ಭವಿಷ್ಯದ ಎಐ ತಜ್ಞರನ್ನು ರೂಪಿಸಲು ಮುಂದಾದ ಕಾಗ್ನಿಜೆಂಟ್, ಯುವ ಎಂಜಿನಿಯರ್‌ಗಳಿಗೆ ಬಂಪರ್ ಅವಕಾಶ!
ಖ್ಯಾತ ಐಟಿ ಸಂಸ್ಥೆ 'ಕಾಗ್ನಿಜೆಂಟ್' ಭಾರತದಲ್ಲಿ 'ಏಸ್ ಟೀಮ್' ಎಂಬ ಹೊಸ ಕಾರ್ಯಕ್ರಮವನ್ನು ಆರಂಭಿಸಿದೆ. ಈ ಮೂಲಕ ಉನ್ನತ ಸಾಮರ್ಥ್ಯದ ಎಂಜಿನಿಯರ್‌ಗಳಿಗೆ ಆಧುನಿಕ ಎಐ ತಂತ್ರಜ್ಞಾನದ ತರಬೇತಿ ನೀಡಿ, ಗ್ರಾಹಕರ ನೈಜ ಸಮಸ್ಯೆಗಳನ್ನು ಬಗೆಹರಿಸುವ ಪಡೆಯನ್ನು ಸಿದ್ಧಪಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಕಾಗ್ನಿಜೆಂಟ್ ಏಸ್ ಟೀಮ್
ಬೆಂಗಳೂರು: ಕೃತಕ ಬುದ್ಧಿಮತ್ತೆ ಈಗ ಪ್ರಯೋಗದ ಹಂತವನ್ನು ದಾಟಿ, ವಾಸ್ತವ ಕೆಲಸಗಳಲ್ಲಿ ಬಳಕೆಯಾಗುವ ಹಂತಕ್ಕೆ ತಲುಪಿದೆ. ಭವಿಷ್ಯದಲ್ಲಿ ಇದನ್ನು ಸಮರ್ಥವಾಗಿ ನಿಭಾಯಿಸಲೆಂದೇ 'ಎಐ ಬಿಲ್ಡರ್'ಗಳ ಪಡೆಯನ್ನು ಕಟ್ಟಲು ಮುಂದಾಗಿರುವ ಖ್ಯಾತ ಐಟಿ ಸೇವಾ ಸಂಸ್ಥೆ 'ಕಾಗ್ನಿಜೆಂಟ್' ಹೊಸ ಕಾರ್ಯಕ್ರಮವನ್ನು ಪರಿಚಯಿಸಿದೆ. ಭಾರತದಲ್ಲಿ ಇದನ್ನು ಆರಂಭಿಸಲಾಗಿದ್ದು, ಇದಕ್ಕೆ 'ಕಾಗ್ನಿಜೆಂಟ್ ಏಸ್ ಟೀಮ್' ಎಂದು ಹೆಸರಿಡಲಾಗಿದೆ. ಅತ್ಯುತ್ತಮ ಎಂಜಿನಿಯರಿಂಗ್ ಮಿದುಳುಗಳನ್ನು ಒಟ್ಟುಗೂಡಿಸಿ, ಅವರಿಗೆ ಆಧುನಿಕ ಎಐ ತಂತ್ರಜ್ಞಾನದ ಬಗ್ಗೆ ತಿಳಿಸಿಕೊಟ್ಟು, ಕಂಪನಿಯ ಗ್ರಾಹಕರಿಗೆ ಅತ್ಯಾಧುನಿಕ ಡಿಜಿಟಲ್ ಪರಿಹಾರಗಳನ್ನು ಒದಗಿಸುವುದು ಈ ಕಾರ್ಯಕ್ರಮದ ಪ್ರಮುಖ ಗುರಿಯಾಗಿದೆ.
ಏನಿದು ಏಸ್ ಟೀಮ್?
ಇದೊಂದು ವಿಶಿಷ್ಟವಾದ ನೇಮಕಾತಿ ಹಾಗೂ ತರಬೇತಿ ಕಾರ್ಯಕ್ರಮವಾಗಿದೆ. ಉನ್ನತ ಸಾಮರ್ಥ್ಯ ಹೊಂದಿರುವ ಎಂಜಿನಿಯರ್‌ಗಳನ್ನು ಆಯ್ಕೆ ಮಾಡಿ, ಅವರನ್ನು ಆಧುನಿಕ ಎಐ ಪರಿಕರಗಳ ಮೂಲಕ ತರಬೇತುಗೊಳಿಸಲಾಗುತ್ತದೆ.
ಈ ಏಸ್ ಟೀಮ್ ಸದಸ್ಯರು ಕೇವಲ ಬೆಂಚ್‌ನಲ್ಲಿ ಕೂರುವುದಿಲ್ಲ; ಬದಲಾಗಿ ಅವರು ನೇರವಾಗಿ ಗ್ರಾಹಕರ ನೈಜ ಸಮಸ್ಯೆಗಳನ್ನು ಬಗೆಹರಿಸುವ ಅತ್ಯಂತ ಪ್ರಮುಖ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಲಿದ್ದಾರೆ. ಇದು ಕಾಗ್ನಿಜೆಂಟ್‌ನ ಉತ್ಪಾದಕತೆಯನ್ನು ಹೆಚ್ಚಿಸುವ ಜೊತೆಗೆ, ಭವಿಷ್ಯದ ದೊಡ್ಡ ತಂತ್ರಜ್ಞಾನ ಯೋಜನೆಗಳನ್ನು ತ್ವರಿತವಾಗಿ ಮಾರುಕಟ್ಟೆಗೆ ತರಲು ಸಹಾಯ ಮಾಡಲಿದೆ.
ಈ ಹೊಸ ಹೆಜ್ಜೆಯ ಕುರಿತು ಮಾತನಾಡಿರುವ ಕಾಗ್ನಿಜೆಂಟ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ (ಸಿಎಂಡಿ) ರಾಜೇಶ್ ವಾರಿಯರ್, "ಉದ್ಯಮಗಳು ಈಗ ಎಐ ಪ್ರಯೋಗಗಳಿಂದಾಚೆ ಬಂದು ನೈಜ ಜಗತ್ತಿನಲ್ಲಿ ಎಐ ಅಳವಡಿಸಿಕೊಳ್ಳಲು ಮುಂದಾಗಿವೆ. ಈ ಬೇಡಿಕೆಯನ್ನು ಪೂರೈಸಲು ಬಲವಾದ ಎಂಜಿನಿಯರಿಂಗ್ ಕೌಶಲ್ಯವಿರುವ ಯುವಕರ ಅಗತ್ಯವಿದೆ. 'ಏಸ್ ಟೀಮ್' ಮೂಲಕ ನಾವು ಅಂತಹ ವಿಶೇಷ ಪ್ರತಿಭೆಗಳನ್ನು ಗುರುತಿಸಿ ಬೆಳೆಸಲಿದ್ದೇವೆ. ಇದು ನಮ್ಮ ಕಂಪನಿಯನ್ನು ಸಂಪೂರ್ಣವಾಗಿ ಎಐ ಆಧಾರಿತ ಸಂಸ್ಥೆಯನ್ನಾಗಿ ಬದಲಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ," ಎಂದು ವಿವರಿಸಿದರು.
ಆಯ್ಕೆ ಪ್ರಕ್ರಿಯೆ ಹೇಗೆ?
ಈ 'ಏಸ್ ಟೀಮ್'ಗೆ ಸೇರಲು ಬಯಸುವ ಅಭ್ಯರ್ಥಿಗಳು ಯಾವ ಕಾಲೇಜಿನಲ್ಲಿ ಓದಿದ್ದಾರೆ ಎಂಬುದು ಮುಖ್ಯವಲ್ಲ. ಬದಲಾಗಿ, ಅವರಲ್ಲಿ ಎಐ ಕುರಿತ ಜ್ಞಾನ, ತಾಂತ್ರಿಕ ಸಾಮರ್ಥ್ಯ ಹಾಗೂ ಸಂವಹನ ಕೌಶಲ್ಯ ಹೇಗಿದೆ ಎಂಬುದರ ಆಧಾರದ ಮೇಲೆ ಕಟ್ಟುನಿಟ್ಟಾದ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಅಭ್ಯರ್ಥಿಗಳಿಗೆ ಸಂವಹನ, ಆಪ್ಟಿಟ್ಯೂಡ್ ಮತ್ತು ತಾಂತ್ರಿಕ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ವಿಶೇಷವಾಗಿ ಫುಲ್-ಸ್ಟಾಕ್ ಎಐ ಡೆವಲಪ್‌ಮೆಂಟ್, ಡೇಟಾ ಸ್ಟ್ರಕ್ಚರ್, ಪ್ರಾಂಪ್ಟ್ ಎಂಜಿನಿಯರಿಂಗ್ ಮತ್ತು ಏಜೆಂಟಿಕ್ ಎಐ ನಂತಹ ಆಧುನಿಕ ಕೌಶಲ್ಯಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ.
ಯಾರಿಗೆಲ್ಲಾ ಅವಕಾಶ?
ಆಯ್ಕೆಯಾದ ಅಭ್ಯರ್ಥಿಗಳು 'ಫುಲ್-ಸ್ಟಾಕ್ ಎಐ ಎಂಜಿನಿಯರ್'ಗಳಾಗಿ ಕಂಪನಿಗೆ ಸೇರಿಕೊಳ್ಳಲಿದ್ದು, ಅವರಿಗೆ ವಿಭಿನ್ನವಾದ ವೃತ್ತಿಜೀವನ ಮತ್ತು ಉತ್ತಮ ಪ್ರಾಜೆಕ್ಟ್‌ಗಳು ಸಿಗಲಿವೆ.
ಪ್ರಾರಂಭಿಕ ಹಂತದಲ್ಲಿ, ಈ ಕಾರ್ಯಕ್ರಮವು ಕಾಗ್ನಿಜೆಂಟ್‌ನಿಂದ ಈಗಾಗಲೇ ಆಫರ್ ಲೆಟರ್ ಪಡೆದಿರುವ ಅಭ್ಯರ್ಥಿಗಳು, ಟಿಯರ್-1 ಸಂಸ್ಥೆಗಳ ಪದವೀಧರರು ಹಾಗೂ ಆಯ್ದ ಆಫ್-ಕ್ಯಾಂಪಸ್ ಅಭ್ಯರ್ಥಿಗಳಿಗೆ ಲಭ್ಯವಿದೆ.
ಮುಂಬರುವ ದಿನಗಳಲ್ಲಿ ಪ್ರೀಮಿಯಂ ಕಾಲೇಜುಗಳು, ಪಾಲುದಾರ ಸಂಸ್ಥೆಗಳ ವಿದ್ಯಾರ್ಥಿಗಳು ಹಾಗೂ 1 ರಿಂದ 3 ವರ್ಷಗಳ ಅನುಭವವಿರುವವರಿಗೂ ಈ ಕಾರ್ಯಕ್ರಮವನ್ನು ವಿಸ್ತರಿಸುವ ಯೋಜನೆಯನ್ನು ಕಾಗ್ನಿಜೆಂಟ್ ಹಾಕಿಕೊಂಡಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

