ಪ್ರೀತಿ ಇಲ್ಲದ ಪ್ರೇಮಕತೆ, ಕೊನೆಯಲ್ಲಿ ಒಂದಾಗ್ತಾರೆ ಅನ್ನೋದೇ ಡೌಟ್: ದಿವ್ಯಾ ಉರುಡುಗ- ಅರವಿಂಗ್ ಕಹಾನಿ ಟ್ವಿಸ್ಟ್!
ಕೊನೆಗೂ ತೆರೆ ಮೇಲೆ ಬರ್ತಿದೆ ಅರ್ದಂ ಬರ್ಧ ಪ್ರೇಮ ಕಥೆ. ರಿಯಲ್ ಲವ್‌ಗೂ ಅನ್‌ಸ್ಕ್ರೀನ್ ಲವ್‌ಗೂ ಲಿಂಕ್ ಇದ್ಯಾ?
ಡಿ.1ರಂದು ತೆರೆ ಮೇಲೆ ಬರುತ್ತಿರುವ ಚಿತ್ರಗಳ ಪೈಕಿ ಅರವಿಂದ್ ಕೌಶಿಕ್ ನಿರ್ದೇಶನದ ‘ಅರ್ದಂಬರ್ಧ ಪ್ರೇಮಕಥೆ’ ಚಿತ್ರವೂ ಒಂದು. ಈ ಚಿತ್ರದ ಟ್ರೇಲರ್ ಬಿಡುಗಡೆ ಇತ್ತೀಚೆಗೆ ನಡೆಯಿತು.
ಬಿಗ್‌ಬಾಸ್ ಖ್ಯಾತಿಯ ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆಪಿ ನಾಯಕ, ನಾಯಕಿಯಾಗಿ ನಟಿಸಿರುವ ಚಿತ್ರವಿದು. ಈ ಸಂದರ್ಭದಲ್ಲಿ ನಿರ್ದೇಶಕ ಅರವಿಂದ್ ಕೌಶಿಕ್, ‘ಇದು ಪ್ರೀತಿ ಇಲ್ಲದ ಪ್ರೇಮಕತೆಯ ಸಿನಿಮಾ.
ನಾಯಕ, ನಾಯಕಿ ಇಬ್ಬರೂ ಒಂದಾಗಬೇಕು ಎಂಬುದು ನೋಡುಗರ ಆಸೆ ಆಗಿರುತ್ತೆ. ಅವರು ಒಂದಾಗುತ್ತಾರೆಯೇ, ಇಲ್ಲವೇ ಎಂಬುದನ್ನು ಚಿತ್ರದಲ್ಲಿ ನೋಡಬಹುದು. ಕ್ಲೈಮ್ಯಾಕ್ಸ್ ನೋಡಿ ಸ್ವತಃ ನನಗೆ ಕಣ್ಣಲ್ಲಿ ನೀರು ಬಂತು’ ಎಂದರು.
ಅರವಿಂದ್ ಕೆಪಿ, ‘ಈ ಚಿತ್ರದಲ್ಲಿ ನಾವಿಬ್ಬರೂ ಪ್ರೇಮಿಗಳೇ ಅಲ್ಲ. ಅದೇ ಕಾರಣದಿಂದ ಚಿತ್ರಕ್ಕೆ ‘ಅರ್ದಂಬರ್ಧ ಪ್ರೇಮಕಥೆ’ ಎನ್ನುವ ಹೆಸರು ಇಟ್ಟಿದ್ದೇವೆ’ ಎಂದರು. ದಿವ್ಯಾ ಉರುಡುಗ, ‘ಈ ಚಿತ್ರ ನನಗೆ ಸ್ಪೆಷಲ್.
ಯಾಕೆಂದರೆ ನಿರ್ದೇಶಕ ಅರವಿಂದ್ ಕೌಶಿಕ್ ಜತೆ 2ನೇ ಬಾರಿಗೆ ಕೆಲಸ ಮಾಡಿರೋದು, ಅರವಿಂದ್ ಕೆಪಿ ಜತೆ ಸ್ಕ್ರೀನ್‌ಶೇರ್ ಮಾಡಿರೋದಕ್ಕೆ. ನಿಜ ಜೀವನದಲ್ಲಿ ನಾನು ಹೇಗಿದ್ದೇನೋ, ಅದಕ್ಕೆ ತದ್ವಿರುದ್ಧವಾದ ಪಾತ್ರ ಈ ಚಿತ್ರದಲ್ಲಿದೆ’ ಎಂದರು.
ಕಾರ್ತಿಕ್, ರ‍್ಯಾಪರ್ ಅಲೋಕ್, ಶ್ರೇಯಾ ಬಾಬು, ವೆಂಕಟಶಾಸ್ತ್ರಿ, ಪ್ರದೀಪ್ ರೋಷನ್, ಸೂರಜ್ ಹೂಗಾರ್, ಹಿರಿಯ ನಟ ದ್ವಾರಕೀಶ್ ಪುತ್ರ ಅಭಿಲಾಷ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ, ಸೂರ್ಯ ಕ್ಯಾಮೆರಾ ಚಿತ್ರಕ್ಕಿದೆ.