ಲಿ ಜೈಲಿನಿಂದ ತಪ್ಪಿಸಿಕೊಳ್ಳುವುದು ಸುಲಭವಲ್ಲ ಏಕೆಂದರೆ 2013 ರಲ್ಲಿ ಮತ್ತೊಂದು ಪ್ರಾಂತ್ಯದಲ್ಲಿರುವ ಜೈಲಿನ ಮೇಲೆ ದಾಳಿ ನಡೆದಾಗ 200 ಕೈದಿಗಳು ತಪ್ಪಿಸಿಕೊಳ್ಳಲು ಪಾಕಿಸ್ತಾನಿ ತಾಲಿಬಾನ್ ಸಹಾಯ ಮಾಡಿದ ನಂತರ ಭದ್ರತೆಯನ್ನು ಹೆಚ್ಚಿಸಲಾಗಿತ್ತು.