ನ್ಯೂಯಾರ್ಕ್ ನಗರದ ಮೇಯರ್ ಚುನಾವಣೆಯಲ್ಲಿ ಭಾರತೀಯ ಮೂಲದ ಜೋಹ್ರಾನ್ ಮಮ್ದಾನಿ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. ಈ ಗೆಲುವಿನೊಂದಿಗೆ, ಅವರು ನ್ಯೂಯಾರ್ಕ್ ನಗರದ ಮೊದಲ ಭಾರತೀಯ-ಅಮೆರಿಕನ್ ಮತ್ತು ಮೊದಲ ಮುಸ್ಲಿಂ ಮೇಯರ್ ಆಗಲಿದ್ದಾರೆ. ಆದರೆ ಈ ಗೆಲುವು ಟ್ರಂಪ್‌ರಿಂದ ಟೀಕೆಗೊಳಗಾಗಿದೆ.

ನ್ಯೂಯಾರ್ಕ್ (ಜೂ.26) ನ್ಯೂಯಾರ್ಕ್ ನಗರದ ಮೇಯರ್ ಹುದ್ದೆಗಾಗಿ ನಡೆದ ಡೆಮಾಕ್ರಟಿಕ್ ಪಕ್ಷದ ಪ್ರಾಥಮಿಕ ಚುನಾವಣೆಯಲ್ಲಿ ಭಾರತೀಯ-ಅಮೆರಿಕನ್ ಶಾಸಕ ಜೋಹ್ರಾನ್ ಮಮ್ದಾನಿ, ಮಾಜಿ ಗವರ್ನರ್ ಆಂಡ್ರ್ಯೂ ಕ್ಯುಮೊ ಅವರನ್ನು ಸೋಲಿಸಿ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ.

33 ವರ್ಷದ ಮಮ್ದಾನಿ, ಈ ಗೆಲುವಿನೊಂದಿಗೆ ನ್ಯೂಯಾರ್ಕ್ ನಗರದ ಮೊದಲ ಭಾರತೀಯ-ಅಮೆರಿಕನ್ ಮತ್ತು ಮೊದಲ ಮುಸ್ಲಿಂ ಮೇಯರ್ ಆಗುವ ದಾರಿಯಲ್ಲಿದ್ದಾರೆ. ಆದರೆ, ಈ ಗೆಲುವು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರಿಂದ ತೀವ್ರ ಟೀಕೆಗೆ ಒಳಗಾಗಿದೆ. ಟ್ರಂಪ್, ಮಮ್ದಾನಿಯನ್ನು '100% ಕಮ್ಯುನಿಸ್ಟ್ ಹುಚ್ಚ' ಎಂದು ಟೀಕಿಸಿ, ಸಾಮಾಜಿಕ ಜಾಲತಾಣ ಟ್ರೂತ್‌ನಲ್ಲಿ ಕಿಡಿಕಾರಿದ್ದಾರೆ.

ಪ್ರಧಾನಿ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಮಮ್ದಾನಿ:

ಜೋಹ್ರಾನ್ ಮಮ್ದಾನಿ, ಡೆಮಾಕ್ರಟಿಕ್ ಸಮಾಜವಾದಿಯಾಗಿ ಗುರುತಿಸಿಕೊಂಡಿದ್ದಾರೆ ಮತ್ತು ಅವರ ರಾಜಕೀಯ ಧೋರಣೆಗಳು ಎಡಪಂಥೀಯ ನೀತಿಗಳಿಗೆ ಹೆಚ್ಚು ಒಲವು ತೋರುತ್ತವೆ. ಅವರು ಪ್ಯಾಲಿಸ್ತೀನ್ ಸಮರ್ಥಕರಾಗಿದ್ದು, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ತೀವ್ರ ಟೀಕಿಸಿದ್ದು, ಮಮ್ದಾನಿ, ನೆತನ್ಯಾಹು ನ್ಯೂಯಾರ್ಕ್‌ಗೆ ಆಗಮಿಸಿದರೆ ಅವರನ್ನು ಬಂಧಿಸುವುದಾಗಿ ಹೇಳಿದ್ದಾರೆ. ಇದರ ಜೊತೆಗೆ, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಗ್ಗೆಯೂ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಮೇ 2025 ರಲ್ಲಿ ನ್ಯೂಯಾರ್ಕ್ ಫೋಕಸ್ ವೇದಿಕೆಯಲ್ಲಿ ಮೋದಿಯವರನ್ನು ನೆತನ್ಯಾಹುಗೆ ಹೋಲಿಸಿದ್ದರು, ಇದು ಗಮನಾರ್ಹ ವಿವಾದಕ್ಕೆ ಕಾರಣವಾಗಿತ್ತು.

ಜೋಹ್ರಾನ್ ಮಮ್ದಾನಿಯ ಹಿನ್ನೆಲೆ

ಜೋಹ್ರಾನ್ ಮಮ್ದಾನಿ, ಉಗಾಂಡಾದ ಕಂಪಾಲಾದಲ್ಲಿ 1991 ರಲ್ಲಿ ಜನಿಸಿದರು. ಇವರ ತಾಯಿ, ಪ್ರಖ್ಯಾತ ಚಲನಚಿತ್ರ ನಿರ್ಮಾಪಕಿ ಮೀರಾ ನಾಯರ್, 'ಮಾನ್ಸೂನ್ ವೆಡ್ಡಿಂಗ್' ಮತ್ತು 'ಸಲಾಮ್ ಬಾಂಬೆ' ಚಿತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಇವರ ತಂದೆ, ಭಾರತೀಯ ಮೂಲದ ಉಗಾಂಡಾದ ವಿದ್ವಾಂಸ ಮಹಮೂದ್ ಮಮ್ದಾನಿ. ಏಳನೇ ವಯಸ್ಸಿನಲ್ಲಿ ಜೋಹ್ರಾನ್ ತಮ್ಮ ಕುಟುಂಬದೊಂದಿಗೆ ನ್ಯೂಯಾರ್ಕ್‌ಗೆ ಸ್ಥಳಾಂತರಗೊಂಡರು. ಕ್ವೀನ್ಸ್‌ನ ರಾಜ್ಯ ಅಸೆಂಬ್ಲಿ ಸದಸ್ಯರಾಗಿರುವ ಮಮ್ದಾನಿ, ಬ್ರೂಕ್ಲಿನ್‌ನಲ್ಲಿ ವಾಸಿಸುವ ಸಿರಿಯನ್ ಮೂಲದ ಕಲಾವಿದ ರಾಮ ದುವಾಜಿಯವರನ್ನು ವಿವಾಹವಾದವರು.

ಟ್ರಂಪ್‌ರಿಂದ ತೀವ್ರ ಟೀಕೆ

ಮಮ್ದಾನಿಯ ಗೆಲುವಿನ ನಂತರ, ಡೊನಾಲ್ಡ್ ಟ್ರಂಪ್ ಟ್ರೂತ್ ಸೋಶಿಯಲ್‌ನಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಡೆಮಾಕ್ರಟ್‌ಗಳು ಒಂದು ಗೆರೆಯನ್ನು ದಾಟಿದ್ದಾರೆ. ಜೋಹ್ರಾನ್ ಮಮ್ದಾನಿ 100% ಕಮ್ಯುನಿಸ್ಟ್ ಹುಚ್ಚ, ಅವನ ಧ್ವನಿ ಕಿರಿಕಿರಿಯಾಗಿದೆ, ಅವನಿಗೆ ಬುದ್ಧಿಯಿಲ್ಲ ಎಂದು ಟ್ರಂಪ್ ಬರೆದಿದ್ದಾರೆ. ಇದರ ಜೊತೆಗೆ, ಡೆಮಾಕ್ರಟಿಕ್ ಸಮಾಜವಾದಿಗಳಾದ AOC, ರಶೀದಾ ತ್ಲೈಬ್ ಮತ್ತು ಇಲ್ಹಾನ್ ಒಮರ್ ಅವರಂತಹ ಮಮ್ದಾನಿಯ ಬೆಂಬಲಿಗರನ್ನೂ ಟೀಕಿಸಿದ್ದಾರೆ.

ಮಮ್ದಾನಿಯ ಗೆಲುವು, ನ್ಯೂಯಾರ್ಕ್‌ನ ರಾಜಕೀಯ ಸಾಮಾಜಿಕ ಮಾಧ್ಯಮದಲ್ಲಿ ಟ್ರಂಪ್‌ನ ರಾಜಕೀಯ ತಂತ್ರಗಾರಿಕೆಯನ್ನು ಬಳಸಿಕೊಂಡು ಯಶಸ್ವಿಯಾದ ವೈರಲ್ ಅಭಿಯಾನದ ಮೂಲಕ ಗಮನ ಸೆಳೆದಿದೆ. ಈಗ, ಅವರು ನವೆಂಬರ್ 4, 2025 ರಂದು ನಡೆಯಲಿರುವ ನ್ಯೂಯಾರ್ಕ್ ನಗರದ ಮೇಯರ್ ಚುನಾವಣೆಯಲ್ಲಿ ಪ್ರಸ್ತುತ ಮೇಯರ್ ಎರಿಕ್ ಆಡಮ್ಸ್‌ರನ್ನು ಸ್ವತಂತ್ರ ಅಭ್ಯರ್ಥಿಯಾಗಿ ಎದುರಿಸಲಿದ್ದಾರೆ. ಮಮ್ದಾನಿಯ ಗೆಲುವು, ಎಡಪಂಥೀಯ ರಾಜಕೀಯಕ್ಕೆ ಹೊಸ ಆಯಾಮವನ್ನು ತಂದಿದ್ದು, ಈ ಚುನಾವಣೆಯು ರಾಷ್ಟ್ರವ್ಯಾಪಿ ಗಮನ ಸೆಳೆಯುವ ಸಾಧ್ಯತೆಯಿದೆ.