ಶಬರಿಮಲೆ ದೇಗುಲದ ದ್ವಾರಪಾಲಕ ವಿಗ್ರಹಗಳ ಚಿನ್ನಲೇಪಿತ ಕವಚಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿಯ ರೊದ್ದಂ ಜ್ಯುವೆಲರ್ಸ್ ಮಾಲೀಕ ಗೋವರ್ಧನ್ ಅವರನ್ನು ಕೇರಳ ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಮರುಲೇಪನದ ಬಳಿಕ ಸುಮಾರು 4 ಕೆಜಿ ಚಿನ್ನ ಕಡಿಮೆಯಾಗಿತ್ತು.

ಬಳ್ಳಾರಿ: ಶಬರಿಮಲೆ ದೇಗುಲದ ದ್ವಾರಪಾಲಕ ವಿಗ್ರಹಗಳ ಚಿನ್ನಲೇಪಿತ ತಾಮ್ರದ ಕವಚಗಳ ಕನ್ನ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ನಗರದ ಚಿನ್ನದ ವ್ಯಾಪಾರಿ ಹಾಗೂ ರೊದ್ದಂ ಜ್ಯುವೆಲರ್ಸ್‌ನ ಮಾಲೀಕ ಗೋವರ್ಧನ ಅವರನ್ನು ಕೇರಳದ ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ವಿಚಾರಣೆಗೆಂದು ತೆರಳಿದ್ದರು. ಇದೀಗ ಅಧಿಕೃತವಾಗಿ ಬಂಧಿಸಿದ್ದಾರೆ.

ಚಿನ್ನದ ಗಟ್ಟಿ ಯಾವುದು?

ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಎಸ್ಪಿ ದರ್ಜೆಯ ಅಧಿಕಾರಿ ನೇತೃತ್ವದಲ್ಲಿ ಬೆಂಗಳೂರು ಹಾಗೂ ಬಳ್ಳಾರಿಯಲ್ಲಿ ಕೇರಳ ವಿಶೇಷ ತನಿಖಾ ತಂಡ (ಎಸ್‌ಐಟಿ) ಪೊಲೀಸರು ರೊದ್ದಂ ಜ್ಯುವೆಲರ್ಸ್‌ ಅಂಗಡಿ ಹಾಗೂ ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್‌ ಪೊಟ್ಟಿಯ ಬೆಂಗಳೂರು ನಿವಾಸದ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಪೊಟ್ಟಿ ನಿವಾಸದಿಂದ 2 ಲಕ್ಷ ರು. ನಗದು ಹಾಗೂ ಚಿನ್ನದಂಗಡಿಯಿಂದ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಳ್ಳಲಾದ ಬಗ್ಗೆ ವರದಿಯಾಗಿತ್ತು.

ಗೋವರ್ಧನ ಅವರನ್ನು ವಿಚಾರಣೆಗೊಳಪಡಿಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರಕ ಮಾಹಿತಿ ಪಡೆದು ತಾವು ಕರೆದಾಗ ಬಂದು ವಿಚಾರಣೆಗೆ ಹಾಜರಾಗಬೇಕು ಎಂದು ಎಸ್‌ಐಟಿ ಅಧಿಕಾರಿಗಳು ಸೂಚನೆ ನೀಡಿದ್ದರು. ಅದರಂತೆ ವಿಚಾರಣೆಗೆ ಸಹಕರಿಸುವುದಾಗಿ ಗೋವರ್ಧನ್ ಹೇಳಿದ್ದರು. ಇದೀಗ ವಿಚಾರಣೆಗೆಂದು ಕೇರಳಗೆ ತೆರಳಿದ ಅವರನ್ನು ಬಂಧಿಸಿ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ.

ಪ್ರಮುಖ ಆರೋಪಿ ಉನ್ನಿಕೃಷ್ಣನ್‌ ಪೊಟ್ಟಿ

ಪ್ರಮುಖ ಆರೋಪಿ ಉನ್ನಿಕೃಷ್ಣನ್‌ ಪೊಟ್ಟಿ 2019ರಲ್ಲಿ ಗರ್ಭಗುಡಿಯ ಬಾಗಿಲು ಮತ್ತು ದ್ವಾರಪಾಲಕ ವಿಗ್ರಹಗಳ ಚಿನ್ನಲೇಪಿತ ತಾಮ್ರದ ಕವಚಗಳನ್ನು ಮರುಲೇಪನ ಮಾಡುವುದಾಗಿತೆಗೆದುಕೊಂಡು ಹೋಗಿದ್ದ. ಬಳ್ಳಾರಿಯ ಗೋವರ್ಧನ್‌ ಎಂಬ ಚಿನ್ನದ ವ್ಯಾಪಾರಿ ಇದಕ್ಕೆ ಧನಸಹಾಯ ಮಾಡಿದ್ದ ಎಂಬುದು ಆರೋಪವಾಗಿದೆ.

ಮರುಲೇಪನದ ಬಳಿಕ ಚಿನ್ನದಲ್ಲಿ ಸುಮಾರು 4 ಕೆಜಿ ಇಳಿಕೆ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಶ್ರೀರಾಮಪುರದಲ್ಲಿರುವ ಪೊಟ್ಟಿಯ ನಿವಾಸ ಮತ್ತು ಆತ ಈ ಹಿಂದೆ ಅರ್ಚಕನಾಗಿದ್ದ ಅದೇ ಪ್ರದೇಶದ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಅಧಿಕಾರಿಗಳು ಶೋಧ ನಡೆಸಿದ್ದರು. ಈ ವೇಳೆ 2 ಲಕ್ಷ ರು. ನಗದನ್ನು ವಶಪಡಿಸಿಕೊಳ್ಳಲಾಗಿತ್ತು.

ಶಬರಿಮಲೆ ದೇಗುಲದ ಕಳ್ಳತನಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ಸಹ ಅಯ್ಯಪ್ಪನ ಭಕ್ತ. ದೇವಾಲಯಕ್ಕೆ ಸಾಕಷ್ಟು ದಾನ ಮಾಡುತ್ತಾ ಬಂದಿದ್ದೇನೆ. ಚಿನ್ನ ಕದಿಯುವ ಅಗತ್ಯತೆ ಇಲ್ಲ. ದೇವರು ನನಗೆ ಸಾಕಷ್ಟು ನೀಡಿದ್ದಾನೆ. ಹೊಸ ಚಿನ್ನದ ಲೇಪಿತ ಬಾಗಿಲನ್ನು ತಯಾರಿಸಲು ವೈಯಕ್ತಿಕವಾಗಿ 35 ಲಕ್ಷ ರು. ಖರ್ಚು ಮಾಡಿದ್ದೇನೆ. ಎಸ್‌ಐಟಿ ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿರುವೆ. ಎಂದು ಕಳೆದ ಅಕ್ಟೋಬರ್‌ ನಲ್ಲಿ ರೊದ್ದ ಮಾಲೀಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.

ದಾಳಿ ವೇಳೆ ಸಿಕ್ಕಿತ್ತು ಚಿನ್ನದ ಗಟ್ಟಿಗಳು!

ಇನ್ನು ಕಳೆದ ಬಾರಿ ಎಸ್‌ಐಟಿ ದಾಳಿಯಾದಾಗ ಗೋವರ್ಧನ್‌ನ ಬಳ್ಳಾರಿಯ ಚಿನ್ನದಂಗಡಿಯಿಂದ ಹಲವಾರು 400 ಗ್ರಾಂ ತೂಕದ ಚಿನ್ನದ ಗಟ್ಟಿಗಳನ್ನು ವಶಕ್ಕೆ ಪಡೆದು ಅವರನ್ನು ವಿಚಾರಣೆಗೆ ಒಳಪಡಿಸಿದ್ದರು. ಆದರೆ, ವಶಪಡಿಸಿಕೊಂಡ ಚಿನ್ನ ದೇಗುಲಕ್ಕೆ ಸೇರಿದ 4 ಕೆಜಿ ಚಿನ್ನವೇ ಅಲ್ಲವೇ ಎಂಬುದು ಈವರೆಗೆ ಸ್ಪಷ್ಟವಾಗಿಲ್ಲ. ಆದರೆ ಕೆಲವು ಮಾಧ್ಯಮಗಳು ಇದು ದೇಗುಲದ ಚಿನ್ನ ಎಂದು ವರದಿ ಮಾಡಿತ್ತು. ಇದೀಗ ಬಂಧನವಾಗಿದ್ದು, ಎಲ್ಲಾ ಸತ್ಯಾಸತ್ಯತೆಗಳು ಹೊರಬರಲಿದೆ.