ಮಿಲಿಟರಿಗೆ ಅತಿಹೆಚ್ಚು ಖರ್ಚು ಮಾಡಿದ ಟಾಪ್ 10 ದೇಶಗಳಿವು..? ಭಾರತ, ಚೀನಾ ಖರ್ಚು ಮಾಡಿದ್ದೆಷ್ಟು?
ಬೆಂಗಳೂರು: ದೇಶದ ಭದ್ರತೆ ಕೇಂದ್ರ ಸರ್ಕಾರದ ಮಹತ್ವದ ಕರ್ತವ್ಯವಾಗಿರುತ್ತದೆ. ಆಂತರಿಕ ಹಾಗೂ ಬಾಹ್ಯ ಶತ್ರುಗಳಿಂದ ದೇಶವನ್ನು ಕಾಪಾಡಲು ಪ್ರತಿಯೊಂದು ದೇಶವೂ ತನ್ನದೇ ಆದ ಮಿಲಿಟರಿ ವ್ಯವಸ್ಥೆಯನ್ನು ಹೊಂದಿದೆ. ತಮ್ಮ ದೇಶಗಳ ಪ್ರಜೆಗಳನ್ನು ಮಿಲಿಟರಿ ಪಡೆಗಳು ಸದಾಕಾಲ ಸಜ್ಜಾಗಿರುತ್ತವೆ. ದೇಶದ ಭದ್ರತೆಗಾಗಿ ಅತಿಹೆಚ್ಚು ವೆಚ್ಚ ಮಾಡುವ ಟಾಪ್ 10 ದೇಶಗಳು ಯಾವುವು? ಭಾರತ ಎಷ್ಟನೇ ಸ್ಥಾನದಲ್ಲಿದೆ ಎನ್ನುವುದನ್ನು ನೋಡೋಣ ಬನ್ನಿ.
10. ದಕ್ಷಿಣ ಕೊರಿಯ:
ಪೂರ್ವ ಏಷ್ಯಾದ ಬಲಿಷ್ಠ ರಾಷ್ಟ್ರಗಳಲ್ಲಿ ಒಂದು ಎನಿಸಿರುವ ದಕ್ಷಿಣ ಕೊರಿಯ, ತನ್ನ ದೇಶದ ಭದ್ರತೆಗಾಗಿ 46 ಬಿಲಿಯನ್ ಡಾಲರ್ ಹಣವನ್ನು ಮೀಸಲಿಡುವ ಮೂಲಕ 10ನೇ ಸ್ಥಾನ ಪಡೆದಿದೆ.
09. ಜಪಾನ್:
ಅಭಿವೃದ್ದಿ ಹೊಂದಿದ ಅತ್ಯಂತ ಚಿಕ್ಕ ರಾಷ್ಟ್ರಗಳಲ್ಲಿ ಒಂದು ಎನಿಸಿರುವ ಜಪಾನ್, ಭದ್ರತೆ ವಿಚಾರದಲ್ಲೂ ಹಿಂದೆ ಬಿದ್ದಿಲ್ಲ. ನೆರೆಯ ರಷ್ಯಾ ಆಕ್ರಮಣ ನೀತಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಜಪಾನ್ ಕಳೆದ ವರ್ಷ 46 ಬಿಲಿಯನ್ ಡಾಲರ್ ಹಣವನ್ನು ಮಿಲಿಟರಿ ವ್ಯವಸ್ಥೆಗೆ ಮೀಸಲಿಟ್ಟಿದೆ.
08. ಫ್ರಾನ್ಸ್:
ನ್ಯೂಕ್ಲಿಯರ್ ಅಸ್ತ್ರವನ್ನು ಹೊಂದಿದ ಅಧಿಕೃತ ರಾಷ್ಟ್ರಗಳಲ್ಲಿ ಒಂದು ಎನಿಸಿರುವ ಫ್ರಾನ್ಸ್, ನ್ಯಾಟೋದ ಭಾಗವೂ ಹೌದು. 2022ರಲ್ಲಿ ಫ್ರಾನ್ಸ್ ಮಿಲಿಟರಿಗಾಗಿ 54 ಬಿಲಿಯನ್ ಡಾಲರ್ ಖರ್ಚು ಮಾಡಿದೆ.
07. ಜರ್ಮನಿ:
ಎರಡನೇ ಮಹಾಯುದ್ದದ ಬಳಿಕ ಜರ್ಮನಿ, ತನ್ನ ಭದ್ರತೆಯ ವಿಚಾರದಲ್ಲಿ ಫಿನಿಕ್ಸ್‌ನಂತೆ ಎದ್ದು ಬಂದಿದೆ. ಕಳೆದ ವರ್ಷ ಜರ್ಮನಿ, ತನ್ನ ಮಿಲಿಟರಿಗಾಗಿ 54 ಬಿಲಿಯನ್ ಡಾಲರ್ ಖರ್ಚು ಮಾಡಿದೆ.
06. ಯುನೈಟೆಡ್ ಕಿಂಗ್‌ಡಮ್:
ಒಂದು ಕಾಲದಲ್ಲಿ ಇಡೀ ಜಗತ್ತನ್ನೇ ಆಳಿದ್ದ ಯುನೈಟೆಡ್ ಕಿಂಗ್‌ಡಮ್, ಕಳೆದ ವರ್ಷ ತನ್ನ ಮಿಲಿಟರಿಗಾಗಿ 69 ಬಿಲಿಯನ್ ಡಾಲರ್ ವೆಚ್ಚ ಮಾಡುವ ಮೂಲಕ 6ನೇ ಸ್ಥಾನ ಪಡೆದುಕೊಂಡಿದೆ.
05. ಸೌದಿ ಅರೇಬಿಯಾ:
ಸೌದಿ ಅರೇಬಿಯಾ ಕೂಡಾ ಭದ್ರತೆಯ ಮೇಲಿನ ವೆಚ್ಚದ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. 2022ರಲ್ಲಿ ಸೌದಿ ರಾಷ್ಟ್ರವು ತನ್ನ ಮಿಲಿಟರಿ ವ್ಯವಸ್ಥೆಗಾಗಿ 75 ಬಿಲಿಯನ್ ಡಾಲರ್ ವೆಚ್ಚ ಮಾಡಿದೆ
04. ಭಾರತ:
ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಏಷ್ಯಾದ ಬಲಿಷ್ಠ ದೇಶವಾದ ಭಾರತಕ್ಕೆ ನೆರೆಯ ಪಾಕಿಸ್ತಾನ, ಚೀನಾದಿಂದ ಸಾಕಷ್ಟು ಸವಾಲುಗಳಿವೆ. ಈ ಕಾರಣಕ್ಕಾಗಿ ಭಾರತ ಕಳೆದ ವರ್ಷ ಮಿಲಿಟರಿಗಾಗಿ 81 ಬಿಲಿಯನ್ ಡಾಲರ್ ವೆಚ್ಚ ಮಾಡಿದೆ.
03. ರಷ್ಯಾ:
ವಿಸ್ತೀರ್ಣದ ದೃಷ್ಟಿಯಿಂದ ಜಗತ್ತಿನ ಅತಿದೊಡ್ಡ ದೇಶ ಎನಿಸಿಕೊಂಡಿರುವ ರಷ್ಯಾ, ಸದ್ಯ ನೆರೆಯ ಉಕ್ರೇನ್ ವಿರುದ್ದ ಯುದ್ದ ಮಾಡುತ್ತಲೇ ಇದೆ. ಹಲವು ರಾಷ್ಟ್ರಗಳನ್ನು ಎದುರಿಸಲು ರಷ್ಯಾ ಕಳೆದ ವರ್ಷ ಮಿಲಿಟರಿಗಾಗಿ 86 ಬಿಲಿಯನ್ ಡಾಲರ್ ಖರ್ಚು ಮಾಡಿದೆ.
02. ಚೀನಾ:
ಕಮ್ಯುನಿಷ್ಟ್ ರಾಷ್ಟ್ರವಾದ ಚೀನಾವು ಕೂಡಾ ಭದ್ರತೆ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಕಳೆದ ವರ್ಷ ಚೀನಾ ಮಿಲಿಟರಿಗಾಗಿ ಬರೋಬ್ಬರಿ 292 ಬಿಲಿಯನ್ ಡಾಲರ್ ಖರ್ಚು ಮಾಡಿದೆ.
01. ಅಮೆರಿಕ ಸಂಯುಕ್ತ ಸಂಸ್ಥಾನ:
ಮೇಲಿನ 9 ರಾಷ್ಟ್ರಗಳು ಮಿಲಿಟರಿಗಾಗಿ ಒಟ್ಟಾರೆ 805 ಬಿಲಿಯನ್ ಡಾಲರ್ ಖರ್ಚು ಮಾಡಿದರೆ, ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಯುಎಸ್‌ಎ 2022ರಲ್ಲಿ ಮಿಲಿಟರಿಗಾಗಿ ಖರ್ಚು ಮಾಡಿದ ವೆಚ್ಚ ಬರೋಬ್ಬರಿ 877 ಬಿಲಿಯನ್ ಡಾಲರ್ ಎಂದರೆ ನೀವು ನಂಬಲೇಬೇಕು.