ಬೆಂಗಳೂರಿನ 'ಟೀಚ್ ಫಾರ್ ಇಂಡಿಯಾ' ಶಿಕ್ಷಕಿ ತಮಗೆ ಹಣ್ಣುಗಳಿಷ್ಟ ಎಂದು ಹೇಳಿದ್ದಕ್ಕೆ, ಅವರ ವಿದ್ಯಾರ್ಥಿಗಳು ಪ್ರತಿದಿನ ಪ್ರೀತಿಯಿಂದ ಹಣ್ಣುಗಳನ್ನು ತಂದುಕೊಡುತ್ತಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಮಕ್ಕಳು ತೋರುತ್ತಿರುವ ಈ ನಿಸ್ವಾರ್ಥ ಪ್ರೀತಿಯ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ.

ಬೆಂಗಳೂರು (ಫೆ.2): ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧ ಕೇವಲ ಪಾಠಕ್ಕೆ ಮಾತ್ರ ಸೀಮಿತವಲ್ಲ ಎಂಬುದು ಈ ಘಟನೆಯಿಂದ ಮತ್ತೊಮ್ಮೆ ಸಾಬೀತಾಗಿದೆ. ಬೆಂಗಳೂರಿನ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು ತಮ್ಮ ಶಿಕ್ಷಕಿಯ ಮೇಲಿಟ್ಟಿರುವ ನಿಸ್ವಾರ್ಥ ಪ್ರೀತಿಯ ವಿಡಿಯೋ ಈಗ ಇಂಟರ್ನೆಟ್‌ನಲ್ಲಿ ಹತ್ತಾರು ಜನರ ಕಣ್ಣಾಲಿಗಳನ್ನು ತೇವಗೊಳಿಸುತ್ತಿದೆ.

Add Asianetnews Kannada as a Preferred SourcegooglePreferred

ಬೆಂಗಳೂರಿನಲ್ಲಿ ‘ಟೀಚ್ ಫಾರ್ ಇಂಡಿಯಾ’ (Teach For India) ಫೆಲೋ ಆಗಿ ಕಾರ್ಯನಿರ್ವಹಿಸುತ್ತಿರುವ ದೀಪಾಲಿ ದಹಿಕಾಂಬ್ಳೆ ಅವರು ತಮ್ಮ ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಾ, ತಮಗೆ "ಹಣ್ಣುಗಳೆಂದರೆ ತುಂಬಾ ಇಷ್ಟ" ಎಂದು ಸಹಜವಾಗಿ ಹೇಳಿದ್ದರು. ಶಿಕ್ಷಕಿಯ ಈ ಸಣ್ಣ ಮಾತನ್ನು ಶ್ರದ್ಧೆಯಿಂದ ಆಲಿಸಿದ ಪುಟ್ಟ ಮಕ್ಕಳು, ಅದನ್ನು ಮನಸ್ಸಿಗೆ ಹಚ್ಚಿಕೊಂಡರು.

ದೀಪಾಲಿ ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ, ಮಕ್ಕಳು ಶಾಲೆಯ ಕಿಟಕಿಯ ಬಳಿ ಬಂದು ಅತೀವ ಸಂಭ್ರಮದಿಂದ ತಲಾ ಒಂದೊಂದು ಹಣ್ಣನ್ನು ಶಿಕ್ಷಕಿಗೆ ನೀಡುತ್ತಿರುವುದು ಕಂಡುಬಂದಿದೆ. ಮಕ್ಕಳ ಈ ಕೆಲಸ ಈಗ ದೈನಂದಿನ ರೂಢಿಯಾಗಿದೆ. ಮಕ್ಕಳು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ತಮಗಿರುವ ಅಲ್ಪ ಸಂಪನ್ಮೂಲದಲ್ಲೇ ಶಿಕ್ಷಕಿಯ ಇಷ್ಟವನ್ನು ಪೂರೈಸುತ್ತಿರುವುದು ನೋಡುಗರ ಮನ ಗೆದ್ದಿದೆ. ಪ್ರತಿದಿನ ಮಕ್ಕಳು ಸ್ಟಾಫ್‌ ರೂಮ್‌ನಲ್ಲಿ ಕುಳಿತ ತಮ್ಮ ಟೀಚರ್‌ಗೆ ಕಿಟಕಿಯಿಂದಲೇ ಹಣ್ಣುಗಳನ್ನು ನೀಡುತ್ತಿರುವ ವಿಡಿಯೋ ವೈರಲ್‌ ಆಗಿದೆ.

6 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡ ವಿಡಿಯೋ

ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಈಗಾಗಲೇ 6 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. 'ಇದು ಕೇವಲ ಹಣ್ಣುಗಳಲ್ಲ, ಶಿಕ್ಷಕಿಯ ಮೇಲೆ ಮಕ್ಕಳು ಇಟ್ಟಿರುವ ಅಚಲವಾದ ನಂಬಿಕೆ ಮತ್ತು ಗೌರವ..' ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. 'ಪರೀಕ್ಷೆಯ ಅಂಕಗಳಿಗಿಂತ ಸಹಾನುಭೂತಿ ಮತ್ತು ಪ್ರೀತಿಯನ್ನು ಕಲಿಸುವುದೇ ನಿಜವಾದ ಶಿಕ್ಷಣ..' ಎಂದು ಇನ್ನೊಬ್ಬರು ಶ್ಲಾಘಿಸಿದ್ದಾರೆ.

ತರಗತಿಯ ನಾಲ್ಕು ಗೋಡೆಗಳ ಮಧ್ಯೆ ಮಾಡುವ ಪಾಠಕ್ಕಿಂತ ಇಂತಹ ಕ್ಷಣಗಳು ನನಗೆ ಹೆಚ್ಚು ತೃಪ್ತಿ ನೀಡುತ್ತವೆ. ಮಕ್ಕಳ ಈ ಪುಟ್ಟ ಉಡುಗೊರೆಗಳು ಜಗತ್ತಿನ ಅತ್ಯಂತ ಬೆಲೆಬಾಳುವ ವಸ್ತುಗಳಿಗಿಂತ ದೊಡ್ಡದು," ಎಂದು ಅವರು ಭಾವುಕರಾಗಿ ಬರೆದುಕೊಂಡಿದ್ದಾರೆ.

View post on Instagram