World Cup 2023: ಇವರೇ ನೋಡಿ ಏಕದಿನ ವಿಶ್ವಕಪ್ ಗೆಲ್ಲಲು ಹೊರಟಿರುವ ಭಾರತದ ಹುಲಿಗಳ ಪಡೆ..!
ಬೆಂಗಳೂರು: ಬಹುನಿರೀಕ್ಷಿತ 2023ರ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಕ್ರಿಕೆಟ್ ತಂಡ ಪ್ರಕಟಗೊಂಡಿದೆ. ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡವು 140 ಕೋಟಿ ಭಾರತೀಯರ ಕನಸು ಹೊತ್ತು ತವರಿನಲ್ಲಿ ವಿಶ್ವಕಪ್ ಗೆಲ್ಲುವ ಛಲದೊಂದಿಗೆ ಸಜ್ಜಾಗಿದೆ. 2023ರ ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದ 15 ಆಟಗಾರರು ಯಾರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
1. ರೋಹಿತ್ ಶರ್ಮಾ:
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಈ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ಅತ್ಯಂತ ಅನುಭವಿ ಭಾರತೀಯ ಆಟಗಾರ. ರೋಹಿತ್ ಶರ್ಮಾ ಭುಜದ ಮೇಲೆ ದಶಕದ ಬಳಿಕ ಐಸಿಸಿ ಟ್ರೋಫಿ ಗೆದ್ದು ತರಬೇಕಾದ ಗುರುತರ ಜವಾಬ್ದಾರಿಯಿದೆ. ನಾಯಕನಾಗಿ ಹಾಗೂ ಆರಂಭಿಕನಾಗಿ ಹಿಟ್‌ಮ್ಯಾನ್ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.
2. ಶುಭ್‌ಮನ್ ಗಿಲ್:
ಟೀಂ ಇಂಡಿಯಾದ ಪ್ರತಿಭಾನ್ವಿತ ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್, ಪರಿಸ್ಥಿತಿಗೆ ಅನುಗುಣವಾಗಿ ಆಡುವ ಕ್ಷಮತೆ ಇರುವ ಆಟಗಾರ. ಉತ್ತಮ ಆರಂಭವನ್ನು ದೊಡ್ಡ ಇನಿಂಗ್ಸ್ ಆಗಿ ಪರಿವರ್ತಿಸುವ ಚಾಕಚಕ್ಯತೆ ಗಿಲ್‌ಗಿದ್ದು, ನಾಯಕ ಜತೆ ಭಾರತ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಡಬೇಕಾಗಿದೆ.
3. ವಿರಾಟ್ ಕೊಹ್ಲಿ:
ಆಧುನಿಕ ಕ್ರಿಕೆಟ್‌ನ ಸೂಪರ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸಿಡಿದರೆ ಎದುರಾಳಿ ಪಡೆಗೆ ಅಪಾಯ ಕಟ್ಟಿಟ್ಟ ಬುತ್ತಿ. ಟೀಂ ಇಂಡಿಯಾ ರನ್ ಮಷೀನ್ ಆಟದ ಮೇಲೆ ಟೀಂ ಇಂಡಿಯಾ ವಿಶ್ವಕಪ್ ಗೆಲ್ಲುವ ಸಾಧ್ಯತೆ ನಿರ್ಧಾರವಾಗಲಿದೆ ಎಂದರೆ ಅತಿಶಯೋಕ್ತಿಯಲ್ಲ.
4. ಶ್ರೇಯಸ್ ಅಯ್ಯರ್:
ಮುಂಬೈ ಮೂಲದ ಅನುಭವಿ ಮಧ್ಯಮ ಕ್ರಮಾಂಕದ ಬ್ಯಾಟರ್. ಗಿಲ್ ಅವರಂತೆ ಪರಿಸ್ಥಿತಿಗನುಗುಣವಾಗಿ ಇನಿಂಗ್ಸ್ ಆಡುವ ಕ್ಷಮತೆ ಶ್ರೇಯಸ್ ಅಯ್ಯರ್ ಅವರಲ್ಲಿದೆ. ನಾಲ್ಕನೇ ಕ್ರಮಾಂಕದಲ್ಲಿ ಯುವಿಯಂತೆ ಜವಾಬ್ದಾರಿಯುತ ಆಟವನ್ನು ಅಯ್ಯರ್ ಅವರಿಂದ ತಂಡ ನಿರೀಕ್ಷೆ ಮಾಡುತ್ತಿದೆ.
5. ಇಶಾನ್ ಕಿಶನ್:
ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್, ಇತ್ತೀಚೆಗೆ ಏಕದಿನ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆದ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಎಡಗೈ ಬ್ಯಾಟರ್ ಇಶಾನ್ ಕಿಶನ್ ಸ್ಪೋಟಕ ಬ್ಯಾಟಿಂಗ್ ಮೂಲಕವೇ ಹೆಚ್ಚು ಗಮನ ಸೆಳೆದಿದ್ದಾರೆ.
6. ಕೆ ಎಲ್ ರಾಹುಲ್:
ಈ ಬಾರಿಯ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿರುವ ಏಕೈಕ ಕನ್ನಡಿಗ ಕೆ ಎಲ್ ರಾಹುಲ್. ಫಿಟ್ನೆಸ್ ಸಮಸ್ಯೆಯಿಂದ ಕೆಲಕಾಲ ಕ್ರಿಕೆಟ್‌ನಿಂದ ಹೊರಗುಳಿದಿದ್ದ ರಾಹುಲ್ ಇದೀಗ ಸಂಪೂರ್ಣ ಫಿಟ್ ಆಗಿದ್ದು, ಮೊದಲ ಆಯ್ಕೆಯ ವಿಕೆಟ್ ಕೀಪರ್ ಬ್ಯಾಟರ್ ಆಗಿ ಭಾರತ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ.
7. ಸೂರ್ಯಕುಮಾರ್ ಯಾದವ್:
ಟಿ20 ಕ್ರಿಕೆಟ್‌ನಲ್ಲಿ ತನ್ನದೇ ಆದ ಖದರ್ ಹೊಂದಿರುವ ಸೂರ್ಯಕುಮಾರ್ ಯಾದವ್, ಏಕದಿನ ಕ್ರಿಕೆಟ್‌ನಲ್ಲಿ ತನ್ನ ಛಾಪು ಮೂಡಿಸಲು ವಿಫಲವಾಗಿದ್ದಾರೆ. ಹೀಗಿದ್ದೂ ಯಾವುದೇ ಕ್ಷಣದಲ್ಲಿ ಬೇಕಿದ್ದರೂ ಪಂದ್ಯದ ದಿಕ್ಕನ್ನೇ ಬದಲಿಸುವ ಕ್ಷಮತೆ ಹೊಂದಿರುವ ಸೂರ್ಯನನ್ನು ತಂಡ ಯಾವ ರೀತಿ ಬಳಸಿಕೊಳ್ಳಲಿದೆ ಎನ್ನುವ ಕುತೂಹಲ ಕ್ರಿಕೆಟ್ ಅಭಿಮಾನಿಗಳಿಗಿದೆ.
8. ಹಾರ್ದಿಕ್ ಪಾಂಡ್ಯ:
ಟೀಂ ಇಂಡಿಯಾ ಉಪನಾಯಕ ಹಾರ್ದಿಕ್ ಪಾಂಡ್ಯ, ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡದ ಆಸ್ತಿಯಾಗಿದ್ದಾರೆ. ಮ್ಯಾಚ್ ಫಿನಿಶರ್ ಜತೆಗೆ ಬೌಲಿಂಗ್‌ನಲ್ಲಿ 140+ ವೇಗದಲ್ಲಿ ದಾಳಿ ನಡೆಸುವ ಸಾಮರ್ಥ್ಯ ಹಾರ್ದಿಕ್ ಪಾಂಡ್ಯಗಿದೆ.
9. ರವೀಂದ್ರ ಜಡೇಜಾ:
ಟೀಂ ಇಂಡಿಯಾ ಅನುಭವಿ ಆಲ್ರೌಂಡರ್ ಜಡೇಜಾ, ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ತಂಡಕ್ಕೆ ನೆರವಾಗುವ ಆಟಗಾರ. ಜಡ್ಡು ಕೂಡಾ ಏಕಾಂಗಿಯಾಗಿ ಪಂದ್ಯದ ದಿಕ್ಕು ಬದಲಿಸಬಲ್ಲ ಅಮೂಲ್ಯ ಆಲ್ರೌಂಡರ್ ಎನಿಸಿಕೊಂಡಿದ್ದಾರೆ.
10. ಅಕ್ಷರ್ ಪಟೇಲ್:
ಎಡಗೈ ಆಲ್ರೌಂಡರ್ ಅಕ್ಷರ್ ಪಟೇಲ್ ಕೂಡಾ ಕಳೆದ ಕೆಲ ವರ್ಷಗಳಲ್ಲಿ ತಂಡಕ್ಕೆ ಕೆಳ ಕ್ರಮಾಂಕದಲ್ಲಿ ಉತ್ತಮ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದಾರೆ. ಸ್ಪಿನ್ ಬೌಲಿಂಗ್‌ನಲ್ಲಿ ಎದುರಾಳಿ ಬ್ಯಾಟರ್‌ಗಳನ್ನು ಕಂಗೆಡಿಸುವ ಸಾಮರ್ಥ್ಯ ಅಕ್ಷರ್ ಪಟೇಲ್‌ಗಿದೆ.
11. ಶಾರ್ದೂಲ್ ಠಾಕೂರ್:
ಮುಂಬೈ ಮೂಲದ ಬೌಲಿಂಗ್ ಆಲ್ರೌಂಡರ್ ಆಗಿರುವ ಶಾರ್ದೂಲ್ ಠಾಕೂರ್, ಮಧ್ಯಮ ವೇಗದ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ಕಾಡುವ ಸಾಮರ್ಥ್ಯ ಹೊಂದಿದ್ದಾರೆ. ಶಾರ್ದೂಲ್ ಅಗತ್ಯ ಸಂದರ್ಭದಲ್ಲಿ ಬ್ಯಾಟಿಂಗ್‌ನಲ್ಲೂ ಮಿಂಚಬಲ್ಲರು.
12. ಜಸ್ಪ್ರೀತ್ ಬುಮ್ರಾ:
ಟೀಂ ಇಂಡಿಯಾ ವೇಗದ ಬೌಲಿಂಗ್ ಪಡೆಯನ್ನು ಮುನ್ನಡೆಸುವ ಜವಾಬ್ದಾರಿ ಬುಮ್ರಾ ಮೇಲಿದೆ. ಕರಾರುವಕ್ಕಾದ ದಾಳಿಯಿಂದ ಬುಮ್ರಾ ಎದುರಾಳಿ ಬ್ಯಾಟರ್‌ಗಳ ಎದೆಯಲ್ಲಿ ನಡುಕು ಹುಟ್ಟಿಸಿರುವ ಬುಮ್ರಾ, ಭಾರತದ ವೇಗದ ಅಸ್ತ್ರ.
13. ಮೊಹಮ್ಮದ್ ಶಮಿ:
ಟೀಂ ಇಂಡಿಯಾ ಅನುಭವಿ ವೇಗಿ ಮೊಹಮ್ಮದ್ ಶಮಿ ಕೂಡಾ ಮಾರಕ ದಾಳಿ ಸಂಘಟಿಸಬಲ್ಲ ಬೌಲರ್. ಈಗಾಗಲೇ 2 ವಿಶ್ವಕಪ್ ಆಡಿರುವ ಅನುಭವ ಹೊಂದಿರುವ ಶಮಿ, ಭಾರತೀಯ ಪಿಚ್‌ನಲ್ಲಿ ಅಪಾಯಕಾರಿ ಬೌಲರ್ ಕೂಡಾ ಹೌದು.
14. ಮೊಹಮ್ಮದ್ ಸಿರಾಜ್:
ಹೈದರಾಬಾದ್ ಮೂಲದ ಮತ್ತೋರ್ವ ಅಪಾಯಕಾರಿ ವೇಗಿ ಎಂದರೆ ಅದು ಮೊಹಮ್ಮದ್ ಸಿರಾಜ್. ಕರಾರುವಕ್ಕಾದ ಲೈನ್ ಅಂಡ್ ಲೆಂಗ್ತ್‌ನಲ್ಲಿ ಬೌಲಿಂಗ್ ಮಾಡುವ ಸಿರಾಜ್, ಕಳೆದ ಕೆಲ ವರ್ಷಗಳಿಂದ ಟೀಂ ಇಂಡಿಯಾ ಬೌಲಿಂಗ್ ಪಡೆಯ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ.
15. ಕುಲ್ದೀಪ್ ಯಾದವ್:
ಈ ಬಾರಿಯ ಭಾರತ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿರುವ ಏಕೈಕ ತಜ್ಞ ಸ್ಪಿನ್ನರ್. ಮಣಿಕಟ್ಟು ಲೆಗ್‌ಸ್ಪಿನ್ನರ್ ಆಗಿರುವ ಕುಲ್ದೀಪ್ ಯಾದವ್, ಭಾರತದ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ವಿಕೆಟ್ ಬೇಟೆಯಾಡಲು ಸಜ್ಜಾಗಿದ್ದಾರೆ.