Asianet Suvarna News Asianet Suvarna News

ಮಕ್ಕಳ ಬ್ಯಾಗ್ ಹೊರೆ ಇಳಿಸಿದ ಸಿಬಿಎಸ್ಇ

Make bags lighter CBSE tells teachers parents

ನವದೆಹಲಿ(ಸೆ.26): ಶಾಲಾ ಮಕ್ಕಳ ಹೊರೆ ತಗ್ಗಿಸುವ ನಿಟ್ಟಿನಲ್ಲಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ)ಯು ಹೆಜ್ಜೆಯಿಟ್ಟಿದ್ದು, ಶಾಲಾ ಬ್ಯಾಗ್‌ನ ತೂಕವನ್ನು ಕಡಿಮೆಗೊಳಿಸಲು ನಿರ್ಧರಿಸಿದೆ. ಅಷ್ಟೇ ಅಲ್ಲ, ಪಠ್ಯಪುಸ್ತಕ ಅಥವಾ ವರ್ಕ್ಬುಕ್‌ಗಳನ್ನು ತರದೇ ಹೋದ ಮಕ್ಕಳಿಗೆ ಶಿಕ್ಷೆ ವಿಧಿಸುವಂತಿಲ್ಲ ಎಂಬ ಸೂಚನೆಯನ್ನೂ ಶಿಕ್ಷಕರಿಗೆ ನೀಡಲಾಗಿದೆ. ಜತೆಗೆ, ಶಾಲೆಗಳಲ್ಲಿಯೇ ಶುದ್ಧ ನೀರಿನ ಸೌಲಭ್ಯವನ್ನೂ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ.

ಮಾನ್ಯತೆ ಪಡೆದ ಎಲ್ಲ ಶಾಲೆಗಳಿಗೂ ಕಳುಹಿಸಲಾಗಿರುವ ಹೊಸ ಮಾರ್ಗದರ್ಶಿಯಲ್ಲಿ ಸಿಬಿಎಸ್‌ಇ ಈ ಸೂಚನೆಗಳನ್ನು ನೀಡಿದೆ. ಸಿಬಿಎಸ್‌ಸಿ ಪಠ್ಯಕ್ರಮ ಅನುಸರಿಸುತ್ತಿರುವ ಶಾಲೆಗಳಲ್ಲಿ ಮಕ್ಕಳು ಪಠ್ಯಪುಸ್ತಕ ಹಾಗೂ ವರ್ಕ್ಬುಕ್‌ಗಳನ್ನು ತಂದಿಲ್ಲ ಎಂದು ಶಿಕ್ಷಕರು ದಂಡಿಸುವಂತಿಲ್ಲ. ಶಾಲಾ ಬ್ಯಾಗ್‌ಗಳು ವಿದ್ಯಾರ್ಥಿಗಳು ಹೊರಬಹುದಾದ ಸಾಮರ್ಥ್ಯದಷ್ಟನ್ನು ಮಾತ್ರವೇ ಹೊಂದಿರಬೇಕು. ಇದನ್ನು ಹೇಗೆ ಅನುಸರಿಸುವುದು ಎಂಬ ಬಗೆಯೂ ಶಾಲೆಗಳು, ಶಿಕ್ಷಕರು ಮತ್ತು ಪೋಷಕರಿಗೆ ಮಾರ್ಗದರ್ಶಿಯಲ್ಲಿ ತಿಳಿಸಲಾಗಿದೆ ಎಂದು ಸಿಬಿಎಸ್‌ಸಿ ಶಿಕ್ಷಣ ಹಾಗೂ ತರಬೇತಿ ವಿಭಾಗದ ನಿರ್ದೇಶಕ ಕೆ ಕೆ ಚೌಧರಿ ತಿಳಿಸಿದ್ದಾರೆ. ಈ ಬಗ್ಗೆ ‘ದ ಟೈಮ್ಸ್‌ ಆಫ್‌ ಇಂಡಿಯಾ’ ವರದಿ ಮಾಡಿದೆ.

ಹೋಂವರ್ಕ್ ಇಲ್ಲ, ಶುದ್ಧ ನೀರು: ಮಕ್ಕಳ ನೀರಿನ ಬಾಟಲಿಗಳು ಸಹ ಸಾಕಷ್ಟುಭಾರ ಇರುವುದರಿಂದ ಶಾಲೆಗಳಲ್ಲಿಯೇ ಶುದ್ಧ ನೀರನ್ನು ಕಲ್ಪಿಸಬೇಕು. ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರು ಸಹ ಇದೇ ನೀರನ್ನು ಕುಡಿಯುವ ಮೂಲಕ ನೀರಿನ ಶುದ್ಧತೆಯನ್ನು ಕಾಯ್ದುಕೊಳ್ಳಬೇಕು ಎಂದೂ ಸೂಚಿಸಲಾಗಿದೆ. ಒಂದು ಮತ್ತು ಎರಡನೇ ತರಗತಿ ಮಕ್ಕಳಿಗೆ ಶಾಲಾ ಬ್ಯಾಗ್‌ ಹಾಗೂ ಮನೆಕೆಲಸ (ಹೋಮ್‌ವರ್ಕ್) ನೀಡುವಂತಿಲ್ಲ, ಮಾಹಿತಿ ತಂತ್ರಜ್ಞಾನ (ಐಟಿ)ದ ಸಹಾಯದಿಂದ ಪಾಠ ಮಾಡುವ ಇತರ ಮಾರ್ಗಗಳನ್ನು ಅನುಸರಿಸಬೇಕು ಹಾಗೂ ಆಗಾಗ್ಗೆ ಮಕ್ಕಳ ಅತಿಯಾದ ಬ್ಯಾಗ್‌ ಹೊರೆ ಪರೀಕ್ಷಿಸಬೇಕೆಂದು ನಿರ್ದೇಶಿಸಲಾಗಿದೆ.

ಶಾಲೆಗಳು ಎಲ್ಲಾ ಕ್ಷೇತ್ರಕ್ಕೆ ಸಂಬಂಧಿಸಿದ ಕ್ರಿಯಾತ್ಮಕ ಯೋಜನೆಗಳು ಹಾಗೂ ಗುಂಪು ಚಟುವಟಿಕೆಗಳನ್ನು ಶಾಲಾ ಸಮಯದಲ್ಲೇ ಮಾಡಿಸಬೇಕು. ಇದನ್ನು ಹೋಂವರ್ಕ್ ಎಂದು ನೀಡುವಂತಿಲ್ಲ. ನೀಡಿದರೆ ಇದರಿಂದಲೂ ಮಕ್ಕಳ ಹೊರೆ ಹೆಚ್ಚಾಗಲಿದೆ ಎಂದು ತಿಳಿಸಿದೆ. ‘‘ಬೆಳವಣಿಗೆ ಹಂತದಲ್ಲಿರುವ ಮಕ್ಕಳು ಅತಿ ಭಾರದ ಬ್ಯಾಗ್‌ ಹೊರುವುದರಿಂದ ಅವರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಬೆನ್ನು, ಭುಜಗಳ ನೋವು ಕಾಡಲಿದೆ ಮತ್ತು ದೀರ್ಘಕಾಲ ಮಕ್ಕಳು ಭಾರದ ಬ್ಯಾಗ್‌ ಹೊರುವುದರಿಂದ ಸರಿಪಡಿಸಲಾಗದಂತಹ ಗಂಭೀರ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಮಾರ್ಗದರ್ಶಿ ಸೂತ್ರಗಳನ್ನು ಕಳುಹಿಸಲಾಗಿದೆ,’’ ಎಂದಿದ್ದಾರೆ ಚೌಧರಿ.