ಆರಂಭವಾಗಿ ವರ್ಷ ಆಗೋದ್ರೊಳಗೆ ಮುಗಿದೇ ಹೋಯ್ತಾ ಬೃಂದಾವನ ಸೀರಿಯಲ್!?
ತುಂಬಿದ ಕುಟುಂಬದ ಕಥೆಯನ್ನು ಹೊಂದಿರುವ ಬೃಂದಾವನ ಸೀರಿಯಲ್ ಆರಂಭವಾಗಿ ಏಳು ತಿಂಗಳೊಳಗೆ ಮುಕ್ತಾಯ ಕಾಣುತ್ತಿದೆ.
ಕಲರ್ಸ್ ಕನ್ನಡದಲ್ಲಿ (Colors Kannada) ಅದ್ಧೂರಿಯಾಗಿ ಆರಂಭವಾದ 32 ಜನರನ್ನು ಒಳಗೊಂದ ದೊಡ್ಡ ಕೂಡು ಕುಟುಂಬದ ಕಥೆಯನ್ನು ಹೊಂದಿರುವ ಬೃಂದಾವನ ಸೀರಿಯಲ್ ಆರಂಭಗೊಂಡಂದಿನಿಂದ ಇಲ್ಲಿವರೆಗೆ ಕಥೆಗಿಂತ ಹೆಚ್ಚಾಗಿ ಪಾತ್ರವರ್ಗದಿಂದ ಸುದ್ದಿಯಾಗಿದ್ದೇ ಹೆಚ್ಚು. ಕಳೆದ ವರ್ಷ ಅಕ್ಟೋಬರ್ ಅಂತ್ಯಕ್ಕೆ ಆರಂಭವಾದ ಈ ಧಾರಾವಾಹಿ ಇದೀಗ ಕೇವಲ 166 ಎಪಿಸೋಡ್ ಗಳಿಗೆ ಅಂತ್ಯವಾಗುತ್ತಿದೆ.
ಕಥೆ ಹೀಗಿದೆ: ಮನೆಯ ಮೊಮ್ಮಗನಿಗೆ ತಾನು ಸಾಯೋ ಮೊದಲು ಮದುವೆ ಮಾಡಿಸಬೇಕೆಂದು ಹೊರಟ ಅಜ್ಜಿ ಗ್ರಾಮದ ಹುಡುಗಿ ಪುಷ್ಪಾಳ ಗುಣಗಳಿಗೆ ಮನಸೋತು ಆಕೆಯನ್ನೇ ಸೊಸೆ ಮಾಡಿಕೊಳ್ಳಲು ಮನೆಯವರೆಲ್ಲರೂ ನಿರ್ಧರಿಸುತ್ತಾರೆ. ವಿದೇಶದಲ್ಲಿ ಓದುತ್ತಿರುವ ಆಕಾಶ್ ಗೆ ಫೋಟೋ ಕಳಿಸುವ ಸಂದರ್ಭದಲ್ಲಿ ಫೋಟೋ ಅದಲು ಬದಲಾಗಿ, ಬೇರೊಬ್ಬ ಹುಡುಗಿ ಸಹನಾಳ ಫೋಟೋ ಸೆಂಡ್ ಆಗಿ, ಆಕೆಯನ್ನೇ ಪುಷ್ಪಾ ಎಂದು ತಿಳಿದು ಪ್ರೀತಿಸುತ್ತಾನೆ ಆಕಾಶ್.
ಮದುವೆ ದಿನ ತಾನು ಇಷ್ಟಪಟ್ಟಿದ್ದ ಪುಷ್ಫಾ, ಮದುವೆಯಾಗುತ್ತಿರುವ ಪುಷ್ಫಾ ಬೇರೆ ಬೇರೆ ಎಂದು ಗೊತ್ತಾದ ಮೇಲೆ ಇಷ್ಟವಿಲ್ಲದಿದ್ದರೂ ಅಜ್ಜಿಯ ಖುಷಿಗೆ ಮದುವೆಯಾಗುತ್ತಾನೆ, ಆದರೆ ಆಕೆಯನ್ನು ಹೆಂಡತಿ ಎಂದು ಸ್ವೀಕರಿಸೋದಿಲ್ಲ. ಮದುವೆಯಾದ ಬಳಿಕ ಊರಲ್ಲೇ ಉಳಿಯುವ ಆಕಾಶ್, ಮತ್ತೆ ಕಾಲೇಜಿಗೆ ಸೇರುತ್ತಾನೆ, ಅಲ್ಲಿ ಮತ್ತೆ ಪುಷ್ಪಾ ಎಂದು ಇಷ್ಟಪಟ್ಟಿದ್ದ ಸಹನಾಳ ಪರಿಚಯವಾಗಿ ಆಕರ್ಷಣೆ, ಸ್ನೇಹ ಎಲ್ಲವೂ ಆರಂಭವಾಗುತ್ತೆ.
ಆ ಸಂದರ್ಭದಲ್ಲೇ ಆಕಾಶ್ ಗೆ ಪುಷ್ಪಾ ಎಷ್ಟು ಒಳ್ಳೆಯವರು, ಆಕೆಯ ಗುಣ, ಸ್ವಭಾವ, ಇತರರಿಗೆ ತೋರಿಸುವ ಪ್ರೀತಿ ಎಲ್ಲವೂ ಅರ್ಥವಾಗಿ, ತನ್ನ ಹೆಂಡತಿಯನ್ನೇ ಪ್ರೀತಿಸೋಕೆ ಆರಂಭಿಸುತ್ತಾನೆ. ಇದರ ಮಧ್ಯದಲ್ಲಿ ಸಹನಾ ತಾಯಿ ಎಂಟ್ರಿಯಾಗಿ, ಬೃಂದಾವನದ ಮೇಲಿನ ದ್ವೇಷದಿಂದಾಗಿ ಮಗಳಿಗೆ ಬ್ರೈನ್ ಟ್ಯೂಮರ್ ಇದೆ, ಅವಳನ್ನು ಪ್ರೀತಿಸೋ ನಾಟಕವಾಡು ಎನ್ನುತ್ತಾಳೆ, ಇದೀಗ ಸಹನಾಳಿಗೆ ತಾನು ಪ್ರೀತಿಸುತ್ತಿರುವ ಆಕಾಶ್, ತನ್ನ ಗೆಳತಿ ಪುಷ್ಪಾಳ ಗಂಡ ಅನ್ನೋದು ಗೊತ್ತಾಗಿ, ಎಲ್ಲರೆದುರು ಬಯಲು ಮಾಡುತ್ತಾಳೆ. ಆವಾಗ ಆಕಾಶ್ ನಿಮ್ಮ ತಾಯಿ ಹೇಳಿದ್ದಕ್ಕೆ ನಾನು ಸುಳ್ಳು ಹೇಳಿದ್ದೆ ಎಂದು ಪುಷ್ಪಾ ಮತ್ತು ಅಜ್ಜಿ ಮೇಲೆ ಆಣೆ ಮಾಡಿ ಹೇಳುತ್ತಾನೆ.
ಈಗ ಸಹಾನಾ ನೇರವಾಗಿ ಮನೆಗೆ ಹೋಗಿ ಅಮ್ಮನನ್ನೆ ಕರೆದುಕೊಂಡು ಬೃಂದಾವನಕ್ಕೆ ಕಾಲಿಟ್ಟಾಗ, ಎಲ್ಲರಿಗೂ ಕಥೆ ಏನು ಅನ್ನೋದು ಗೊತ್ತಾಗುತ್ತೆ. ಭಾರ್ಗವಿ ನಮ್ಮ ಮನೆಯನ್ನು ಮುರಿಯೋದಕ್ಕೆ ಇದೆಲ್ಲಾ ಮಾಡಿದ್ದು ಎಂದು ಗೊತ್ತಾಗುತ್ತೆ. ಆವಾಗ ಭಾರ್ಗವಿ ಹೌದು, ನನ್ನ ಗಂಡನನ್ನು ಆಕ್ಸಿಡೆಂಟ್ ಮಾಡಿ ನೀವೆ ಕೊಂದದ್ದು, ಅದರ ಸೇಡು ತೀರಿಸೋದಕ್ಕೆ ನಾನು ಹೀಗೆ ಮಾಡಿದ್ದು ಎಂದಾಗ, ಅಜ್ಜಿ ಆಕೆಯ ಗಂಡ ದೊಡ್ಡ ಸ್ಮಗ್ಲರ್ ಎನ್ನುವ ಸತ್ಯವನ್ನು ಹೇಳಿ, ಅದು ಆತ ಪೊಲೀಸರಿಂದ ತಪ್ಪಿಸಿಕೊಂಡು ಹೋಗುವಾಗ ನಡೆದ ಆಕ್ಸಿಡೆಂಟ್ ಅನ್ನೋದನ್ನು ಮನವರಿಕೆ ಮಾಡಿಸುತ್ತಾರೆ.
ಇದೀಗ ಭಾರ್ಗವಿಗೆ ತನ್ನ ತಪ್ಪಿನ ಅರಿವಾಗಿ ಎಲ್ಲರ ಬಳಿಯೂ ಕ್ಷಮೆ ಕೇಳಿ ಇಲ್ಲಿವರೆಗೆ ನಾನು ನನ್ನ ಮಗಳು ಒಬ್ಬಂಟಿಯಾಗಿದ್ದೆವು. ನಮಗೂ ನಿಮ್ಮ ಮನೆಯಲ್ಲಿ ಜಾಗಕೊಡಿ ಎಂದು ಅವರೂ ಕೂಡ ಬೃಂದಾವನಕ್ಕೆ ಸೇರಿಕೊಳ್ಳುತ್ತಾರೆ. ಅಲ್ಲಿಗೆ ಬೃಂದಾವನದ ಕಥೆ ಅಂತ್ಯವಾಗುತ್ತದೆ. ಇವತ್ತು ಕೊನೆಯ ಎಪಿಸೋಡ್ ಪ್ರಸಾರವಾಗಲಿದೆ. ಒಟ್ಟಲ್ಲಿ ಆರಂಭವಾಗಿ 7 ತಿಂಗಳೊಳಗೆ ಕೇವಲ 166 ಎಪಿಸೋಡ್ ಗಳೊಂದಿಗೆ ಸೀರಿಯಲ್ ಅಂತ್ಯವಾಗಿದೆ.
ಸೀರಿಯಲ್ ಮುಕ್ತಾಯ ಆಗಿರೋದಕ್ಕೆ ಹಲವರು ಸಂತಸ ವ್ಯಕ್ತಪಡಿಸಿದ್ದಾರೆ. ಧಾರಾವಾಹಿ ಶುರುವಾಗಿ ಒಂದು ವರ್ಷ ಆಗೋದ್ರೊಳಗೆ ಮುಗಿಸುವ ಹಂತಕ್ಕೆ ಬಂದಿದ್ದಾರಲ್ಲ, ಕೊನೆಗೂ ಮುಗಿಯುತು, ಥ್ಯಾಂಕ್ಯೂ ಕಲರ್ಸ್ ಕನ್ನಡ, ಹೀರೋ ಯಾವಾಗ ಚೇಂಜ್ ಆದ್ರೂ ಆವಾಗ್ಲೇ ಮುಗಿದಿತ್ತು ನಿಮ್ಮ ಕಥೆ. ಈವಾಗ ಅಪೀಶಿಯಲಿ ಮುಗಿತಾ ಇದೆ ಅಷ್ಟೇ ಎಂದಿದ್ದಾರೆ. ಇನ್ನು ಸೋಮವಾರದಿಂದ ದಿವ್ಯಾ ಉರುಡುಗ ಮತ್ತು ರಿತ್ವಿಕ್ ಮಠದ್ ಅಭಿನಯದ ನಿನಗಾಗಿ ಸೀರಿಯಲ್ ಪ್ರಸಾರವಾಗಲಿದೆ.