ಬಿಗ್‌ಬಾಸ್ ಕನ್ನಡ ಸೀಸನ್ 1ರಲ್ಲಿ ಯಾರೆಲ್ಲ ಇದ್ರು, ಯಾರು ವಿನ್ ಆದ್ರು ನಿಮಗೆ ನೆನಪಿದೆಯಾ?
ಭಾರತದ ಟೆಲಿವಿಷನ್ ನಲ್ಲಿ ಅತ್ಯಂತ ಜನಪ್ರಿಯ ಶೋ ಅಂದರೆ ಅದು ಬಿಗ್‌ಬಾಸ್. ಬಿಗ್‌ಬಾಸ್ ಕನ್ನಡದಲ್ಲಿ ಈಗ 10ನೇ ಸೀಸನ್ ನಡೆಯುತ್ತಿದೆ. ಆದ್ರೆ ಮೊದಲನೇ ಸೀಸನ್ ನಲ್ಲಿ ಯಾರೆಲ್ಲ ಇದ್ರು ನಿಮಗೆ ನೆನಪಿದೆಯಾ? ಇಲ್ಲಿದೆ ಅವರ ಪಟ್ಟಿ.
ಬಿಗ್‌ಬಾಸ್ ಕನ್ನಡದ ಮೊದಲನೇ ಆವೃತ್ತಿ 2013ರಲ್ಲಿ ಆರಂಭವಾಯ್ತು. ಮಾರ್ಚ್, 24 ರಂದು ಗ್ರ್ಯಾಂಡ್ ಪ್ರೀಮಿಯರ್ ನಡೆದು 2013 ಜೂನ್ 30 ಫಿನಾಲೆ ನಡೆಯಿತು. ಒಟ್ಟು 15 ಸ್ಪರ್ಧಿಗಳು ಇಬ್ಬರು ಅತಿಥಿಗಳು ಕಾರ್ಯಕ್ರಮಕ್ಕೆ ಬಂದಿದ್ದರು. ಪುಣೆಯಲ್ಲಿ ಇದಕ್ಕೆ ಸೆಟ್ ಹಾಕಲಾಗಿತ್ತು. 47 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ನಾಲ್ಕು ಫೈನಲಿಸ್ಟ್‌ಗಳಲ್ಲಿ, ನಟ ವಿಜಯ್ ರಾಘವೇಂದ್ರ ವಿನ್ನರ್ ಪಟ್ಟ ಮುಡಿಗೇರಿಸಿಕೊಂಡು 50 ಲಕ್ಷ ಕ್ಯಾಶ್ ಪ್ರೈಸ್ ಗೆದ್ದಿದ್ದರು.
ಖ್ಯಾತ ಕಲಾ ನಿರ್ದೇಶಕ, ಬಹುಮುಖ ಪ್ರತಿಭಾವಂತ ಅರುಣ್ ಸಾಗರ್ ರನ್ನರ್ ಅಪ್ ಆಗಿ ಹೊರಹೊಮ್ಮಿದರು. ಗುರುದಾಸ್ ಶೆಣೈ ಈ ಸೀಸನ್‌ನ ಹೌಸ್ ರಿಯಾಲಿಟಿಗೆ ಪ್ರಧಾನ ಸಂಪಾದಕರಾಗಿದ್ದರು. ಈ ಶೋ ಅಂದು ಇದ್ದ ಈಟಿವಿ ಕನ್ನಡ (ಈಗಿನ ಕಲರ್ಸ್) ವಾಹಿನಿಯು ಪ್ರತಿದಿನ ರಾತ್ರಿ 8 ರಿಂದ 9 ರವರೆಗೆ ಪ್ರಸಾರ ಮಾಡುತ್ತಿತ್ತು.
ದಕ್ಷಿಣ ಭಾರತದ ಚಲನಚಿತ್ರಗಳಲ್ಲಿ ಜನಪ್ರಿಯ ನಟಿಯಾಗಿದ್ದ ನಿಖಿತಾ ತುಕ್ರಾಲ್ ಅವರು ಎರಡನೇ ರನ್ನರ್ ಅಪ್ ಆಗಿದ್ದರು. ಸುದೀಪ್ ನಟನೆಯ ಮಹಾರಾಜ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಪಂಜಾಬಿ ಚೆಲುವೆ. ಕನ್ನಡದಲ್ಲಿ 13 ಚಿತ್ರಗಳಲ್ಲಿ ನಟಿಸಿದ್ದಾರೆ.
ಬ್ರಹ್ಮಾಂಡ ಗುರೂಜಿ ಎಂದೇ ಖ್ಯಾತಿ ಪಡೆದಿರುವ ನರೇಂದ್ರ ಶರ್ಮಾ ಅವರು ಬಿಗ್‌ಬಾಸ್ ಕನ್ನಡ ಮೊದಲನೇ ಸೀಸನ್‌ನ ಮೂರನೇ ರನ್ನರ್ ಅಪ್ ಆಗಿದ್ದರು. ಬಿಗ್‌ಬಾಸ್ ಸೀಸನ್ 10ರಲ್ಲಿ ಅತಿಥಿಯಾಗಿ ಬಂದಿದ್ದರು.
80-90 ರ ದಶಕದಲ್ಲಿ ಕನ್ನಡ ಚಿತ್ರರಂಗವನ್ನು ಆಳಿದ ಹಿರಿಯ ನಟಿ ಚಂದ್ರಿಕಾ ಕೂಡ ಬಿಗ್‌ಬಾಸ್ ಕನ್ನಡ ಸೀಸನ್ 1ರ ಸ್ಪರ್ಧಿಯಾಗಿದ್ದರು. ಇಂದಿಗೂ ನಟಿ ಚಂದ್ರಿಕಾ ತಮ್ಮ ಗ್ಲಾಮರ್ ಲುಕ್‌ನಿಂದ ಗಮನ ಸೆಳೆದಿದ್ದಾರೆ. 90 ದಿನಗಳ ಕಾಲ ಬಿಬಿಕೆ ಮನೆಯಲ್ಲಿದ್ದರು.
ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀ ಕೂಡ ಮೊದಲನೇ ಸೀಸನ್ ಸ್ಪರ್ಧಿಯಾಗಿದ್ದು, ಬಿಗ್‌ಬಾಸ್ ಮನೆಯಲ್ಲಿ 76 ದಿನಗಳ ಬಳಿಕ ಶೋನಿಂದ ಔಟ್ ಆಗಿದ್ದರು.
ನಟಿ ರಿಷಿಕಾ ಸಿಂಗ್ 42ನೇ ದಿನ ಬಿಗ್‌ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟು 62 ನೇ ದಿನಕ್ಕೆ ಮನೆಯಿಂದ ಹೊರ ಹೋಗಿದ್ದರು. ರಿಯಾಲಿಟಿ ಶೋ ನಲ್ಲಿ ಸ್ಪರ್ಧಿಯಾಗಿದ್ದ ರೋಹನ್ ಗೌಡ 38ನೇ ದಿನಕ್ಕೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಮನೆಯೊಳಗೆ ಬಂದು, 55 ನೇ ದಿನಕ್ಕೆ ಮನೆಯಿಂದ ಹೊರಹೋಗಿದ್ದರು. ಇನ್ನು ನರ್ಸ್ ಜಯಲಕ್ಷಿ ಮೊದಲ ವಾರ ಮನೆಯಿಂದ ಹೊರಹೋಗಿ ಮತ್ತೆ 27ನೇ ದಿನಕ್ಕೆ ರೀ ಎಂಟ್ರಿ ಪಡೆದು 48 ನೇ ದಿನಕ್ಕೆ ಮನೆಯಿಂದ ಹೊರಹೋದರು.
ಕನ್ನಡದ ಜನಪ್ರಿಯ ನಿರೂಪಕಿ ಅಪರ್ಣಾ ಅವರು ಕೂಡ ಸೀಸನ್ ಒಂದರಲ್ಲಿ ಸ್ಪರ್ಧಿಯಾಗಿದ್ದರು. ಸ್ಪಷ್ಟ ಕನ್ನಡ ಮಾತು, ನಡೆ ನುಡಿಯಿಂದ ಅವರು ಗುರುತಿಸಿಕೊಂಡಿದ್ದಾರೆ. 41 ನೇ ದಿನಕ್ಕೆ ಮನೆಯಿಂದ ಹೊರಬಂದರು.
BBK kannada sesoan 1
ಇನ್ನು ಗಂಡ ಹೆಂಡತಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದ ನಟ ತಿಲಕ್ 41 ನೇ ದಿನಕ್ಕೆ ಮನೆಯಿಂದ ಹೊರಬಂದರು. ಹಲವಾರು ವಿವಾದಗಳಲ್ಲಿ ಸಿಲುಕಿಸಿದ್ದ ಕಾಳಿ ಮಠದ ರಿಷಿ ಕುಮಾರ ಸ್ವಾಮೀಜಿ ಅವರು ಕೂಡ ಸ್ಪರ್ಧಿಯಾಗಿ 27 ನೇ ದಿನಕ್ಕೆ ಮನೆಯಿಂದ ಹೊರಬಂದರು. ಇನ್ನು ಆರ್‌ಜೆ, ನಟ ವಿನಾಯಕ್ ಜೋಶಿ ಕೂಡ ಸ್ಪರ್ಧಿಯಾಗಿದ್ದರು 34ನೇ ದಿನಕ್ಕೆ ಮನೆಯಿಂದ ಹೊರಬಂದರು.
ಇದಲ್ಲದೆ ಪರಮಾತ್ಮ, ಕೇಸ್ ನಂ 18/9 ಮುಂತಾದ ಚಿತ್ರಗಳಲ್ಲಿ ನಟಿಸಿದ್ದ ಶ್ವೇತಾ ಪಂಡಿತ್ ಕೂಡ ಸ್ಪರ್ಧಿಯಾಗಿದ್ದರು. ಸ್ಪರ್ಧಿಯಾಗಿದ್ದ ತಿಲಕ್ ಜೊತೆ ಆತ್ಮೀಯವಾಗಿದ್ದರು. 20ನೇ ದಿನಕ್ಕೆ ಮನೆಯಿಂದ ಹೊರಹಾಕಲ್ಪಟ್ಟರು. ನಟಿ ಸಂಜನಾ ಗಲ್ರಾನಿ ಕೂಡ ಬಿಗ್ ಬಾಸ್ ಸೀಸನ್ 1 ರ ಸ್ಪರ್ಧಿಯಾಗಿದ್ದರು. 14 ನೇ ದಿನಕ್ಕೆ ಅಂದರೆ 2ನೇ ವಾರ ಮನೆಯಿಂದ ಹೊರಬಂದಿದ್ದರು. ಇದರ ಜೊತೆಗೆ ನಟ ಲೂಸ್ ಮಾದ ಯೋಗಿ ಮತ್ತು ಹಳ್ಳಿ ಹೈದ, ಪ್ಯಾಟೆಗ್ ಬಂದ ರಿಯಾಲಿಟಿ ಶೋ ವಿಜೇತ ನಟ ರಾಜೇಶ್ (ನವೆಂಬರ್ 2013 ರಲ್ಲಿ ನಿಧನ) ಅತಿಥಿಯಾಗಿ ಭಾಗವಹಿಸಿದ್ದರು.