ಓಪನ್‌ಎಐ ಸಂಶೋಧಕ ಭಾರತೀಯ ಮೂಲದ ಸುಚೀರ್ ಬಾಲಾಜಿ ನಿಗೂಢ ಸಾವು: ನೆಟ್ಟಿಗರಿಂದ ಹಲವು ಅನುಮಾನ
ಚಾಟ್‌ಜಿಪಿಟಿ (ChatGPT) ರಚಿಸಿದ ಓಪನ್‌ಎಐ (OpenAI) ಸಂಸ್ಥೆಯ ಸಂಶೋಧಕರಾಗಿದ್ದ ಸುಚೀರ್ ಬಾಲಾಜಿ ಅವರು ತಮ್ಮ ಸ್ಯಾನ್ ಫ್ರಾನ್ಸಿಸ್ಕೋದ ನಿವಾಸದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಅವರು ವಾಸವಿದ್ದ ಮನೆಯಲ್ಲಿ ಅವರ ಶವವಾಗಿ ಪತ್ತೆಯಾಗಿದೆ. ಒಪನ್ ಎಐನಿಂದ ಆಗುತ್ತಿರುವ ದುರುಪಯೋಗದ ಬಗ್ಗೆ ಅವರು ವಿವರಿಸಿದ ನಂತರ ಅವರ ಈ ಸಾವು ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಇವರ ಸಾವಿನ ಬಗ್ಗೆ ಅನುಮಾನ ತೀವ್ರವಾಗಿದೆ.
ಸುಚೀರ್ ಬಾಲಾಜಿ ಯಾರು?
ಸುಚೀರ್ ಬಾಲಾಜಿ ಯಾರು?
ಭಾರತೀಯ ಮೂಲದ 26 ವರ್ಷದ ಸಂಶೋಧಕ ಮತ್ತು ಮಾಜಿ ಓಪನ್‌ಎಐ ಉದ್ಯೋಗಿ ಸುಚೀರ್ ಬಾಲಾಜಿ ನವೆಂಬರ್ 26 ರಂದು ತಮ್ಮ ಸ್ಯಾನ್ ಫ್ರಾನ್ಸಿಸ್ಕೋ ನಿವಾಸದಲ್ಲಿ ಮೃತಪಟ್ಟಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೋ ಮುಖ್ಯ ವೈದ್ಯರು ಅವರ ದೇಹವನ್ನು ಪರೀಕ್ಷಿಸಿದ ನಂತರ ಅವರು ಸ್ವತಃ ಸಾವಿಗೆ ಶರಣಾಗಿದ್ದಾರೆ ಎಂಬುದನ್ನು ದೃಢಪಡಿಸಿದರು.
ಓಪನ್‌ಎಐ ಸಂಶೋಧಕ
ಸ್ಯಾನ್ ಫ್ರಾನ್ಸಿಸ್ಕೋದ ಲೋವರ್ ಹೈಡ್ ಜಿಲ್ಲೆಯಲ್ಲಿರುವ ಅವರ ಮನೆಯಲ್ಲಿ ಪೊಲೀಸರು ಮತ್ತು ವೈದ್ಯರು ತನಿಖೆ ನಡೆಸಿದರು.ಸುಚೀರ್ ಬಾಲಾಜಿ ಸಾವಿನ ವಿಚಾರ ಈಗ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಸಂಚಲನ ಸೃಷ್ಟಿಸಿದ್ದು, ಜನರಿಂದ ಹಲವು ರೀತಿಯ ಅನುಮಾನಗಳನ್ನು ಹುಟ್ಟುಹಾಕಿದೆ. ಎಲಾನ್ ಮಸ್ಕ್‌ರಂತಹ ಗಣ್ಯ ವ್ಯಕ್ತಿಗಳು ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಭಾರತೀಯ ಮೂಲದ ಸುಚೀರ್ ಬಾಲಾಜಿ, ಬರ್ಕ್ಲಿಯಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಓದಿದ ಪ್ರತಿಭಾವಂತ ಕಂಪ್ಯೂಟರ್ ತಜ್ಞ. ಕಾಲೇಜಿನಲ್ಲಿ, ಅವರು OpenAI ಮತ್ತು Scale AI ಬಗ್ಗೆ ತರಬೇತಿ ಪಡೆದಿದ್ದರು. ಇದರಿಂದ ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಅನುಭವಿ ಎನಿಸಿದ್ದರು.
ಪದವಿ ಪಡೆದ ನಂತರ, ಅವರು OpenAI ನಲ್ಲಿ ಪೂರ್ಣಾವಧಿ ಉದ್ಯೋಗಕ್ಕೆ ಸೇರಿದ್ದರು. ಅಲ್ಲಿ ಅವರು WebGPT ಮತ್ತು GPT-4 ನ ಹಲವು ಪ್ರಮುಖ ತಂತ್ರಜ್ಞಾನ ಕಲಿಕೆ ಯೋಜನೆಗಳಲ್ಲಿ ಕೆಲಸ ಮಾಡಿದರು. ಅವರ LinkedIn ಪ್ರೊಫೈಲ್ ಪ್ರಕಾರ, ChatGPT ಚಾಟ್‌ಬಾಟ್ ರಚಿಸುವಲ್ಲಿ ಅವರ ಪಾತ್ರವೂ ಇದೆ.
ನಾಲ್ಕು ವರ್ಷಗಳಲ್ಲಿ, ಬಾಲಾಜಿ OpenAI ನ ಅಭಿವೃದ್ಧಿ ತಂಡದಲ್ಲಿ ಪ್ರಮುಖ ಸದಸ್ಯರಾಗಿದ್ದರು. ಆ ಸಂಸ್ಥೆಯ AI ತಂತ್ರಜ್ಞಾನದ ಪ್ರಗತಿಗೆ ಅಪಾರ ಕೊಡುಗೆ ನೀಡಿದರು. ಆದರೆ, ಆ ತಂತ್ರಜ್ಞಾನದ ಸಾಮಾಜಿಕ ಪರಿಣಾಮಗಳ ಬಗ್ಗೆ ನೈತಿಕ ಪ್ರಶ್ನೆಗಳನ್ನು ಎತ್ತಿದರು. ಇದರಿಂದ ಅವರು ಆ ಸಂಸ್ಥೆಯಿಂದಲೇ ಹೊರನಡೆದರು. ಓಪನ್ AI ಗೆ ಮೊದಲು, ಬಾಲಾಜಿ Quora ದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿದ್ದರು.
ಬಾಲಾಜಿ ಅಕ್ಟೋಬರ್‌ನಲ್ಲಿ ದಿ ನ್ಯೂಯಾರ್ಕ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ, OpenAI ನ ಕೃತಿಸ್ವಾಮ್ಯಕ್ಕೆ ಸಂಬಂಧಿಸಿದ ವಿಧಾನದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಅವರ ಅಭಿಪ್ರಾಯಗಳು ಹೆಚ್ಚು ಗಮನ ಸೆಳೆದವು. ಓಪನ್‌ಎಐ ತನ್ನ ಮಾದರಿಗಳಿಗೆ ತರಬೇತಿ ನೀಡಲು ಕೃತಿಸ್ವಾಮ್ಯದ ಡೇಟಾವನ್ನು ಬಳಸುವುದು ಸರಿಯೇ, ಕಾನೂನುಬದ್ಧವೇ ಎಂದು ಪ್ರಶ್ನಿಸಿದ್ದರು.
ಸುಚೀರ್ ಬಾಲಾಜಿ ಸಾವು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ್ದು, ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ. ತಂತ್ರಜ್ಞಾನದ ಬಗ್ಗೆ ಸರಿಯಾದ ಮಾಹಿತಿ ನೀಡುವ ಅನೇಕರು ಸಡನ್ ಆಗಿ ಸಾಯುತ್ತಾರೆ. ಅದನ್ನು ಆತ್ಮಹತ್ಯೆ ಎಂದು ಕರೆಯಲಾಗುತ್ತದೆ ಏಕೆ ಹೀಗೆ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಆತ ಸತ್ಯ ಹೇಳುವುದರಲ್ಲಿ ಧೈರ್ಯವಂತ ಆದರೆ ಜಗತ್ತು ಸತ್ಯವನ್ನು ಬಯಸುವುದಿಲ್ಲ ಎಂಬ ಕಟುಸತ್ಯವನ್ನು ಅರ್ಥ ಮಾಡಿಕೊಳ್ಳುವಲ್ಲಿ ಆತ ಸೋತ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ನಿಜ ಜೀವನದಲ್ಲಿ ಕಂಟ್ರೋಲ್ ಸಿನಿಮಾದ ಕತೆಯಂತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.