ತನ್ನ ಹೆಸರು, ಮುಖದ ಟ್ಯಾಟೂ ಹಾಕಿಸಿದ ಅಭಿಮಾನಿ ನೋಡಿ ಭಾವುಕರಾದ ಕಿಶನ್ ಬಿಳಗಲಿ
ದೇಶಾದ್ಯಂತ ಮಿಂಚಿದ ಡ್ಯಾನ್ಸರ್ ಹಾಗೂ ನಟ ಕಿಶನ್ ಬಿಳಗಲಿ ಅವರ ಅಭಿಮಾನಿಯೊಬ್ಬ ತನ್ನ ಕೈ ಮೇಲೆ ಕಿಶನ್ ಫೋಟೊ ಹಾಗೂ ಹೆಸರಿನ ಟ್ಯಾಟೂ ಹಾಕಿದ್ದು ನೋಡಿ ಕಿಶನ್ ಭಾವುಕರಾಗಿದ್ದಾರೆ.

ದೇಶಾದ್ಯಂತ ತಮ್ಮ ಡ್ಯಾನ್ಸ್ ಮೂಲಕ ಮೋಡಿ ಮಾಡಿ, ಕರ್ನಾಟಕದಲ್ಲಿ ಬಿಗ್ ಬಾಸ್ ಸೀಸನ್ 7 ಹಾಗೂ ಡ್ಯಾನ್ಸ್ ರಿಯಾಲಿಟಿ ಶೋ ಹಾಗೂ ಸದ್ಯ ನಟನೆಯ ಮೂಲಕ ಜನಪ್ರಿಯತೆ ಪಡೆಯುತ್ತಿರುವ ನಟ ಕಿಶನ್ ಬಿಳಗಲಿ (Kishen Bilagali). ಸೋಶಿಯಲ್ ಮೀಡಿಯಾದಲ್ಲಂತೂ ಕಿಶನ್ ರದ್ದೆ ಹವಾ. ಈ ಡ್ಯಾನ್ಸಿಂಗ್ ಸ್ಟಾರ್ ತಮ್ಮ ಸ್ಟೈಲ್, ಡ್ಯಾನ್ಸ್ ನಿಂದಲೇ ಲಕ್ಷಾಂತರ ಅಭಿಮಾನಿಗಳನ್ನು ಪಡೆದಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಕಿಶನ್ ಬಿಳಗಲಿ, ತಮ್ಮ ಡ್ಯಾನ್ಸ್ ಮೂಲಕ ಜನಮನ ಸೆಳೆದಿದ್ದಾರೆ. ನಾಜೂಕಾಗಿ, ಅಷ್ಟೇ ಬೋಲ್ಡ್ ಆಗಿ ಡ್ಯಾನ್ಸ್ ಮಾಡುವ ಕಿಶನ್ ಬಿಳಗಲಿ, ನೃತ್ಯ ಮಾಡುವ ಸ್ಟೈಲ್ ನೋಡೋದೇ ಚೆಂದ. ತಮ್ಮ ಡ್ಯಾನ್ಸ್ ನಿಂದಲೇ ಕರ್ನಾಟಕ ಸೇರಿ ದೇಶಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ ಒಬ್ಬ ಅಪ್ಪಟ ಅಭಿಮಾನಿ ಕಿಶನ್ ಅವರಿಗೆ ದೊಡ್ಡ ಸರ್ಪ್ರೈಸ್ ನೀಡಿದ್ದಾನೆ.
ಹೌದು, ಕಿಶನ್ ಬಿಳಗಲಿ ಅವರ ಅಭಿಮಾನಿಯೊಬ್ಬರು (fan of Kishen Bilagali) ಹೆಸರು ನಿಂಗನ ಗೌಡ ಎಂದು, ತಮ್ಮ ಕೈಯ ಮೇಲೆ ಒಂದು ಬದಿಯಲ್ಲಿ ಕಿಶನ್ ಹೆಸರನ್ನು ಹಾಗೂ ಇನ್ನೊಂದು ಬದಿಯಲ್ಲಿ ಕಿಶನ್ ಮುಖದ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅಭಿಮಾನಿ ಇದೀಗ ಕಿಶನ್ ಅವರನ್ನು ಭೇಟಿಯಾಗಿದ್ದು, ಕಿಶನ್ ಅವರ ಜೊತೆಗೆ ಫೋಟೊ ತೆಗೆಸಿಕೊಂಡು ತಮ್ಮ ಇನ್’ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಅಭಿಮಾನಿಯ ಕೈಗೆ ಮುತ್ತಿಡುವ ಹಾಗೂ ಅವರ ಜೊತೆಗೆ ನಿಂತು ತೆಗೆದಿರುವ ಫೋಟೊವನ್ನು ಶೇರ್ ಮಾಡಿರುವ ಕಿಶನ್ ಈ ಕುರಿತು ಭಾವುಕರಾಗಿ ‘ನಾನು ಇದಕ್ಕೆ ಅರ್ಹನೋ ಇಲ್ಲವೋ ಗೊತ್ತಿಲ್ಲ. ಬಹುಶಃ ನನ್ನ ಜೀವನದ ಅತ್ಯಂತ ದುಬಾರಿ ಉಡುಗೊರೆಗಳಲ್ಲಿ (costliest gift of my life) ಇದೂ ಒಂದು.. ನನ್ನ ಹೃದಯಾಂತರಾಳದಿಂದ ಧನ್ಯವಾದಗಳು.. ನೀವು ಇದನ್ನು ಮಾಡದಂತೆ ನಾನು ತಡೆಯಲು ಸಾಧ್ಯವಾಗಬೇಕಿತ್ತು... ಇರಲಿ ಮತ್ತೊಮ್ಮೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ಕಿಶನ್ ಬಿಳಗಲಿ ಕರಿಯರ್ ಬಗ್ಗೆ ಹೇಳೋದಾದ್ರೆ, ಕಿಶನ್ ಸದ್ಯ ದೇಶ ವಿದೇಶದಲ್ಲಿ ಪ್ರೋಗ್ರಾಂ ಕೊಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಅವರು ನಿನಗಾಗಿ ಸೀರಿಯಲ್ ನಲ್ಲೂ ನಟಿಸಿದ್ದರು, ಅಲ್ಲದೇ ಎರಡು ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸುತ್ತಿದ್ದಾರೆ ಎನ್ನುವ ಮಾಹಿತಿ ಕೂಡ ಕೇಳಿ ಬಂದಿತ್ತು. ಇದರ ಜೊತೆ ಕಿಶನ್ ನಟಿಯರ ಜೊತೆ ಡ್ಯಾನ್ಸ್ ವಿಡಿಯೋ ಮಾಡುವ ಮೂಲಕ ಸೆನ್ಸೇಶನ್ ಸೃಷ್ಟಿಸುತ್ತಿದ್ದಾರೆ.