ಮದುವೆ ಹಣ ಉಳಿಸಿ ಮನೆ ಖರೀದಿಸಿದ ದಂಪತಿ, ಹೊಸ ಮನೆಯಲ್ಲಿ ನಡೀತು ಸಿಂಪಲ್ ಮ್ಯಾರೇಜ್
ಸೋಶಿಯಲ್ ಮೀಡಿಯಾ ವಿಡಿಯೋ ಒಂದು ಎಲ್ಲರ ಗಮನ ಸೆಳೆದಿದೆ. ಅದ್ಧೂರಿ ಮದುವೆ ಬದಲು ದಂಪತಿ ಆ ಹಣವನ್ನು ಬಳಸಿದ ರೀತಿ ಚರ್ಚೆಗೆ ಕಾರಣವಾಗಿದೆ. ಒಂದಿಷ್ಟು ಮಂದಿ ಭೇಷ್ ಅಂದ್ರೆ ಮತ್ತೊಂದಿಷ್ಟು ಮಂದಿ ಭಾರತೀಯ ಸಂಪ್ರದಾಯದ ಬಗ್ಗೆ ಧ್ವನಿ ಎತ್ತಿದ್ದಾರೆ.

ಭಾರತೀಯ ಮದುವೆ
ಭಾರತದಲ್ಲಿ ಮದುವೆ ಬರೀ ಸಂಪ್ರದಾಯವಲ್ಲ ಶ್ರೀಮಂತಿಕೆ ಪ್ರದರ್ಶನಕ್ಕೆ ವೇದಿಕೆ. ಕೈನಲ್ಲಿ ಹಣ ಇಲ್ಲ ಅಂದ್ರೂ ಜನ ಸಾಲ ಮಾಡಿ ಮದುವೆ ಆಗ್ತಾರೆ. ಭಾರತೀಯರು ಮದುವೆ ಜೊತೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಅದ್ಧೂರಿ ಮಂಟಪ, ಮೈತುಂಬಾ ಆಭರಣ, ಬೆಲೆ ಬಾಳುವ ಬಟ್ಟೆ, ನೂರಾರು ಮಂದಿಗೆ ವೆರೈಟಿ ಊಟ, ಮನೆ ತುಂಬ ಅಲಂಕಾರ ಇಲ್ಲ ಅಂದ್ರೆ ಅದು ಮದುವೆ ಅನ್ನಿಸಿಕೊಳ್ಳೋದಿಲ್ಲ. ನಾಲ್ಕೈದು ದಿನ ಮದುವೆ ಸಂಪ್ರದಾಯಗಳನ್ನು ಆಚರಿಸುವ ಪದ್ಧತಿ ಮತ್ತೆ ಬಂದಿದೆ.
ಬುದ್ಧಿವಂತಿಕೆ ನಡೆ
ಸಾಲ ಮೈಮೇಲೆ ಎಳೆದ್ಕೊಂಡು, ಕೋಟಿಗಟ್ಟಲೆ ಹಣ ಸುರಿದು ಮದುವೆ ಮಾಡ್ಕೊಳ್ಳುವ ಈ ಕಾಲದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ದಂಪತಿ ಭಿನ್ನವಾಗಿ ನಿಲ್ತಾರೆ. ಅದ್ಧೂರಿ ಮದುವೆಗೆ ಅಗತ್ಯವಿದ್ದ ಹಣವನ್ನು ಅವರು ಬುದ್ಧಿವಂತಿಕೆಯಿಂದ ಖರ್ಚು ಮಾಡಿದ್ದಾರೆ. ಮದುವೆ ಹಣವನ್ನು ಮನೆ ಖರೀದಿಗೆ ಬಳಸಿದ್ದಾರೆ.
ವೈರಲ್ ವಿಡಿಯೋ
ಸೋಶಿಯಲ್ ಮೀಡಿಯಾದಲ್ಲಿ ವರನ ಸಹೋದರ ವಿಡಿಯೋ ಪೋಸ್ಟ್ ಮಾಡಿದ್ದಾರೆ. ವೀಡಿಯೋದಲ್ಲಿರುವ ಮಾಹಿತಿ ಪ್ರಕಾರ, ಯುವ ಜೋಡಿ ಭರ್ಜರಿ ಮದುವೆ ಸಮಾರಂಭ ನಡೆಸುವ ಬದಲು, ಅದಕ್ಕೆ ಖರ್ಚಾಗಬೇಕಿದ್ದ ಹಣವನ್ನು ಮನೆ ಖರೀದಿಗೆ ಬಳಸಲು ನಿರ್ಧರಿಸಿದೆ. ಮದುವೆ ಹಾಲ್ ಬಾಡಿಗೆ, ವೇದಿಕೆ ಅಲಂಕಾರ, ಆಹಾರ ವ್ಯವಸ್ಥೆ, ಅತಿಥಿ ಸ್ವಾಗತ ಮತ್ತು ಇತರೆ ಖರ್ಚುಗಳನ್ನು ತಪ್ಪಿಸಿ, ಆ ಸಂಪೂರ್ಣ ಮೊತ್ತವನ್ನು ಹೊಸ ಮನೆ ಖರೀದಿಗೆ ಬಳಸಲಾಗಿದೆ.
ಹೊಸ ಮನೆಯಲ್ಲೇ ಮದುವೆ
ವಿಡಿಯೋದಲ್ಲಿ ವಧು –ವರ ದಾಂಪತ್ಯ ಜೀವನಕ್ಕೆ ಕಾಲಿಡ್ತಿರೋದನ್ನು ನೋಡ್ಬಹುದು. ಮನೆ ಪೂರ್ಣ ಸಿದ್ಧವಾದ್ಮೇಲೆ ಜೋಡಿ ತಮ್ಮ ಮದುವೆಯ ಪ್ರಮುಖ ಶಾಸ್ತ್ರಗಳನ್ನು ಅದೇ ಹೊಸ ಮನೆಯಲ್ಲಿ ಮಾಡಿದ್ದಾರೆ. ಹೊಸ ಮನೆಯೊಳಗೆ ನಡೆದ ಮದುವೆಯ ಸರಳ ಆಚರಣೆಗಳನ್ನು ವೀಡಿಯೋದಲ್ಲಿ ನೋಡ್ಬಹುದು.
ಬಳಕೆದಾರರ ಕಮೆಂಟ್
ಈ ವಿಡಿಯೋ ಸೋಶಿಯಲ್ ಮೀಡಿಯಾ ಬಳಕೆದಾರರ ಗಮನ ಸೆಳೆದಿದೆ. ಮದುವೆ ಸಮಾರಂಭ ಒಂದೆರಡು ದಿನಕ್ಕೆ ಸೀಮಿತ. ಮನೆ ಭವಿಷ್ಯಕ್ಕೆ ಅಗತ್ಯ. ಇದು ಸ್ಮಾರ್ಟ್ ಇನ್ವೆಸ್ಟ್‌ಮೆಂಟ್ ಅಂತ ಬಳಕೆದಾರರು ಹೊಗಳಿದ್ದಾರೆ. ಇದು ಬುದ್ಧಿವಂತಿಕೆ ನಿರ್ಧಾರ ಅನ್ನೋದು ಬಳಕೆದಾರರ ಅಭಿಪ್ರಾಯ. ಪ್ರಬುದ್ಧತೆ ಎಂದರೆ ಭವಿಷ್ಯಕ್ಕಾಗಿ ಮತ್ತು ನಿಮ್ಮ ಸ್ವಂತ ಮನೆಗಾಗಿ ಹಣವನ್ನು ಉಳಿಸುವುದು, ದೊಡ್ಡ ಮದುವೆಗೆ ಅದನ್ನು ವ್ಯರ್ಥ ಮಾಡುವುದಲ್ಲ ಅಂತ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು ಭಾರತದ ಸಂಪ್ರದಾಯಗಳಲ್ಲಿ ಮದುವೆಯ ಅದ್ಧೂರಿಗೂ ತನ್ನದೇ ಆದ ಸ್ಥಾನವಿದೆ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಜೀವನದಲ್ಲಿ ಒಮ್ಮೆ ಮದುವೆ ನಡೆಯುತ್ತದೆ. ಹಣವಿದ್ದಾಗ ಮನೆ ಖರೀದಿ ಮಾಡ್ಬಹುದು. ಆದ್ರೆ ಮದುವೆ ಹಾಗಲ್ಲ. ಮದುವೆ ಖುಷಿ ಮತ್ತೆಂದೂ ಸಿಗೋದಿಲ್ಲ. ನೆನಪುಗಳನ್ನು ಬೆನ್ನಟ್ಟಿ, ಹಣವಲ್ಲ ಅಂತ ಸಲಹೆ ನೀಡಿದ್ದಾರೆ.
ಬದಲಾಗ್ತಿದೆ ಯುವಕರ ಚಿಂತನೆ
ದಿನದಿಂದ ದಿನಕ್ಕೆ ಏರುತ್ತಿರುವ ಮನೆ ರೇಟ್, ಜೀವನ ವೆಚ್ಚಗಳು ಮತ್ತು ಭವಿಷ್ಯದ ಆರ್ಥಿಕ ಭದ್ರತೆ ಕುರಿತು ಯುವ ಪೀಳಿಗೆಯ ಚಿಂತನೆ ಇದರಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಈ ವಿಡಿಯೋ, ಮದುವೆಯ ಆಚರಣೆಗಳಿಗಿಂತ ದೀರ್ಘಕಾಲೀನ ಭದ್ರತೆಗೆ ಯುವಕರು ಆದ್ಯತೆ ನೀಡುತ್ತಿದ್ದಾರೆ, ಅವರ ಚಿಂತನೆ ಬದಲಾಗ್ತಿದೆ ಎಂಬುದನ್ನು ಎತ್ತಿ ತೋರಿಸುತ್ತಿದೆ.

