ಬಿಗ್ ಬಾಸ್ ಗೋಲ್ಡ್ ಸುರೇಶ್ ಮಹಾ ವಂಚಕ; ಗಂಭೀರ ಆರೋಪ ಮಾಡಿದ ಮೈನುದ್ದೀನ್!
ಗೋಲ್ಡ್ ಸುರೇಶ್ ವಿರುದ್ಧ 14 ಲಕ್ಷ ರೂ. ವಂಚನೆ ಆರೋಪ ಕೇಳಿಬಂದಿದೆ. ಮಾನ್ವಿ ಯುವಕ ಮೈನುದ್ದಿನ್ ಕೇಬಲ್ ಚಾನೆಲ್ ಸ್ಟುಡಿಯೋ ನಿರ್ಮಾಣಕ್ಕೆ ಹಣ ನೀಡಿದ್ದರು ಎಂದು ಆರೋಪಿಸಿದ್ದಾರೆ. ಸುರೇಶ್ ಕೆಲಸ ಅರ್ಧಕ್ಕೆ ಬಿಟ್ಟು ಹಣ ವಾಪಸ್ ನೀಡಿಲ್ಲ ಎಂದು ದೂರಲಾಗಿದೆ.

ರಾಯಚೂರು (ಜೂ. 18): ಕಲರ್ಸ್ ಕನ್ನಡ ಟಿವಿ ರಿಯಾಲಿಟಿ ಶೋ ಬಿಗ್ ಬಾಸ್ ಮೂಲಕ ಖ್ಯಾತಿಯ ಗೋಲ್ಡ್ ಸುರೇಶ್ ವಿರುದ್ಧ 14 ಲಕ್ಷ ರೂ. ವಂಚನೆ ಮಾಡಿದ್ದಾರೆ ಎಂದು ಮಾನ್ವಿ ಪಟ್ಟಣದ ಯುವಕ ಮೈನುದ್ದಿನ್ ಗಂಭೀರ ವಂಚನೆ ಆರೋಪ ಮಾಡಿದ್ದಾರೆ. ಈ ಘಟನೆ ರಾಜ್ಯದ ಮನೋರಂಜನೆ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
14 ಲಕ್ಷ ರೂ. ಅಗ್ರೀಮೆಂಟ್, ಹಣ ವಾಪಸ್ ಮಾಡದ ಆರೋಪ
ಮೈನುದ್ದಿನ್ ಎಂಬ ಯುವಕನಿಗೆ ತನ್ನ ಪಟ್ಟಣದಲ್ಲಿ ಕೇಬಲ್ ಚಾನೆಲ್ ಸೆಟ್ ಅಪ್ ಮಾಡಬೇಕೆಂದ ಆಸೆಯಿತ್ತು.. ಈ ಹಿನ್ನೆಲೆಯಲ್ಲಿ, ಸ್ಟುಡಿಯೋ ನಿರ್ಮಾಣ ಹಾಗೂ ಉಪಕರಣಗಳ ಖರೀದಿಗೆ ಸಂಬಂಧಿಸಿ 2017 ರಲ್ಲೇ ಗೋಲ್ಡ್ ಸುರೇಶ್ ಜೊತೆ 14 ಲಕ್ಷ ರೂ.ಗೆ ಒಪ್ಪಂದ (ಅಗ್ರಿಮೆಂಟ್) ಮಾಡಲಾಗಿತ್ತಂತೆ.
ಇದರ ಭಾಗವಾಗಿ ಪ್ರಾರಂಭದಲ್ಲಿ 4 ಲಕ್ಷ ರೂ. ಮುಂಗಡವಾಗಿ ನೀಡಲಾಗಿತ್ತು. ನಂತರ ಹಂತ ಹಂತವಾಗಿ 7 ಲಕ್ಷ ರೂಪಾಯಿ ನೀಡಿದ್ದೇನೆ ಎಂದು ಮೈನುದ್ದಿನ್ ಆರೋಪಿಸಿದ್ದಾರೆ. ಆದರೆ, ಕೆಲಸವನ್ನು ಅರ್ಧಕ್ಕೆ ಬಿಟ್ಟು, ಅತಂತ್ರ ಸ್ಥಿತಿಗೆ ಸಿಲುಕಿದಂತಾಗಿದೆ.
ಹಣ ಕೊಟ್ಟ ಕೆಲವು ದಿನಗಳು ಮಾತ್ರ ಒಂದಷ್ಟು ಕೆಲಸ ಮಾಡಿ ನಂತರ ಕೆಲಸ ಮಾಡಿಸದೇ ಗೋಲ್ಡ್ ಸುರೇಶ್ ಸುಮ್ಮನಾಗಿದ್ದಾಎ. ಜೊತೆಗೆ, ಬಾಕಿ ಹಣವನ್ನು ಕೊಟ್ಟರೂ ಕೆಲಸ ಮುಗಿಸಲು ನಿರಾಕರಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಈ ನಡುವೆ, ಮೈನುದ್ದೀನನ ಒತ್ತಡದ ಕಾರಣಕ್ಕಾಗಿ ಸುರೇಶ್ 1 ಲಕ್ಷ ರೂ. ಮರು ಪಾವತಿಸಿದ್ದಾರೆಂದು ತಿಳಿದು ಬಂದಿದೆ. ನಂತರ ಮೈನುದ್ದಿನ್ ಮತ್ತು ಆತನ ಸ್ನೇಹಿತ ಬಸವರಾಜ್ ಅವರು ಸುರೇಶ್ ಅವರನ್ನು ಸಂಪರ್ಕಿಸಲು ಯತ್ನಿಸಿದಾಗ, ಸುರೇಶ್ ಕಾಣೆಯಾಗಿದ್ದಾರೆ ಎಂದು ದೂರಿದ್ದಾರೆ.
2025ರ ಏಪ್ರಿಲ್ 29 ರಂದು ಸುರೇಶ್ ಮೈನುದ್ದಿನ್ ಸ್ನೇಹಿತ ಬಸವರಾಜ್ ಅವರ ಖಾತೆಗೆ 50,000 ರೂ. ವರ್ಗಾಯಿಸಿದ್ದರೂ, ಉಳಿದಿರುವ ಸುಮಾರು 4 ಲಕ್ಷ ರೂ. ಪಾವತಿ ಮಾಡಿಲ್ಲ ಎನ್ನಲಾಗಿದೆ. ಬಾಕಿ ಹಣ ನೀಡುವ ಭರವಸೆ ನೀಡಿ 'ಮುಂಬೈಗೆ ಬನ್ನಿ, ಹಣ ಕೊಡ್ತೀನಿ' ಎಂದು ಲೊಕೇಶನ್ ಶೇರ್ ಮಾಡಿದ್ದರು. ಅಲ್ಲಿಯೂ ಹಣ ಪಾವತಿ ಮಾಡಿಲ್ಲ ಎಂದು ಮೈನುದ್ದಿನ್ ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಗೋಲ್ಡ್ ಸುರೇಶ್‌ಗೆ ಹಣವನ್ನು ಕೊಟ್ಟು ಮೋಸ ಹೋಗಿದ್ದಾಗಿ, ನೊಂದಿದ್ದಾನೆ. ಜೊತೆಗೆ ಮೈನುದ್ದಿನ್ ಈಗ ನ್ಯಾಯದ ಸಹಾಯವನ್ನು ಪಡೆಯಲು ಮುಂದಾಗಿದ್ದಾರೆ. ಆದರೆ ಇದುವರೆಗೆ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ ಎನ್ನಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಗೋಲ್ಡ್ ಸುರೇಶ್ ಪ್ರತಿಕ್ರಿಯೆ ನೀಡಿಲ್ಲ. ಅವರನ್ನು ಸಂಪರ್ಕಿಸಲು ನಡೆದ ಪ್ರಯತ್ನಗಳು ವಿಫಲವಾಗಿವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಅಧಿಕಾರಿಗಳಿಗಳಿಂದ ಮಾಹಿತಿ ನಿರೀಕ್ಷಿಸಲಾಗಿದೆ.