- Home
- News
- State
- ಬಳ್ಳಾರಿ ಜ್ಯುವೆಲ್ಲರಿಯಲ್ಲಿ ಮತ್ತೆ ಕೇರಳ ಎಸ್‌ಐಟಿ ಶೋಧ, ಶಬರಿಮಲೆಯ ಇನ್ನೂ ಕೆಲ ದೇಗುಲದಲ್ಲಿ ಚಿನ್ನಕ್ಕೆ ಕನ್ನ ಶಂಕೆ!
ಬಳ್ಳಾರಿ ಜ್ಯುವೆಲ್ಲರಿಯಲ್ಲಿ ಮತ್ತೆ ಕೇರಳ ಎಸ್‌ಐಟಿ ಶೋಧ, ಶಬರಿಮಲೆಯ ಇನ್ನೂ ಕೆಲ ದೇಗುಲದಲ್ಲಿ ಚಿನ್ನಕ್ಕೆ ಕನ್ನ ಶಂಕೆ!
ಶಬರಿಮಲೆ ದೇಗುಲದ ಚಿನ್ನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿಯ ರೊದ್ದಂ ಜ್ಯುವೆಲ್ಲರಿ ಮಾಲೀಕ ಗೋವರ್ಧನ್ ಅವರನ್ನು ಬಂಧಿಸಲಾಗಿದೆ. ಕೇರಳದ ವಿಶೇಷ ತನಿಖಾ ತಂಡವು ಬಳ್ಳಾರಿಗೆ ಆಗಮಿಸಿ, ಗೋವರ್ಧನ್ ಅವರ ಅಂಗಡಿಯಲ್ಲಿ ಶೋಧ ನಡೆಸುತ್ತಿದ್ದು, ಈ ಪ್ರಕರಣದಲ್ಲಿ ಒಟ್ಟು 9 ಮಂದಿಯನ್ನು ಬಂಧಿಸಲಾಗಿದೆ.

ರೊದ್ದಂ ಜ್ಯುವೆಲ್ಲರಿಯಲ್ಲಿ ಶೋಧ
ಬಳ್ಳಾರಿ: ಶಬರಿಮಲೆ ದೇಗುಲದ ಬಾಗಿಲು ಮತ್ತು ದ್ವಾರಪಾಲಕ ವಿಗ್ರಹಗಳ ಕವಚದ ಚಿನ್ನಕ್ಕೆ ಕನ್ನ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಬಳ್ಳಾರಿಯ ಚಿನ್ನದ ವ್ಯಾಪಾರಿ ಸೇರಿ ಇಬ್ಬರನ್ನು ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದರು. ಬಂಧಿತರ ಹೆಸರು ಚೆನ್ನೈ ಸ್ಮಾರ್ಟ್ ಕ್ರಿಯೇಷನ್ಸ್ ಕ್ರಿಯೇಷನ್ಸ್ ಸಿಇಒ ಪಂಕಜ್ ಭಂಡಾರಿ ಹಾಗೂ ಬಳ್ಳಾರಿಯ ರೊದ್ದಂ ಜ್ಯುವೆಲ್ಲರಿ ಮಾಲೀಕ ಗೋವರ್ಧನ್. ಇಬ್ಬರನ್ನೂ ಬಂಧಿಸಿ ತಿರುವನಂತಪುರದ ಕ್ರೈಂ ಬ್ರಾಂಚ್‌ಗೆ ಕರೆತಂದು ವಿಚಾರಣೆ ನಡೆಸಲಾಗಿತ್ತು. ಇದರೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 9ಕ್ಕೇರಿದೆ. ಇದೀಗ ಪ್ರಕರಣದ ತನಿಖೆಯ ಭಾಗವಾಗಿ ಕೇರಳದ ಎಸ್ಐಟಿ ಟೀಂ ಬಳ್ಳಾರಿಗೆ ಆಗಮಿಸಿ ಬಂಧಿತನಾಗಿರುವ ಗೋವರ್ಧನ್ ಅವರಿಗೆ ಸೇರಿದ ರೊದ್ದಂ ಜ್ಯುವೆಲ್ಲರಿಯಲ್ಲಿ ಶೋಧ ನಡೆಸಿದೆ. ಐದು ಜನ ಎಸ್ಐಟಿ ಅಧಿಕಾರಿಗಳ ತಂಡದಿಂದ ಚಿನ್ನದಂಗಡಿಯಲ್ಲಿ ಶೋಧ ನಡೆದಿದೆ. ಈ ಹಿಂದೆಯೂ ಇದೇ ರೀತಿ ದಾಳಿ ನಡೆಸಿ ಶೋಧ ಕಾರ್ಯ ನಡೆಸಿತ್ತು. ಇದೀಗ ಮತ್ತೆ ಶೋಧ ನಡೆಸುತ್ತಿದ್ದು, ಅಂಗಡಿಯ ಡೋರ್ ಕ್ಲೋಸ್ ಮಾಡಿ ಶೋಧ ನಡೆಸುತ್ತಿದೆ. ಇನ್ನು ರೊದ್ದಂ ಮಾಲೀಕ ಗೋವರ್ಧನ್ ಜಾಮೀನು ಕೋರಿ ಕೇರಳ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಶಬರಿಮಲೆಯ ಇನ್ನೂ ಕೆಲ ದೇಗುಲದಲ್ಲಿ ಚಿನ್ನಕ್ಕೆ ಕನ್ನ?
ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದ ಚಿನ್ನಕ್ಕೆ ಕನ್ನ ಹಾಕಿದ ಪ್ರಕರಣದ ಭಾರೀ ಸುದ್ದಿಯಾಗಿರುವ ಹೊತ್ತಿನಲ್ಲೇ ಮುಖ್ಯ ದೇಗುಲದ ಸುತ್ತಲಿರುವ ಮಂದಿರಗಳಲ್ಲಿ 17 ವರ್ಷದ ಹಿಂದೆ ನಡೆದ ಚಿನ್ನಲೇಪನದಲ್ಲೂ ವಂಚನೆಯ ಶಂಕೆ ವ್ಯಕ್ತವಾಗಿದೆ. 1998ರಲ್ಲಿ ಉದ್ಯಮಿ ವಿಜಯ್ ಮಲ್ಯ ಶಬರಿಮಲೆ ಮುಖ್ಯ ಮತ್ತು ಸುತ್ತಮುತ್ತಲಿನ ದೇಗುಲದ ಚಿನ್ನ ಲೇಪನಕ್ಕೆಂದು 1154 ಗ್ರಾಂ ಚಿನ್ನ ನೀಡಿದ್ದರು. 2009ರಲ್ಲಿ ಈ ದೇಗುಲಗಳ ಚಿನ್ನಮರುಲೇಪನ ಮಾಡಲಾಗಿತ್ತು. ಈ ಕೆಲಸ ಮಾಡಿದ್ದು, ಚೆನ್ನೈ ಮೂಲದ ಸ್ವಾರ್ಟ್ ಕ್ರಿಯೇಷನ್ಸ್ ಕಂಪನಿ. ಆಗ ಈ ಕುರಿತು ಕಂಪನಿ ಜಾಲತಾಣದಲ್ಲಿ ಮಾಡಿದ್ದ ಪೋಸ್ಟ್ ಇದೀಗ ಮತ್ತೆ ಸದ್ದು ಮಾಡುತ್ತಿದೆ. ಕಾರಣ ಈ ಕಂಪನಿಯ ಮಾಲೀ ಪಂಕಜ್ ಭಂಡಾರಿಯನ್ನು ಇತ್ತೀಚೆಗೆ ನಡೆದ ಚಿನ್ನ ಕಳ್ಳತನ ಪ್ರಕರಣದಲ್ಲೂ ಆರೋಪಿ ಎಂದು ಹೆಸರಿಸಲಾಗಿದೆ. ಹೀಗಾಗಿ 2009ರಲ್ಲಿ ನಡೆದ ಮರುಲೇಪನದಲ್ಲೂ ವಂಚನೆ ಗುಮಾನಿ ವ್ಯಕ್ತವಾಗಿದೆ.
ಟಿಡಿಬಿಯ ಇಬ್ಬರು ಮಾಜಿ ಅಧ್ಯಕ್ಷರು ಸೇರಿ 9 ಮಂದಿ ಬಂಧನ
ಶಬರಿಮಲೆ ದ್ವಾರಪಾಲಕ ವಿಗ್ರಹಗಳ ಚಿನ್ನ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇ.ಡಿ) ಶೀಘ್ರದಲ್ಲಿ ಅಕ್ರಮ ಹಣ ವರ್ಗಾವಣೆಯ ಪ್ರಕರಣವನ್ನು ದಾಖಲಿಸಲಿದೆ. ಕಳೆದ ಶುಕ್ರವಾರ ಇಲ್ಲಿನ ವಿಚಕ್ಷಣ ನ್ಯಾಯಾಲಯವು ಎಸ್‌ಐಟಿ ಮತ್ತು ಕೇರಳ ಪೊಲೀಸರು ದಾಖಲಿಸಿಕೊಂಡಿರುವ ಎಫ್‌ಐಆರ್‌ಗಳ ಪ್ರತಿಯನ್ನು ಇ.ಡಿ.ಗೆ ಹಸ್ತಾಂತರಿಸಲು ಅನುಮತಿಸಿದೆ. ಇದರೊಂದಿಗೆ ಇ.ಡಿ. ತನಿಖೆಗೆ ಹಾದಿ ಸುಗಮವಾಗಿದೆ ಎಂದು ಮೂಲಗಳು ತಿಳಿಸಿವೆ. ಕೇರಳ ಕೋರ್ಟ್‌ನ ಮಾರ್ಗದರ್ಶನದಂತೆ ಎಸ್‌ಐಟಿ ಈಗಾಗಲೇ ತನಿಖೆ ನಡೆಸುತ್ತಿದ್ದು, ಟಿಡಿಬಿಯ ಇಬ್ಬರು ಮಾಜಿ ಅಧ್ಯಕ್ಷರು ಸೇರಿ ಈವರೆಗೆ 9 ಮಂದಿಯನ್ನು ಬಂಧಿಸಿದೆ. ಈ ಪ್ರಕರಣಗಳ ಎಫ್‌ಐಆರ್ ಮತ್ತು ರಿಮ್ಯಾಂಡ್ ರಿಪೋರ್ಟ್ ಕೊಡುವಂತೆ ಇ.ಡಿ. ಕೊಲ್ಲಂ ವಿಚಕ್ಷಣಾ ಕೋರ್ಟ್ ಮೆಟ್ಟಿಲೇರಿತ್ತು. ಇದಕ್ಕೆ ಎಸ್‌ಐಟಿ ವಿರೋಧ ವ್ಯಕ್ತಪಡಿಸಿತ್ತು. ಆದರೆ ಇ.ಡಿ. ಮನವಿಯನ್ನು ಪುರಸ್ಕರಿಸಿದ ಪೀಠ, ‘ಅಕ್ರಮ ಹಣ ವರ್ಗಾವಣೆಗಳ ತನಿಖೆಗೆ ಇ.ಡಿ. ಅಧಿಕೃತ ಸಂಸ್ಥೆಯಾಗಿದ್ದು, ಮನವಿ ಸರಿಯಿದೆ’ ಎಂದಿತು ಹಾಗೂ ಎಫ್‌ಐಆರ್ ಕಾಪಿಗಳ ಹಸ್ತಾಂತರಕ್ಕೆ ಅನುಮತಿ ಕೊಟ್ಟಿತು.
ಚಿನ್ನವೆಂದು ಗೊತ್ತಿದ್ದರೂ ತಾಮ್ರದ್ದೆಂದು ದಾಖಲೆಪತ್ರಕ್ಕೆ ಸಹಿ ಹಾಕಿದ್ದ ಆರೋಪಿಗಳು!
ಶಬರಿಮಲೆ ದೇಗುಲದ ಗರ್ಭಗುಡಿಯ ಬಾಗಿಲು ಮತ್ತು ದ್ವಾರಪಾಲಕ ವಿಗ್ರಹಗಳ ಕವಚದ ಚಿನ್ನಕ್ಕೆ ಕನ್ನ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಮಾಜಿ ಆಡಳಿತಾಧಿಕಾರಿ ಎಸ್. ಶ್ರೀಕುಮಾರ್‌ರನ್ನು ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಕಳೆದ ಬುಧವಾರ ಬಂಧಿಸಿದ್ದರು. ಚಿನ್ನ ನಾಪತ್ತೆ ಪ್ರಕರಣದಲ್ಲಿ ತನ್ನ ಮೇಲಿನ ಆರೋಪ ಸುಳ್ಳು ಎಂದು ಶ್ರೀಕುಮಾರ್ ಕೇರಳ ಹೈಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು ‘ಶ್ರೀಕುಮಾರ್ ಹಾಗೂ ಇನ್ನೊಬ್ಬ ಆರೋಪಿ ಜಯಶ್ರೀಗೆ ಗರ್ಭಗುಡಿಯ ಬಾಗಿಲು ಮತ್ತು ವಿಗ್ರಹಗಳ ಕವಚಗಳು ಚಿನ್ನಲೇಪಿತ ಎಂಬುದು ತಿಳಿದಿತ್ತು. ಆದರೂ ಅವು ತಾಮ್ರದವು ಎಂದ ದಾಖಲೆಪತ್ರಕ್ಕೆ ಇಬ್ಬರೂ ಸಹಿ ಹಾಕಿದ್ದಾರೆ’ ಎಂದು ಕಿಡಿಕಾರಿದ ಕೋರ್ಟ್ 2 ವಾರಗಳ ಹಿಂದಷ್ಟೇ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಅದರ ಬೆನ್ನಲ್ಲೇ ಬಂಧನ ನಡೆದಿದೆ.
ಏನಿದು ಪ್ರಕರಣ:
2019ರಲ್ಲಿ, ಈ ಹಿಂದೆ ಶಬರಿಮಲೆಯಲ್ಲಿ ಅರ್ಚಕನಾಗಿ ಸೇವೆ ಸಲ್ಲಿಸಿದ್ದ ಬೆಂಗಳೂರಿನ ಉನ್ನಿಕೃಷ್ಣನ್ ಪೊಟ್ಟಿ ವಿಗ್ರಹಗಳ ಚಿನ್ನಲೇಪಿತ ಕವಚಗಳ ಮರುಲೇಪನ ಕಾರ್ಯ ವಹಿಸಿಕೊಂಡಿದ್ದ. ಮರುಲೇಪನದ ಬಳಿಕ ಅವುಗಳನ್ನು ಮರಳಿಸುವಾಗ ಸುಮಾರು 4 ಕೆಜಿ ಚಿನ್ನದಲ್ಲಿ ಕಡಿಮೆ ಆಗಿತ್ತು. ಈ ವೇಳೆ, ಈ ಪೈಕಿ 400 ಗ್ರಾಂ ಚಿನ್ನವನ್ನು ಬಳ್ಳಾರಿಯ ಚಿನ್ನದ ವ್ಯಾಪಾರಿ ಗೋವರ್ಧನ್‌ಗೆ ಪೊಟ್ಟಿ ಹಸ್ತಾಂತರಿಸಿದ್ದ ಎಂದು ಆರೋಪಿಸಲಾಗಿದೆ. ಹೀಗಾಗಿ ಬಳ್ಳಾರಿ ಚಿನ್ನದ ಉದ್ಯಮಿ ಗೋವರ್ಧನ್‌ರ ಬಂಧನವಾಗಿದೆ. ಈ ಹಿಂದೆ ಗೋವರ್ಧನ್ ಅವರ ಬಳ್ಳಾರಿ ಚಿನ್ನದಂಗಡಿ ಮೇಲೆ ಕೇರಳ ಎಸ್‌ಐಟಿ ದಾಳಿ ಮಾಡಿತ್ತು. ಮರುಲೇಪನ ಮಾಡಿದ ಚೆನ್ನೈ ಮೂಲದ ಸ್ಮಾರ್ಟ್ ಕ್ರಿಯೇಶನ್ಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಂಕಜ್ ಭಂಡಾರಿ ಅವರ ಕಂಪನಿಯಲ್ಲಿ ಕವಚಗಳ ಎಲೆಕ್ಟ್ರೋಪ್ಲೇಟಿಂಗ್ ಮಾಡಲಾಗಿತ್ತು. ಈಗಾಗಲೇ ಕೇಸಲ್ಲಿ ಪೊಟ್ಟಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

