ಈ ಅಣಬೆ ತಿಂದ್ರೆ ಕಿಕ್ಕೋ ಕಿಕ್ಕು; ಬೆಂಗಳೂರಿಗೆ ಬರುತ್ತಿದ್ದಂತೆ ₹50 ಕೋಟಿ ಮಾಲ್ ಸಮೇತ ಲಾಕ್!
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಎನ್‌ಸಿಬಿ ಭರ್ಜರಿ ಕಾರ್ಯಾಚರಣೆ! ₹50 ಕೋಟಿ ಮೌಲ್ಯದ ಹೈಡ್ರೋಗಾಂಜಾ, ಸೈಲೋಸಿಬಿನ್ ಅಣಬೆ ವಶ. ಆಹಾರದ ಟಿನ್‌ಗಳಲ್ಲಿ ಸಾಗಾಟದ ರಹಸ್ಯ ತಿಳಿಯಲು ಕ್ಲಿಕ್ ಮಾಡಿ.

₹50 ಕೋಟಿ ಮೌಲ್ಯದ ಮಾದಕ ವಸ್ತುಗಳ ವಶ
ಬೆಂಗಳೂರು (ಅ.12): ಮಾದಕವಸ್ತು ಜಾಲದ ವಿರುದ್ಧ ಬೆಂಗಳೂರು ವಲಯದ ಮಾದಕ ವಸ್ತು ನಿಯಂತ್ರಣ ಮಂಡಳಿ (NCB) ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಬರೋಬ್ಬರಿ 50 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆ ವೇಳೆ ಮೂವರು ಪ್ರಮುಖ ಆರೋಪಿಗಳನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಭಾರಿ ಪ್ರಮಾಣದ ಡ್ರಗ್ಸ್ ಸೀಜ್:
ಬಂಧಿತ ಆರೋಪಿಗಳಿಂದ ಒಟ್ಟು 45 ಕೆ.ಜಿ. ಹೈಡ್ರೋಗಾಂಜಾ ಮತ್ತು 6 ಕೆ.ಜಿ. ಸೈಲೋಸಿಬಿನ್ (Psilocybin) ಅಣಬೆ ಮಾದಕವಸ್ತುವನ್ನು ಜಪ್ತಿ ಮಾಡಲಾಗಿದೆ. ಆರಂಭದಲ್ಲಿ ಥೈಲ್ಯಾಂಡ್‌ನಿಂದ ಡ್ರಗ್ಸ್ ಸಾಗಾಟವಾಗುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಅಧಿಕಾರಿಗಳು, ಕಾರ್ಯಾಚರಣೆ ವೇಳೆ ಕೊಲಂಬೋದಿಂದ ಆಗಮಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮೊದಲು ವಶಕ್ಕೆ ಪಡೆದರು.
ಈ ಇಬ್ಬರಿಂದ 31 ಕೆ.ಜಿ. ಹೈಡ್ರೋಗಾಂಜಾ ಮತ್ತು 4 ಕೆ.ಜಿ. ಸೈಲೋಸಿಬಿನ್ ಅಣಬೆಯನ್ನು ಸೀಜ್ ಮಾಡಲಾಯಿತು. ಇವರ ವಿಚಾರಣೆ ನಡೆಸಿದಾಗ, ಮುಂದಿನ ವಿಮಾನದಲ್ಲಿ ಶ್ರೀಲಂಕಾದಿಂದ ಡ್ರಗ್ಸ್‌ನ ಮುಖ್ಯ ಹ್ಯಾಂಡ್ಲರ್ ಬರುವ ಬಗ್ಗೆ ಸುಳಿವು ಸಿಕ್ಕಿತು. ಇದರನ್ವಯ ಕಾರ್ಯತಂತ್ರ ರೂಪಿಸಿದ ಎನ್‌ಸಿಬಿ ತಂಡ, ಕಾದು ಕುಳಿತು ಇನ್ನೋರ್ವ ಶ್ರೀಲಂಕಾ ಪ್ರಜೆಯಾದ ಮುಖ್ಯ ಹ್ಯಾಂಡ್ಲರ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು. ಈ ಹ್ಯಾಂಡ್ಲರ್‌ನಿಂದ 14 ಕೆ.ಜಿ. ಹೈಡ್ರೋಗಾಂಜಾ ಮತ್ತು 2 ಕೆ.ಜಿ. ಸೈಲೋಸಿಬಿನ್ ಅಣಬೆಯನ್ನು ವಶಪಡಿಸಿಕೊಳ್ಳಲಾಗಿದೆ.
ವಿಶೇಷ ಸೀಲಿಂಗ್ ಮೂಲಕ ಸಾಗಾಟ:
ಮಾದಕವಸ್ತು ಜಾಲದ ಆರೋಪಿಗಳು ತಮ್ಮ ಕೃತ್ಯವನ್ನು ಮುಚ್ಚಿಡಲು ಅತ್ಯಂತ ಕುತಂತ್ರದ ವಿಧಾನವನ್ನು ಅನುಸರಿಸಿದ್ದರು. ಅವರು ಸುಮಾರು 250 ಫುಡ್ ಟಿನ್‌ಗಳಲ್ಲಿ ಡ್ರಗ್ಸ್ ಅನ್ನು ಸೀಲ್ ಮಾಡಿ ವಿಮಾನದ ಮೂಲಕ ಸಾಗಿಸುತ್ತಿದ್ದರು ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ವರ್ಷ 100 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ:
ಈ ಯಶಸ್ವಿ ಕಾರ್ಯಾಚರಣೆಯೊಂದಿಗೆ, ಬೆಂಗಳೂರು ಎನ್‌ಸಿಬಿ ಘಟಕವು ಈ ವರ್ಷದಲ್ಲಿ ಇದುವರೆಗೆ ಒಟ್ಟು 18 ಪ್ರಕರಣಗಳಲ್ಲಿ ಸುಮಾರು 100 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಂತಾಗಿದೆ. ಈ 18 ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 45 ಆರೋಪಿಗಳನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಮುಖ್ಯವಾಗಿ ಕೇರಳ, ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರದಾದ್ಯಂತ ಗಾಂಜಾ ದಂಧೆಯನ್ನು ನಡೆಸುತ್ತಿದ್ದರು ಎಂಬ ಮಾಹಿತಿ ತನಿಖೆಯಿಂದ ತಿಳಿದುಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ
