ಬರಿಗಾಲಲ್ಲಿ ಬೆಂಗ್ಳೂರಿಗೆ ಬಂದು ಪ್ರತಿಭೆಯಿಂದ 23 ಲಕ್ಷ ರೂ ಕಾರು ಖರೀದಿಸಿದ ನಟ ಗಿಲ್ಲಿ!
ಬೆಂಗಳೂರಿಗೆ ಬರಿಗಾಲಲ್ಲಿ ಆಗಮಿಸಿದ ಝೀ ಕನ್ನಡದ ಗಿಲ್ಲಿ ಖ್ಯಾತಿಯ ನಟ ನಟರಾಜ್ ಇದೀಗ ದುಬಾರಿ ಕಾರು ಖರೀದಿಸಿದ್ದಾರೆ. ಇದರ ಬೆಲೆ 23 ಲಕ್ಷ ರೂಪಾಯಿ. ಗಿಲ್ಲಿ ಖರೀದಿಸಿದ ಕಾರು ಯಾವುದು? ಗಿಲ್ಲಿ ಸಾಧನೆಗೆ ಜನ ಏನು ಹೇಳುತ್ತಿದ್ದಾರೆ.

ಡೈಲಾಗ್, ಕಾಮಿಡಿ ಮೂಲಕ ಕನ್ನಡಿಗರ ಮನೆ ಮಾನತಾಗಿರುವ ನಟ ಗಿಲ್ಲಿ ಸಾಧನೆಗೆ ಎಲ್ಲೆಡೆಗಳಿಂದ ಮೆಚ್ಚಿಗೆ ವ್ಯಕ್ತವಾಗುತ್ತಿದೆ. ಜೀವನದಲ್ಲಿ ಏನಾದರು ಸಾಧಿಸಬೇಕು, ಕಷ್ಟಗಳಿಂದ, ಆರ್ಥಿಕ ಹೊರೆಗಳಿಂದ ಹೊರಬರಬೇಕು ಅನ್ನೋ ಉದ್ದೇಶದಿಂದ ಪುಟ್ಟ ಹಳ್ಳಿಯಿಂದ ಏನೂ ಇಲ್ಲದೆ ಬೆಂಗಳೂರಿಗೆ ಬಂದ ನಟ ಗಿಲ್ಲಿ ಇದೀಗ ಹೊಚ್ಚ ಹೊಸ ಕಾರು ಖರೀದಿಸಿದ್ದಾರೆ.
ಮಂಡ್ಯದ ಹಳ್ಳಿಯಿಂದ ಬೆಂಗಳೂರಿಗೆ ಬಂದ ನಟ ಗಿಲ್ಲಿ ಇದೀಗ 23 ಲಕ್ಷ ರೂಪಾಯಿ ಮೌಲ್ಯದ ಎಂಜಿ ಹೆಕ್ಟರ್ ಕಾರು ಖರೀದಿಸಿದ್ದಾರೆ. ದುಬಾರಿ ಬೆಲೆಯ ಕಾರು ಖರೀದಿಸಿದ ನಟ ಗಿಲ್ಲಿ ಹಲವು ಬಡ ಹಾಗೂ ಪ್ರತಿಭಾನ್ವಿತ ಯುವಕರಿಗೆ ಮಾದರಿಯಾಗಿದ್ದಾರೆ. ದುಬಾರಿ ಮೌಲ್ಯದ ಕಾರು ಖರೀದಿಸಿದ ಗಿಲ್ಲಿಗೆ ಹಲವರು ಶುಭಾಶಯ ಕೋರಿದ್ದಾರೆ.
ಝಿ ಕನ್ನಡದ ಹಲವು ವೇದಿಕೆಗಳಲ್ಲಿ ನಟ ಗಿಲ್ಲಿ ಕಾಣಿಸಿಕೊಳ್ಳುತ್ತಾರೆ. ನಕ್ಕು ನಗಿಸುವ ಕಾಮಿಡಿ, ತಕ್ಷಣಕ್ಕೆ ಡೈಲಾಗ್ ಹೇಳುವ ಸಾಮರ್ಥ್ಯ, ಯಾವುದೇ ಸಂದರ್ಭದಲ್ಲೂ ಜನರನ್ನು ನಗಿಸುವ ಕಲೆ ಗಿಲ್ಲಿಗಿದೆ. ಹೀಗಾಗಿ ಕನ್ನಡಿಗರ ಮನೆ ಮಾತಾಗಿದ್ದಾರೆ. ಝಿ ಕನ್ನಡದ ಹಲವು ವೇದಿಕೆಗಳಲ್ಲಿ ಗಿಲ್ಲಿ ಇರಲೇಬೇಕು ಅನ್ನುವಷ್ಟರ ಮಟ್ಟಿಗೆ ಜನಪ್ರಿಯರಾಗಿದ್ದಾರೆ. ಇದೀಗ ಗಿಲ್ಲಿ ದುಬಾರಿ ಕಾರಿನ ಮಾಲೀಕರಾಗಿದ್ದಾರೆ.
ಝಿ ಕನ್ನಡದ ಮೂಲಕ ಗಿಲ್ಲಿ ಅನ್ನೋ ಹೆಸರಿನಲ್ಲಿ ನಟ ಜನಪ್ರಿಯರಾಗಿದ್ದಾರೆ. ಆದರೆ ಗಿಲ್ಲಿ ಅಸಲಿ ಹೆಸರು ನಟರಾಜ. ಎಸ್‌ಎಸ್ಎಲ್‌ಸಿ ಬಳಿಕ ವೃತ್ತಿಪರ ಉದ್ಯೋಗ ಕೋರ್ಸ್ ಆಯ್ಕೆ ಮಾಡಿಕೊಂಡಿದ್ದರು. ಐಟಿಐ ಕೋರ್ಸ್ ಆಯ್ಕೆ ಮಾಡಿಕೊಂಡರೂ ಗಿಲ್ಲಿಯ ಆಸಕ್ತಿ ಕ್ಷೇತ್ರ ಸಿನಿಮಾ ಆಗಿತ್ತು. ಹೀಗಾಗಿ ಹಲವು ಕನಸುಗಳೊಂದಿಗೆ ಬೆಂಗಳೂರಿಗೆ ಬಂದ ಗಿಲ್ಲಿ, ಕೈಯಲ್ಲಿ ಒಂದು ರೂಪಾಯಿ ಇಲ್ಲದೆ ಇದೀಗ ಬದುಕು ಕಟ್ಟಿಕೊಂಡು ಉನ್ನತ ಸ್ಥಾನಕ್ಕೆ ಏರಿದ್ದಾರೆ.
ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕ, ಅಸಿಸ್ಟೆಂಟ್, ಧಾರವಾಹಿಗಳಲ್ಲಿ ಸಣ್ಣ ಪಾತ್ರಗಳನ್ನು ಮಾಡುತ್ತಿದ್ದಾರೆ. ಸದ್ಯ ಗಿಲ್ಲಿ ತುಂಬಾ ಬ್ಯೂಸಿಯಾಗಿದ್ದಾರೆ. ಝಿ ಕನ್ನಡ ಟಿವಿಯಲ್ಲಿ ಪ್ರತಿ ದಿನ ಗಿಲ್ಲಿ ಕಾರ್ಯಕ್ರಮಗಳು ಪ್ರಸಾರವಾಗುತ್ತಿದೆ. ಇದರ ಜೊತೆಗೆ ಹತ್ತು ಹಲವು ವೇದಿಕೆ ಕಾರ್ಯಕ್ರಮಗಳಲ್ಲೂ ಗಿಲ್ಲಿ ಬ್ಯೂಸಿಯಾಗಿದ್ದಾರೆ.
ಸಾಧನೆ ಮಾಡಬೇಕು ಎಂದು ಬೆಂಗಳೂರಿಗೆ ಆಗಮಿಸಿದ ಗಿಲ್ಲಿ, ಆರಂಭಿಕ ದಿನಗಳಲ್ಲಿ ತೀವ್ರ ಸಂಕಷ್ಟ ಎದುರಿಸಿದ್ದಾರೆ. ಸರಿಯಾಗಿ ಕೆಲಸ ಇಲ್ಲ, ವೇತನ ಇಲ್ಲದೇ ಆರ್ಥಿಕವಾಗಿ ಸೊರಗಿ ಹೋಗಿದ್ದರು. ಹೀಗಾಗಿ 2 ವರ್ಷಗಳ ಕಾಲ ತವರಿಗೆ ಹೋಗಿರಲಿಲ್ಲ. ಇದರ ನಡುವೆ ತಂದೆಯ ಅನಾರೋಗ್ಯದಿಂದ ತವರಿಗೆ ಮರಳಿದ್ದರು. ಸಾಧನೆ ಹೆಸರಲ್ಲಿ ತಂದೆ ತಾಯಿಯನ್ನು ದೂರವಿಡುವುದು, ಅವರನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂದು ಕಿವಿ ಮಾತು ಹೇಳಿದ್ದಾರೆ.