ಅಂತರಪಟದ ರವಿ ರಾಷ್ಟ್ರಪ್ರಶಸ್ತಿ ಪಡೆದ ಚಿತ್ರದ ನಾಯಕ ಗೊತ್ತಾ?
ಅಂತರಪಟ ಸೀರಿಯಲ್ ನೋಡೋರಿಗೆ ಚಿರಪರಿಚಿತ ಅಂದ್ರೆ ರವಿ ಪಾತ್ರ ನಿರ್ವಹಿಸುತ್ತಿರುವ ನಟ ಕಾರ್ತಿಕ್ ಮಹೇಶ್. ಈತನ ನಟನೆ ನೋಡಿ ನೀವು ಇಷ್ಟಪಟ್ಟಿರಬಹುದು. ಆದ್ರೆ ಈತ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರದ ನಾಯಕ ಅನ್ನೋದು ಗೊತ್ತಾ?
ಕಲರ್ಸ್ ಕನ್ನಡದಲ್ಲಿ ಇತ್ತೀಚೆಗೆ ಬಿಡುಗಡೆಯಾದ ಸೀರಿಯಲ್ ಅಂತರಪಟದಲ್ಲಿ ನಾಯಕಿ ಆರಾಧನಾಳನ್ನು ನಿಷ್ಕಲ್ಮಷವಾಗಿ ಪ್ರೀತಿಸುವ, ಆಕೆಯ ಕನಸು ನೆರವೇರಿಸೋಕೆ ತನ್ನ ಆಸ್ತಿಯನ್ನೇ ಒತ್ತೆ ಇಡುವ ಸ್ನೇಹಿತ ರವಿ ಬಗ್ಗೆ ನಿಮಗೆ ಚೆನ್ನಾಗಿಯೇ ಗೊತ್ತಿದೆ ಅಲ್ವಾ?
ಎಷ್ಟೋ ಜನ ಸೀರಿಯಲ್ (serial) ನೋಡುತ್ತಿರುವವರು ರವಿ ಅವರನ್ನೇ ನಾಯಕನನ್ನಾಗಿ ಮಾಡಿ, ರವಿ ಮತ್ತು ಆರಾಧನಾಳನ್ನು ಬೇರೆ ಮಾಡಬೇಡಿ. ರವಿ ಬೆಸ್ಟ್ ಆ್ಯಕ್ಟರ್. ನಾಯಕನಿಗಿಂತ ಇವರೇ ಚೆನ್ನಾಗಿ ನಟಿಸುತ್ತಾರೆ, ಇಬ್ಬರ ಪ್ರೀತಿ ಮುರಿಯುವ ಹಾಗೆ ಮಾಡಬೇಡಿ ಎಂದೆಲ್ಲಾ ಜನ ಬೇಡಿಕೆ ಇಡೋವಷ್ಟು ರವಿ ನಟನೆ ಜನರಿಗೆ ಇಷ್ಟವಾಗಿದೆ.
ಈ ರವಿ ಅವರ ನಿಜವಾದ ಹೆಸರು ಕಾರ್ತಿಕ್ ಮಹೇಶ್. ಈಗಾಗಲೇ ಹಲವು ಸೀರಿಯಲ್ ಗಳಲ್ಲಿ ನಟಿಸಿದ್ದ ಇವರು ನಟಿಸಿದ್ದ ಮೊದಲ ಸಿನಿಮಾವೇ ರಾಷ್ಟ್ರಪ್ರಶಸ್ತಿ (national award) ಪಡೆದಿದೆ. ಯಾವುದು ಈ ಸಿನಿಮಾ, ಕಾರ್ತಿಕ್ ನಟನಾ ಜಗತ್ತಿನ ಬಗ್ಗೆ ಮತ್ತೊಂದಿಷ್ಟು ತಿಳಿಯೋಣ.
ಮೂಲತಃ ಮೈಸೂರಿನವರಾದ ಕಾರ್ತಿಕ್ (Karthik Mahesh), ಮಹಾರಾಜ ಕಾಲೇಜಿನಲ್ಲಿ ಬಿಎಸ್ ಸಿ ಮಾಡಿದ್ದರು. ನಟನಾಗುವ ಕನಸು ಹೊತ್ತು ಇವರು ಬೆಂಗಳೂರಿಗೆ ಬಂದು, ಸೀರಿಯಲ್ ಗಳಿಗೆ ಹಲವಾರು ಆಡಿಶನ್ ಕೊಟ್ಟರು. ಖುಷಿ ಸೀರಿಯಲ್ ಮೂಲಕ ಇವರು ನಟನೆಗೆ ಎಂಟ್ರಿ ಕೊಟ್ಟರು.
ಮಾಡೆಲಿಂಗ್ (modeling) ಮೂಲಕ ವೃತ್ತಿ ಜೀವನ ಆರಂಭಿಸಿದ ಕಾರ್ತಿಕ್ ಗೆ, ಬಾಲ್ಯದಿಂದಲೂ ನಟನೆ ಮಾಡುವ ಕನಸು ಇತ್ತು. ತಮ್ಮ ಕನಸನ್ನು ಸೀರಿಯಲ್ ಗಳಲ್ಲಿ ಅಭಿನಯಿಸುವ ಮೂಲಕ ಇವರು ನನಸು ಮಾಡಿದರು.
ಖುಷಿ ಸೀರಿಯಲ್ ನಲ್ಲಿ ಇವರು ನಟಿಸುತ್ತಿರುವಾಗ, ಸುನೀಲ್ ಪುರಾಣಿಕ್ ಇವರ ತಂದೆಯ ಪಾತ್ರ ನಿರ್ವಹಿಸಿದ್ದರಂತೆ. ಸುನಿಲ್ ಪುರಾಣಿಕ್ ಪುತ್ರ ಸಾಗರ್ ಪುರಾಣಿಕ್ ಬಳಿಕ ತಮ್ಮ ನಿರ್ದೇಶನದ ಡೊಳ್ಳು ಚಿತ್ರಕ್ಕೆ ಕಾರ್ತಿಕ್ ರನ್ನು ನಾಯಕರನ್ನಾಗಿ ಆಯ್ಕೆ ಮಾಡಿದರು.
ಅಭಿನಯಿಸಿದ ಮೊದಲ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ದೊರೆತದ್ದು ಇವರ ಸಂತಸವನ್ನು ಹೆಚ್ಚಿಸಿದೆ. ಜೊತೆಗೆ ಜವಾಬ್ಧಾರಿಯನ್ನು ಹೆಚ್ಚಿಸಿದೆ ಎನ್ನುವ ಇವರು ಡೊಳ್ಳು ಚಿತ್ರಕ್ಕಾಗಿ ಸ್ವತಃ ತಾವೇ ಡೊಳ್ಳು ಬಡಿಯೋದನ್ನು ಸಹ ಕರಗತ ಮಾಡಿಕೊಂಡಿದ್ದರು.
ಈಗಾಗಲೇ ಅಕ್ಕ, ಮಹಾಕಾಳಿ, ದೇವಯಾನಿ, ಇಂತಿ ನಿಮ್ಮ ಆಶಾ, ಪುಟ್ಟಕ್ಕನ ಮಕ್ಕಳು ಸೀರಿಯಲ್ ನಲ್ಲಿ ನಟಿಸಿದ್ದ ಇವರು ಇದೀಗ ರಾಜಿ ಸೀರಿಯಲ್ ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಅಂತರಪಟ ಸೀರಿಯಲ್ ನಲ್ಲಿ ರವಿ ಆಗಿ ನಟಿಸುತ್ತಿದ್ದಾರೆ.