ಗಾಯಕಿ ಪೃಥ್ವಿ ಭಟ್ ವಿವಾಹ ವಿವಾದ, ತಂದೆಯ ಆರೋಪಕ್ಕೆ ಮಗಳಿಂದ ಆಡಿಯೋ ಕ್ಲಾರಿಟಿ
ಜೀ ಕನ್ನಡ ಸರಿಗಮಪ ಖ್ಯಾತಿಯ ಪೃಥ್ವಿ ಭಟ್ ಹೆತ್ತವರ ವಿರೋಧದ ನಡುವೆಯೂ ಅಭಿಷೇಕ್ ಜೊತೆ ವಿವಾಹವಾಗಿದ್ದಾರೆ. ತಂದೆ ಶಿವಕುಮಾರ್ ಭಟ್ ವಶೀಕರಣ ಆರೋಪ ಮಾಡಿದ್ದು, ಪೃಥ್ವಿ ಭಟ್ ಈ ಆರೋಪಗಳನ್ನು ನಿರಾಕರಿಸಿದ್ದಾರೆ.

ಜೀ ಕನ್ನಡ ಸರಿಗಮಪ ಖ್ಯಾತಿಯ ಪೃಥ್ವಿ ಭಟ್ ತಾನಿಷ್ಟ ಪಟ್ಟ ಹುಡುಗನನ್ನು ಹೆತ್ತವರ ವಿರೋಧ ಕಟ್ಟಿಕೊಂಡು ಮದುವೆಯಾಗಿದ್ದಾರೆ. ಜೀ ಕನ್ನಡದ ರಿಯಾಲಿಟಿ ಶೋಗಳ ಎಕ್ಸಿಕ್ಯುಟಿವ್ ಡೈರೆಕ್ಷನ್ ಹೆಡ್ ಆಗಿ ಕೆಲಸ ಮಾಡುತ್ತಿರುವ ಅಭಿಷೇಕ್ ಎನ್ನುವವರ ಜೊತೆ ವಿವಾಹವಾಗಿದ್ದು, ಮಾರ್ಚ್ 27ರಂದು ಬೆಂಗಳೂರಿನಲ್ಲಿ ವಿವಾಹ ನಡೆದಿದೆ. ದೇವಾಲಯವೊಂದರಲ್ಲಿ ಈ ವಿವಾಹ ನಡೆದಿದೆ. ಇದಾದ ಬಳಿಕ ಪೊಲೀಸ್ ಠಾಣೆಗೆ ಹೋಗಿ ಮದುವೆ ವಿಚಾರ ತಿಳಿಸಿದ ನವ ಜೋಡಿಗಳು ಮನೆಗೆ ಕಳುಹಿಸುವಂತೆ ಮನವಿ ಮಾಡಿದ್ದರು. ಆದರೆ ಮನೆಗೆ ಕಳುಹಿಸಬೇಡಿ ಎಂದು ಪೊಲೀಸರಿಗೆ ಗಾಯಕಿ ಪೃಥ್ವಿ ಅವರ ತಂದೆ ಶಿವಕುಮಾರ್ ಭಟ್ ಹೇಳಿದ್ದರು. ತಂದೆಯಿಂದ ಮಗಳ ಮದುವೆಗೆ ವಿರೋಧವಿತ್ತು.
ಮಗಳು ಮದುವೆಯಾಗಿ ಇಪ್ಪತ್ತೈದು ದಿನಗಳ ನಂತರ ಆರೋಪ ಮಾಡಿ ಆಡಿಯೋವೊಂದನ್ನು ತಂದೆ ಶಿವಕುಮಾರ್ ಭಟ್ ವಾಟ್ಸಾಪ್ ನಲ್ಲಿ ಹರಿಯ ಬಿಟ್ಟಿದ್ದರು. ವಶೀಕರಣ ಮಾಡಿಸಿ ಮಗಳನ್ನು ಮದುವೆ ಮಾಡಿಸಿದ್ದಾರೆ ಅಂತ ಆರೋಪ ಮಾಡಿದ್ದರು. ಸರಿಗಮಪ ರಿಯಾಲಿಟಿ ಶೋ ಜ್ಯೂರಿ ಹಾಗೂ ಸಂಗೀತ ಶಿಕ್ಷಕ ನರಹರಿ ದೀಕ್ಷಿತ್ ಅವರ ಪ್ರೇರಣೆಯಿಂದಲೇ ಈ ಮದುವೆ ನಡೆದಿದೆ ಎಂಬುದು ತಂದೆಯ ಆರೋಪ. ಮಗಳ ಬಗ್ಗೆ ನರಹರಿ ದೀಕ್ಷಿತ್ ಗೆ ಎಲ್ಲವೂ ಗೊತ್ತಿದ್ದರೂ, ಅದನ್ನು ಮುಚ್ಚಿಟ್ಟು ಅವರೇ ತಮ್ಮ ಮಗಳನ್ನು ಧಾರೆ ಎರೆದುಕೊಟ್ಟಿದ್ದಾರೆ ಅಂತ ಪೃಥ್ವಿ ತಂದೆ ಆರೋಪ ಮಾಡಿದ್ದಾರೆ.
ತಾನು ಅಭಿಷೇಕ್ ನನ್ನು ಮದುವೆಯಾಗಲ್ಲ ಎಂದು ತಂದೆ ತಾಯಿ ಮತ್ತು ದೇವರ ಮುಂದೆ ಆಣೆ ಪ್ರಮಾಣ ಮಾಡಿದ್ದ ಪೃಥ್ವಿ, ನಂತರ ಅದೆಲ್ಲವನ್ನೂ ಮರೆತು ಮದ್ವೆ ಆಗಿ ಮೋಸ ಮಾಡಿದ್ದಾರೆ ಅಂತ ಪಾಲಕರು ಆರೋಪಿಸಿದ್ದಾರೆ. ನಮ್ಮ ಹವ್ಯಕ ಸಮಾಜದಲ್ಲಿ ಮೋಸ ಆಗಿದೆ. ನಮ್ಮ ಬಗ್ಗೆ ಗೊತ್ತಿದ್ದ ನರಹರಿ ದೀಕ್ಷಿತ್ ಈ ರೀತಿಯ ಮೋಸ ಮಾಡುತ್ತಾನೆ ಅಂದುಕೊಂಡಿರಲಿಲ್ಲ. ಅವನ ತರಗತಿಗೆ ಎಷ್ಟೋ ಜನ ಹವ್ಯಕ ಹೆಣ್ಣು ಮಕ್ಕಳು ಮಾತ್ರವಲ್ಲ ಬೇರೆಯವರು ಕೂಡ ಬರುತ್ತಾರೆ. ಇದ್ದ ಒಬ್ಬ ಮಗಳಿಗೆ ಧಾರೆ ಎರೆಯುವ ಅವಕಾಶವನ್ನು ಕಸಿದುಕೊಂಡ ಎಂದು ಪೃಥ್ವಿ ಭಟ್ ತಂದೆ ಆಡಿಯೋ ಹೇಳಿಕೆ ನೀಡಿದ್ದಾರೆ.
ತಂದೆಯ ವಶೀಕರಣ ಆರೋಪಕ್ಕೆ ಉತ್ತರ ನೀಡಿದ ಗಾಯಕಿ ಪೃಥ್ವಿ ಭಟ್. ನೀವು ನರಹರಿ ದೀಕ್ಷಿತ್ ಭಟ್ ವಿರುದ್ಧ ಮಾಡಿದ ಆರೋಪ ಸುಳ್ಳು. ಅವರದ್ದು ಯಾವುದೇ ತಪ್ಪಿಲ್ಲ. ಮಾರ್ಚ್7 ರಂದೇ ಅಭಿಷೇಕ್ ಅಂತ ನಾನು ಹೇಳಿದ್ದೆ. ನಂತರ ಶೋಗೆ ಹೋಗೋದು ಬೇಡ ಅಂತ ನೀವೇ ನಿರ್ಬಂಧ ಹೇರಿದ್ದೀರಿ. ಆಗ ಮನೆಯಲ್ಲಿ ಇದ್ದಾಗ ಭಯ ಆಗಿ ನಾನೇ ಹೆದರಿಕೆ ಆಗಿ ಹೊರ ಬಂದೆ. ನರಹರಿ ದೀಕ್ಷಿತ್ ಸಾರ್ ಯಾವುದೇ ಒತ್ತಾಯ ಮಾಡಿಲ್ಲ. ನನ್ನ ಮದುವೆ ದಿನ ಯಾವುದು ಅಂತನೂ ದೀಕ್ಷಿತ್ ಅವರಿಗೆ ಗೊತ್ತಿರಲಿಲ್ಲ. ನಾನೇ ಪೊನ್ ಮಾಡಿದ್ದಕ್ಕೆ ದೀಕ್ಷಿತ್ ಸರ್ ಬಂದು ಆಶೀರ್ವಾದ ಮಾಡಿದ್ದಾರೆ.
ನನ್ನ ಮದುವೆ ವಿಚಾರದಲ್ಲಿ ದೀಕ್ಷಿತ್ ಅವರ ಯಾವುದೇ ಪಾತ್ರ ಇಲ್ಲ. ದೀಕ್ಷಿತ್ ಅವರ ಮೇಲಿನ ಕೋಪ, ದ್ವೇಷ ಬಿಡಿ. ಖಂಡಿತವಾಗಿ ನಾನು ಮಾಡಿದ್ದು,ಅದನ್ನ ನಾನು ಒಪ್ಪಿಕೊಳ್ಳುತ್ತೇನೆ. ಸಾಧ್ಯವಾದರೆ ಪ್ಲೀಸ್ ನನ್ನನ್ನು ಕ್ಷಮಿಸಿ ಎಂದು ಪೃಥ್ವಿ ಭಟ್ ಒಂದು ವಾಯ್ಸ್ ನೋಟ್ ಕಳಿಸಿದ್ದಾರೆ.
ಹೆತ್ತವರ ತ್ಯಜಿಸಿ ಸರಿಗಮಪ ಖ್ಯಾತಿ ಪೃಥ್ವಿ ಭಟ್ ಲವ್ ಮ್ಯಾರೇಜ್! ವಶೀಕರಣವೆಂದು ಅಪ್ಪನ ಅಳಲು!