ಅಮೆರಿಕದ 2 ಅತಿದೊಡ್ಡ ನಗರಗಳಿಗೆ ಭಾರತೀಯ ಮೂಲದ ಮೇಯರ್; ನಿತ್ಯಾ ರಾಮನ್, ಮಮ್ದಾನಿ!
ಕೇರಳ ಮೂಲದ ನಿತ್ಯಾ ರಾಮನ್ ಅಮೆರಿಕದ 2ನೇ ಅತಿದೊಡ್ಡ ನಗರವಾದ ಲಾಸ್ ಏಂಜಲೀಸ್ನ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ನ್ಯೂಯಾರ್ಕ್ ಮತ್ತು ಲಾಸ್ ಏಂಜಲೀಸ್ ಎರಡೂ ನಗರಗಳಲ್ಲಿ ಭಾರತೀಯ ಮೂಲದವರು ಮೇಯರ್ ಹುದ್ದೆ ಅಲಂಕರಿಸಿದಂತಾಗಿದೆ.

ಲಾಸ್ಏಂಜಲೀಸ್ಗೆ ಕೇರಳ ಮೂಲದ ನಿತ್ಯಾ ಆಯ್ಕೆ
ಲಾಸ್ ಏಂಜಲೀಸ್ ನೂನತ ಮೇಯರ್ ಆಗಿ ಡೆಮಾಕ್ರಟಿಕ್ ಪಕ್ಷದ ನಾಯಕಿ ಕೇರಳ ಮೂಲದ ನಿತ್ಯಾ ರಾಮನ್ (45) ಆಯ್ಕೆಯಾಗಿದ್ದಾರೆ. ಈ ಮೂಲಕ, ಅಮೆರಿಕದ 2ನೇ ಅತಿದೊಡ್ಡ ನಗರದ ಮೇಯರ್ ಆಗಿ ಆಯ್ಕೆಯಾದ ಮೊದಲ ದಕ್ಷಿಣ ಏಷ್ಯಾ ಮೂಲದ ವ್ಯಕ್ತಿ ಎಂಬ ಇತಿಹಾಸ ಸೃಷ್ಟಿಸಿದ್ದಾರೆ. ನ.3ರಂದು ಲಾಸ್ ಏಂಜಲೀಸ್ನ ಸಿಟಿ ಕೌನ್ಸಿಲ್ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕರೆನ್ ಬಾಸ್ ವಿರುದ್ಧ ನಿತ್ಯಾ ಗೆಲುವು ಸಾಧಿಸಿದ್ದಾರೆ.
ನ್ಯೂಯಾರ್ಕ್ನಲ್ಲಿ ಜೊಹ್ರಾನ್ ಮಮ್ದಾನಿ ಅಧಿಕಾರ
ಇದರೊಂದಿಗೆ ಅಮೆರಿಕದ 2 ಅತಿದೊಡ್ಡ ನಗರಗಳಲ್ಲಿ ಭಾರತೀಯ ಮೂಲದ ವ್ಯಕ್ತಿಗಳು ಮೇಯರ್ ಹುದ್ದೆ ಅಲಂಕರಿಸಿದಾಗಿದೆ. ಕೆಲ ತಿಂಗಳ ಹಿಂದೆ ಅಮೆರಿಕ ಅತ್ಯಂತ ದೊಡ್ಡ ನಗರವಾದ ನ್ಯೂಯಾರ್ಕ್ನ ಮೇಯರ್ ಆಗಿರುವ ಜೊಹ್ರಾನ್ ಮಮ್ದಾನಿ ಆಯ್ಕೆಯಾಗಿದ್ದರು.
ನಿತ್ಯಾ ಯಾರು?
ಕೇರಳದಲ್ಲಿ ಜನಿಸಿದ ರಾಮನ್, 6 ವರ್ಷದವರಿದ್ದಾಗ ಪರಿವಾರ ಸಮೇತ ಅಮೆರಿಕಕ್ಕೆ ತೆರಳಿದ್ದರು. ಅಂದಿನಿಂದ ಅಲ್ಲೇ ನೆಲೆಸಿರುವ ಅವರು ಹಾರ್ವರ್ಡ್ ಕಾಲೇಜು ಹಾಗೂ ಮಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (ಎಂಐಟಿ) ಶಿಕ್ಷಣ ಪಡೆದಿದ್ದು, ನಗರ ಯೋಜನಾ ತಜ್ಞೆ ಆಗಿದ್ದಾರೆ.
2019ರಲ್ಲಿ ರಾಜಕೀಯ ಪ್ರವೇಶ
ಶಿಕ್ಷಣ ಪೂರ್ಣಗೊಳಿಸಿದ ನಂತರ ಭಾರತಕ್ಕೆ ಮರಳಿದ ರಾಮನ್, 2013ರಲ್ಲಿ ಮತ್ತೆ ಲಾಸ್ ಏಂಜಲೀಸ್ಗೆ ತೆರಳಿದರು. ಅಲ್ಲಿ ನಿರಾಶ್ರಿತರಿಗಾಗಿ ಸಂಸ್ಥೆಯೊಂದನ್ನು ಸ್ಥಾಪಿಸಿದರು. 2019ರಲ್ಲಿ ರಾಜಕೀಯ ಪ್ರವೇಶ ಮಾಡಿದ ನಿತ್ಯಾ, ಮೊದಲ ಯತ್ನದಲ್ಲೇ ನಗರ ಮಂಡಳಿಗೆ ಆಯ್ಕೆಯಾದರು. ಇದೀಗ ಮೇಯರ್ ಚುನಾವಣೆಯಲ್ಲೂ ಅದೃಷ್ಟ ಅವರ ಕೈಹಿಡಿದಿದೆ.
ನಿತ್ಯಾ ರಾಮನ್ ಹೇಳಿಕೆ
ಲಾಸ್ ಏಂಜಲೀಸ್ ನಗರದ ಮುಂದಿನ ಮೇಯರ್ ಆಗಿ ಆಯ್ಕೆಯಾಗುತ್ತಿರುವುದಕ್ಕೆ ತೀವ್ರ ಹೆಮ್ಮೆಪಡುತ್ತೇನೆ. ಜನರಿಗೆ ಕೈಗೆಟಕುವ ದರದಲ್ಲಿ ವಸಲಿ, ಮಕ್ಕಳಿಗೆ ಆಟವಾಡಲು ಪಾರ್ಕ್, ಉತ್ತಮ ಸಾರಿಗೆ ಸಂಪರ್ಕ, ಕಾರ್ಮಿಕರು ಹಾಗೂ ಅವರ ಕುಟುಂಬಕ್ಕೆ ಸುರಕ್ಷಿತ ನಗರದ ಕನಸಿಗಾಗಿ ಕೆಲಸ ಮಾಡುತ್ತೇನೆ ಎಂದು ನಿತ್ಯಾ ರಾಮನ್ ಅವರು ತಿಳಿಸಿದ್ದಾರೆ.
ನ್ಯೂಯಾರ್ಕ್ ಮೇಯರ್ ಝೋಹ್ರಾನ್ ಮಮ್ದಾನಿ ಹಿನ್ನೆಲೆ
ನ್ಯೂಯಾರ್ಕ್ ಮೇಯರ್ ಝೋಹ್ರಾನ್ ಮಾಮ್ದಾನಿ ಅವರ ಪೋಷಕರು ಭಾರತದವರು. ಮುಂಬೈ ಮೂಲದ ಗುಜರಾತಿ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ತಂದೆ ಮಹಮೂದ್ ಮಾಮ್ದಾನಿ ಅವರ ಕುಟುಂಬ ಪೂರ್ವ ಆಫ್ರಿಕಾದಲ್ಲಿ ನೆಲೆಸಿತ್ತು. ಇತ್ತ ಪಂಜಾಬಿ ಹಿಂದೂ ಆಗಿರುವ ಖ್ಯಾತ ನಿರ್ಮಾಪಕಿ ಮೀರಾ ನಾಯರ್ ಅವರು 1991ರಲ್ಲಿ ಮಹಮೂದ್ರನ್ನು ವರಿಸಿದ್ದು, ಜೊಹ್ರಾನ್ 7 ವರ್ಷದವರಿದ್ದಾಗ ನ್ಯೂಯಾರ್ಕ್ಗೆ ಸ್ಥಳಾಂತರಗೊಂಡರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ













