ಪೊಲೀಸರಿಗೆ ದೂರು ನೀಡಿದ ಆರು ವರ್ಷದ ಬಾಲಕ ಟ್ರಾಫಿಕ್ ಸಮಸ್ಯೆ ಬಗೆಹರಿಸುವಂತೆ ಮನವಿ ಬಾಲಕನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಚಿತ್ತೂರು: ಇತ್ತೀಚೆಗೆ ಆಂಧ್ರ ಹಾಗೂ ತೆಲಂಗಾಣದಲ್ಲಿ ಪುಟ್ಟ ಮಕ್ಕಳು ಪೊಲೀಸ್ ಠಾಣೆ ಏರುವುದು ಸಾಮಾನ್ಯವಾಗಿದೆ. ಕೆಲ ತಿಂಗಳ ಹಿಂದೆ ಬಾಲಕನೋರ್ವ ಸಹಪಾಠಿ ಪೆನ್ಸಿಲ್ ಕದ್ದಿದ್ದಾನೆ ಎಂದು ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದ. ಅಲ್ಲದೇ 2ನೇ ತರಗತಿ ವಿದ್ಯಾರ್ಥಿ ಓರ್ವ ಶಿಕ್ಷಕರು ಹೊಡೆದರು ಎಂದು ಠಾಣೆಗೆ ದೂರು ನೀಡಲು ಹೋಗಿದ್ದ. ಈಗ ಆಂಧ್ರಪ್ರದೇಶದ(Andra Pradesh) ಚಿತ್ತೂರಿನ (chittoor) ವಿದ್ಯಾರ್ಥಿ ಟ್ರಾಫಿಕ್ ಜಾಮ್ ಬಗ್ಗೆ ದೂರು ನೀಡಲು ಠಾಣೆಗೆ ತೆರಳಿದ್ದು, ಬಾಲಕನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭಾರತದ ಬಹುತೇಕ ನಗರಗಳಲ್ಲಿ ಇತ್ತೀಚೆಗೆ ಸಂಚಾರ ದಟ್ಟಣೆ ಅತ್ಯಂತ ಗಂಭೀರ ಸಮಸ್ಯೆಯಾಗಿದೆ. ಟ್ರಾಫಿಕ್‌ನಲ್ಲಿ ಸಿಲುಕಿ ಒದ್ದಾಡುವುದು ವಯಸ್ಕರಿಗೆ ಮಾತ್ರವಲ್ಲ, ಮಕ್ಕಳಿಗೂ ಸಂಪೂರ್ಣ ಕಿರಿಕಿರಿ ಎನಿಸುವ ಸಮಸ್ಯೆಯಾಗಿದೆ. ಈಗ ಈ ಟ್ರಾಫಿಕ್ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕನೋರ್ವ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಟ್ರಾಫಿಕ್ ಸಮಸ್ಯೆಗಳ ಬಗ್ಗೆ ಬಾಲಕ ಪೊಲೀಸ್ ಅಧಿಕಾರಿಯನ್ನು ಬಾಲಕ ಪ್ರಶ್ನಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇಂಡಿಯಾ ಟುಡೇ ಪ್ರಕಾರ, ಯುಕೆಜಿ ವಿದ್ಯಾರ್ಥಿ ಗುರುವಾರ ಚಿತ್ತೂರು (Chittoor) ಜಿಲ್ಲೆಯ ಪಲಮನೇರ್‌ನಲ್ಲಿರುವ (Palamaner) ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದ. ಒಳಚರಂಡಿ ಕಾಮಗಾರಿ ಹಾಗೂ ಟ್ರ್ಯಾಕ್ಟರ್‌ಗಳಿಂದ ಅಗೆದ ರಸ್ತೆಗಳು ಸಂಚಾರದ ಅಡಚಣೆಗೆ ಕಾರಣವಾಗುತ್ತಿದೆ ಎಂದು ಕಾರ್ತಿಕ್ (Karthik) ಎಂಬ ಬಾಲಕ ಪಲಮನೇರ್ ವೃತ್ತ ನಿರೀಕ್ಷಕ ಎನ್.ಭಾಸ್ಕರ್ (N Bhaskar) ಅವರಿಗೆ ತಿಳಿಸಿದ್ದಾನೆ. ಅಲ್ಲದೇ ಈ ಸಮಸ್ಯೆಗಳ ಪರಿಹಾರಕ್ಕೆ ಸ್ಥಳಕ್ಕೆ ಭೇಟಿ ನೀಡುವಂತೆ ಅಧಿಕಾರಿಗೆ ಬಾಲಕ ಕೇಳಿದ್ದಾನೆ.. ಹುಡುಗನ ಮುಗ್ಧತೆ ಮತ್ತು ಆತ್ಮವಿಶ್ವಾಸಕ್ಕೆ ಪೊಲೀಸ್ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಆತನಿಗೆ ಪೊಲೀಸ್ ಅಧಿಕಾರಿಗಳು ಸಿಹಿತಿಂಡಿಗಳನ್ನು ನೀಡಿದ್ದು, ಸಮಸ್ಯೆ ಬಗ್ಗೆ ಪರಿಶೀಲಿಸುವುದಾಗಿ ಭರವಸೆ ನೀಡಿದರು. ಅಲ್ಲದೇ ಎನ್ ಭಾಸ್ಕರ್ ಅವರು ತಮ್ಮ ಫೋನ್ ನಂಬರ್ ಅನ್ನು ಬಾಲಕನಿಗೆ ನೀಡಿದ್ದು, ಸಮಸ್ಯೆ ಬಂದರೆ ಕರೆ ಮಾಡುವಂತೆ ತಿಳಿಸಿದರು.
ಶಾಲಾ ಬ್ಯಾಗ್ ಹೊರೆ ಕಡಿಮೆ ಮಾಡುತ್ತೆ ಹೈದರಾಬಾದ್ ಬಾಲಕನ ಹೊಸ ಐಡಿಯಾ
ಶ್ರೀಲಕ್ಷ್ಮಿ ಮುತ್ತೇವಿ ಎಂಬವರು ಬಾಲಕ ಪೊಲೀಸರ ಜೊತೆ ಮಾತುಕತೆ ನಡೆಸುತ್ತಿರುವ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. '6 ವರ್ಷದ ಯುಕೆಜಿ ವಿದ್ಯಾರ್ಥಿ ಚಿತ್ತೂರು ಜಿಲ್ಲೆಯ ಪಲಮನೇರ್‌ನ ಕಾರ್ತಿಕೇಯ ತನ್ನ ಶಾಲೆಯ ಬಳಿ ಟ್ರಾಫಿಕ್ ಸಮಸ್ಯೆಗಳ ಕುರಿತು ಪೊಲೀಸರಿಗೆ ದೂರು ನೀಡಿದ್ದಾನೆ. ಪೊಲೀಸರು ಶಾಲೆಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವಂತೆ ಕೇಳಿದ್ದಾನೆ' ಎಂದು ಅವರು ಬರೆದಿದ್ದಾರೆ. ಈ ವೀಡಿಯೋ ವೈರಲ್ ಆಗಿದೆ, ಮತ್ತು ಚಿಕ್ಕ ಹುಡುಗನ ಆತ್ಮವಿಶ್ವಾಸ ಟ್ವಿಟರ್‌ನಲ್ಲಿ ನೆಟ್ಟಿಗರ ಹೃದಯ ಗೆದ್ದಿದೆ. ಇತ್ತೀಚೆಗೆ ಕರ್ನೂಲ್‌ನಲ್ಲಿ ಅದೇ ರೀತಿಯ ಘಟನೆ ಸಂಭವಿಸಿದೆ. ಮಕ್ಕಳು ಜವಾಬ್ದಾರರಾಗುತ್ತಿರುವುದು ಒಳ್ಳೆಯದು ಎಂದು ನೋಡುಗರೊಬ್ಬರು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ.
ಶಿಕ್ಷಕನ ಶಿಕ್ಷೆಗೆ ಬೇಸತ್ತು ಪೊಲೀಸ್ ಠಾಣೆ ಮೆಟ್ಟಲೇರಿದ ತೆಲಂಗಾಣದ 2 ನೇ ತರಗತಿಯ ಬಾಲಕ!