ಆಸ್ಟೇಲಿಯಾದಲ್ಲಿ ಭಾರತೀಯ ಮೂಲದ 8 ತಿಂಗಳ ಗರ್ಭಿಣಿಯ ಪ್ರಾಣ ತೆಗೆದ ವೇಗದ BMW ಕಾರ್
ಆಸ್ಟ್ರೇಲಿಯಾದ ಸಿಡ್ನಿಯಲ್ಲಿ 8 ತಿಂಗಳ ಗರ್ಭಿಣಿಯಾಗಿದ್ದ ಭಾರತೀಯ ಮೂಲದ ಸಮನ್ವಯ ಧಾರೇಶ್ವರ್ ಅವರು ವೇಗದ ಕಾರು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ. ಈ ದುರಂತದಲ್ಲಿ ಅವರ ಹುಟ್ಟಲಿರುವ ಮಗು ಕೂಡ ಮೃತಪಟ್ಟಿದ್ದು, 19 ವರ್ಷದ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಅಪಘಾತ
ಸಿಡ್ನಿ: ಆಸ್ಟ್ರೇಲಿಯಾದ ಸಿಡ್ನಿಯಲ್ಲಿ 33 ವರ್ಷದ ಭಾರತೀಯ ಮೂಲದ ಮಹಿಳೆಯೊಬ್ಬರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ವೇಗವಾಗಿ ಬಂದ BMW ಕಾರು ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಮೃತರಾಗಿದ್ದಾರೆ. ಸಿಡ್ನಿಯ ಹಾರ್ನ್ಸ್‌ಬಿ ಎಂಬ ಪ್ರದೇಶದಲ್ಲಿ ಶುಕ್ರವಾರ ರಾತ್ರಿ 8 ಗಂಟೆಗೆ ಕಾರ್ ಅಪಘಾತ ನಡೆದಿದೆ. ಸಮನ್ವಯ ಧಾರೇಶ್ವರ್ ಮೃತ ಮಹಿಳೆ. ಸಮನ್ವಯ ಅವರು ಎಂಟು ತಿಂಗಳ ಗರ್ಭಿಣಿಯಾಗಿದ್ದರು.
ಸಮನ್ವಯ ಧಾರೇಶ್ವರ್
ಶುಕ್ರವಾರ ಸಂಜೆ ಸಮನ್ವಯ ಧಾರೇಶ್ವರ್ ಅವರು ಪತಿ ಮತ್ತು ಮೂರು ವರ್ಷದ ಮಗನೊಂದಿಗೆ ಸಂಜೆ ವಾಕಿಂಗ್‌ಗೆ ಹೋಗಿದ್ದರು. ಈ ವೇಳೆ ಕಿಯಾ ಕಾರ್ ನಿಧಾನವಾಗಿ ಫುಟ್‌ಪಾತ್ ಬಳಿ ಬರುತ್ತಿತ್ತು. ಹಿಂದಿನಿಂದ ವೇಗವಾಗಿ ಬಂದ BMW, ಕಿಯಾ ಕಾರ್‌ಗೆ ಡಿಕ್ಕಿ ಹೊಡೆದಿದೆ.
ಚಿಕಿತ್ಸೆ ಫಲಕಾರಿಯಾಗದೇ ಸಾವು
ಡಿಕ್ಕಿಯ ರಭಸಕ್ಕೆ ಕಿಯಾ ಕಾರು ಮುಂದಕ್ಕೆ ಹೋಗಿ ಸಮನ್ವಯ ಅವರಿಗೆ ತಾಗಿದೆ. ಕೂಡಲೇ ಸಮನ್ವಯ ಅವರನ್ನು ವೆಸ್ಟ್‌ಮೀಡ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಸಮನ್ವಯ ಮೃತರಾಗಿದ್ದಾರೆ. ಹುಟ್ಟಲಿರುವ ಮಗುವನ್ನು ಉಳಿಸಿಕೊಳ್ಳಲು ವೈದ್ಯರು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದು ವರದಿಯಾಗಿದೆ. ಜಗತ್ತಿಗೆ ಬರುವ ಮುನ್ನವೇ ಮಗು ಸಹ ಸಾವನ್ನಪ್ಪಿದೆ.
19 ವರ್ಷದ ಪಿ-ಪ್ಲೇಟ್ ಚಾಲಕ
ಪೊಲೀಸ್ ತನಿಖೆಯಲ್ಲಿ, 19 ವರ್ಷದ ಪಿ-ಪ್ಲೇಟ್ ಚಾಲಕ ಆರನ್ ಪಾಪಾಜೊಗ್ಲು BMW ಕಾರನ್ನು ಚಲಾಯಿಸುತ್ತಿದ್ದ ಎಂದು ತಿಳಿದುಬಂದಿದೆ. ಪಿ-ಪ್ಲೇಟರ್ ಎಂದರೆ ಹೊಸ ಅಥವಾ ಪ್ರೊಬೇಷನರಿ ಲೈಸೆನ್ಸ್ ಹೊಂದಿರುವ ಚಾಲಕ. ಪೊಲೀಸರ ಪ್ರಕಾರ, ಆತನ ಕಾರು ಅತಿ ವೇಗದಲ್ಲಿದ್ದು, ಹಿಂದಿನಿಂದ ಕಿಯಾ ಕಾರಿಗೆ ಡಿಕ್ಕಿ ಹೊಡೆದಿದೆ. ನಂತರ ಅದು ನೇರವಾಗಿ ಸಮನ್ವಯ ಅವರಿಗೆ ಡಿಕ್ಕಿ ಹೊಡೆದಿದೆ. ಆಶ್ಚರ್ಯಕರ ಸಂಗತಿಯೆಂದರೆ BMW ಮತ್ತು ಕಿಯಾ ಎರಡೂ ಕಾರುಗಳ ಚಾಲಕರು ಈ ಅಪಘಾತದಲ್ಲಿ ಸುರಕ್ಷಿತವಾಗಿ ಪಾರಾಗಿದ್ದಾರೆ.
ಆರೋಪಿ ಚಾಲಕನಿಗೆ ಕಠಿಣ ಶಿಕ್ಷೆ?
ಅಪಘಾತದ ಬಳಿಕ ಮನೆ ಸೇರಿಕೊಂಡಿದ್ದ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಅಪಾಯಕಾರಿ ಚಾಲನೆ ಮತ್ತು ನಿರ್ಲಕ್ಷ್ಯದಿಂದಾಗಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ. ನ್ಯೂ ಸೌತ್ ವೇಲ್ಸ್ (NSW) ನ ಝೋಯ್ ಕಾನೂನಿನ ಅಡಿಯಲ್ಲಿ ನಡೆಯಲಿದೆ.
ಈ ಕಾನೂನಿನ ಪ್ರಕಾರ, ಯಾರದ್ದಾದರೂ ತಪ್ಪಿನಿಂದ ಹುಟ್ಟಲಿರುವ ಮಗು ಸತ್ತರೆ, ಹೆಚ್ಚುವರಿ ಶಿಕ್ಷೆಯ ಅವಕಾಶವಿದೆ. ದೋಷಿ ಎಂದು ಸಾಬೀತಾದರೆ, ಸಾಮಾನ್ಯ ಶಿಕ್ಷೆಯ ಜೊತೆಗೆ 3 ವರ್ಷಗಳ ಹೆಚ್ಚುವರಿ ಜೈಲು ಶಿಕ್ಷೆಯಾಗಬಹುದು. ನ್ಯಾಯಾಧೀಶರು ಘಟನೆಯ ಗಂಭೀರತೆಯನ್ನು ಪರಿಗಣಿಸಿ ಆರೋಪಿಗೆ ಜಾಮೀನು ನಿರಾಕರಿಸಿದ್ದಾರೆ.
ಇದನ್ನೂ ಓದಿ: ಸೌದಿ ಅರೇಬಿಯಾ ಬಸ್ ದುರಂತ: ಭಾರತಕ್ಕೆ ಬರಲ್ಲ 45 ಮೆಕ್ಕಾ ಯಾತ್ರಿಗಳ ಶವ: ಪರಿಹಾರವನ್ನು ನೀಡಲ್ಲ ಸೌದಿ ಸರ್ಕಾರ
ಯಾರಿದು ಸಮನ್ವಯ ಧಾರೇಶ್ವರ್?
ಸಮನ್ವಯ ಮೂಲತಃ ಭಾರತೀಯರಾಗಿದ್ದು, ಆಸ್ಟ್ರೇಲಿಯಾದಲ್ಲಿ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು. LinkedIn ಪ್ರಕಾರ, ಅವರು ಐಟಿ ಸಿಸ್ಟಮ್ ಅನಾಲಿಸ್ಟ್ ಆಗಿದ್ದರು ಮತ್ತು ಎಲ್ಸ್ಕೊ ಯೂನಿಫಾರ್ಮ್ಸ್‌ನಲ್ಲಿ ಟೆಸ್ಟ್ ಅನಾಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಚಾಲನಕ ತಪ್ಪಿನಿಂದಾಗಿ ಸಮನ್ವಯ ಧಾರೇಶ್ವರ್ ಮೃತರಾಗಿದ್ದಾರೆ. ಘಟನೆಯಲ್ಲಿ ಮೂರು ವರ್ಷದ ಮಗ ಮತ್ತು ಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ: ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?

