ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಬಳಿ ಅದಿರು ಮತ್ತು ಗೋಧಿ ಸಾಗಿಸುತ್ತಿದ್ದ ಲಾರಿಗಳ ನಡುವೆ ಡಿಕ್ಕಿ ಸಂಭವಿಸಿದೆ. ಈ ಅಪಘಾತದಲ್ಲಿ ಗೋಧಿ ಚೀಲಗಳು ರಸ್ತೆಗೆ ಬಿದ್ದಿದ್ದು, ಅದನ್ನು ಸಂಗ್ರಹಿಸಲು ಜನರು ಮುಗಿಬಿದ್ದಿದ್ದಾರೆ. ಘಟನೆಯಲ್ಲಿ ಲಾರಿ ಚಾಲಕನೊಬ್ಬ ಗಾಯಗೊಂಡಿದ್ದಾನೆ.

ತುಮಕೂರು/ಶಿರಾ (ನ.18): ಅದಿರು ತುಂಬಿಕೊಂಡು ಬರುತ್ತಿದ್ದ ಲಾರಿಗೆ ಗೋಧಿ ಚೀಲಗಳನ್ನು ತುಂಬಿಕೊಂಡು ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದ ಘಟನೆ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಹುಯಿಲು ದೊರೆ ಗ್ರಾಮದ ಬಳಿ ಸೋಮವಾರ ನಡೆದಿದೆ.

ಲಾರಿ ಪಲ್ಟಿ, ಗೋದಿಗೆ ಮುಗಿಬಿದ್ದ ಜನರು

ಲಾರಿಯಲ್ಲಿದ್ದ ಗೋಧಿ ತುಂಬಿದ ಚೀಲ ನೆಲಕ್ಕುರಳಿ ರಸ್ತೆಯೆಲ್ಲ ಗೋಧಿಮಯವಾಗಿತ್ತು. ಈ ವೇಳೆ, ಗೋಧಿಯನ್ನು ಬಾಚಿಕೊಳ್ಳಲು ಜನರು ಮುಗಿಬಿದ್ದಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ

ಹುಳಿಯಾರು ಮಾರ್ಗದಿಂದ ಅದಿರು ತುಂಬಿಕೊಂಡು ಬರುತ್ತಿದ್ದ ಲಾರಿಗೆ, ಶಿರಾದಿಂದ ಗೋಧಿ ಸಾಗಿಸುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಅದಿರು ತುಂಬಿದ ಲಾರಿ ಪಲ್ಟಿಯಾಗಿ ರಸ್ತೆ ಬದಿಯಲ್ಲಿದ್ದ ಆಂಜನೇಯ ದೇವಸ್ಥಾನದ ಆವರಣಕ್ಕೆ ಬಿದ್ದಿದೆ. ಘಟನೆಯಲ್ಲಿ ಲಾರಿ ಚಾಲಕನಿಗೆ ತೀವ್ರ ಗಾಯಗಳಾಗಿದ್ದು, ಆತನನ್ನು ಶಿರಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.