- Home
- Entertainment
- TV Talk
- Dr. Bro: ನಾಲ್ಕು ತಿಂಗಳುಗಳಿಂದ ಡಾ. ಬ್ರೋ ನಾಪತ್ತೆ... ಎಲ್ಲಿದ್ಯಾ ದೇವ್ರು… ವಿಡಿಯೋ ಯಾಕೆ ಮಾಡ್ತಿಲ್ಲ ಕೇಳ್ತಿದ್ದಾರೆ ಅಭಿಮಾನಿಗಳು!
Dr. Bro: ನಾಲ್ಕು ತಿಂಗಳುಗಳಿಂದ ಡಾ. ಬ್ರೋ ನಾಪತ್ತೆ... ಎಲ್ಲಿದ್ಯಾ ದೇವ್ರು… ವಿಡಿಯೋ ಯಾಕೆ ಮಾಡ್ತಿಲ್ಲ ಕೇಳ್ತಿದ್ದಾರೆ ಅಭಿಮಾನಿಗಳು!
ಕನ್ನಡದ ಖ್ಯಾತ ಟ್ರಾವೆಲ್ ಯೂಟ್ಯೂಬರ್ ಡಾ. ಬ್ರೋ ಖ್ಯಾತಿಯ ಗಗನ್ ಶ್ರೀನಿವಾಸ್ ಕಳೆದ ನಾಲ್ಕು ತಿಂಗಳಿಂದ ಹೊಸ ವಿಡಿಯೋ ಅಪ್ ಲೋಡ್ ಮಾಡಿಲ್ಲ, ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.

ನಮಸ್ಕಾರ ದೇವ್ರು ಎನ್ನುವ ಮೂಲಕ ವೀಕ್ಷಕರಿಗೆ ಸ್ವಾಗತ ಕೋರಿ ವಿಡಿಯೋ ಮಾಡುತ್ತಿದ್ದ ಕನ್ನಡದ ಖ್ಯಾತ ಟ್ರಾವೆಲ್ ಬ್ಲಾಗರ್, ಯೂಟ್ಯೂಬರ್ ಡಾ. ಬ್ರೋ ಖ್ಯಾತಿಯ ಗಗನ್ ಶ್ರೀನಿವಾಸ್ (Gagan Srinivas). ಇವರ ಅಚ್ಚಕನ್ನಡದ ಸ್ವಚ್ಚ ಮಾಹಿತಿಗಳನ್ನು ಕೇಳೊದೇ ಜನರಿಗೆ ಇಷ್ಟ. ದೇಶ ವಿದೇಶಗಳನ್ನು ಸುತ್ತಿ, ಮಾಹಿತಿ ನೀಡುತ್ತಿದ್ದ ಡಾ. ಬ್ರೋ ಅಂದ್ರೆ ಜನರಿಗೆ ಸಿಕ್ಕಾಪಟ್ಟೆ ಇಷ್ಟ.
ಪ್ರತಿ ಬಾರಿಯೂ ಒಂದೊಂದು ದೇಶದ ಮೂಲೆ ಮೂಲೆಗೆ ಭೇಟಿ ನೀಡಿ, ಅಲ್ಲಿ ಯಾರೂ ಹೋಗದ ಜಾಗಕ್ಕೆ ಹೋಗಿ, ಅವರೊಂದಿಗೆ ಬೆರೆತು ಕಲೆತು, ಅವರ ಸಂಸ್ಕೃತಿ, ಆಚರಣೆ ವಿಚಾರಗಳನ್ನು ಕನ್ನಡಿಗರಿಗೆ ಕನ್ನಡದಲ್ಲೇ ಪರಿಚಯಿಸುತ್ತಿದ್ದ ಹುಡುಗ ಡಾ. ಬ್ರೋ. (Dr. Bro) ಆದರೆ ಇವರು ಕೆಲವು ದಿನಗಳಿಂದ ಪತ್ತೆಯೇ ಇಲ್ಲ.
ಡಾ. ಬ್ರೋ ಕೊನೆಯದಾಗಿ ಯೂಟ್ಯೂಬಲ್ಲಿ ವಿಡಿಯೋ ಬಿಟ್ಟಿದ್ದು, ಮಾರ್ಚ್ ತಿಂಗಳಲ್ಲಿ. ಚೀನಾದ ನಡೆದಾಡುವ ದೇವತೆ ಬಗ್ಗೆ ವಿಡಿಯೋ ಮಾಡಿದ್ದರು, ಅಲ್ಲದೇ ತಮ್ಮ ಇನ್’ಸ್ಟಾಗ್ರಾಂನಲ್ಲಿ ಟಿಬೆಟ್ ನ ಸುಂದರವಾದ ಮಾರ್ಫಾ ಗ್ರಾಮಕ್ಕೆ ಭೇಟಿ ನೀಡಿ, ಅಲ್ಲಿನ ಸುಂದರವಾದ ಪರಿಸರ, ಅಲ್ಲಿ ನಿಶ್ಯಬ್ಧತೆಯ ಕುರಿತಾಗಿ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದರು.
ಅದಾಗಿ ನಾಲ್ಕು ತಿಂಗಳು ಕಳೆದರೂ ಡಾ. ಬ್ರೋ ಯಾವುದೇ ವಿಡಿಯೋ ಬಿಡುಗಡೆ ಮಾಡಿಲ್ಲ. ಅತಿ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿರುವ ಹಾಗೂ ಅಪಾರ ಅಭಿಮಾನಿಗಳನ್ನು ಹೊಂದಿರುವ ಡಾ. ಬ್ರೋ ವಿಡಿಯೋ ಮಾಡದೇ ಇರೋದು ಈಗ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.
ಒಂದೆರಡು ಬಾರಿ ತಮ್ಮ ಇನ್’ಸ್ಟಾಗ್ರಾಂನಲ್ಲಿ (Instagram)ಯಾವುದೋ ಪ್ರೊಮೋಷನ್ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದನ್ನು ಬಿಟ್ಟರೆ, ಯಾವುದೇ ದೇಶದ ವಿಡಿಯೋ ಮಾಡಿಲ್ಲ. ಹಾಗಾಗಿ ಡಾ, ಬ್ರೋ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಎಲ್ಲಿದ್ಯಪ್ಪಾ ದೇವ್ರು ಎನ್ನುತ್ತಾ ಚರ್ಚೆ ಮಾಡ್ತಿದ್ದಾರೆ.
ಕಳೆದ ಕೆಲವು ದಿನಗಳಲ್ಲಿ ಡಾ. ಬ್ರೋ ಕುರಿತು ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ. ಕೆಲವರು ನಾವು ಡಾ. ಬ್ರೋ ವಿರುದ್ಧ ಕಂಪ್ಲೇಂಟ್ ಕೊಡ್ತೀವಿ ಅಂದ್ರೆ, ಇನ್ನೂ ಕೆಲವರು ಡಾ. ಬ್ರೋಗೆ ವಾರ್ನಿಂಗ್ ಕೊಡ್ತೀವಿ, ಯಾಕೆ ನಾಲ್ಕು ತಿಂಗಳಿಂದ ವಿಡಿಯೋ ಇಲ್ಲ. ಯಾಕೆ ಸೈಲೆಂಟ್ ಆಗಿದ್ಯಾ? ಡಾ. ಬ್ರೋ ವಿಡಿಯೋ ಇಲ್ಲದೇ ಇನ್’ಸ್ಟಾಗ್ರಾಂಗೂ ಯೂಟ್ಯೂಬ್ ಗೂ (youtube)ಕಳೆ ಇಲ್ಲ ಎಂದಿದ್ದಾರೆ. ಮಿಸ್ ಯೂ ಡಾ. ಬ್ರೋ ಅಂತಾನೂ ಹೇಳಿದ್ದಾರೆ.
ಡಾ. ಬ್ರೋ, ಇದುವರೆಗೆ ತಮ್ಮ ಚಾನೆಲ್‌ನಲ್ಲಿ 170 ವೀಡಿಯೊಗಳನ್ನು ಅಪ್‌ಲೋಡ್ ಮಾಡಿದ್ದು, ಇವರ ಯೂಟ್ಯೂಬ್ ಚಾನೆಲ್ (youtube channel) ಸುಮಾರು 2.8 ಮಿಲಿಯನ್ ಸಬ್‌ಸ್ಕ್ರೈಬರ್ಸ್‌ನ್ನು ಹೊಂದಿದೆ, ಅಲ್ಲದೆ ಇನ್’ಸ್ಟಾಗ್ರಾಂನಲ್ಲಿ 2.9 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿರುವ ಯೂಟ್ಯೂಬರ್ ಇವರಾಗಿದ್ದಾರೆ.
ಸದ್ಯ ತಮ್ಮ ಯೂಟ್ಯೂಬ್ ಜೊತೆಗೆ ಉದ್ಯಮಿಯೂ ಆಗಿರುವ ಗಗನ್ ಕೆಲವು ತಿಂಗಳ ಹಿಂದೆ ಗೋ ಪ್ರವಾಸ (gopravasa)ಎಂಬ ಕಂಪನಿಯನ್ನು ಆರಂಭಿಸಿದ್ದು, ಈ ಕಂಪನಿಯ ಮೂಲಕ ವಿದೇಶಿ ಪ್ರವಾಸ ಪ್ಲ್ಯಾನ್ ಮಾಡುತ್ತಿದ್ದರು. ಈ ಕಂಪನಿಯು ಪ್ಯಾಕೇಜ್‌ಗಳ ಮೂಲಕ ವಿದೇಶಿ ಪ್ರಯಾಣವನ್ನು ಒದಗಿಸುತ್ತಿದೆ.
ಹಾಗಾಗಿ ಡಾ. ಬ್ರೋ ಖ್ಯಾತಿಯ ಗಗನ್ ಸದ್ಯ ತಮ್ಮ ಬ್ಯುಸಿನೆಸ್ ನಲ್ಲಿ ಬ್ಯುಸಿಯಾಗಿರೋದರಿಂದ, ಬೇರೆ ದೇಶಗಳಿಗೆ ಹೋಗಿಲ್ಲ. ಹಾಗಾಗಿ ಕಳೆದ 4 ತಿಂಗಳಿಂದ ಯಾವುದೇ ವಿಡಿಯೋ ಅಪ್ ಲೋಡ್ ಆಗಿಲ್ಲ ಎನ್ನಲಾಗುತ್ತಿದೆ.