- Home
- News
- State
- ಹೈಕೋರ್ಟ್ ಪೀಠ ಸೇರಿ ರಾಜ್ಯಾದ್ಯಂತ ನ್ಯಾಯಾಲಯಗಳಿಗೆ ಸರಣಿ ಬಾಂಬ್ ಬೆದರಿಕೆ: ಬಿಗುವಿನ ವಾತಾವರಣ, ಕೋರ್ಟ್ ಕಲಾಪಗಳು ಸ್ಥಗಿತ
ಹೈಕೋರ್ಟ್ ಪೀಠ ಸೇರಿ ರಾಜ್ಯಾದ್ಯಂತ ನ್ಯಾಯಾಲಯಗಳಿಗೆ ಸರಣಿ ಬಾಂಬ್ ಬೆದರಿಕೆ: ಬಿಗುವಿನ ವಾತಾವರಣ, ಕೋರ್ಟ್ ಕಲಾಪಗಳು ಸ್ಥಗಿತ
ಕರ್ನಾಟಕದ ಬಾಗಲಕೋಟೆ, ಮೈಸೂರು, ಗದಗ, ಧಾರವಾಡ ಹಾಗೂ ಹಾಸನ ಸೇರಿದಂತೆ పలు ಜಿಲ್ಲೆಗಳ ನ್ಯಾಯಾಲಯಗಳಿಗೆ ಇ-ಮೇಲ್ ಮತ್ತು ಕರೆಗಳ ಮೂಲಕ ಸರಣಿ ಬಾಂಬ್ ಬೆದರಿಕೆಗಳು ಬಂದಿವೆ. ಈ ಹಿನ್ನೆಲೆಯಲ್ಲಿ, ಭದ್ರತಾ ಕ್ರಮವಾಗಿ ಎಲ್ಲಾ ನ್ಯಾಯಾಲಯಗಳ ಕಲಾಪಗಳನ್ನು ಸ್ಥಗಿತಗೊಳಿಸಿ, ತಪಾಸಣೆ ನಡೆಸಲಾಗಿದೆ.

ಬಿಗುವಿನ ವಾತಾವರಣ, ಕೋರ್ಟ್ ಕಲಾಪಗಳು ಸ್ಥಗಿತ
ಬೆಂಗಳೂರು : ಕರ್ನಾಟಕದ ವಿವಿಧ ಜಿಲ್ಲೆಗಳ ನ್ಯಾಯಾಲಯಗಳಿಗೆ ಒಂದೇ ದಿನ ಸರಣಿ ಬಾಂಬ್ ಬೆದರಿಕೆ ಸಂದೇಶಗಳು ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಬಾಗಲಕೋಟೆ, ಮೈಸೂರು, ಗದಗ, ಧಾರವಾಡ ಹಾಗೂ ಹಾಸನ ಜಿಲ್ಲೆಯ ನ್ಯಾಯಾಲಯಗಳಿಗೆ ಇ-ಮೇಲ್ ಹಾಗೂ ಕರೆ ಮುಖಾಂತರ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಎಲ್ಲಾ ನ್ಯಾಯಾಲಯಗಳ ಕಲಾಪಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಭದ್ರತಾ ದೃಷ್ಟಿಯಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಶ್ವಾನ ದಳ, ಬಾಂಬ್ ಡಿಟೆಕ್ಟರ್‌ಗಳ ಮೂಲಕ ಶೋಧ ನಡೆಸಲಾಗಿದೆ. ಸಂಬಂಧಿಸಿದ ಇಲಾಖೆಗಳು ಹೈ ಅಲರ್ಟ್ ಆಗಿದ್ದು, ತನಿಖೆ ನಡೆಸುತ್ತಿವೆ.
ಬಾಗಲಕೋಟೆ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ
ಬಾಗಲಕೋಟೆಯ ನವನಗರದಲ್ಲಿರುವ ಜಿಲ್ಲಾ ನ್ಯಾಯಾಲಯದ ಕಚೇರಿ ಇ-ಮೇಲ್‌ಗೆ ಬಾಂಬ್ ಬೆದರಿಕೆ ಮೇಲ್ ಬಂದಿರುವುದು ಬೆಳಕಿಗೆ ಬಂದಿದೆ. “ನಿಮ್ಮ ಜಿಲ್ಲಾ ನ್ಯಾಯಾಲಯದ ಪ್ರಮುಖ ಹಾಗೂ ಕ್ರಿಟಿಕಲ್ ಸ್ಥಳಗಳಲ್ಲಿ ಬಾಂಬ್ ಇಡಲಾಗಿದೆ. ಮಧ್ಯಾಹ್ನದ ಊಟದ ಅವಧಿಯಲ್ಲಿ ನಮ್ಮ ಸಿಬ್ಬಂದಿಗಳು ಬ್ಲಾಸ್ಟ್ ಮಾಡುತ್ತಾರೆ” ಎಂದು ಬೆದರಿಕೆಯ ಮೇಲ್‌ನಲ್ಲಿ ಉಲ್ಲೇಖಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಅಧಿಕಾರಿಗಳು, ನ್ಯಾಯವಾದಿಗಳು, ಕಕ್ಷಿದಾರರು ಹಾಗೂ ನೌಕರರನ್ನು ತಕ್ಷಣವೇ ಕೋರ್ಟ್ ಆವರಣದಿಂದ ಹೊರಗೆ ಕಳುಹಿಸಲಾಯಿತು. ನ್ಯಾಯಾಲಯದ ಹೊರ ಆವರಣದಲ್ಲಿ ಜನರು ಜಮಾಯಿಸಿದ್ದು, ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಮಾಹಿತಿ ದೊರಕಿದ ತಕ್ಷಣ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳದ ಮೂಲಕ ಸಂಪೂರ್ಣ ತಪಾಸಣೆ ನಡೆಸಲಾಯಿತು. ಭದ್ರತಾ ದೃಷ್ಟಿಯಿಂದ ಇಂದಿನ ಎಲ್ಲಾ ಕೋರ್ಟ್ ಕಲಾಪಗಳನ್ನು ಸ್ಥಗಿತಗೊಳಿಸಲಾಗಿದೆ.
ಮೈಸೂರು ಜಿಲ್ಲಾ ನ್ಯಾಯಾಲಯಕ್ಕೂ ಬೆದರಿಕೆ ಕರೆ
ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣಕ್ಕೂ ಬಾಂಬ್ ಬೆದರಿಕೆ ಕರೆ ಬಂದಿದೆ. ಬೆದರಿಕೆ ಹಿನ್ನೆಲೆಯಲ್ಲಿ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಕೋರ್ಟ್ ಆವರಣದಲ್ಲಿದ್ದ ಎಲ್ಲರನ್ನು ಹೊರಕ್ಕೆ ಕಳುಹಿಸಿದರು.
ನ್ಯಾಯವಾದಿಗಳು, ಕಕ್ಷಿದಾರರು ಹಾಗೂ ಸಿಬ್ಬಂದಿ ಭಯಭೀತರಾಗಿ ಕೋರ್ಟ್ ಕಲಾಪ ಬಿಟ್ಟು ಹೊರಬಂದರು. ಬಾಂಬ್ ಸ್ಕ್ವಾಡ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನ್ಯಾಯಾಲಯದ ಆವರಣದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಭದ್ರತಾ ದೃಷ್ಟಿಯಿಂದ ಕೋರ್ಟ್ ಕಲಾಪಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಗದಗ ಜಿಲ್ಲಾ ನ್ಯಾಯಾಲಯಕ್ಕೆ ‘ಆತ್ಮಾಹುತಿ ಬಾಂಬ್’ ಬೆದರಿಕೆ
ಗದಗ ಜಿಲ್ಲಾ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶರ ಇ-ಮೇಲ್‌ಗೆ “ಆತ್ಮಾಹುತಿ ದಾಳಿ ಮೂಲಕ ಸ್ಫೋಟ ನಡೆಸಲಾಗುವುದು” ಎಂಬ ಸಂದೇಶ ಬಂದಿದೆ. ‘ವಿಕ್ರಂ ರಾಜಗುರು – ಔಟ್ ಲುಕ್ ಎಕ್ಸಪ್ರೆಸ್’ ಎಂಬ ಖಾತೆಯಿಂದ ಈ ಸಂದೇಶ ಬಂದಿದ್ದು, ಮಧ್ಯಾಹ್ನ 1:55ಕ್ಕೆ ಸ್ಫೋಟ ನಡೆಸುವುದಾಗಿ ಬೆದರಿಕೆ ಹಾಕಲಾಗಿದೆ.
ಸಂದೇಶ ಬಂದ ತಕ್ಷಣ ಸ್ಥಳಕ್ಕೆ ಶ್ವಾನದಳ, ಬಾಂಬ್ ಶೋಧನಾ ತಂಡ ದೌಡಾಯಿಸಿದ್ದು, ಕೋರ್ಟ್ ಕಲಾಪಗಳನ್ನು ಮುಂದೂಡಿ ಸಿಬ್ಬಂದಿ ಹೊರಗೆ ಬಂದಿದ್ದಾರೆ. ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಮಾಹಿತಿ ನೀಡಿದ ಎಸ್‌ಪಿ ರೋಹನ್ ಜಗದೀಶ್ ಅವರು, “ಸುಮಾರು ಮಧ್ಯಾಹ್ನ 12 ಗಂಟೆಗೆ ಸಂದೇಶ ಬಂದಿದೆ. ಮಾಹಿತಿ ತಿಳಿದ 10 ನಿಮಿಷಗಳಲ್ಲೇ ನಾವು ಸ್ಥಳಕ್ಕೆ ಭೇಟಿ ನೀಡಿದ್ದೇವೆ. ರೂಮ್‌ಗಳು, ಪಾರ್ಕಿಂಗ್ ಏರಿಯಾ ಸೇರಿದಂತೆ ಸಂಪೂರ್ಣ ಕೋರ್ಟ್ ಆವರಣವನ್ನು ಪರಿಶೀಲಿಸಲಾಗುತ್ತಿದೆ. ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟಿದ್ದೇವೆ” ಎಂದು ತಿಳಿಸಿದ್ದಾರೆ.
ಧಾರವಾಡ ಹೈಕೋರ್ಟ್ ಪೀಠಕ್ಕೆ ಬಾಂಬ್ ಬೆದರಿಕೆ
ಧಾರವಾಡ ಹೈಕೋರ್ಟ್ ಪೀಠಕ್ಕೂ ಇ-ಮೇಲ್ ಮುಖಾಂತರ ಬಾಂಬ್ ಬೆದರಿಕೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಆವರಣದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಕೋರ್ಟ್ ಒಳಗೆ ಹಾಗೂ ಹೊರಗೆ ಪೊಲೀಸ್ ಬಂದುಬಸ್ತ್ ಹೆಚ್ಚಿಸಲಾಗಿದ್ದು, ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ಹಾಗೂ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿವೆ. ಭಯಭೀತರಾಗಿ ವಕೀಲರು ಹಾಗೂ ಸಾರ್ವಜನಿಕರು ಕೋರ್ಟ್ ಆವರಣದಿಂದ ಹೊರಗೆ ಬಂದಿದ್ದು, ಕೋರ್ಟ್ ಎದುರು ಜನಸಮೂಹ ಜಮಾಯಿಸಿದೆ.
ಈ ಕುರಿತು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಮಾತನಾಡಿದ ಧಾರವಾಡ ಎಸ್‌ಪಿ ಗುಂಜನ್ ಆರ್ಯ ಅವರು, “ಹೈಕೋರ್ಟ್ ಎಆರ್‌ಜಿ ಅವರಿಗೆ ಬೆಳಿಗ್ಗೆ ಬಾಂಬ್ ಬೆದರಿಕೆ ಮೇಲ್ ಬಂದಿದೆ. ಅವರು ತಡವಾಗಿ ಮೇಲ್ ನೋಡಿದ್ದು, ಮಧ್ಯಾಹ್ನ 12 ಗಂಟೆಗೆ ನಮಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕೋರ್ಟ್ ಒಳಗಡೆ ಮತ್ತು ಹೊರಗಡೆ ಪೊಲೀಸ್ ಬಂದುಬಸ್ತ್ ಮಾಡಿದ್ದೇವೆ. ಸುಮಾರು 1000ಕ್ಕೂ ಹೆಚ್ಚು ಜನರನ್ನು ಕೋರ್ಟ್ ಆವರಣದಿಂದ ಹೊರಗೆ ಕಳುಹಿಸಲಾಗಿದೆ. ಬಾಂಬ್ ನಿಷ್ಕ್ರಿಯ ದಳ, ಎಎಸ್‌ಟಿ ಟೀಮ್ ಸಂಪೂರ್ಣ ಪರಿಶೀಲನೆ ನಡೆಸುತ್ತಿದೆ. ಪೊಲೀಸ್ ಇಲಾಖೆ ತನಿಖೆ ಕೈಗೊಂಡಿದೆ” ಎಂದು ತಿಳಿಸಿದ್ದಾರೆ.
ಇದೇ ವೇಳೆ ಧಾರವಾಡ ಹೈಕೋರ್ಟ್ ಎಆರ್‌ಜಿ ಶಾಂತವೀರ ಶಿವಪ್ಪ ಅವರು ಮಾತನಾಡಿ, “ನಮಗೆ ಮೇಲ್ ಮೂಲಕ ಬೆದರಿಕೆ ಬಂದಿದೆ. ಮಧ್ಯಾಹ್ನ 1:55ಕ್ಕೆ ಬ್ಲಾಸ್ಟ್ ಮಾಡುವುದಾಗಿ ಉಲ್ಲೇಖಿಸಲಾಗಿತ್ತು. ಯಾವುದೇ ನಿರ್ಲಕ್ಷ್ಯ ಮಾಡಬಾರದೆಂದು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದೇವೆ. ಸದ್ಯ ಪರಿಶೀಲನೆ ನಡೆಯುತ್ತಿದ್ದು, ಇದು ಹುಸಿ ಬಾಂಬ್ ಬೆದರಿಕೆ ಎನ್ನುವುದು ಗೊತ್ತಾಗಿದೆ” ಎಂದು ಹೇಳಿದ್ದಾರೆ.
ಹಾಸನ ಜಿಲ್ಲಾ ನ್ಯಾಯಾಲಯಕ್ಕೂ ಬಾಂಬ್ ಬೆದರಿಕೆ
ಹಾಸನ ಜಿಲ್ಲಾ ನ್ಯಾಯಾಲಯ ಸಂಕೀರ್ಣಕ್ಕೂ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ. ಮಾಹಿತಿ ದೊರಕಿದ ತಕ್ಷಣ ಪೊಲೀಸ್ ವಿಶೇಷ ಭದ್ರತಾ ಪಡೆ, ಶ್ವಾನದಳ ಹಾಗೂ ಬಾಂಬ್ ಪತ್ತೆ ದಳ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದೆ.
ಪರಿಶೀಲನೆ ಹಿನ್ನೆಲೆಯಲ್ಲಿ ಕೋರ್ಟ್ ಸಿಬ್ಬಂದಿ ನ್ಯಾಯಾಲಯದ ಹೊರಗೆ ಬಂದು ನಿಂತರು. ಈ ಹಿಂದೆ ಹಾಸನ ಜಿಲ್ಲಾಧಿಕಾರಿ ಕಚೇರಿ ಹಾಗೂ ಆಲೂರು ತಹಸೀಲ್ದಾರ್ ಕಚೇರಿಗೂ ಇದೇ ರೀತಿಯ ಬಾಂಬ್ ಬೆದರಿಕೆ ಇ-ಮೇಲ್‌ಗಳು ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.
ತನಿಖೆ ಆರಂಭ
ರಾಜ್ಯದ ವಿವಿಧ ನ್ಯಾಯಾಲಯಗಳಿಗೆ ಒಂದೇ ದಿನ ಸರಣಿ ಬಾಂಬ್ ಬೆದರಿಕೆಗಳು ಬಂದಿರುವುದು ಭದ್ರತಾ ಇಲಾಖೆಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಈ ಬೆದರಿಕೆಗಳ ಹಿಂದಿರುವವರ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

